Site icon Vistara News

Congress | ಅಪಾರ್ಟ್‌ಮೆಂಟ್‌ ಮತಗಳ ಮೇಲೆ ಕಾಂಗ್ರೆಸ್‌ ಕಣ್ಣು: ಹೊಸ ಘಟಕ ಆರಂಭ

Congress started apartment residents cell

ಬೆಂಗಳೂರು: ನಗರೀಕರಣದ ಪರಿಣಾಮ ದಿನೇದಿನೆ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಲ್ಲಿನ ಮತದಾರರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್‌ ಹೊಸ ಘಟಕವನ್ನು ಆರಂಭಿಸಿದೆ. ಅಪಾರ್ಟ್‌ಮೆಂಟ್ ನಿವಾಸಿಗಳ ನೂತನ ಘಟಕವನ್ನು ಆರಂಭಿಸಿದ್ದು, ಪ್ರೊ. ರಾಜೀವ್ ಗೌಡ ಅವರನ್ನು ಈ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾ ಗೋಷ್ಠಿ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಶೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ ಈ ವಿಚಾರ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಭಿಶೇಕ್ ದತ್, ‘ಕಳೆದ ಮೂರ್ನಾಲ್ಕು ವರ್ಷಗಳಿಂದ ಅದರಲ್ಲೂ ಕೋವಿಡ್ ಹಾಗೂ ನಂತರದ ಸಮಯಗಳಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳು ಅತ್ಯಂತ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಅನಾರೋಗ್ಯ ಸಮಸ್ಯೆ ಇದ್ದವರು ಆಸ್ಪತ್ರೆಗೆ ತೆರಳಲಾಗುತ್ತಿರಲಿಲ್ಲ. ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಐಟಿ ವಲಯ, ಸಣ್ಣ ಮತ್ತು ಮಧ್ಯಮ ವ್ಯಾಪಾರ ಕುಟುಂಬಗಳು, ಇತರ ವರ್ಗದವರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರಿನ ಭವಿಷ್ಯ ಅಪಾರ್ಟ್‌ಮೆಂಟ್‌ಗಳ ಮೇಲೆ ನಿಂತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ನಿವಾಸಿಗಳ ಸಮಸ್ಯೆಯನ್ನು ತಿಳಿಯಲು ಹಾಗೂ ಅವುಗಳಿಗೆ ಸ್ಪಂದಿಸಲು ಪಕ್ಷ ಈ ಘಟಕವನ್ನು ಆರಂಭಿಸುತ್ತಿದೆ. ಈ ಘಟಕದ ಅಧ್ಯಕ್ಷರನ್ನಾಗಿ ರಾಜ್ಯಸಭೆ ಮಾಜಿ ಸದಸ್ಯರಾದ ರಾಜೀವ್ ಗೌಡ ಅವರನ್ನು ನೇಮಿಸಲಾಗಿದೆ’ ಎಂದು ತಿಳಿಸಿದರು.

ನಂತರ ಮಾತನಾಡಿದ ರಾಜೀವ್ ಗೌಡ, ‘ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಅದರ ಜತೆಗೆ ಅಪಾರ್ಟ್‌ಮೆಂಟ್ ನಿವಾಸಿಗಳು ಹೆಚ್ಚು ಸಮಸ್ಯೆ ಅನುಭವಿಸುತ್ತಿವೆ. ಈ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ರೂಪಿಸಲು ಕಾಂಗ್ರೆಸ್ ಪಕ್ಷ ಅಪಾರ್ಟ್‌ಮೆಂಟ್ ಘಟಕ ಆರಂಭಿಸಿದೆ. ಈ ಘಟಕ ಶಾಶ್ವತ ಘಟಕವಾಗಿ ಉಳಿಯಲಿದೆ. ಈ ಘಟಕದಲ್ಲಿ ಪ್ರವೀಣ್ ಪೀಟರ್ ಅವರು ಸಂಚಾಲಕರಾಗಿ, ಮಾಜಿ ಮೇಯರ್ ಗಂಗಾಬಿಕೆ ಅವರು ಸಹ ಸಂಚಾಲಕರಾಗಿದ್ದಾರೆ.

ಮೊದಲು ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಅಪಾರ್ಟ್‌ಮೆಂಟ್ ಮಾಲೀಕರ ಸಂಘ, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದವರನ್ನು ಒಂದೆಡೆಗೆ ಸೇರಿಸಿ ಅವರನ್ನು ತಲುಪುವ ಪ್ರಯತ್ನ ಮಾಡುತ್ತೇವೆ. ನಂತರ ಪ್ರತಿ ಕ್ಷೇತ್ರಗಳಲ್ಲಿ ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಅವರ ಸಭೆಗಳು, ಅವರಿಗೆ ಅಗತ್ಯವಿರುವುದೇನು ಎಂದು ಮಾಹಿತಿ ಪಡೆಯುತ್ತೇವೆ. ನಾನು ಬಿಬಿಎಂಪಿ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದು, ರಾಮಲಿಂಗಾ ರೆಡ್ಡಿ ಅವರು ಬೆಟರ್ ಬೆಂಗಳೂರು ಸಮಿತಿ ಅಧ್ಯಕ್ಷರಾಗಿದ್ದಾರೆ. ನಾವು ಮುಂಬರುವ ಚುನಾವಣೆಯಲ್ಲಿ ಬೆಂಗಳೂರಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದ್ದು, ಇದರಲ್ಲೂ ನಾವು ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚಿನ ಗಮನ ಹರಿಸುತ್ತೇವೆ’ ಎಂದು ತಿಳಿಸಿದರು.

‘ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ತಬ್ಬಲಿಯ ಭಾವನೆ ಬರಬಾರದು. ರಾಜಕೀಯ ನಾಯಕರು ತಮ್ಮತ್ತ ಗಮನಹರಿಸುತ್ತಿಲ್ಲ ಎಂದುಕೊಳ್ಳಬಾರದು. ಹಾಲಿ ಸರ್ಕಾರ ಅವರ ಬಗ್ಗೆ ಗಮನಹರಿಸುತ್ತಿಲ್ಲ. ನಾವು ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ನಾವು ಮೂಲ ಸೌಕರ್ಯ, ನೀರು, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಭದ್ರತೆ ವಿಚಾರವಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಬೆಂಗಳೂರು ವಿಶ್ವದಲ್ಲೇ ಅತ್ಯಂತ ವಾಸ ಯೋಗ್ಯ ನಗರವನ್ನಾಗಿ ಮಾಡಬೇಕು ಎಂಬುದು ನಮ್ಮ ಗುರಿ. ಈ ಸಮಿತಿಯಲ್ಲಿ ನಾಗರೀಕ ಸಮಾಜದಿಂದ ಪ್ರತಿನಿಧಿಗಳು ಸಲಹೆಗಾರರಾಗಿ ಕೆಲಸ ಮಾಡಲಿದ್ದಾರೆ. ಎನ್.ಎಸ್ ಮುಕುಂದ, ತಾರಾ ಕೃಷ್ಣಸ್ವಾಮಿ, ಕಿರಣ್ ಹೆಬ್ಬಾರ್, ಗೀತಾ ಶಿವರಾಂ, ಡಿ.ವಿ. ಲಕ್ಷ್ಮಿ, ಕೆ.ವಿ ಗೌತಮ್, ದಿಪಿಕಾ ರೆಡ್ಡಿ, ಕರ್ನಲ್ ದಿನೇಶ್ ಕುಮಾರ್, ಕರ್ನಲ್ ರಾಜ್, ಜಗದೀಶ್ ರೆಡ್ಡಿ, ಮಕ್ಕಳ ಹೋರಾಟಗಾರ್ತಿ ಸರಿತಾ ವಾಸು, ರಾಜೇಂದ್ರ ಬಾಬು ಅವರು ಇದ್ದಾರೆ’ ಎಂದು ತಿಳಿಸಿದರು.

ರಾಮಲಿಂಗಾರೆಡ್ಡಿ ಮಾತನಾಡಿ, ಬೆಂಗಳೂರಿನಲ್ಲಿ ಕಳೆದ 20-30 ವರ್ಷಗಳಿಂದ ಅಪಾರ್ಟ್‌ಮೆಂಟ್‌ ಸಂಸ್ಕೃತಿ ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚಾಗಿದ್ದು, ದೊಡ್ಡ ಅಪಾರ್ಟ್‌ಮೆಂಟ್‌ಗಳ ಜತೆಗೆ ಸಣ್ಣ ಅಪಾರ್ಟ್‌ಮೆಂಟ್‌ ಇವೆ. ಕಳೆದ 10 ವರ್ಷಗಳಿಂದ ಬೆಂಗಳೂರಿನ ಹೊರವಲಯಗಳಲ್ಲಿ ಅಪಾರ್ಟ್ ಮೆಂಟ್ ಗಳು ಹೆಚ್ಚಾಗುತ್ತಿವೆ.

ಹೆಚ್ಚುವರಿ ಸೌಕರ್ಯ, ಭದ್ರತೆ ಕಾರಣಗಳಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಜನಸಂಖ್ಯೆ ಶೇ.10ರಷ್ಟು ಜನ ಈಗ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಪಾರ್ಟ್ ಮೆಂಟ್ ನಿವಾಸಿಗಳ ಸಮಸ್ಯೆ ನಿವಾರಿಸಲು ಕಾಂಗ್ರೆಸ್ ಸರ್ಕಾರ ಬಗೆಹರಿಸುವ ಪ್ರಯತ್ನ ಮಾಡಿದೆ. ಕಳೆದ ನಾಲ್ಕು ವರ್ಷಗಳಿಂದ ಅಪಾರ್ಟ್ ಮೆಂಟ್ ನಿವಾಸಿಗಳ ಸಮಸ್ಯೆ ಸರ್ಕಾರ ಕೇಳುತ್ತಿಲ್ಲ.

ಹೀಗಾಗಿ ನಾವು ಅಪಾರ್ಟ್‌ಮೆಂಟ್‌ ನಿವಾಸಿಗಳ ಶಾಶ್ವತ ಘಟಕವನ್ನು ಆರಂಭಿಸಲು ತೀರ್ಮಾನಿಸಿದೆ. ಅಪಾರ್ಟ್‌ಮೆಂಟ್‌ ನಿವಾಸಿಯಾಗಿರುವ ಪ್ರೊ. ರಾಜೀವ್ ಗೌಡ ಅವರನ್ನು ಈ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ ಸಮಸ್ಯೆಗಳನ್ನು ಅರಿತಿರುವವರೇ ಈಗ ಘಟಕದಲ್ಲಿ ಅವಕಾಶ ನೀಡಲಾಗಿದೆ ಎಂದರು.

ಬಹುತೇಕ ಅಪಾರ್ಟ್‌ಮೆಂಟ್‌ ಕಟ್ಟಡ ನಿರ್ಮಾಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ ಎಂಬ ವಿಚಾರವಾಗಿ ಕೇಳಿದಾಗ, ‘ಕಟ್ಟಡ ನಿರ್ಮಾಣ ವಿಚಾರಕ್ಕೂ ನಮಗೂ ಸಂಬಂಧ ಇರುವುದಿಲ್ಲ. ಆದರೆ ಅಲ್ಲಿನ ನಿವಾಸಿ ಮೂಲಸೌಕರ್ಯಗಳ ಸಮಸ್ಯೆ ಬಗೆಹರಿಸಲು ಈ ಘಟಕ ಸ್ಥಾಪಿಸಲಾಗಿದೆ. ಕೋರ್ಟ್ ಪ್ರಕರಣಗಳಿಗೆ ನಮಗೆ ಸಂಬಂಧವಿಲ್ಲ. ಅದನ್ನು ಕಾನೂನು ನೋಡಿಕೊಳ್ಳಲಿದೆ. ಇದಕ್ಕಾಗಿಯೇ ಬೇರೆ ಸಂಸ್ಥೆಗಳು ನ್ಯಾಯಾಲಯಗಳು ಇವೆ. ಎಲ್ಲ ಅಪಾರ್ಟ್‌ಮೆಂಟ್‌ಗಳು ನಿಯಮ ಉಲ್ಲಂಘನೆ ಮಾಡಿ ಅಪಾರ್ಟ್‌ಮೆಂಟ್‌ ಕಟ್ಟಿಲ್ಲ. ನೂರರಲ್ಲಿ ಶೇ.10ರಷ್ಟು ಮಂದಿ ಅಕ್ರಮವಾಗಿ ಕಟ್ಟಿರಬಹುದು. ಆದರೆ ಉಳಿದ 90ರಷ್ಟು ಜನರಿಗೆ ಮೂಲ ಸೌಕರ್ಯ ಕಲ್ಪಿಸಬೇಕಲ್ಲವೇ? ಒತ್ತುವರೆ ತೆರವಿಗೆ ನಮ್ಮ ಅಡ್ಡಿ ಇಲ್ಲ. ನಾವು ಅದಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಇದ್ನೂ ಓದಿ | Congress Guarantee | ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಉಚಿತ ವಿದ್ಯುತ್‌: ಪ್ರಜಾಧ್ವನಿ ಯಾತ್ರೆಯಲ್ಲಿ ಮೊದಲನೆ ಘೋಷಣೆ

Exit mobile version