Site icon Vistara News

Congress Karnataka : ‌ನಿಗಮ ಕೊಟ್ಟರೆ ಸಚಿವಗಿರಿ ಇಲ್ಲ; ಸಚಿವಾಕಾಂಕ್ಷಿಗಳಿಗೆ ಕಂಡಿಷನ್; ಲಿಸ್ಟ್‌ ಫೈನಲ್?

DCM DK Shivakumar vs CM Siddaramaiah

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ (Congress Karnataka) ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದರೂ ಆಂತರಿಕ ಭಿನ್ನಮತ ಶಮನವಾಗಿಲ್ಲ. ಈಗಾಗಲೇ ಸಚಿವ ಸಂಪುಟ ಭರ್ತಿಯಾಗಿರುವುದರಿಂದ ಹಲವರಲ್ಲಿ ಅಸಮಾಧಾನ ಇದೆ. ಸಂಪುಟ ಪುನಾರಚನೆ, ಅವಕಾಶಕ್ಕಾಗಿ ಬೇಡಿಕೆ ಇಡುತ್ತಾ ಬಂದಿದ್ದಾರೆ. ಆದರೆ, ಈಗ ಹಿರಿಯ ಶಾಸಕರಾದಿಯಾಗಿ ಕೆಲವರನ್ನು ಸಮಾಧಾನ ಪಡಿಸಲು ಕಾಂಗ್ರೆಸ್‌ ಮಂದಾಗಿದೆ. ಅದಕ್ಕಾಗಿ ನಿಗಮ – ಮಂಡಳಿಗಳ ಆಯ್ಕೆಗೆ (Selection of Corporations and Boards) ಕಸರತ್ತು ನಡೆಸಿದೆ. ಈ ಸಂಬಂಧ ಈಗಾಗಲೇ ಎರಡೆರಡು ಬಾರಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲ (Randeep Singh Surjewala) ಜತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಸಭೆ ನಡೆಸಿದ್ದಾರೆ. ಆದರೆ, ಇನ್ನೂ ಒಮ್ಮತ ಮೂಡಿಲ್ಲ ಎನ್ನಲಾಗಿದ್ದರೂ ಒಂದು ಹಂತದ ಸಂಭಾವ್ಯ ಪಟ್ಟಿ ಸಿದ್ಧವಾಗಿದೆ. ಆದರೆ, ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರದ್ದೇ ಮೇಲುಗೈ ಆಗಿದೆ ಎಂದು ತಿಳಿದುಬಂದಿದೆ. ಈಗ ನಿಗಮ ಮಂಡಳಿ ಪಡೆಯುವ ಹಿರಿಯ ಶಾಸಕರಿಗೆ ಕಂಡಿಷನ್‌ ಹಾಕಲಾಗಿದ್ದು, ಸಂಪುಟ ದರ್ಜೆ ಸಿಗಲಿದೆ, ಸಚಿವ ಸ್ಥಾನ ಸಿಗುವುದಿಲ್ಲ ಎಂಬ ಸಂದೇಶವನ್ನು ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ನಿಗಮ ಮಂಡಳಿ ಪಡೆಯುವ ಹಿರಿಯ ಶಾಸಕರಿಗೆ ಕಂಡಿಷನ್‌ ಹಾಕಲಾಗಿದ್ದು, ಒಪ್ಪಿದವರಿಗೆ ಸ್ಥಾನಮಾನ ಕಲ್ಪಿಸಲು ಮುಂದಾಗಲಾಗಿದೆ ಎಂದು ತಿಳಿದು ಬಂದಿದೆ. ಮಂಗಳವಾರ 9 ಗಂಟೆಗಳ ಕಾಲ ಸುದೀರ್ಘವಾಗಿ ನಡೆದ ಸಿಎಂ, ಡಿಸಿಎಂ ಹಾಗೂ ಸುರ್ಜೇವಾಲ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ನಿಗಮ – ಮಂಡಳಿ ನೇಮಕ ಆಗುವವರಿಗೆ ಕರೆ ಮಾಡಿ ವರಿಷ್ಠರು ಕಂಡಿಷನ್ ಹಾಕಿದ್ದಾರೆ. ಯಾರು ಇದಕ್ಕೆ ಒಪ್ಪುತ್ತಾರೋ ಅವರ ಹೆಸರನ್ನು ಅಂತಿಮಗೊಳಿಸಲಾಗುತ್ತಿದೆ.

ಇದನ್ನೂ ಓದಿ: Caste Census : ಜಾತಿ ವರದಿ ಬಿಡುಗಡೆಗೆ ಸಿಎಂ – ಡಿಸಿಎಂ ಡಿಶುಂ; ಯಾವ ಶಾಸಕ – ಸಚಿವರು ಯಾರ ಕಡೆಗೆ?

ಈಗ ನಿಗಮ ಮಂಡಳಿಗೆ ನೇಮಕ ಆಗುವವರಿಗೆ ಮುಂದೆ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನವನ್ನು ನೀಡಲಾಗುವುದಿಲ್ಲ. ಆಗ ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ ಎಂದು ಕಂಡಿಷನ್ ಹಾಕಲಾಗಿದೆ. ಆದರೆ, ಈಗ ನೇಮಕ ಆಗುವ ನಿಗಮಗಳಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ಕಲ್ಪಿಸಲಾಗುವುದು ಎಂಬ ಅಭಯವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಶಾಸಕರಿಗೆ ಸಿಹಿ, ಕಾರ್ಯಕರ್ತರಿಗೆ ಕಹಿ ಸುದ್ದಿ

ಈಗ ಇರುವ ಮಾಹಿತಿ ಪ್ರಕಾರ, ಶಾಸಕರಿಗೆ ಸಿಹಿ, ಕಾರ್ಯಕರ್ತರಿಗೆ ಕಹಿ ಸುದ್ದಿ ಎಂಬಂತಾಗಿದೆ. 25 ಶಾಸಕರಿಗೆ ನಿಗಮ – ಮಂಡಳಿ ಅಧಿಕಾರದ ಭಾಗ್ಯ ಒಲಿದಿದೆ ಎನ್ನಲಾಗಿದೆ. 21 ಶಾಸಕರು 4 ಜನ ಪರಿಷತ್ ಸದಸ್ಯರು ಸೇರಿ ಒಟ್ಟು 25 ಶಾಸಕರಿಗೆ ನಿಗಮ – ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ತೀರ್ಮಾನಕ್ಕೆ ಬರಲಾಗಿದೆ. ಸದ್ಯಕ್ಕೆ ಶಾಸಕರಿಗೆ ನಿಗಮ-ಮಂಡಳಿ ಕೊಡೋಣ. ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಸ್ಥಾನ ಕಲ್ಪಿಸೋಣ ಎಂಬ ನಿರ್ಧಾರಕ್ಕೆ ಕಾಂಗ್ರೆಸ್‌ ನಾಯಕರು ಬಂದಿದ್ದಾರೆನ್ನಲಾಗಿದೆ.

ಸಭೆ ನಡುವೆಯೂ ಒಬ್ಬೊಬ್ಬ ಶಾಸಕರಿಗೆ ಕರೆ ಮಾಡಿರುವ ಸಿಎಂ, ಡಿಸಿಎಂ ಹಾಗೂ ಸುರ್ಜೇವಾಲ ಅವರು, ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಬೇಕು. ಆಮೇಲೆ ತಕರಾರು ಮಾಡುವಂತಿಲ್ಲ ಎಂದು ತಾಕೀತು ಮಾಡಿದ್ದಾರೆಂದು ತಿಳಿದು ಬಂದಿದೆ.

ಯಾರಿಗೆ ನಿಗಮ – ಮಂಡಳಿ ಅಧಿಕಾರದ ಭಾಗ್ಯ? ಇಲ್ಲಿದೆ ಸಂಭಾವ್ಯರ ಪಟ್ಟಿ

ಮೇಲುಗೈ ಸಾಧಿಸಿ ಸಿಎಂ ಸಿದ್ದರಾಮಯ್ಯ

ಸಿಎಂ ವರ್ಸಸ್ ಡಿಸಿಎಂ ಜಟಾಪಟಿಯಲ್ಲಿ ಸಿಎಂ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಹಿನ್ನಡೆಯಾಗಿದೆ. ನಿಗಮ – ಮಂಡಳಿ ನೇಮಕಕ್ಕೆಂದು ಸಿಎಂ, ಡಿಸಿಎಂ ಇಬ್ಬರಿಂದಲೂ ಪ್ರತ್ಯೇಕ ಪಟ್ಟಿ ಸಿದ್ಧಗೊಂಡಿತ್ತು. ಶಾಸಕರದೊಂದು ಪಟ್ಟಿ, ಕಾರ್ಯಕರ್ತರದ್ದೊಂದು ಪಟ್ಟಿ ಎಂದು ಸಿದ್ಧವಾಗಿತ್ತು. ಮೊದಲ ಹಂತದಲ್ಲಿ ಶಾಸಕರಿಗೆ ಅಧಿಕಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರೆ, ಕಾರ್ಯಕರ್ತರಿಗೂ ಸ್ಥಾನ ನೀಡಬೇಕು ಎಂಬುದು ಡಿ.ಕೆ. ಶಿವಕುಮಾರ್‌ ವಾದವಾಗಿತ್ತು. ಆದರೆ, ಹೈಕಮಾಂಡ್‌, ಸಿದ್ದರಾಮಯ್ಯ ಪಟ್ಟಿಗೆ ಅಸ್ತು ಎಂದು ಹೇಳಿದೆ.

ಲೋಕಸಭೆ ಬಳಿಕ ಕಾರ್ಯಕರ್ತರಿಗೆ ನಿಗಮ – ಮಂಡಳಿ ಸ್ಥಾನ ಎಂದು ಸಿಎಂ ಸಿದ್ದರಾಮಯ್ಯ ಗಟ್ಟಿಯಾಗಿ ಕುಳಿತಿದ್ದರಿಂದ ಡಿಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ಪಟ್ಟನ್ನು ಸಡಿಲಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ನಿಗಮ – ಮಂಡಳಿ ‌ಆಯ್ಕೆಯಲ್ಲಿ ಸಿಎಂ‌ ಮೇಲುಗೈ ಸಾಧಿಸಿದಂತೆ ಆಗಿದೆ.

ನಿಗಮ, ಮಂಡಳಿ ನಿರಾಕರಿಸಿದ ಶಾಸಕ ಬಸವರಾಜ್ ರಾಯರೆಡ್ಡಿ

ನಿಗಮ- ಮಂಡಳಿ ಆಯ್ಕೆ ವಿಚಾರವಾಗಿ ಸಿಎಂ, ಡಿಸಿಎಂ, ಸುರ್ಜೇವಾಲ ಸಭೆ ನಡೆಸುತ್ತಿರುವ ವೇಳೆ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಅವರನ್ನು ಕರೆಸಿ ಮಾತುಕತೆ ನಡೆಸಲಾಗಿದೆ. ಈ ವೇಳೆ ಅವರಿಗೆ ಪ್ರಬಲ ನಿಗಮ – ಮಂಡಳಿ ಕೊಡುವುದಾಗಿ ಆಫರ್ ಮಾಡಿದ್ದಾರೆನ್ನಲಾಗಿದೆ. ಆದರೆ, ಇದನ್ನು ಬಸವರಾಜ್ ರಾಯರೆಡ್ಡಿ ನಿರಾಕರಣೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಬಳಿಕ ರಾಯರೆಡ್ಡಿ ಜತೆಗೆ ರಣದೀಪ್‌ ಸಿಂಗ್‌ ಸುರ್ಜೇವಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಉಸ್ತುವಾರಿ ಸುರ್ಜೇವಾಲ ಮುಂದೆ ರಾಯರೆಡ್ಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಆಗ ಮತ್ತೊಮ್ಮೆ, ನಿಗಮ, ಮಂಡಳಿ ಸ್ಥಾನ ವಹಿಸಿಕೊಳ್ಳುವಂತೆ ಸುರ್ಜೇವಾಲ ಹೇಳಿದರಾದರೂ ನಯವಾಗಿಯೇ ರಾಯರೆಡ್ಡಿ ತಿರಸ್ಕರಿಸಿದ್ದಾರೆಂದು ತಿಳಿದು ಬಂದಿದೆ.

ಪಕ್ಷಕ್ಕೆ ನನ್ನ ಸೇವೆಯನ್ನು ನಾನು ಮಾಡಿಕೊಂಡು ಹೋಗುತ್ತೇನೆ. ನನಗೆ ನಿಗಮ, ಮಂಡಳಿ ಏನೂ ಬೇಡ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆನ್ನಲಾಗಿದೆ. ಕೊನೆಗೆ ಏನು ಜವಾಬ್ದಾರಿ ಕೊಡಬೇಕೋ ಅದನ್ನು ಕೊಡುತ್ತೇವೆ ಎಂದು ಹೇಳಿ ಸುರ್ಜೇವಾಲ ಕಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Karnataka Politics : ಕಲೆಕ್ಷನ್‌ ಕೊಡಿ ನಿಗಮ ಮಂಡಳಿ ಅಧಿಕಾರ ಪಡಿ; ಹರಾಜು ಕೂಗಿದ ಸಿದ್ದರಾಮಯ್ಯ!

ಮುಂದೂ ಸರ್ಕಾರದ ಬಗ್ಗೆ ಮಾತನಾಡುತ್ತೇನೆ: ರಾಯರೆಡ್ಡಿ

ಸುರ್ಜೇವಾಲ ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಸವರಾಜ ರಾಯರೆಡ್ಡಿ ಅವರಿಗೆ, “ಏಕೆ ತಂಬಾ ಬೇಸರದಲ್ಲಿ ಇದ್ದೀರಿ” ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಆಗ ನಾನ್ಯಾಕೆ ಬೇಸರದಲ್ಲಿ ಇದ್ದೇನೆ, ಹ್ಯಾಪಿಯಾಗಿದ್ದೇನೆ ಎಂದು ರಾಯರೆಡ್ಡಿ ಉತ್ತರಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಿಗಮ, ಮಂಡಳಿ ಬೇಡ ಅಂದರೆ ನಿಮ್ಮ ಸೇವೆಯನ್ನು ಯಾವ ರೀತಿ ಬಳಸಿಕೊಳ್ಳಬೇಕೋ ಹಾಗೆ ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆಗ ರಾಯರೆಡ್ಡಿ, ಸರ್ಕಾರ ತಪ್ಪು ಮಾಡಿದಾಗ ಹಿಂದೆ ಮಾತಾಡಿದ್ದೇನೆ. ಮುಂದೆಯೂ ಮಾತನಾಡುತ್ತೇನೆ. ಹಾಗಾಂತ ಅದು ನನ್ನ ಬೇಸರ, ಅಸಮಾಧಾನ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Exit mobile version