ಬೆಂಗಳೂರು: ರಾಜ್ಯಕ್ಕೆ ಎನ್‌ಡಿಆರ್‌ಎಫ್ ನಿಧಿಯನ್ನು (NDRF Fund) ತಕ್ಷಣ ಬಿಡುಗಡೆಗೊಳಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ (Supreme Court) ಬಾಗಿಲು ಬಡಿದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರದಿಂದ ನಮ್ಮ ಪಾಲಿನ ಪರಿಹಾರ ಬರುತ್ತದೆ ಎಂದು ಕಾದು ಕಾದು ಸಾಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋದೆವು. ಸಂವಿಧಾನದ ಪರಿಚ್ಛೇದ 32ರ ಅಡಿಯಲ್ಲಿ ನಾವು ನಮ್ಮ ಕಾನೂನುಬದ್ಧ ಹಕ್ಕನ್ನು ಚಲಾಯಿಸಿದ್ದೇವೆ ಎಂದು ವಿವರಿಸಿದರು.
ಒಂದು ಪೈಸೆಯನ್ನೂ ಕೇಂದ್ರ ಕೊಟ್ಟಿಲ್ಲ
ಬರದ ಸಂದರ್ಭದಲ್ಲಿ , ತುರ್ತು ಸಂದರ್ಭಗಳಲ್ಲಿ ಜನರಿಗೆ ತುರ್ತಾಗಿ ಸ್ಪಂದಿಸಬೇಕು ಎನ್ನುವ ಉದ್ದೇಶದಿಂದಲೇ ವಿಪತ್ತು ನಿರ್ವಹಣಾ ಕಾನೂನು ಮಾಡಲಾಗಿದೆ. ಆದರೆ, ಇದುವರೆಗೂ ಕೇಂದ್ರ ಸರ್ಕಾರ ಕಾನೂನು ಬದ್ಧವಾಗಿ ನಮಗೆ ಬರಬೇಕಾದ ಹಣದಲ್ಲಿ ಒಂದೇ ಒಂದು ಪೈಸೆಯನ್ನೂ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಮೂರು ಬಾರಿ ಕೇಂದ್ರಕ್ಕೆ ಪತ್ರ ಬರೆದೆವು
ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ರಾಜ್ಯದಲ್ಲಿ 236 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಗಾಲ ಅಂತ ಘೋಷಿಸಿದ್ದೇವೆ. ನಾಲ್ಕು ಬಾರಿ ಮೌಲ್ಯಮಾಪನ ಮಾಡಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟ ಆಗಿದೆ. 3 ಬಾರಿ ಸತತವಾಗಿ ಕೇಂದ್ರಕ್ಕೆ ಮನವಿ ಪತ್ರ ಬರೆದೆವು. ಇದುವರೆಗೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನಲ್ಲಿ ನಯಾ ಪೈಸೆಯನ್ನೂ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಿಯಮದಂತೆ ನಡೆದುಕೊಳ್ಳಲಿಲ್ಲ
ನಿಯಮಾವಳಿ ಪ್ರಕಾರ ರಾಜ್ಯ ಸರ್ಕಾರ ಮನವಿ ಮಾಡಿದ ವಾರದಲ್ಲಿ ಕೇಂದ್ರದ ತಂಡ ಬರಬೇಕು. ಆದರೆ, ಅಕ್ಟೋಬರ್‌ನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸಿ ಕೇಂದ್ರಕ್ಕೆ ಐಎಂಸಿಟಿ ವರದಿ ನೀಡಿದೆ. ಈ ವರದಿ ಕೊಟ್ಟ ಒಂದು ತಿಂಗಳಲ್ಲಿ ರಾಜ್ಯಕ್ಕೆ ಬರ ಪರಿಹಾರ ಕೊಡವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ನಿಯಮ. ಆದರೆ, ಇದುವರೆಗೂ ಕೇಂದ್ರ ರಾಜ್ಯದ ಜನರಿಗೆ ಸ್ಪಂದಿಸಿಲ್ಲ ಎಂದು ಎನ್‌ಡಿಆರ್‌ಎಫ್ ನಿಯಮಾವಳಿಗಳನ್ನು ಮಾಧ್ಯಮಗಳ ಎದುರಿಗೆ ಸಿಎಂ ಸಿದ್ದರಾಮಯ್ಯ ಓದಿದರು.
ಕೇಂದ್ರ ತಂಡ ವರದಿ ಕೊಟ್ಟರೂ ನಮಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದಾಗ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ದೆಹಲಿಗೆ ಹೋದರೂ ಕೇಂದ್ರ ಸಚಿವರ ಭೇಟಿಗೆ ಅವಕಾಶವನ್ನೇ ಕೊಡಲಿಲ್ಲ. ಬಳಿಕ ಡಿಸೆಂಬರ್ 20ರಂದು ನಾನು ಮತ್ತು ಕೃಷ್ಣಬೈರೇಗೌಡ ಅವರು ಮತ್ತೆ ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಆದರೂ ನಮಗೆ ಪರಿಹಾರ ಕೊಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಡಿಸಿಗಳ ಬಳಿ ಹಣ ಇದೆ
ಬಳಿಕ ನಾನು ಬೆಂಗಳೂರಿನಲ್ಲೇ ಪ್ರಧಾನಿ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದೆ. ಆದರೂ ಪರಿಹಾರ ಸಿಗಲಿಲ್ಲ. ಕೇಂದ್ರದಿಂದ ನಯಾಪೈಸೆ ಬಿಡುಗಡೆ ಆಗದಿದ್ದಾಗ 327 ಕೊಟಿ ಕುಡಿಯುವ ನೀರಿಗೆ ಮೇವಿಗೆ 40 ಕೋಟಿ ರೈತರಿಗೆ 650 ಕೊಟಿ ಹೀಗೆ ಒಟ್ಟು 1017 ಕೊಟಿ ಬಿಡುಗಡೆ ಮಾಡಿದೆವು. ಡಿಸಿಗಳ ಬಳಿ ಇನ್ನೂ 800 ಕೋಟಿ ರೂಪಾಯಿ ಹಣ ಬರನಿರ್ವಹಣೆ ಉದ್ದೇಶಕ್ಕಾಗಿಯೇ ಮೀಸಲಿಡಲಾಗಿದೆ. ಬರ ನಿರ್ವಹಣೆ ಕುರಿತಾಗಿ ಅಧಿಕಾರಿಗಳಿಗೆ ಸ್ಪಷ್ಡ ಸೂಚನೆಗಳನ್ನು ನೀಡಲಾಗಿದೆ ಎಂದರು.
ಕಾಯ್ದೆ ಪ್ರಕಾರ ಕೂಡಲೇ ಹಣ ಕೊಡಬೇಕಿತ್ತು
4663 ಕೋಟಿ ಇನ್‌ಪುಟ್ ಸಬ್ಸಿಡಿಗೆ ಹಣ ಬೇಕು. ಕಾಯ್ದೆ ಪ್ರಕಾರ ಇಂಥ ಸನ್ನಿವೇಶದಲ್ಲಿ ತಡ ಮಾಡದೆ ಹಣ ಬಿಡುಗಡೆ ಆಗಬೇಕಿತ್ತು. ಆದರೆ, ಐದು ತಿಂಗಳಾದರೂ ನಮಗೆ ಎನ್‌ಡಿಆರ್‌ಎಫ್ ನಿಧಿ ಬಂದೇ ಇಲ್ಲ. ಹೀಗಾಗಿ ನಾವು ಬೇರೆ ದಾರಿ ಇಲ್ಲದೆ ಸುಪ್ರೀಂ ಕೋರ್ಟ್ ಬಾಗಿಲು ಬಡಿಯಬೇಕಾಯಿತು. ನಮ್ಮ ನಾಡಿಗೆ, ನಮ್ಮ ನಾಡಿನ ಜನರಿಗೆ ಆಗಿರುವ ಅನ್ಯಾಯವನ್ನು ಸರಿ ಮಾಡಿ ಎಂದು, ಎನ್‌ಡಿಆರ್‌ಎಫ್ ನಿಧಿ ಕೊಡಿ ಎಂದು ಮೇಲಿಂದ ಮೇಲೆ ಮನವಿ ಮಾಡಿ ಎಲ್ಲ ರೀತಿಯಲ್ಲೂ ಬೇಡಿಕೆ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ. ಈ ಕಾರಣಕ್ಕೆ ನಾವು ಸುಪ್ರೀಂ ಕೋರ್ಟ್ ಬಳಿ ನ್ಯಾಯ ಕೇಳದೆ ಬೇರೆ ದಾರಿ ಇರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: Lok Sabha Election 2024: ಕೋಲಾರ ಟಿಕೆಟ್ ಮಿಸ್; ಸಿಟ್ಟೆದ್ದು ದೆಹಲಿಗೆ ದೌಡಾಯಿಸಿದ ಮುನಿಸ್ವಾಮಿ!
ನಮಗೆ ಬೇರೆ ದಾರಿ ಇರಲಿಲ್ಲ
ಇವತ್ತು ಕೊಡುತ್ತಾರೆ, ನಾಳೆ ಕೊಡುತ್ತಾರೆ, ಇವತ್ತು ಬರತ್ತದೆ, ನಾಳೆ ಬರತ್ತದೆ, ಎಂದು ಹೇಳುತ್ತಲೇ ಐದು ತಿಂಗಳು ಕಾದಿದ್ದಾಯ್ತು. ಹೀಗಾಗಿ ಈಗ ನಮಗೆ ಬೇರೆ ದಾರಿ ಇರಲಿಲ್ಲ. ನಮಗೆ ಕಾನೂನು ಮೊರೆ ಹೋಗುವುದು ಇಷ್ಟ ಇರಲಿಲ್ಲ. ಆದರೆ, ನಾವು ಕಾನೂನು ಮೊರೆ ಹೋಗುವ ಅನಿವಾರ್ಯತೆಯನ್ನು ಕೇಂದ್ರ ಸೃಷ್ಟಿಸಿದೆ ಎಂದರು. ಕಂದಾಯ ಸಚಿವ ಕೃಷ್ಣಬೈರೇಗೌಡ ಜತೆಗಿದ್ದರು.