Site icon Vistara News

CM Siddaramaiah: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಸಿದ್ದರಾಮಯ್ಯ; 18,177 ಕೋಟಿ ರೂ. ಬಿಡುಗಡೆಗೆ ಮನವಿ

CM Siddaramaiah meets PM Narendra Modi

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮಂಗಳವಾರ (ಡಿ. 19) ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿದರು. ಶೀಘ್ರವೇ 18,177.44 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದರಲ್ಲಿ 4663.12 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,7577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಿದ್ದಾರೆ.

ಸಣ್ಣ, ಅತಿ ಸಣ್ಣ ರೈತರಿಗೆ ಸಂಕಷ್ಟ

ರಾಜ್ಯದಲ್ಲಿ 236 ರಲ್ಲಿ 223 ತಾಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.

CM Siddaramaiah meets PM Narendra Modi

ಎನ್‌.ಡಿ.ಆರ್‌.ಎಫ್.ನಿಂದ 4663.12 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಲಾಗಿದೆ. ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು 2015-16ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಪಿಎಂ-ಕಿಸಾನ್‌ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿದರು. ಜತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬರಪೀಡಿತ ತಾಲೂಕುಗಳಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ

ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ದಿನಾಂಕ 22-09-2023 ರಂದು ಸಲ್ಲಿಸಲಾಗಿತ್ತು. ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್‌ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಆದ್ದರಿಂದ ಅಕ್ಟೋಬರ್‌ 20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್‌.ಡಿ.ಆರ್.ಎಫ್. ಅಡಿ 17,901.73 ಕೋಟಿ ರೂ. ಪರಿಹಾರ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ 12,577.86 ಕೋಟಿ ರೂ. ಮೊತ್ತವೂ ಸೇರಿದೆ. ನವೆಂಬರ್‌ 4 ರಂದು ಹೆಚ್ಚುವರಿಯಾಗಿ 7 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ ಪೂರಕ ಮನವಿಯೊಂದಿಗೆ ಕೇಂದ್ರದಿಂದ 18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: COVID Subvariant JN1: ಕೋವಿಡ್‌ ರಕ್ಷಣೆಗೆ 2 ಮಾರ್ಗಸೂಚಿ; ಹಿರಿಯರು, ಗರ್ಭಿಣಿ, ತಾಯಂದಿರಿಗೆ ಮಾಸ್ಕ್‌ ಕಡ್ಡಾಯ

CM Siddaramaiah meets PM Narendra Modi

ಶೀಘ್ರ ಪರಿಹಾರ ಬಿಡುಗಡೆಗೆ ಮನವಿ

ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ, ರೈತರ ಹಿತರಕ್ಷಣೆಯ ದೃಷ್ಟಿಯಿಂದ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಜತೆಗಿದ್ದರು.

Exit mobile version