ಬೆಂಗಳೂರು: ಸ್ಮಶಾನ ನೌಕರರು ಇನ್ನು ಮುಂದೆ ಸತ್ಯ ಹರಿಶ್ಚಂದ್ರ ಬಳಗ ಎಂದು ಸಿಎಂ ಬಸವರಾಜ ಬೊಮ್ಮಾಯಿ ನಾಮಕರಣ ಮಾಡಿದರು. ತಮ್ಮ ರೇಸ್‌ಕೋರ್ಸ್ ರಸ್ತೆಯ ನಿವಾಸದಲ್ಲಿ, ಸ್ಮಶಾನ ಕಾರ್ಮಿಕರೊಂದಿಗೆ ಬುಧವಾರ ಬೆಳಗ್ಗೆ ಉಪಾಹಾರ ಸೇವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಮಶಾನ ಕಾರ್ಮಿಕರಿಗೆ ಸಂಬಳವಿರಲಿ, ಉದ್ಯೋಗ ಕೂಡ ಇರಲಿಲ್ಲ. ಪೌರಕಾರ್ಮಿಕರ ರೀತಿಯಲ್ಲಿ ಸ್ಮಶಾನಕಾರ್ಮಿಕರಿಗೂ ಖಾಯಂ ಮಾಡುತ್ತಿದ್ದೇವೆ. 117 ಖಾಯಂ ಉದ್ಯೋಗ ನೀಡಿ ಆಗಿ ಆದೇಶ ಮಾಡಲಾಗಿದೆ. ಇನ್ನಳಿದ 30 ಜನರು ವಯೋಮಿತಿ ಆಧಾರದಲ್ಲಿ ಖಾಯಂ ಆಗುತ್ತಾರೆ. ಬೇರೆ ಬೇರೆ ಜಿಲ್ಲೆಯ ಸ್ಮಶಾನ ನೌಕರರಿಗೂ ಖಾಯಂ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಇಂತಹ ಸೇವೆ ಮಾಡುವವರ ಮೇಲೆ ನಮ್ಮ ಕಾಳಜಿ ಇರಬೇಕು. ಇಷ್ಟು ವರ್ಷ ಆದರೂ ಇವರ ಕಡೆ ಯಾರೂ ತಿರುಗಿಯೇ ನೋಡಿಲ್ಲ. ಯಾವ ಸರ್ಕಾರ ಕೂಡ ಇವರ ಕಡೆ ನೋಡಿಯೇ ಇಲ್ಲ. ಪೌರಕಾರ್ಮಿಕರ ಖಾಯಂ ಮಾಡುವಾಗ ಸಾಕಷ್ಟು ಚರ್ಚೆಯಾಯಿತು. ನಾವು ನಾಗರೀಕರಾಗಿ ಬದುಕುತ್ತಿದ್ದರೆ ಅದಕ್ಕೆ ಅವರೇ ಕಾರಣ. 40 ಸಾವಿರ ಪೌರಕಾರ್ಮಿಕರ ಖಾಯಂ ಉದ್ಯೋಗ ನೀಡುವ ಕೆಲಸ ಮಾಡುತ್ತೇವೆ. ಈಗಾಗಲೇ 11 ಸಾವಿರ ಖಾಯಂ ಮಾಡಿದ್ದೇವೆ ಎಂದು ಹೇಳಿದರು.
ಬಡವರು, ಜನಗಳ ಪರ ಸರ್ಕಾರವಿದೆ. ತಳಸಮುದಾಯದ ವಿಚಾರದಲ್ಲಿ ಸರ್ಕಾರ ಹತ್ತು ಹಲವು ನಿರ್ಣಯ ತೆಗೆದುಕೊಳ್ಳಲಿದೆ. ಸ್ಮಶಾನ ಕಾರ್ಮಿಕರು ಮುಕ್ತಿ ನೀಡುವ ಕೆಲಸ ಮಾಡುತ್ತಾರೆ. ಬದುಕಿದ್ದಾಗ ಅಷ್ಟೇ ಭೂಮಿ, ಸತ್ತ ಮೇಲೆ ನಾವು ಭೂಮಿ ಒಂದೇ. ನನ್ನ ಜೀವನದಲ್ಲಿ ಸತ್ಯ ಹರಿಶ್ಚಂದ್ರ ಪ್ರತಿಮೆ ಸಿಕ್ಕಿದ್ದು ಇದೇ ಮೊದಲು. ನಾನು ದಿನನಿತ್ಯ ಪೂಜಿಸುವ ಕಡೆ ಈ ಸತ್ಯ ಹರಿಶ್ಚಂದ್ರ ಪ್ರತಿಮೆ ಇಡುತ್ತೇನೆ. ಇನ್ನುಮೇಲೆ ಇವರು ಸ್ಮಶಾನ ಕಾರ್ಮಿಕರಲ್ಲ. ಇವರು ಸತ್ಯ ಹರಿಶ್ಚಂದ್ರ ಬಳಗದವರು ಎಂದು ಬಿಬಿಎಂಪಿ ಆಯುಕ್ತರಿಗೆ ಸಿಎಂ ಬೊಮ್ಮಾಯಿ ಸೂಚಿಸಿದರು. ಅದೇ ರೀತಿ ಪೌರ ಕಾರ್ಮಿಕರಲ್ಲ, ಪೌರ ನೌಕರರು. ಬೇರೆ ಎಲ್ಲ ವೃತ್ತಿಗಳ ರೀತಿ ಇವರೂ ಪೌರ ನೌಕರರು ಎಂದರು.
ಇದಕ್ಕೂ ಮೊದಲು ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರು ಬಹಳ ದಿನಗಳಿಂದ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ತಮ್ಮೊಂದಿಗೆ ಉಪಾಹಾರಕ್ಕೆ ಬರಲಿ ಎಂದು ಹೇಳಿದ ನಿದರ್ಶನವನ್ನು ನನ್ನ ರಾಜಕಾರಣದ ಜೀವನದಲ್ಲಿ ಮೊದಲ ಬಾರಿಗೆ ನೋಡುತ್ತಿದ್ದೇನೆ. ಸ್ಮಶಾನದಲ್ಲಿ ದುಡಿದು ಸೇವೆ ಸಲ್ಲಿಸುವವರೊಂದಿಗೆ ಉಪಾಹಾರ ಸೇವಿಸುವ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದ ಸಿಬ್ಬಂದಿ, ಸತ್ಯ ಹರಿಶ್ಚಂದ್ರ ಪ್ರತಿಮೆಯನ್ನು ನೀಡಿದರು. ಸಿಎಂ ಬಸವರಾಜ ಬೊಮ್ಮಾಯಿ, ಸ್ಮಶಾನ ನೌಕರರ ಜತೆಗೆ ಕೋಟ ಶ್ರೀನಿವಾಸ ಪೂಜಾರಿ, ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ದೇವೇಂದ್ರ ನಾಥ್ ನಾದ್, ಮಾಜಿ ಸಂಸದ ಛಲವಾದಿ ನಾರಾಯಣಸ್ವಾಮಿ ಒಟ್ಟಿಗೆ ಕುಳಿತು ಉಪಾಹಾರ ಸೇವಿಸಿದರು. ಉಪಸ್ಥಿತರಿದ್ದರು.
ಇದನ್ನೂ ಓದಿ | Viral news | ಈಕೆಗೆ ಅತ್ಯಂತ ನೆಮ್ಮದಿ ಕೊಡುವ ಆಫೀಸು ಸ್ಮಶಾನವಂತೆ!