ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿರುವ ಕಾಂಗ್ರೆಸ್ ಈ ಕುರಿತು ಕೆಪಿಸಿಸಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಆರೋಪಗಳ ಪಟ್ಟಿ, ವಿಡಿಯೋಗಳನ್ನು ಬಿಡುಗಡೆ ಮಾಡಿದೆ.
ರಾಜ್ಯದ ರೈತರು, ಮಹಿಳೆಯರು ಸೇರಿ ಎಲ್ಲರಿಗೂ ನೀಡಿದ್ದ ಶೇ.90 ವಚನವನ್ನು ಈಡೇರಿಸದೆ ವಚನಭಂಗ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೇ ಸಮಯದಲ್ಲಿ ಸಿದ್ದರಾಮಯ್ಯ ಅವರ ಭಾಷಣಕ್ಕೆ ಕೆಪಿಸಿಸಿ ಪ್ರಭಾರಿ ಸುರ್ಜೇವಾಲ ಬ್ರೇಕ್ ಹಾಕಿದ್ದಾರೆ.
ಸುದ್ದಿಗೋಷ್ಠಿಯ ಪ್ರಾರಂಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಭಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಬಿಜೆಪಿ ಎಂದರೆ ಹಿಂದಿಯಲ್ಲಿ ಬಹುತ್ ಝೂಟಾ ಪಾರ್ಟಿ. ಜನರಿಗೆ ವಂಚನೆ ಮಾಡುವುದೇ ಬಿಜೆಪಿ ಕೆಲಸ. ಈ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ನೀಡಬೇಕು. ತಾವು ನೀಡಿದ ಆಶ್ವಾಸನೆಗಳಲ್ಲಿ ಶೇ. 91ರಲ್ಲಿ ಕೆಲಸವನ್ನೇ ಆರಂಭಿಸಿಲ್ಲ.
ಬಿಜೆಪಿ ಸರ್ಕಾರ ಎಂದರೆ ಭಷ್ಟಾಚಾರ, ಕೋಮುವಾದ, ವಿಫಲ ಸರ್ಕಾರ. ಬೊಮ್ಮಾಯಿ ಅವರು ಕರ್ನಾಟಕ ಇಲ್ಲಿವರೆಗೆ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ. ಸರ್ಕಾರವನ್ನು ನಡೆಸಲು ಬೊಮ್ಮಾಯಿ ಅವರ ದುರ್ಬಲತೆಯೇ ಇದೆಲ್ಲದಕ್ಕೆ ಅವಕಾಶ ನೀಡಿದೆ.
2013ರಿಂದ 2018ರವರೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಲ್ಲ ಆಶ್ವಾಸನೆಗಳನ್ನೂ ಈಡೇರಿಸಿ ಹೆಚ್ಚುವರಿಯಾಗಿಯೂ ಅನೇಕ ಯೋಜನೆಗಳನ್ನು ರೂಪಿಸಿದ್ದೆವು. ಆದರೆ ಬಿಜೆಪಿ 600 ಆಶ್ವಾಸನೆಗಳಲ್ಲಿ ಶೇ.91ರಲ್ಲಿ ಕೆಲಸವನ್ನೇ ಆರಂಭಿಸಿಲ್ಲ.
ಕರ್ನಾಟಕದ ರೈತರಿಗೆ ಸಾಲ ಮನ್ನಾ ಎಲ್ಲಿ? ಕೃಷಿ ಆದಾಯ ದ್ವಿಗುಣ ಎಲ್ಲಿ? ಯುವಕರಿಗೆ ಕೌಶಲ ತರಬೇತಿ ಎಲ್ಲಿ? ಮಹಿಳೆಯರಿಗೆ ಸ್ಮಾರ್ಟ್‌ಫೋನ್ ಎಲ್ಲಿ? ಬಡವರಿಗೆ ವಸತಿ ಯೋಜನೆ ಎಲ್ಲಿ? ಬಿಜೆಪಿ ಕೇವಲ ಸುಳ್ಳು ಹೇಳುತ್ತಿದೆ. ಬಿಜೆಪಿಯ ಪ್ರಣಾಳಿಕೆಯಿಂದ ಪ್ರತಿನಿತ್ಯ ಒಂದು ಪ್ರಶ್ನೆಯನ್ನು ಕೇಳುತ್ತೇವೆ. ಇದು ರಾಜ್ಯ ಸರ್ಕಾರ ಹಾಗೂ ಪ್ರಧಾನಮಂತ್ರಿಗಳಿಗೆ ಪ್ರಶ್ನೆಯಾಗಿರುತ್ತದೆ ಎಂದರು.
ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಸವಣ್ಣ ನಮಗೆ ಹೇಳಿದ್ದು ನುಡಿದಂತೆ ನಡೆಯಬೇಕು ಎಂದು. ನಾವು ನುಡಿದಂತೆ ನಡೆದಿದ್ದೇವೆ, ನೀವು ಅದೇ ರೀತಿ ನಡೆಯುತ್ತಿದ್ದೀರ? ಎಂಬ ಪ್ರಶ್ನೆ ಮಾಡುತ್ತಿದ್ದೇವೆ. ಬಿಜೆಪಿಯಿಂದ ವಚನ ವಂಚನೆಯಾಗಿದೆ ಎಂದು ಆರೋಪಿಸುತ್ತಿದ್ದೇವೆ. ನೀವು ನೀಡಿದ ವಚನಗಳನ್ನು ಉಳಿಸಿಕೊಂಡಿರಾ ಅಥವಾ ಇಲ್ಲವೇ ಎಂದು ಪ್ರಶ್ನೆ ಮಾಡುತ್ತೇವೆ ಎಂದರು.
ಬಿಜೆಪಿಯವರು ಇದಕ್ಕೆ ಉತ್ತರ ಕೊಡುವುದಲ್ಲದೆ, ಆತ್ಮಸಾಕ್ಷಿಗೆ ಅನುಗುಣವಾಗಿ ಉತ್ತರ ನೀಡಬೇಕು. ನೀವು ವಚನಭ್ರಷ್ಟರಾಗಿದ್ದೀರಿ ಎಂದು ಹೇಳುವ ಸಲುವಾಗಿ ನಾವು ಬಂದಿದ್ದೇವೆ ಎಂದರು.
ನಂತರ ಮಾತು ಆರಂಭಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, 2013ರಲ್ಲಿ ನಮ್ಮ ಪಕ್ಷದಿಂದ ಪ್ರಣಾಳಿಕೆ ಹೊರಡಿಸಿದ್ದೆವು. ನಾವು 122 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದು, 165 ಭರವಸೆಗಳಲ್ಲಿ 158ನ್ನು ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ ಬಿಜೆಪಿ ವಚನಭ್ರಷ್ಟವಾಗಿದೆ. ಶೇಕಡಾ ಹತ್ತರಷ್ಟು ಭರವಸೆಯನ್ನೂ ಈಡೇರಿಸಿಲ್ಲ. ಇದು ನಂಬಿಕೆ ದ್ರೋಹ ಎಂದರು.
150 ಲಕ್ಷ ಕೋಟಿ ರೂ. ಖರ್ಚು ಮಾಡಿ ನೀರಾವರಿ ಯೋಜನೆಗಳನ್ನು ಮುಗಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಬಿಜೆಪಿ ಸರ್ಕಾರ 48 ಕೋಟಿ ರೂ. ಮಾತ್ರ ಖರ್ಚು ಮಾಡಿದೆ. ರೈತರ ಸಾಲಮನ್ನಾ ಮಾಡಿ ಎಂದು ಯಡಿಯೂರಪ್ಪ ಬಳಿ ಕೇಳಿದರೆ ನೋಟು ಪ್ರಿಂಟ್ ಮಾಡುವ ಮಷೀನ್ ನಮ್ಮ ಬಳಿ ಇದೆಯೇ ಎಂದು ಪ್ರಶ್ನೆ ಮಾಡಿದ್ದರು. ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ಬಗ್ಗೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಎಸ್‌ಸಿಎಸ್‌ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡಬೇಕಿತ್ತು, ಅದನ್ನೂ ಮಾಡಲಿಲ್ಲ ಎಂದು ಆರೋಪಿಸಿದರು.
ಪಿಎಸ್‌ಐ ನೇಮಕ ಹಗರಣ ಕುರಿತು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಇದರಲ್ಲಿ ಅಕ್ರಮವೇ ಆಗಿಲ್ಲ ಎಂದರು. ಗೃಹ ಸಚಿವ ಅರಗ ಜ್ಞಾನೇಂದ್ರ. ಜ್ಞಾನ+ಇಂದ್ರ= ಜ್ಞಾನೇಂದ್ರ. ಇದು ಗುಣಸಂಧಿ ಎನ್ನುತ್ತ ಆರೋಪಗಳ ಸುರಿಮಳೆಗೈದರು. ಪ್ರಾರಂಭದಲ್ಲಿ ಸುರ್ಜೇವಾಲ ಐದು ನಿಮಿಷ, ನಂತರ ಡಿ.ಕೆ. ಶಿವಕುಮಾರ್ ಹತ್ತು ನಿಮಿಷ ಮಾತನಾಡಿದ್ದರು.
ಆದರೆ ಸಿದ್ದರಾಮಯ್ಯ ಅವರು ಪ್ರತಿಯೊಂದು ಆರೋಪವನ್ನು ರಸವತ್ತಾಗಿ ವಿವರಣೆ ನೀಡುತ್ತಾ, ಗ್ರಾಮರ್ ಪಾಠವನ್ನೂ ಮಾಡುತ್ತಾ 45 ನಿಮಿಷವಾದರೂ ಮಾತು ಮುಗಿಸುವ ಯಾವುದೇ ಲಕ್ಷಣ ಕಾಣಲಿಲ್ಲ. ನಂತರ ಡಿ.ಕೆ. ಶಿವಕುಮಾರ್ ಮೂಲಕ ಚೀಟಿಯನ್ನು ಸುರ್ಜೇವಾಲ ಕಳಿಸಿದರು. ಕೆಲಕಾಲ ಈ ಚೀಟಿಯನ್ನು ಓದಿದ ಸಿದ್ದರಾಮಯ್ಯ, ತಮ್ಮ ಸುದೀರ್ಘ ಭಾಷಣವನ್ನು ಒಂದೆರಡು ನಿಮಿಷದಲ್ಲಿ ಮುಕ್ತಾಯ ಮಾಡಿದರು.
ಇದನ್ನೂ ಓದಿ | Siddaramaiah | ಈ ಚುನಾವಣೆಯಲ್ಲಿ ಸಚಿವ ವಿ. ಸೋಮಣ್ಣನಿಗೆ ಸೋಲು ಖಚಿತ: ಸಿದ್ದರಾಮಯ್ಯ