Site icon Vistara News

Lok Sabha Election 2024 : 6 ತಿಂಗಳು ಮೊದಲೇ ಲೋಕಸಭೆಗೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಟ?

CM Siddaramaiah and DK Shivakumar infront of new parliament building

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು (Lok Sabha Election 2024) ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ಈ ಬಾರಿ 29 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ನೀಡಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಕಾರ್ಯತಂತ್ರವನ್ನು ಹೆಣೆಯುತ್ತಲಿದ್ದಾರೆ. ಇನ್ನು ಹತ್ತಕ್ಕೂ ಅಧಿಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಎದುರಾಗಿದ್ದು, ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ 6 ತಿಂಗಳು ಮುಂಚಿತವಾಗಿ 28 ಲೋಕಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನು (Congress candidate) ಘೋಷಣೆ ಮಾಡುವಂತೆ ಒತ್ತಾಯಗಳು ಕೇಳಿಬಂದಿವೆ.

ಇದಕ್ಕೆ ಬಹುಮುಖ್ಯ ಕಾರಣವೆಂದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 + 1 ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತಲಾ 1 ಕ್ಷೇತ್ರವನ್ನಷ್ಟೇ ಗೆಲ್ಲಲು ಶಕ್ತವಾಗಿತ್ತು. ಅಲ್ಲದೆ, ಬಿಜೆಪಿ – ಜೆಡಿಎಸ್‌ ಮೈತ್ರಿಯನ್ನು ಮಾಡಿಕೊಂಡಿವೆ. ಹಾಗಾಗಿ ಪ್ರಬಲ ಸ್ಪರ್ಧಿಗಳು ಇದ್ದಾಗಲಷ್ಟೇ ಗೆಲುವು ಸುಲಭ ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ನದ್ದಾಗಿದೆ. ಆದರೆ, ಇನ್ನೂ ಹಲವು ಕಡೆ ಕಾಂಗ್ರೆಸ್‌ ಪ್ರದರ್ಶನ ಅಷ್ಟಾಗಿ ಇಲ್ಲ. ಜತೆಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆಯನ್ನೊಡ್ಡುವ ಅಭ್ಯರ್ಥಿಯ ಕೊರತೆಯನ್ನು ಸಹ ಎದುರಿಸುತ್ತಿದೆ. 28 ಕ್ಷೇತ್ರಗಳ ಪೈಕಿ ಹತ್ತಕ್ಕೂ ಅಧಿಕ ಕ್ಷೇತ್ರಗಳಲ್ಲಿ ಅಭ್ಯರ್ಥಿ ಕೊರತೆಯನ್ನು ಕಾಂಗ್ರೆಸ್‌ ಕಾಣುತ್ತಿದೆ.

ಇದನ್ನೂ ಓದಿ: Ganga Kalyana Scheme : ಉಚಿತ ಬೋರ್‌ವೆಲ್‌ಗೆ ಇನ್ನೂ ಅರ್ಜಿ ಹಾಕಿಲ್ವಾ? ನಾಳೆಯೇ ಕೊನೇ ದಿನ!

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಮೈಸೂರು, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಹಾವೇರಿ, ಹುಬ್ಬಳ್ಳಿ – ಧಾರವಾಡ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಪ್ರಬಲ ಅಭ್ಯರ್ಥಿಗಳ ಕೊರತೆಯನ್ನು ಕಾಂಗ್ರೆಸ್‌ ಎದುರಿಸುತ್ತಿದೆ. ಹೀಗಾಗಿಯೇ ಆರು ತಿಂಗಳ ಮೊದಲೇ ಅಭ್ಯರ್ಥಿ ಘೋಷಣೆಗೆ ಒತ್ತಾಯಗಳು ಕೇಳಿಬಂದಿವೆ.

ಅಭ್ಯರ್ಥಿ ಘೋಷಣೆ ಮಾಡಿದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಅದನ್ನು ಕೂಡಲೇ ಬಗೆಹರಿಸಬಹುದು. ಅಸಮಾಧಾನಿತರನ್ನು ಸಮಾಧಾನಪಡಿಸಲು ಸಮಯವೂ ಸಿಕ್ಕಂತೆ ಆಗುತ್ತದೆ. ಜತೆಗೆ ಪ್ರಚಾರ ಸೇರಿದಂತೆ ಯಾವ ರೀತಿ ಕಾರ್ಯತಂತ್ರವನ್ನು ಹೆಣೆಯಬೇಕು ಎಂಬುದು ಸಹ ನಿರ್ಧಾರವಾಗುತ್ತದೆ. ಹೀಗಾಗಿ ಮೊದಲೇ ಅಭ್ಯರ್ಥಿಗಳನ್ನು ಗುರುತಿಸಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡುವ ಚಿಂತನೆ ಕಾಂಗ್ರೆಸ್‌ ಪಕ್ಷಕ್ಕೆ ಇದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸರ್ವೆ ರಿಪೋರ್ಟ್‌ಗೆ ಮೊರೆ ಹೋಗಿದೆ.

ಆಪರೇಷನ್‌ ಅಭ್ಯರ್ಥಿಗೆ ಮುಂದು? ಇಂದು ನಿರ್ಧಾರ ಸಾಧ್ಯತೆ

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜೇವಾಲಾ ಮಂಗಳವಾರ (ನ. 28) ಬೆಂಗಳೂರಿಗೆ ಆಗಮಿಸಲಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಜತೆ ಸಭೆ ನಡೆಸಲಿದ್ದಾರೆ. ಈ ವೇಳೆ ಸಭೆಯಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯಲಿದೆ. ಪ್ರಬಲ ಅಭ್ಯರ್ಥಿಗಾಗಿ “ಆಪರೇಷನ್‌ ಅಭ್ಯರ್ಥಿ” ದಾಳ ಉರುಳಿಸುವ ಚಿಂತನೆಯಲ್ಲಿ ರಾಜ್ಯ ಕಾಂಗ್ರೆಸ್‌ ಇದೆ ಎಂದು ತಿಳಿದು ಬಂದಿದೆ.

ಮೂರು ಕ್ಷೇತ್ರಗಳ ಅಭ್ಯರ್ಥಿ ಆಪರೇಷನ್‌ಗೆ ಪ್ಲ್ಯಾನ್‌‌

ಪ್ರಮುಖವಾಗಿ ಈಗ ಬೆಂಗಳೂರು ಉತ್ತರ, ತುಮಕೂರು ಹಾಗೂ ಉಡುಪಿ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಬೆಂಗಳೂರು ಉತ್ತರದಲ್ಲಿ ರಾಜುಗೌಡ ಹೆಸರು ಪ್ರಸ್ತಾಪ ಮಾಡಲಾಗಿದೆ. ಆದರೆ, ರಾಜ್ಯಸಭಾ ಸದಸ್ಯರಾಗಿದ್ದ ರಾಜುಗೌಡ ಅವರಿಗೆ ಜನ ಸಂಪರ್ಕ ಅಷ್ಟಾಗಿ ಇಲ್ಲ ಎನ್ನುವ ಮೈನಸ್‌ ಪಾಯಿಂಟ್‌ ಇಂದಾಗಿ ಬೇರೆ ಅಭ್ಯರ್ಥಿ ಯಾರು ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಇದಕ್ಕೆ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಸೂಕ್ತ ಎಂಬ ನಿರ್ಣಯಕ್ಕೆ ಕಾಂಗ್ರೆಸ್‌ ಬಂದಿದೆ. ಹೀಗಾಗಿ ಅವರಿಗೆ ಗಾಳ ಹಾಕಲು ಮುಂದಾಗಲಾಗಿದೆ ಎನ್ನಲಾಗಿದೆ. ಇಲ್ಲಿ ಎಸ್‌.ಟಿ. ಸೋಮಶೇಖರ್‌ಗೆ ಕಾಂಗ್ರೆಸ್‌ ದೊಡ್ಡ ಆಫರ್‌ ಅನ್ನೇ ನೀಡಿದೆ. ಬೆಂಗಳೂರು ಉತ್ತರದಲ್ಲಿ ಸೋಮಶೇಖರ್‌ ಸ್ಪರ್ಧೆ ಮಾಡಿದರೆ, ಅವರ ಪುತ್ರ ನಿಶಾಂತ್‌ ಗೌಡ ಅವರಿಗೆ ಯಶವಂತಪುರ ಕ್ಷೇತ್ರಕ್ಕೆ ಟಿಕೆಟ್‌ ನೀಡುವ ಭರವಸೆಯನ್ನು ಕಾಂಗ್ರೆಸ್‌ ನೀಡಿದೆ. ಈ ಕಾರಣದಿಂದ ಎಸ್‌ಟಿಎಸ್‌ ನಿರ್ಧಾರ ಏನು ಎಂಬುದು ಸದ್ಯದ ಕುತೂಹಲವಾಗಿದೆ.

ತುಮಕೂರಿಗೆ ವಿ. ಸೋಮಣ್ಣ ಫಿಕ್ಸ್?

ತುಮಕೂರು ಲೋಕಸಭಾ ಕ್ಷೇತ್ರವನ್ನು ಗಮನಿಸಿದಾಗ ಇಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಉತ್ತಮ ಆಯ್ಕೆ ಎಂಬ ನಿರ್ಧಾರಕ್ಕೆ ಕಾಂಗ್ರೆಸ್‌ ಬಂದಿದೆ ಎನ್ನಲಾಗಿದೆ. ಕಾರಣ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದವರು ಪ್ರಾಬಲ್ಯವನ್ನು ಹೊಂದಿದ್ದಾರೆ. ಹಾಗಾಗಿ ಈ ಸಮುದಾಯದಲ್ಲಿ ಪ್ರಬಲ ನಾಯಕ ಎಂದು ಗುರುತಿಸಿಕೊಂಡಿರುವ ವಿ. ಸೋಮಣ್ಣ ಅವರನ್ನು ಕರೆತರುವಂತೆ ಒತ್ತಾಯಗಳು ಕೇಳಿಬಂದಿವೆ. ಅಲ್ಲದೆ, ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಈಚೆಗೆ ಸೋಮಣ್ಣ ಬಹಿರಂಗವಾಗಿಯೇ ಕಿಡಿಕಾರಿದ್ದರು. ಹೀಗಾಗಿ ಅವರನ್ನು ಸೆಳೆಯುವ ಪ್ಲ್ಯಾನ್‌ನಲ್ಲಿ ಕೈಪಡೆ ಇದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಜನತಾ ದರ್ಶನದ ಗೋಳು, ಅಧಿಕಾರಿಗಳ ಹೊಣೆಗೇಡಿತನದ ಫಲ

ಉಡುಪಿಗೆ ಮತ್ತೆ ಜಯಪ್ರಕಾಶ್‌ ಹೆಗ್ಡೆ?

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಿ ಸೋತಿದ್ದ, ಹಾಲಿ ಬಿಜೆಪಿಯಲ್ಲಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಉಡುಪಿ ಲೋಕಸಭಾ ಟಿಕೆಟ್‌ ನೀಡುವ ಚಿಂತನೆಯನ್ನು ಕಾಂಗ್ರೆಸ್‌ ಹೊಂದಿದೆ. ಅಲ್ಲದೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಅವಧಿಯನ್ನು ಸಹ ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ. ಅವರ ಮೇಲೆ ಸಾಫ್ಟ್‌ ಕಾರ್ನರ್‌ ಅನ್ನು ತೋರಿಸುತ್ತಿದೆ. ಈಗಾಗಲೇ ಸಿಎಂ ಮತ್ತು ಡಿಸಿಎಂ ಜತೆ ಮಾತುಕತೆ ಜಯಪ್ರಕಾಶ್‌ ಹೆಗ್ಡೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಇನ್ನು ಆಗ ಸೋಲು ಕಂಡರೂ ಈಗ ಕಾಲ ಬದಲಾಗಿದೆ. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು ಜನರ ಮನಸ್ಸನ್ನು ಗೆದ್ದಿದೆ. ಇದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಹೆಚ್ಚು ಸಹಕಾರಿಯಾಗಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ.

Exit mobile version