ಹಾಸನ: ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ನಾಯಕರು ಸೆಳೆಯುತ್ತಿರುವ ವಿಚಾರವಾಗಿ ಕಾಂಗ್ರೆಸ್ ನಾಯಕರ ಮೇಲೆ ಟೀಕಾಪ್ರಹಾರ ನಡೆಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು, ಸರಕಾರದ ಭವಿಷ್ಯದ ಬಗ್ಗೆ ಮಾರ್ಮಿಕ ಮಾತೊಂದನ್ನು ಆಡಿದ್ದಾರೆ. ಲೋಕಸಭೆ ಚುನಾವಣೆ (Parliament Election 2024) ಬಳಿಕ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತದೋ ನೋಡೋಣ ಎಂದಿರುವ ಅವರು, ಕಾಂಗ್ರೆಸ್ ಸರ್ಕಾರ (Congress Government) ಭವಿಷ್ಯವನ್ನು ಕಾಣದ ಶಕ್ತಿ ತೀರ್ಮಾನ ಮಾಡಲಿದೆ ಎಂದಿದ್ದಾರೆ.
ಹಾಸನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ಕರೆದುಕೊಂಡು ಹೋಗಿ ಏನಾಗುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ. I.N.D.I.A ಮೈತ್ರಿಕೂಟದಿಂದಲೇ ಒಬ್ಬೊಬ್ಬರಾಗಿ ಕಿತ್ತುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ನವರು ಕುತಂತ್ರಿಗಳು ಎಂದು ಹೇಳಿ ಅಖಿಲೇಶ್ ಯಾದವ್ ಹೊರಗೆ ಕಾಲಿಟ್ಟಿದ್ದಾರೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ. ಆಮೇಲೆ ನಮ್ಮನ್ನು ಕರೆದೊಯ್ಯವಿರಂತೆ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತೆ 1994ರ ಸ್ಥಿತಿಗೆ ಹೋಗಲಿದೆ ಎಂದ ಎಚ್.ಡಿ.ಕೆ
ಇದೆಲ್ಲ ಬಹಳ ದಿನಗಳ ಕಾಲ ನಡೆಯುವುದಿಲ್ಲ. ಈ ಹಿಂದೆ ಏನೆಲ್ಲ ಆಗಿದೆ ಎಂದು ನೋಡಿದ್ದೇವೆ. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾದಾಗ ಬಿಜೆಪಿಯಿಂದ ಅಂದು ಯಾರನ್ನೆಲ್ಲ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದರು, 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಯಾರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಂಡರು? ಕೊನೆಗೆ 78 ಸ್ಥಾನಗಳಿಗೆ ಬಂದು ನಿಂತರು. 1989ರಲ್ಲಿ 180 ಸ್ಥಾನ ಪಡೆದು ಆಳ್ವಿಕೆ ಮಾಡಿದ್ದ ನೀವು, 1994ರಲ್ಲಿ 38 ಸಂಖ್ಯೆಗಳಿಗೆ ಕುಸಿದಿದ್ದಿರಿ. ಆ ದಿನ ದೂರವಿಲ್ಲ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.
ಇದನ್ನೂ ಓದಿ: Karnataka Politics: ಎಚ್.ಡಿ. ಕುಮಾರಸ್ವಾಮಿ ರಾಜ್ಯ ರಾಜಕೀಯದ ವಿಲನ್ ಎಂದ ಸಿದ್ದರಾಮಯ್ಯ
ರಾಜ್ಯದಲ್ಲಿ ಕಾಣದ ಶಕ್ತಿ ಇದೆ, ದೇವರು ಎಲ್ಲಿವರೆಗೂ ಪಾಪ ಮಾಡುವವರನ್ನು ನೋಡಿಕೊಂಡು ಕೂರುತ್ತಾನೆ?ಯಾವುದೋ ಒಂದು ಶಕ್ತಿ ಕೊನೆಗೆ ತೀರ್ಮಾನ ಮಾಡುತ್ತದೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಏನಾಗುತ್ತದೆ ಎಂದು ನೋಡೊಣ ಎಂದು ಮಾರ್ಮಿಕವಾಗಿ ಹೇಳಿದರು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ.
ಸಚಿವ ಕೆ.ಎಚ್.ಮುನಿಯಪ್ಪಗೆ ತರಾಟೆ
ದಲಿತರು ಶಾಸಕರ ಮನೆ ಮುಂದೆ ಧರಣಿ ಮಾಡಿ ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಇಂತಹ ಹೇಳಿಕೆಗಳನ್ನು ರಾಜಕೀಯ ಕಾರಣಗಳಿಗೆ ಭಾಷಣದಲ್ಲಿ ಹೇಳುವುದನ್ನು ಬಿಟ್ಟು, ಸಮಸ್ಯೆ ಬಗೆಹರಿಸಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಹಾಗೂ ಸಿಎಂ ಗಮನಕ್ಕೆ ತನ್ನಿ ಎಂದು ಕುಟುಕಿದರು.
‘ಒಳಮೀಸಲಾತಿ ವಿಚಾರವಾಗಿ ನಿನ್ನೆ ಮುನಿಯಪ್ಪನವರು ಶಾಸಕರ ಮನೆ ಮುಂದೆ ಧರಣಿ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ದಲಿತ ಸಮುದಾಯದವರು ಮೊದಲು ಕಾಂಗ್ರೆಸ್ ಶಾಸಕರ ಮನೆ ಮುಂದೆ ಧರಣಿ ಮಾಡಬೇಕಾಗಿದೆ. ದಲಿತರ ಹೆಸರು ಹೇಳಿಕೊಂಡು ಬಂದವರು ನೀವು. ಯಾರು ಕೊಡದಿದ್ದನ್ನೂ ಕೊಡುತ್ತೇವೆ, ಯಾರು ಮಾಡದಿದ್ದನ್ನೂ ಮಾಡುತ್ತೇವೆ, ಮೀಸಲಾತಿ ಕೊಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ನೀವು. ಒಬ್ಬ ಮಂತ್ರಿಯಾಗಿ ಮುಖ್ಯಮಂತ್ರಿ ಜತೆ ಈ ವಿಚಾರ ಚರ್ಚೆ ಮಾಡಬೇಕಾಗಿತ್ತು. ಜಾತಿ ಹೆಸರಲ್ಲಿ ಲೋಕಸಭಾ ಚುನಾವಣೆಗೆ ಟ್ರಂಪ್ ಕಾರ್ಡ್ ನಡೆಸುತ್ತಿದ್ದಾರೆ. ದಲಿತ ಸಮುದಾಯದವರು ಮೊದಲು ನೀವು ಅಧಿಕಾರ ಕೊಟ್ಟಿರುವ ನಾಯಕರ ಮನೆಗೆ ನುಗ್ಗಿ ನಿಮ್ಮ ಆಗ್ರಹ ಮಂಡಿಸಿ ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು.