ಬೆಂಗಳೂರು: ಅಚಾತುರ್ಯವೋ, ಕಳ್ಳತನವೋ ಒಟ್ಟಿನಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಅವರು ಒಪ್ಪಿಕೊಂಡು, ದಂಡ ಕಟ್ಟುತ್ತೇನೆ ಎಂದು ಹೇಳಿರುವುದು ಅಭಿನಂದನೀಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರು ಮನೆಗೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮವಾಗಿ ಸಂಪರ್ಕ (Connection from electric pole) ಪಡೆದುಕೊಂಡಿದ್ದಾರೆ” ಎಂಬ ಬಗ್ಗೆ ಮಾಧ್ಯಮಗಳ ವರದಿ ಹಾಗೂ ಕಾಂಗ್ರೆಸ್ ಪಕ್ಷದ ‘ಎಕ್ಸ್’ ಖಾತೆಯಲ್ಲಿ ಮಾಡಿರುವ ಆರೋಪ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಮನೆಗೆ ದೀಪಾಲಂಕಾರಕ್ಕಾಗಿ ವಿದ್ಯುತ್ ಕಳವು ಮಾಡಲಾಗಿದೆ ಎಂಬ ವಿಚಾರವನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಅವರ ನೆರೆಹೊರೆಯವರೇ ಅಕ್ರಮ ವಿದ್ಯುತ್ ಸಂಪರ್ಕದ ವಿಡಿಯೊ ಮಾಡಿ ಮಾಧ್ಯಮಗಳಿಗೆ ನೀಡಿದ್ದಾರೆ. ಆನಂತರ ನಮ್ಮ ಪಕ್ಷದ ಸಾಮಾಜಿಕ ಜಾಲತಾಣ ಘಟಕ ಏನು ಕೆಲಸ ಮಾಡಬೇಕೊ ಅದನ್ನು ಮಾಡಿದೆ. ಅವರ ಪಕ್ಷದ ಸೋಷಿಯಲ್ ಮೀಡಿಯಾದಲ್ಲಿ ಬೇಕಾದಷ್ಟು ಬರೆದಂತೆ, ನಮ್ಮ ಪಕ್ಷದವರು ಏನು ಕೆಲಸ ಮಾಡಬೇಕೋ ಅದನ್ನು ಮಾಡಿದ್ದಾರೆ. ಅವರು ಮಾಡೋದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಆಗುತ್ತದೆಯೇ?” ಎಂದು ಮರು ಪ್ರಶ್ನಿಸಿದರು.
ಇದನ್ನೂ ಓದಿ: CM Siddaramaiah : ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಉತ್ತರಿಸಲ್ಲ, ಹೇಳೋದೆಲ್ಲ ಸುಳ್ಳು: ಸಿಎಂ ಸಿದ್ದರಾಮಯ್ಯ
ಸರ್ಕಾರ ಮಧ್ಯೆ ಪ್ರವೇಶ ಮಾಡುವುದಿಲ್ಲ
ವಿದ್ಯುತ್ ಕಳ್ಳತನ ಮಾಡಬಾರದು, ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ನಮ್ಮಂತವರೇ ಹೀಗೆ ಕಳವು ಮಾಡಿದರೆ ತಪ್ಪಲ್ಲವೇ? ಸಂಬಂಧಿಸಿದ ಇಲಾಖೆಯವರು ಏನು ಕ್ರಮ ತೆಗೆದುಕೊಳ್ಳುತ್ತಾರೋ ನೋಡೋಣ. ಈ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ, ನಮಗೆ ಅದರ ಅವಶ್ಯಕತೆಯೂ ಇಲ್ಲ ಮತ್ತು ಸಮಯವೂ ಇಲ್ಲ. ಬೆಸ್ಕಾಂನವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಸತ್ಯವನ್ನು ಒಪ್ಪಿಕೊಂಡಿರುವುದಕ್ಕೆ ಶುಭವಾಗಲಿ, ಸತ್ಯಮೇವ ಜಯತೇ ಎನ್ನುವ ಮಾತಿನಂತೆ ಸತ್ಯವನ್ನು ಎತ್ತಿ ಹಿಡಿದಿರುವುದಕ್ಕೆ ಸಂತೋಷ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ದೇವೇಗೌಡರ ಮೌಲ್ಯ, ಜಾತಿ ಕೆಡಿಸಿದ ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ ಅವರು ದೇವೇಗೌಡರ ಕೊನೆಗಾಲದಲ್ಲಿ ಅವರ ಜಾತಿ ಕೆಡಿಸಿದ್ದಾರೆ. ದೇವೇಗೌಡರು ಜೀವನದ ಉದ್ದಕ್ಕೂ ಕಾಪಾಡಿಕೊಂಡು ಬಂದಿದ್ದ ಮೌಲ್ಯಗಳನ್ನು ಅವರ ಕೊನೆಗಾಲದಲ್ಲಿ ಕುಮಾರಸ್ವಾಮಿ ನಾಶ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಛೇಡಿಸಿದರು.
ಹಿರಿಯರಾದ ದೇವೇಗೌಡರಿಗೆ ವಿಧಿಯೇ ಇಲ್ಲದಂತೆ ಕುಮಾರಸ್ವಾಮಿ ಮಾಡಿದ್ದು ನೋಡಿದರೆ, ನನಗೆ ಮಾತುಗಳೇ ಹೊರಡುತ್ತಿಲ್ಲ, ನನಗೇ ಅಯ್ಯೋ ಅನಿಸುತ್ತದೆ. I feel very sorry. ಎನ್ಡಿಎ ಸರ್ಕಾರದ ಜತೆ ಕೈ ಜೋಡಿಸಿರುವ ಕುಮಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿ ಅಸೂಯೆಗೆ ಮದ್ದಿಲ್ಲ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ, ಈ ವಿಚಾರವಾಗಿ ಚರ್ಚೆಗೆ ಸಿದ್ಧ ಎನ್ನುವ ಕುಮಾರಸ್ವಾಮಿ ಆರೋಪಕ್ಕೆ, “ಪಾಪ, ಕುಮಾರಸ್ವಾಮಿ ಅವರಿಗೆ ಅಸೂಯೆ, ಈ ಅಸೂಯೆಗೆ ಯಾವುದೇ ಮದ್ದಿಲ್ಲ. ನನಗೆ ಈ ಅವಕಾಶ ಸಿಕ್ಕಿಲ್ಲವಲ್ಲ ಎಂದು ಕೈ, ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿವಿದರು.
ಸವಾಲು ಹಾಕಿದ ಡಿಕೆಶಿ
ಕಾಂಗ್ರೆಸ್ ಗ್ಯಾರಂಟಿಯಲ್ಲೊಂದಾದ ಶಕ್ತಿ ಯೋಜನೆಯಿಂದ ಈವರೆಗೂ ರಾಜ್ಯದ ಮಹಿಳೆಯರು 100 ಕೋಟಿ ರೂಪಾಯಿ ಮೌಲ್ಯದ ಬಸ್ ಟ್ರಿಪ್ಗಳಲ್ಲಿ ಉಚಿತವಾಗಿ ಓಡಾಡಿದ್ದಾರೆ. ಪ್ರತಿ ತಿಂಗಳು 1 ಕೋಟಿಗೂ ಹೆಚ್ಚಿನ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ತಲುಪುತ್ತಿದೆ. ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣದ ಜನತೆ ಸೇರಿದಂತೆ ಅವರ ಪಕ್ಷದ ಕಾರ್ಯಕರ್ತರ ಬಳಿ ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿದೆಯೋ ಅಥವಾ ಅವರ ಸ್ವಂತ ದುಡ್ಡು ಹೋಗುತ್ತಿದೆಯೋ ಎನ್ನುವ ಬಗ್ಗೆ ಮಾಹಿತಿ ಕೇಳಲಿ” ಎಂದು ಸವಾಲು ಹಾಕಿದರು.
ಇದನ್ನೂ ಓದಿ: BY Vijayendra : ಕುರುಡುಮಲೆ ಗಣೇಶನ ದರ್ಶನ ಪಡೆದ ಬಿ.ವೈ. ವಿಜಯೇಂದ್ರ; ಸಿಕ್ಕಿತು ಹೂಮಳೆಯ ಸ್ವಾಗತ
ಅಧಿವೇಶನದಲ್ಲಿ ಚರ್ಚೆಗೆ ಬರಲಿ
ನನ್ನ ಆಡಳಿತಾವಧಿಯಲ್ಲಿ ನಾನು ಸಾಲಮನ್ನಾ ಮಾಡಿದ್ದೇನೆ. ಸರ್ಕಾರ ಈಗ ಸಾಲಮನ್ನಾ ಮಾಡಿ ತೋರಿಸಲಿ ಎಂಬ ಕುಮಾರಸ್ವಾಮಿ ಮಾತಿನ ಬಗ್ಗೆ ಕೇಳಿದಾಗ, “ಅವರ ಸವಾಲನ್ನು ಅತ್ಯಂತ ಸಂತೋಷ, ಗೌರವದಿಂದ ಸ್ವೀಕರಿಸುತ್ತೇವೆ. ಡಿ. 4 ನೇ ತಾರೀಖಿನ ನಂತರ ಅವರ ಎಲ್ಲ ಕಡತಗಳು, ಲೆಕ್ಕಾಚಾರಗಳು, ಗ್ಯಾರಂಟಿಗಳು, ಸವಾಲುಗಳನ್ನು ತೆಗೆದುಕೊಂಡು ವಿಧಾನಸಭೆ ಅಧಿವೇಶನಕ್ಕೆ ಬರಲಿ. ಅವರ ಭರವಸೆ, ಆಡಿದ ಮಾತುಗಳು, ಪಂಚರತ್ನಗಳು ಮತ್ತು ಈ ಹಿಂದೆ ಏನೇನೆಲ್ಲ ಹೇಳಿದ್ದರು ಅದನ್ನೆಲ್ಲ ತೆಗೆದುಕೊಂಡು ವಿಧಾನಸಭೆಗೆ ಬರಲಿ. ಅಲ್ಲಿ ಅವರ ನುಡಿಮುತ್ತುಗಳನ್ನು ಕೇಳೋಣ. ಅವರ ಸವಾಲು, ಪಂಚರತ್ನಗಳಿಗೆ ಕರ್ನಾಟಕ ಜನ ಈಗಾಗಲೇ ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಅದೇ ರೀತಿ ನಮ್ಮ ಗ್ಯಾರಂಟಿಗಳಿಗೂ ಉತ್ತರ ಕೊಟ್ಟಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.