ಬೆಂಗಳೂರು: ರೈತರ ಆದಾಯವನ್ನು ನೂರಾರು ಪಟ್ಟು ಹೆಚ್ಚಳ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದು ಕಾಂಗ್ರೆಸ್ ಟ್ವೀಟ್ ಮಡಿದೆ. ಹಾಗೆಂದು ಇದು ನಿಜವಾದ ಅಭಿನಂದನೆ ಅಲ್ಲ. ಬದಲಿಗೆ ಇತ್ತೀಚೆಗೆ ಲೋಕಾಯುಕ್ತ ವಿಚಾರದಲ್ಲಿ ವಿವಾದಕ್ಕೆ ಒಳಗಾಗಿರುವ ಬಿಜೆಪಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿಕೆ ಕುರಿತು.
ತಮ್ಮ ಪುತ್ರ ಪ್ರಶಾಂತ್ ಮಾಡಾಳ್ ಮೇಲೆ ಲೋಕಾಯುಕ್ತ ದಾಳಿ ನಂತರ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದರು. ನ್ಯಾಯಾಲಯದಲ್ಲಿ ಜಾಮೀನು ಸಿಕ್ಕ ಕೂಡಲೆ ಹೊರಬಂದು ಮಾತನಾಡಿದ್ದರು. ತಮ್ಮ ಊರಿನಲ್ಲಿ ಯಾವ ರೈತರ ಬಳಿ ಹೋದರೂ ನಾಲ್ಕೈದು ಕೋಟಿ ರೂ. ಸಿಗುತ್ತದೆ, ತಮ್ಮ ಮನೆಯಲ್ಲಿ ಆರು ಕೋಟಿ ರೂ. ಸಿಕ್ಕಿರುವುದೇನು ದೊಡ್ಡ ವಿಚಾರವಲ್ಲ ಎಂದಿದ್ದರು. ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಈಗ ಪ್ರತಿಯೊಬ್ಬ ರೈತರ ಮನೆಯಲ್ಲಿ 4-5 ಕೋಟಿ ಹಣ ಇರುವುದು ಸರ್ವೇ ಸಾಮಾನ್ಯ. ರೈತರ ಆದಾಯ ನೂರಾರು ಪಟ್ಟು ಹೆಚ್ಚಾಗಿದ್ದು ಇದಕ್ಕೆ ಕಾರಣಕರ್ತರಾದ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಅವರಿಗೆ ನಮ್ಮ ಅಭಿನಂದನೆಗಳು’ ಇಂತಿ ನಿಮ್ಮ ಸೇವಕ ಮಾಡಾಳು ವಿರುಪಾಕ್ಷಪ್ಪ ಬಿಜೆಪಿಗರು ಹೀಗೊಂದು ಪೋಸ್ಟರ್ ಹಾಕಿಸಿದರೆ ಅಚ್ಚರಿ ಇಲ್ಲ!” ಎಂದು ಕಾಂಗ್ರೆಸ್ ಟೀಕಿಸಿದೆ.
ಮಾಡಾಳ್ ವಿರೂಪಾಕ್ಷಪ್ಪಗೆ ಅತ್ಯಂತ ವೇಗವಾಗಿ ಜಾಮೀನು ಸಿಕ್ಕಿದ್ದನ್ನು ಆಕ್ಷೇಪಿಸಿ ಬೆಂಗಳೂರು ವಕೀಲರ ಸಂಘವು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿರುವುದನ್ನು ಕಾಂಗ್ರೆಸ್ ಪ್ರಸ್ತಾಪಿಸಿದೆ. “ಮಾಡಾಳ್ ವಿರೂಪಾಕ್ಷಪ್ಪರಿಗೆ ಒಂದೇ ದಿನದಲ್ಲಿ ಅರ್ಜಿಯ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದ್ದನ್ನು ಖಂಡಿಸಿ ವಕೀಲರ ಸಂಘ ಸಿಜೆಐಗೆ ಪತ್ರ ಬರೆದಿದ್ದಾರೆ. ಸರ್ಕಾರ ಮಾತ್ರ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಲಿಲ್ಲ, ಲೋಕಾಯುಕ್ತ ಪರ ವಕೀಲರೇ ಹಾಜರಿರಲಿಲ್ಲ! ಭ್ರಷ್ಟ ಬಿಜೆಪಿಯಿಂದಾಗಿ ಜನತೆ ಕಾನೂನಿನ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ” ಎಂದಿದೆ.
ಜನಸಾಮಾನ್ಯರಿಗೊಂದು ಕಾನೂನು, ಬಿಜೆಪಿಯ ಭ್ರಷ್ಟರಿಗೊಂದು ಕಾನೂನು ಎನ್ನುವಂತೆ ಒಂದೇ ದಿನದಲ್ಲಿ ಮಾಡಾಳ್ ವಿರೂಪಾಕ್ಷಪ್ಪರಿಗೆ ಆದ್ಯತೆ ಮೇರೆಗೆ ಜಾಮೀನು ನೀಡಲಾಗಿದೆ ಎಂಬ ವಕೀಲರ ಸಂಘದ ದೂರಿಗೆ ಬಸವರಾಜ ಬೊಮ್ಮಾಯಿ ಅವರ ಪ್ರತಿಕ್ರಿಯೆ ಏನು? ಈ ಜಾಮೀನು ಪ್ರಕ್ರಿಯೆಯಲ್ಲಿ ಸರ್ಕಾರದ ಪ್ರಭಾವ, ಹಸ್ತಕ್ಷೇಪ ಇದೆಯೇ? “ಭ್ರಷ್ಟರ ರಕ್ಷಣೆ ಬೊಮ್ಮಾಯಿಯವರ ಹೊಣೆ”
ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರದ “ವಾಚ್ ಮ್ಯಾನ್” ಆಗಿದ್ದಾರೆ. ಭ್ರಷ್ಟರನ್ನು ಕಾಯುವುದರಲ್ಲಿ ಅವರ ನಿಷ್ಠೆ ಅನನ್ಯವಾದುದು! ಮಾಡಾಳ್ ಜಾಮೀನು ಅರ್ಜಿ ವಿಚಾರಣೆಯಲ್ಲಿ ಲೋಕಾಯುಕ್ತ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಸೂಚನೆ ಇಲ್ಲ ಎಂದು ಹೇಳಿರುವುದು ನಿಜವೇ? ಇದರಲ್ಲಿ ಸಿಎಂ ಹಸ್ತಕ್ಷೇಪ ಇದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.