ಬೆಂಗಳೂರು: ಒಬ್ಬ ರೈತ, ಕೂಲಿ ಕಾರ್ಮಿನಿಂದ ಹಿಡಿದು ಎಲ್ಲರಿಗೂ ಸಮಾನ ಅವಕಾಶ ಹಾಗೂ ಗುಣಮಟ್ಟದ ಶಿಕ್ಷಣವನ್ನು ಈ ರಾಷ್ಟ್ರೀಯ ಶಿಕ್ಷಣ ನೀತಿ (National Education Policy – NEP) ಕೊಡುತ್ತಿದೆ. ಆದರೆ, ಈ ಸರ್ಕಾರದವರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಏನೆಂಬುದೇ ಸರಿಯಾಗಿ ಗೊತ್ತಿಲ್ಲ. ಈ ಎನ್ಇಪಿಯಲ್ಲಿ ಒಂದೇ ಒಂದು ನ್ಯೂನತೆ ಇಲ್ಲ ಎಂದು ಬೆಂಗಳೂರಿನ ಮಲ್ಲೇಶ್ವರ ಶಾಸಕ, ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayan) ಅವರು ಪವರ್ ಪಾಯಿಂಟ್ ವಿತ್ ಎಚ್ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಈ ರಾಷ್ಟ್ರೀಯ ಶಿಕ್ಷಣ ನೀತಿಯು ಸಿದ್ದರಾಮಯ್ಯ (CM Siddaramaiah) ಅವರ ಕಾಂಗ್ರೆಸ್ ಸರ್ಕಾರ (Congress Government) ಇದ್ದಾಗಲೇ ಚರ್ಚೆಯಲ್ಲಿತ್ತು. ಆಗ ಅಧಿಕಾರಿಗಳೂ ಇದರ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಇದರ ಬಗ್ಗೆ ತಮಗೆ ಗೊತ್ತೇ ಇಲ್ಲ ಎಂದು ಅವರು ಹೇಳುವಂತೆಯೇ ಇಲ್ಲ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಹಸ್ತಕ್ಷೇಪ ಮಾಡಬಾರದು
ರಾಷ್ಟ್ರೀಯ ಶಿಕ್ಷಣ ನೀತಿ ಎಂಬುದು 1968ರಲ್ಲಿ ಬಂದ ಪಾಲಿಸಿಯಾಗಿದೆ. ಕಾಲ ಕಾಲಕ್ಕೆ ಇದು ಬದಲಾಗಿದೆ. ಈಗಾಗಲೇ 2 ಬಾರಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಬದಲಾಗಿದೆ. ಮೂರನೇ ಬಾರಿಗೆ ಕೇಂದ್ರ ಸರ್ಕಾರ 2020ರಲ್ಲಿ ಜಾರಿಗೆ ತಂದಿದೆ. ಕರ್ನಾಟಕದಲ್ಲಿ ನಾವು ಮೊದಲು ಜಾರಿ ಮಾಡಿದ್ದೇವೆ. 2021ರಿಂದ ರಾಜ್ಯದಲ್ಲಿ ಅನುಷ್ಠಾನ ಮಾಡಿಕೊಂಡು ಬಂದಿದ್ದೇವೆ. ಸರ್ಕಾರಗಳು ಯಾವುದೇ ಬದಲಾದರೂ ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ಇದರಲ್ಲಿ ಯಾವುದಾದರೂ ನ್ಯೂನತೆಗಳಿವೆಯಾ? ಅದನ್ನು ಸರಿಪಡಿಸಬೇಕು. ಅದು ಬಿಟ್ಟು ಬದಲಾವಣೆ ಮಾಡುವ ಕೆಲಸವನ್ನು ಯಾರೂ ಸಹ ಮಾಡಬಾರದು ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಜಾಗತಿಕ ಸ್ಪರ್ಧೆಯ ಅವಶ್ಯಕತೆ, ತಂತ್ರಜ್ಞಾನ, ಕೌಶಲ್ಯ ಸೇರಿದಂತೆ ಹಲವು ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ವೈಜ್ಞಾನಿಕವಾಗಿ ಹಾಗೂ ಉತ್ತಮವಾಗಿ ಗುಣಮಟ್ಟದ ಶಿಕ್ಷಣ ಕೊಡಲು ಹಾಗೂ ನವ ಭಾರತ ನಿರ್ಮಾಣ ಆಗಲು ಈ ರಾಷ್ಟ್ರೀಯ ಶಿಕ್ಷಣ ನೀತಿ ಎಲ್ಲರಿಗೂ ಪೂರಕವಾಗಿದೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಇದನ್ನೂ ಓದಿ: Power Point with HPK : ಎಸ್ಟಿ ಸೋಮಶೇಖರ್, ಭೈರತಿ ಬಸವರಾಜ್ಗೆ ಕಾಂಗ್ರೆಸ್ನಿಂದ ಬ್ಲ್ಯಾಕ್ಮೇಲ್!
ಘರ್ವಾಪ್ಸಿಗೆ ಸ್ವಾಗತ
ಪಕ್ಷದಿಂದ ಹೊರ ಹೋದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ಘರ್ವಾಪ್ಸಿಗೆ ಬರಲು ನಿರ್ಧಾರ ಮಾಡಿದರೆ ಖಂಡಿತ ಅವರಿಗೆ ಸ್ವಾಗತ ಮಾಡುತ್ತೇನೆ. ಇದು ಜನರ ಪಕ್ಷವಾಗಿದ್ದು, ಜನರ ನಾಯಕರು ವಾಪಸ್ ಬರಲು ನಮ್ಮ ಸ್ವಾಗತ ಇದೆ. ಪಕ್ಷದ ಸಿದ್ಧಾಂತವನ್ನು ಒಪ್ಪಿ ಯಾರೇ ಬಂದರೂ ನಾನು ಸ್ವಾಗತ ಮಾಡುತ್ತೇನೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.