Site icon Vistara News

CM Siddaramaiah : ಬಿಜೆಪಿ ಚುನಾವಣಾ ಗ್ಯಾರಂಟಿ ಯಾರೂ ನಂಬಲ್ಲ ಎಂದ ಸಿದ್ದರಾಮಯ್ಯ

CM Siddaramaiah says people will not trust BJP

ಕೊಪ್ಪಳ/ವಿಜಯಪುರ: ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಅಲ್ಲ. ಆದ್ದರಿಂದ ಅವರ ಯಾವ ಭರವಸೆಗಳನ್ನು ಜನರು ನಂಬುವುದಿಲ್ಲ. ಹೀಗಾಗಿ ಪಂಚರಾಜ್ಯ ಚುನಾವಣೆಗೆ (Five state Elections) ಸಂಬಂಧಿಸಿ ಆ ಪಕ್ಷ ನೀಡಿದ ಯಾವ ಗ್ಯಾರಂಟಿಗಳನ್ನೂ (BJP Guarantees) ಜನರು ಒಪ್ಪುವುದಿಲ್ಲ (BJP Guarantees) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಸೋಮವಾರ ಕೊಪ್ಪಳ ಮತ್ತು ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಬಿಜೆಪಿಯವರು ಈಗ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಬಿಜೆಪಿಯವರು ಬಹಳ ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದರೂ, ಯಾವ ಪ್ರಗತಿಯನ್ನೂ ಸಾಧಿಸಿಲ್ಲ. ಈಗ ಪ್ರಗತಿ ಸಾಧಿಸುವುದಾಗಿ ಭರವಸೆಗಳನ್ನು ನೀಡುತ್ತಿದ್ದಾರೆ. ಅವರ ಮಾತುಗಳನ್ನು ಜನರು ನಂಬುವುದಿಲ್ಲ ಎಂದರು.

ಕುಮಾರಸ್ವಾಮಿಯವರು ಆರೋಪಿಸಲು ನೈತಿಕತೆ ಇಲ್ಲ

ʻʻವಿದ್ಯುತ್ ಕಳ್ಳತನ ಎಸಗಿ ದಂಡ ಕಟ್ಟಿರುವ ಕುಮಾರಸ್ವಾಮಿಯವರಿಗೆ ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇಲ್ಲʼʼʼ ಎಂದು ಹೇಳಿದ ಸಿದ್ದರಾಮಯ್ಯ ಅವರು, ಮಾಜಿ ಶಾಸಕ ಯತೀಂದ್ರರವರು ದುಡ್ಡಿನ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆಯೇ , ಅವರ ಬಳಿ ಏನಾದರೂ ಪುರಾವೆ ಇದೆಯೇ ಎಂದು ಪ್ರಶ್ನಿಸಿದರು.

ಯತೀಂದ್ರ ಅವರು ಸಿಎಸ್ ಆರ್ ಫಂಡ್ ಬಗ್ಗೆ ಮಾತನಾಡಿದ್ದರು. ಆದರೆ ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸುತ್ತಾರೆ. ಕುಮಾರಸ್ವಾಮಿಯವರ ಕಾಲದಲ್ಲಿ ವರ್ಗಾವಣೆಗಳ ಮೂಲಕ ದುಡ್ಡು ಮಾಡಿರುವುದು ಜಗಜ್ಜಾಹೀರವಾಗಿದೆ. ಅವರು ನಮ್ಮ ವಿರುದ್ದ ಆರೋಪಗಳನ್ನು ಮಾಡುವ ನೈತಿಕತೆ ಇಲ್ಲ ಎಂದರು.

ಬರ ಪರಿಹಾರ ಕೆಲಸ ಪ್ರಾರಂಭವಾಗಿದೆ

ಬರ ಪರಿಹಾರದ ಕೆಲಸ ಪ್ರಾರಂಭವಾಗಿದೆ. ಕುಡಿಯುವ ನೀರು, ದನಕರುಗಳಿಗೆ ಮೇವು ಒದಗಿಸಲಾಗಿದೆ. ಮೇವಿಗೆ ಅಭಾವವಿಲ್ಲ, ಜನರಿಗೆ ಕೆಲಸ ಕೊಡು ಕೆಲಸವೂ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರ ವಿಮಾನನಿಲ್ದಾಣದಲ್ಲಿ ಹೇಳಿದರು.

ಬರಗಾಲ ಬಂದಾಗ ನರೇಗಾ ಯೋಜನೆಯಡಿ 150 ದಿನಗಳ ಕೆಲಸ ನೀಡುವುದು ಕಡ್ಡಾಯ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು. ಅನುಮತಿ ಕೋರಿ ನಾವು ಪತ್ರ ಬರೆದಿದ್ದು ಇಂದಿನವರೆಗೂ ಉತ್ತರ ಬಂದಿಲ್ಲ ಎಂದರು.

ಕೇಂದ್ರ ಸರ್ಕಾರದ ಬರ ಅಧ್ಯಯನ ಕೇಂದ್ರ ಬಂದು ಹೋಗಿ ಒಂದು ತಿಂಗಳ ಮೇಲಾಗಿದ್ದರೂ ಇಂದಿನವರೆಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಎನ್.ಡಿ.ಆರ್‍ಎಫ್ ಮಾರ್ಗಸೂಚಿಯಲ್ಲಿ ಮಾರ್ಪಾಡು ತರಲು ಬರೆದಿರುವ ಪತ್ರಕ್ಕೂ ಕೆಂದ್ರದಿಂದ ಉತ್ತರವಿಲ್ಲ ಎಂದರು.

ಇದನ್ನೂ ಓದಿ : BY Vijayendra : ಜೋಡೆತ್ತುಗಳು ಬೀದಿಯಲ್ಲಿ ಕಿತ್ತಾಡ್ತಿವೆ; ಡಿಕೆಶಿ-ಸಿಎಂ ಬಗ್ಗೆ ವಿಜಯೇಂದ್ರ ಲೇವಡಿ

ನಮ್ಮ ಪಕ್ಷದ್ದು ನಾವು ನೋಡಿಕೊಳ್ಳುತ್ತೇವೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಕಾಯುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಮ್ಮ ಪಕ್ಷದ್ದು ನಾವು ನೋಡಿಕೊಳ್ಳುತ್ತೇವೆ ಎಂದರು ಸಿದ್ದರಾಮಯ್ಯ.

Exit mobile version