ಬೆಂಗಳೂರು: ಬಿಜೆಪಿಗೆ 400ಕ್ಕಿಂತಲೂ ಅಧಿಕ ಸೀಟು ಸಿಕ್ಕಿದರೆ ಸಂವಿಧಾನ ಬದಲಾವಣೆ (Constitution Change) ಮಾಡಲು ಅನುಕೂಲವಾಗುತ್ತದೆ ಎಂಬ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಯವರ (Anant Kumar hegade) ವಿವಾದಾತ್ಮಕ ಹೇಳಿಕೆಗೆ ತೀವ್ರ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಒಂದು ವೇಳೆ ಸಂವಿಧಾನವನ್ನು ಬದಲಿಸಿದರೆ ರಕ್ತಪಾತವಾಗಲಿದೆ (Blood Bath Warning) ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಆಹಾರ ಸೌಧ ಕಟ್ಟಡದ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಲು ಆಗಮಿಸಿದ ವೇಳೆ ಮಾತನಾಡಿದ ಅವರು, ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾಕ್ತವಾಗಲಿದೆ. ಇದು ಬಿಜೆಪಿಗೆ ತಿಳಿದಿರಲಿ ಎಂದರು.
ಅನಂತಕುಮಾರ್ ಹೆಗಡೆ ಅವರು ಸಂವಿಧಾನ ಬದಲಾವಣೆಯ ಬಗ್ಗೆ ಪದೇಪದೆ ಮಾತನಾಡುತ್ತಿದ್ದಾರೆ. ಅವರು ಈ ರೀತಿ ಮಾತನಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಹಿಂದೊಮ್ಮೆ ಕೇಂದ್ರದಲ್ಲಿ ಸಚಿವರಾಗಿದ್ದಾಗಲೇ ಹೇಳಿದ್ದರು. ಅವರು ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಮಂತ್ರಿಯಾಗಿದ್ದಾಗಲೇ ಇಂಥ ಹೇಳಿಕೆಯನ್ನು ನೀಡಿದ್ದರೂ ನರೇಂದ್ರ ಮೋದಿಯವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ನೆನಪಿಸಿದರು.
CM Siddaramaiah: ಇದು ಬಿಜೆಪಿಯ ಹಿಡನ್ ಅಜೆಂಡಾ
ಸಂವಿಧಾನ ಬದಲಾವಣೆ ಎನ್ನುವುದು ಬಿಜೆಪಿಯ ಹಿಡನ್ ಅಜೆಂಡಾ. ಅದಕ್ಕೆ ಬೇರೆ ಬೇರೆಯವರ ಮೂಲಕ ಹೇಳಿಸುತ್ತಿದ್ದಾರೆ. ಸಂವಿಧಾನಕ್ಕೆ ಅನಗತ್ಯ ವಿಚಾರಗಳನ್ನ ಸೇರಿಸಿದ್ದಾರೆ, ಹಾಗಾಗಿ ಬದಲಾಯಿಸಬೇಕು ಎನ್ನುವುದು ಅವರ ನಿಲುವು. ಸಂವಿಧಾನ ಬದಲಾವಣೆ ಮಾಡಬೇಕು ಮೂರನೇ ಎರಡು ಬಹುಮತ ಬೇಕು. ಈಗ 400 ಸೀಟುಗಳು ಬಂದರೆ ಸಂವಿಧಾನ ಬದಲಾವಣೆಗೆ ಅವಕಾಶವಾಗುತ್ತದೆ ಎನ್ನುವುದು ಅವರ ಆಸೆ. ಅವರು 400 ಸೀಟು ಕೇಳುತ್ತಿರುವುದು ದೇಶ ಉದ್ಧಾರಕ್ಕೆ ಅಲ್ಲ, ಬಡವರ ಉದ್ಧಾರಕ್ಕೆ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇವರು ಮನುವಾದದ ಸಮರ್ಥಕರು, ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಅನ್ನೋದು ಅವರ ಹಿಡನ್ ಅಜೆಂಡಾ. ಅವರಿಗೆ 400 ಸ್ಥಾನ ಬೇಕಾಗಿರುವುದು ಈ ಕಾರಣಕ್ಕೆ. ಆದರೆ, ಇದು ಅಷ್ಟು ಸುಲಭ ಅಲ್ಲ. ಸಂವಿಧಾನವನ್ನು ಬದಲಿಸುವ ಅವರ ನಿಲುವಿಗೆ ಇಡೀ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ವಿರುದ್ಧವಾಗಿದ್ದಾರೆ. ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
CM Siddaramaiah : ಇದು ಅನಂತ ಕುಮಾರ್ ಹೆಗಡೆ ವೈಯಕ್ತಿಕ ಹೇಳಿಕೆಯಲ್ಲ
ʻʻಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ವೈಯಕ್ತಿಕ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಬಿಜೆಪಿಯ ಹಿರಿಯ ನಾಯಕರು ಅನಂತ್ ಕುಮಾರ್ ಹೆಗಡೆ ಮೂಲಕ ಹೇಳಿಸುತ್ತಿದ್ದಾರೆ. ಮಂತ್ರಿ ಮಂಡಲದಲ್ಲಿದ್ದಾಗಲೇ ಅವರು ಮಾತನಾಡಿದ್ದು ಅವರ ವಯಕ್ತಿಕ ಹೇಳಿಕೆ ಆಗುತ್ತದಾ? ಸರ್ಕಾರ ಅಂದ್ರೆ ಅದು ಪಕ್ಷದ ಹೇಳಿಕೆ. ಅವರು ಈಗ ಹಾಲಿ ಸಂಸದರು. ಅವರು ಸ್ಟೇಟ್ಮೆಂಟ್ ಕೊಡ್ತಾರೆ ಅಂದ್ರೆ ಏನರ್ಥ? ಅವರು ಸೀನಿಯರ್ ಸಂಸದರು. ನಮ್ಗೂ ಅದಕ್ಕೂ ಸಂಬಂಧವಿಲ್ಲ ಅಂದ್ರೆ ಹೇಗೆ..?ʼʼ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ʻʻಸಂವಿಧಾನ ಬದಲಾವಣೆ ಮಾಡೋದೇ ಬಿಜೆಪಿಯ ಹಿಡನ್ ಅಜೆಂಡಾ. ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಸರ್ವಾಧಿಕಾರದಲ್ಲಿ ನಂಬಿಕೆ ಇದೆ. ಸರ್ವಾಧಿಕಾರಿ ವ್ಯವಸ್ಥೆ ತರಬೇಕು ಅನ್ನೋದು ಅವರ ಉದ್ದೇಶ. ಸಂವಿಧಾನ ಸಮ ಸಮಾಜವನ್ನು ಬಯಸುತ್ತದೆ. ಅವಕಾಶ ವಂಚಿತರಿಗೆ ನ್ಯಾಯ ಒದಗಿಸುತ್ತದೆ. ನಮ್ಮ ಸಂವಿಧಾನಲ್ಲಿ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಇದೆ. ಅದೆಲ್ಲವನ್ನೂ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು ಸಿದ್ದರಾಮಯ್ಯ.
ಇದನ್ನೂ ಓದಿ : Anantkumar Hegde : ‘ಸಂವಿಧಾನ ತಿದ್ದುವ’ ಅನಂತ್ಕುಮಾರ್ ಹೇಳಿಕೆಯಿಂದ ಬಿಜೆಪಿ ದೂರ; ಚುನಾವಣೆಯಿಂದ ನಿರ್ಬಂಧಿಸಿ ಎಂದ ಸಿದ್ದು
ಮೋದಿ ರಾಜ್ಯದಿಂದಲೇ ಪ್ರಚಾರ ಶುರು ಮಾಡಲಿ ಬಿಡಿ
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಿಂದಲೇ ಚುನಾವಣಾ ಪ್ರಚಾರ ಕಾರ್ಯ ಆರಂಭಿಸುವ ಬಗ್ಗೆ ಪ್ರಶ್ನೆ ಮಾಡಿದಾಗ, ಮಾಡ್ಲಿ ಬಿಡಿ, ಬೇಡ ಅಂದಿರೋರು ಯಾರು..? ಅವರು ಚುನಾವಣೆಯಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕಾಂಗ್ರೆಸ್‌ನ ಟಿಕೆಟ್ ಹಂಚಿಕೆ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಸೋಮವಾರ ಸಂಜೆ ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಸೋಮವಾರ ನಾವು ಕೇವಲ ಶಿಫಾರಸು ಮಾಡ್ತೀವಿ ಅಷ್ಟೆ. ಅಂತಿಮವಾಗಿ ನ್ಯಾಷನಲ್ ಎಲೆಕ್ಷನ್ ಕಮಿಟಿಯವರು ತೀರ್ಮಾನ ಮಾಡ್ತಾರೆ ಎಂದರು ಸಿದ್ದರಾಮಯ್ಯ.
.