Site icon Vistara News

Congress Guarantee : ಗ್ಯಾರಂಟಿ ಹೊಡೆತ; ಮೂರು ಇಲಾಖೆಗಳ ವಿಲೀನ, 2000 ಉದ್ಯೋಗ ನಷ್ಟ!

State Government All Set To Merge Three Departments

department manager

ರಾಮಸ್ವಾಮಿ ಹುಲಕೋಡು
ಬೆಂಗಳೂರು : ಗ್ಯಾರಂಟಿ ಯೋಜನೆಗಳ (Congress Guarantee) ಜಾರಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಈಗ ವಿವಿಧ ಇಲಾಖೆಗಳನ್ನು ವಿಲೀನಗೊಳಿಸಲು ಚಿಂತನೆ ನಡೆಸಿದೆ. ಇದರ ಮೊದಲ ಹಂತವಾಗಿ ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಹಳೆಯ ಪ್ರಸ್ತಾವನೆಗೆ ಮತ್ತೆ ಚಾಲನೆ ನೀಡಲಾಗಿದೆ. ಈ ಕುರಿತು ಮುಂದಿನ ಸಚಿವ ಸಂಪುಟ ಉಪ ಸಮಿತಿ ಸಭೆಯು ಚರ್ಚೆ ನಡೆಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಸರ್ಕಾರ ವಿಲೀನಕ್ಕೆ ಮುಂದಾಗಿದೆ ಎಂಬುದಕ್ಕೆ ಸಾಕ್ಷಿ ಈ ಪತ್ರ.

ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಕುರಿತು ನವೆಂಬರ್‌ 8 ರಂದು ಹೊರಡಿಸಲಾಗಿರುವ ಅರೆ ಸರ್ಕಾರಿ ಪತ್ರದಲ್ಲಿ ಈ ಕುರಿತು ಕೂಡಲೇ ಅಭಿಪ್ರಾಯ ಸಲ್ಲಿಸುವಂತೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಗೆ ಸೂಚಿಸಲಾಗಿದೆ. ಈಗಾಗಲೇ ರೇಷ್ಮೆ ಇಲಾಖೆಯು ತನ್ನ ಅಭಿಪ್ರಾಯವನ್ನು ಸಲ್ಲಿಸಿದ್ದು, ತೋಟಗಾರಿಕೆ ಇಲಾಖೆಯೂ ತನ್ನ ಅಭಿಪ್ರಾಯವನ್ನು ಸದ್ಯವೇ ದಾಖಲಿಸಿದೆ. ಎರಡೂ ಇಲಾಖೆಗಳ ಅಭಿಪ್ರಾಯದ ಕುರಿತು ಸಚಿವ ಸಂಪುಟ ಉಪ ಸಮಿತಿಯು ಚರ್ಚಿಸಿ ತೀರ್ಮಾನಿಸಲಿದೆ. ನಂತರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಇತ್ತೀಚಿನವರೆಗೂ ಈ ಮೂರು ಇಲಾಖೆಗಳನ್ನು ವಿಲೀನಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳುತ್ತಲೇ ಬಂದಿದ್ದರು. ಆದರೆ ಈಗ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ʻʻದುಂದುವೆಚ್ಚಕ್ಕೆ ಕಡಿವಾಣ, ಅನಗತ್ಯ ಹುದ್ದೆಗಳ ವಿಸರ್ಜನೆ ಮತ್ತು ನಿಷ್ಕ್ರೀಯ ಇಲಾಖೆಗಳ ವಿಲೀನಗೊಳಿಸಿ ಬೊಕ್ಕಸಕ್ಕಾಗುವ ನಷ್ಟ ನಿಯಂತ್ರಿಸಲು ಸರ್ಕಾರ ಮುಂದಾಗಿದೆʼʼ ಎಂದು ಹಿರಿಯ ಅಧಿಕಾರಿಯೊಬ್ಬರು ʻವಿಸ್ತಾರ ನ್ಯೂಸ್‌ʼಗೆ ತಿಳಿಸಿದ್ದಾರೆ.

ಈ ಹಿಂದೆಯೂ ತೀರ್ಮಾನವಾಗಿತ್ತು!

ಕಳೆದ ಸರ್ಕಾರ ಕೂಡ ಈ ಕುರಿತು ಚರ್ಚೆ ನಡೆಸಿತ್ತು. ಆಗಿನ ಕಂದಾಯ ಸಚಿವರಾಗಿದ್ದ ಆರ್.‌ ಅಶೋಕ್‌ ಅವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಕೂಡ ಈ ಮೂರು ಇಲಾಖೆಯನ್ನು ವಿಲೀನಗೊಳಿಸಲು ಶಿಫಾರಸು ಮಾಡಿತ್ತು. ಈ ಸಂಬಂಧ 2022ರ ಅಕ್ಟೋಬರ್‌ನಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಆರ್‌. ಅಶೋಕ್‌, ‘‘ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡಿದ್ದು, ಮೂರನ್ನೂ ಒಂದೇ ಸಚಿವಾಲಯದಡಿ ತರುವ ಚಿಂತನೆ ಇದೆ. ಮೂರು ಇಲಾಖೆಗಳಿಂದ ಒಟ್ಟು 2000ಕ್ಕೂ ಹೆಚ್ಚು ಹುದ್ದೆ ರದ್ದುಪಡಿಸಲು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ’’ ಎಂದು ಹೇಳಿದ್ದರು.

‘‘ರೇಷ್ಮೆ ಬೆಳೆಯದ ಜಿಲ್ಲೆಗಳಲ್ಲೂ ರೇಷ್ಮೆ ಇಲಾಖೆಯ ಅಧಿಕಾರಿಗಳಿದ್ದಾರೆ. ಹಾಗಾಗಿ ರೇಷ್ಮೆ ಬೆಳೆಗಾರರಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಹುದ್ದೆಗಳನ್ನು ರದ್ದುಪಡಿಸುವ ಇಲ್ಲವೇ ವಿಲೀನಗೊಳಿಸುವುದು ಸೂಕ್ತ’’ ಎಂದು ಅವರು ವಿವರಿಸಿದ್ದರು. ಸಚಿವ ಸಂಪುಟ ಉಪ ಸಮಿತಿಯು ಈ ಕುರಿತು ತೀರ್ಮಾನಿಸಿದ್ದರೂ, ಈ ಪ್ರಸ್ತಾಪ ಹಿಂದಿನ ಸರ್ಕಾರದ ಸಚಿವ ಸಂಪುಟದಲ್ಲಿ ಚರ್ಚೆಗೆ ಬಂದಿರಲಿಲ್ಲ.

ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಕುರಿತು 2014 ರಿಂದಲೂ ಚರ್ಚೆ ನಡೆಯುತ್ತಲೇ ಬಂದಿದೆ. 2014ರಲ್ಲಿಯೇ ಈ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಕುರಿತು ನಿರ್ಧರಿಸಲು ರಾಜ್ಯ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ವಿಲೀನಕ್ಕೆ ಹಸಿರು ನಿಶಾನೆ ತೋರಿತ್ತು. ಆದರೆ ಈ ವಿಲೀನವನ್ನು ರೇಷ್ಮೆ ಬೆಳೆಗಾರರು ವಿರೋಧಿಸುತ್ತಲೇ ಬಂದಿದ್ದಾರೆ.

ದೇಶದಲ್ಲೇ ರೇಷ್ಮೆ ಬೆಳೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ರೇಷ್ಮೆಗೆ ಸಂಬಂಧಿಸಿದ ಹಲವು ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿವೆ. ಇಂತಹ ಲಾಭದಾಯಕ ಬೆಳೆಗೆ ಪ್ರತ್ಯೇಕ ಇಲಾಖೆ ಇದ್ದರೆ ರೈತರಿಗೆ ಸಾಕಷ್ಟು ನೆರವಾಗುತ್ತದೆ. ಕೃಷಿ ಇಲಾಖೆ ಬಹಳ ವಿಸ್ತಾರವಾಗಿದ್ದು, ಈಗಾಗಲೇ ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ. ಅದರೊಂದಿಗೆ ವಿಲೀನ ಮಾಡುವ ಪ್ರಕ್ರಿಯೆ ಸರಿಯಲ್ಲ ಎಂದು ರೇಷ್ಮೆ ಬೆಳೆಗಾರರು ಹೇಳುತ್ತಿದ್ದಾರೆ.

ತೋಟಗಾರಿಕಾ ಇಲಖೆಯನ್ನೂ ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸುವ ಕುರಿತು ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೂಡ ಚಿಂತನೆ ನಡೆಸಿತ್ತು. ಆಗಿನ ತೋಟಗಾರಿಕಾ ಸಚಿವರಾಗಿದ್ದ ಎಂ.ಸಿ.ಮನಗೂಳಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಪ್ರಕ್ರಿಯೆ ಅರ್ಧಕ್ಕೇ ನಿಂತಿತ್ತು.

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳಿವೆ?
ರೇಷ್ಮೆ ಇಲಾಖೆಯಲ್ಲಿ ಒಟ್ಟು 4,560 ಹುದ್ದೆಗಳಿದ್ದು, ಇದರಲ್ಲಿ ಅಧಿಕಾರಿ ಹುದ್ದೆಗಳ ಸಂಖ್ಯೆ 581. ಇದೇ ರೀತಿಯಾಗಿ ತೋಟಗಾರಿಕಾ ಇಲಾಖೆಯಲ್ಲಿ ಒಟ್ಟು 6,196 ಹುದ್ದೆಗಳಿದ್ದು, ಇದರಲ್ಲಿ ಅಧಿಕಾರಿ ಹುದ್ದೆಗಳ ಸಂಖ್ಯೆ 1,422. ಈಗಾಗಲೇ ಕೃಷಿ ಇಲಾಖೆಯಲ್ಲಿ ಒಟ್ಟು 10,325 ಹುದ್ದೆಗಳಿದ್ದು, ಇಲ್ಲಿ 5,216 ಅಧಿಕಾರಿ ಹುದ್ದೆಗಳಿವೆ. ಒಟ್ಟಾರೆ ಈ ಮೂರು ಇಲಾಖೆಗಳಲ್ಲಿ 21,081 ಹುದ್ದೆಗಳಿವೆ. ಕೃಷಿ ಇಲಾಖೆಯಲ್ಲಿಯೇ 6,556 ಹುದ್ದೆಗಳು ಖಾಲಿ ಇದ್ದು, ಇದರಿಂದಾಗಿ ಇಲಾಖೆಯ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಕೃಷಿ ಬೆಳೆಗಳ ವ್ಯಾಪ್ತಿಗೆ ಹೋಲಿಸಿದರೆ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕಡಿಮೆ ಇದ್ದಾರೆ. ಆದರೆ, ರೇಷ್ಮೆ ಮತ್ತು ತೋಟಗಾರಿಕೆ ವ್ಯಾಪ್ತಿಗೆ ಹೋಲಿಸಿದರೆ ರೇಷ್ಮೆ ಇಲಾಖೆಯ ಸಿಬ್ಬಂದಿ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿ ಹೆಚ್ಚಿದೆ. ಆದ್ದರಿಂದ ವಿಲೀನ ಮಾಡಿದರೆ ಮೂರೂ ಇಲಾಖೆಗಳಿಗೆ ಉಪಯೋಗವಾಗುತ್ತದೆ ಎಂದು ಲೆಕ್ಕಚಾರ ಹಾಕಲಾಗುತ್ತಿದೆ. ಒಟ್ಟಾರೆಯಾಗಿ ಸರ್ಕಾರದ ಈ ನಿರ್ಧಾರದಿಂದಾಗಿ ಮುಂದೆ ಏನಿಲ್ಲವೆಂದರೂ 2000 ಹುದ್ದೆಗಳು ರದ್ದಾಗಲಿವೆ.

ಗ್ಯಾರಂಟಿಯಿಂದಾಗಿ ಇಲಾಖೆ ವಿಲೀನ ಅನಿವಾರ್ಯ?

ಸರ್ಕಾರದ ಒಟ್ಟು ಆಯವ್ಯಯದ (ಬಜೆಟ್‌ನ) ಶೇ.91.3 ರಷ್ಟು ಹಣ ನೌಕರರ ಸಂಬಳ ಮತ್ತು ಪಿಂಚಣಿ ಹಾಗೂ ಇಲಖೆಗಳ ನಿರ್ವಹಣೆಗೆ ವೆಚ್ಚವಾಗುತ್ತಿದೆ. ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ, ಹೆಚ್ಚುತ್ತಿರುವ ಯೋಜನೇತರ ವೆಚ್ಚವನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ.

ಹೀಗಾಗಿಯೇ ಆರ್ಥಿಕ ತಜ್ಞರು ಸರ್ಕಾರಿ ನೌಕರರ 6ನೇ ವೇತನ ಆಯೋಗದ ಮತ್ತು ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ.ಭಾಸ್ಕರ್‌ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಮುಂದಾಗಬೇಕೆಂದು ಸಲಹೆ ನೀಡುತ್ತಿದ್ದಾರೆ. ಇದನ್ನು ಈಗ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಲಾಖೆಗಳ ವಿಲೀನ ಮತ್ತು ಅನಗತ್ಯ ಹುದ್ದೆಗಳ ಕಡಿತದಿಂದ ಸರ್ಕಾರದ ಬದ್ಧತೆ ವೆಚ್ಚಕ್ಕೂ ಕಡಿವಾಣ ಬೀಳಲಿದೆ ಎಂದು ಲೆಕ್ಕಚಾರ ಹಾಕಿರುವ ಸರ್ಕಾರ ಮುಂದೆ ಇನ್ನೂ ಹಲವು ಇಲಾಖೆಗಳನ್ನು ವಿಲೀನಗೊಳಿಸಲು ಚಿಂತನೆ ನಡೆಸಿದೆ.

ಮುಖ್ಯವಾಗಿ, ಜಲ ಸಂಪನ್ಮೂಲಖೆಯೊಂದಿಗೆ ಸಣ್ಣ ನೀರಾವರಿ ಇಲಾಖೆಯನ್ನು, ಬೃಹತ್ ಕೈಗಾರಿಕೆ ಇಲಾಖೆಯೊಂದಿಗೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳು, ಸಕ್ಕರೆ ಇಲಾಖೆಗಳನ್ನು, ನಗರಾಭಿವೃದ್ಧಿ ಇಲಾಖೆಯೊಂದಿಗೆ ಪೌರಾಡಳಿತ ಇಲಾಖೆಯನ್ನು, ಕಾರ್ಮಿಕ ಇಲಾಖೆಯನ್ನು ಐಟಿ ಬಿಟಿ ಇಲಾಖೆಯನ್ನು, ಆರೋಗ್ಯ ಇಲಾಖೆಯೊಂದಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು, ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಹಿಂದುಳಿದ ವರ್ಗಗಳ ಇಲಾಖೆಯನ್ನು, ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು ಮತ್ತು ವಾಣಿಜ್ಯ ತೆರಿಗೆ ಇಲಾಖೆಯನ್ನು ತೂಕ ಮತ್ತು ಅಳತೆ ಇಲಾಖೆಯೊಂದಿಗೆ ವಿಲೀನಗೊಳಿಸಲು ಮುಂದಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಹಿಂದಿನ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ಆರ್ಥಿಕ ಇಲಾಖೆಯೊಂದಿಗೆ, ಗ್ಯಾಸೆಟಿಯರ್ ಇಲಾಖೆಯನ್ನು ರಾಜ್ಯ ಪತ್ರಾಗಾರ ಇಲಾಖೆಯೊಂದಿಗೆ, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ನಿದೇಶನಾಲಯವನ್ನು ಖಜಾನೆ ಇಲಾಖೆಯೊಂದಿಗೆ ವಿಲೀನಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Congress Guarantee: ಗ್ಯಾರಂಟಿಗಳಿಗಾಗಿ ಎಸ್ಸಿ, ಎಸ್ಟಿ ಅನುದಾನಕ್ಕೆ ಕತ್ತರಿ; ದಲಿತರಿಗೆ ಸರ್ಕಾರದಿಂದ ಮೋಸ ಎಂದ ಬಿಜೆಪಿ

ಈ ಸುದ್ದಿಯ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್‌ ಮೂಲಕ ತಿಳಿಸಿ.

ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ (click here) ಮಾಡಿ.

Exit mobile version