Site icon Vistara News

ST Somashekhar: ಕಾಂಗ್ರೆಸ್‌ ಸಿಎಲ್‌ಪಿಗೆ ಹೋಗಿಲ್ಲ; ಔತಣಕೂಟಕ್ಕಷ್ಟೇ ಹೋಗಿದ್ದೆ ಎಂದ ಎಸ್‌.ಟಿ. ಸೋಮಶೇಖರ್

Congress has not gone to CLP said he had only gone to a party says ST Somashekhar

ಬೆಳಗಾವಿ: ನಾನು ಬುಧವಾರ ರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ (Congress Legislature Party meeting) ಹೋಗಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರು ಕರೆದಿದ್ದ ಔತಣಕೂಟಕ್ಕೆ ಮಾತ್ರವೇ ಹೋಗಿದ್ದೇನೆ. ನಾನು ನಿನ್ನೆ (ಬುಧವಾರ) ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ (BJP State President BY Vijayendra) ಅವರ ಜತೆಗಿದ್ದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಎಸ್‌.ಟಿ. ಸೋಮಶೇಖರ್‌ (MLA ST Somashekhar) ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಸ್ಪಷ್ಟೀಕರಣ ನೀಡಿರುವ ಎಸ್.ಟಿ. ಸೋಮಶೇಖರ್‌, ಕಾಂಗ್ರೆಸ್ ಸಿಎಲ್‌ಪಿ ಸಭೆಗೆ ನಾನು ಹೋಗಿಲ್ಲ. ಬುಧವಾರ ರಾತ್ರಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಹ ಔತಣಕೂಟವನ್ನು ಇಟ್ಟುಕೊಂಡಿದ್ದರು. ಅವರ ಆಯೋಜಿಸಿದ್ದ ಔತಣಕೂಟದಲ್ಲಿ ನಾನು ಭಾಗಿಯಾಗಿ ಊಟ ಮಾಡಿದ್ದೇನೆ ಎಂದು ಹೇಳಿದರು.

ಅಲ್ಲದೆ, ಇತ್ತ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಹ ನನಗೆ ಊಟಕ್ಕೆ ಆಹ್ವಾನ ಕೊಟ್ಟಿದ್ದರು. ಹೀಗಾಗಿ 11 ಗಂಟೆ ವೇಳೆಗೆ ನಾನು ಡಿ.ಕೆ. ಶಿವಕುಮಾರ್ ಕರೆದಿದ್ದ ಔತಣಕೂಟದಲ್ಲಿ ಭಾಗಿಯಾದೆ. ಅಲ್ಲಿಗೆ ಹೋಗಿ ಅವರಿಗೆ ವಿಶ್‌ ಮಾಡಿ ಬಂದೆ ಎಂದು ಎಸ್.ಟಿ. ಸೋಮಶೇಖರ್‌ ಪ್ರತಿಕ್ರಿಯೆ ನೀಡಿದರು.

ಮೈಸೂರಿನಲ್ಲಿ ಸ್ಪರ್ಧೆ ಮಾಡಲು ಒತ್ತಡ ಇದೆ

ಮುಂದಿನ ಲೋಕಸಭಾ ಚುನಾವಣೆಗೆ (Lok Sabha Election 2024) ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಸ್.ಟಿ. ಸೋಮಶೇಖರ್‌, ಯಾವ ಲೋಕಸಭೆ ಚುನಾವಣೆಗೂ ಸ್ಪರ್ಧೆ ಮಾಡಲ್ಲ. ಮೈಸೂರಿನಲ್ಲಿ ಸ್ಪರ್ಧೆ ಮಾಡಲು ಒತ್ತಡ ಇದೆ. 2028ಕ್ಕೆ ಮತ್ತೆ ಶಾಸಕನಾಗಿ ಆಯ್ಕೆ ಆಗಬೇಕು ಅಂತಿದ್ದೇನೆ ಎಂದು ಹೇಳಿದರು.

ಬಿಜೆಪಿಗೆ ಮುಜುಗರವಾಗುವ ಕೆಲಸವನ್ನು ನಾನು ಮಾಡಲ್ಲ

ಬಿಜೆಪಿಗೆ ಮುಜುಗರವಾಗುವ ಕೆಲಸವನ್ನು ನಾನು ಮಾಡಲ್ಲ. ಆದರೆ ಒಂದು ವರ್ಗದವರು ನನ್ನನ್ನು ಕಳಿಸೋಕೆ ಪ್ರಯತ್ನ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ನಾನು ಎರಡು ದಿನದ ಹಿಂದಷ್ಟೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಹೋಗಿದ್ದೆ ಎಂದು ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಕಾಂಗ್ರೆಸ್‌ ಸಿಎಲ್‌ಪಿ ಸಭೆಯಲ್ಲಿ ಕುಳಿತಿದ್ದ ಎಸ್‌ಟಿಎಸ್‌

ಬೆಳಗಾವಿಯಲ್ಲಿ ಬುಧವಾರ ರಾತ್ರಿ ನಡೆದಿದ್ದ ಸಿಎಲ್‌ಪಿ ಸಭೆಯಲ್ಲಿ ಎಸ್‌.ಟಿ. ಸೋಮಶೇಖರ್‌ ಕೆಲ ಕಾಲ ಕುಳಿತಿದ್ದರು ಎನ್ನಲಾಗಿದೆ. ಕೆಲವು ಹೊತ್ತು ಅವರು ಸಭೆಯಲ್ಲಿ ಕುಳಿತು ಬಳಿಕ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಶಿವರಾಂ ಹೆಬ್ಬಾರ್‌ ಹಾಗೂ ಎಂಎಲ್‌ಸಿ ಎಚ್.‌ ವಿಶ್ವನಾಥ್‌ ಸಹ ಭಾಗಿಯಾಗಿದ್ದರು. ಈ ಮೂರು ಜನ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ಸಂಗೀತ ಸಂಜೆ ಆಯೋಜನೆ; ಡ್ಯಾನ್ಸ್‌ ಮಾಡಿದ ಎಸ್‌ಟಿಎಸ್

ಕಾಂಗ್ರೆಸ್‌ ಶಾಸಕರಿಗಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಂಗೀತ ಸಂಜೆ ಏರ್ಪಡಿಸಿದ್ದರು. ಖ್ಯಾತ ಸಂಗೀತ ನಿರ್ದೇಶಕ ಸಾಧು ಕೋಕಿಲ ನೇತೃತ್ವದಲ್ಲಿ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್‌ ಅವರು ಶಾಸಕರನ್ನು ಹಾಡುವಂತೆ, ಡ್ಯಾನ್ಸ್ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಈ ವೇಳೆ ನೂತನ ಶಾಸಕ ವಿಶ್ವಾಸ್ ವೈದ್ಯ ಅವರು ನೀನೇ ರಾಜಕುಮಾರ ಹಾಡು ಹಾಡಿದ್ದಾರೆ. ಈ ಹಾಡಿಗೆ ಎಸ್.ಟಿ ಸೋಮಶೇಖರ್ ನೃತ್ಯ ಮಾಡಿದ್ದಾರೆ. ವೇದಿಕೆ ಮೇಲೆ ತೆರಳಿ ಅವರು ಡ್ಯಾನ್ಸ್‌ ಮಾಡಿದ್ದಾರೆ. ಆದರೆ, ಶಿವರಾಂ ಹೆಬ್ಬಾರ್‌ ಅವರು ವೇದಿಕೆ ಕೆಳಭಾಗದಲ್ಲಿ ಕುಳಿತಿದ್ದರು.

ಹೇಳಿಯೇ ಹೋಗಿದ್ದಾರೆ; ಕರೆದು ಮಾತನಾಡುವೆನೆಂದ ಅಶೋಕ್‌

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್, ಊಟಕ್ಕೆ ಕರೆದಿದ್ದರು ಅದಕ್ಕಾಗಿ ಹೋಗಿದ್ದೆವು ಎಂದು ಎಸ್.ಟಿ.ಸೋಮಶೇಖರ್ ನನ್ನ ಬಳಿ ಹೇಳಿದ್ದಾರೆ. ಆ ದೃಷ್ಟಿಯಿಂದ ಯಾವುದೇ ರೀತಿಯ ಶಿಸ್ತು ಉಲ್ಲಂಘನೆ ಮಾಡಿಲ್ಲ. ನಾನು ಕೂಡ ಅವರ ಬಳಿ ಮಾತನಾಡಿದ್ದೇನೆ. ಅವರ ನಿನ್ನೆ ಬಿಜೆಪಿ ಧರಣಿಯಲ್ಲೂ ಭಾಗವಹಿಸಿದ್ದಾರೆ. ಆದರೂ ನಾನು ಅವರನ್ನು ಕರೆದು ಮಾತನಾಡುತ್ತೇನೆ. ನಮ್ಮ ಸಭೆಗೆಲ್ಲ ಬಂದಿದ್ದರು, ಕೊಠಡಿಗೂ ಬಂದು ಮಾತನಾಡಿದ್ದಾರೆ. ಏನೇ ಇದ್ದರೂ ಅವರ ಜತೆ ನಾನು ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಮೋದಿ ಮತ್ತಷ್ಟು ಸ್ಟ್ರಾಂಗ್! ಹೊಸ ಸಮೀಕ್ಷೆ ಪ್ರಕಾರ ಎನ್‌ಡಿಎಗೆ ಸಿಗುವ ಸೀಟೆಷ್ಟು?

ಊಟಕ್ಕೆ ಬನ್ನಿ ಎಂದು ಕರೆದಿದ್ದರು, ಮೀಟಿಂಗ್‌ಗೆ ಅಲ್ಲ: ವಿಶ್ವನಾಥ್

ಕಾಂಗ್ರೆಸ್ ಶಾಸಕಾಂಗ ‌ಪಕ್ಷದ ಸಭೆಗೆ ಹಾಜರಾಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಲ್‌ಸಿ ಎಚ್.‌ ವಿಶ್ವನಾಥ್‌, ಹೌದು, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ನನ್ನ ಗೆಳೆಯ. ಅವರು ಆಹ್ವಾನ ನೀಡಿದ್ದಕ್ಕೆ ಹೋಗಿದ್ದೆವು. ಊಟಕ್ಕೆ ಬನ್ನಿ ಎಂದು ಹೇಳಿದ್ದರು. ಆದರೆ, ಪಾರ್ಟಿ ಮೀಟಿಂಗ್‌ಗೆ ಬನ್ನಿ ಅಂತ ಕರೆದಿಲ್ಲ. ನಾನು ಹೋದ ಮೇಲೆ ಗೊತ್ತಾಗಿಲ್ಲ. ಮೀಟಿಂಗ್‌ಗೆ ಅಥವಾ ಈಟಿಂಗ್‌ಗೆ ಅಂತ ಗೊತ್ತಾಗಿಲ್ಲ. ನಾನು ಹೋದಾಗ ಆರಂಭ ಆಗಿತ್ತು. ಅರ್ಧ ಗಂಟೆ ಕುಳಿತುಕೊಂಡೆ. ಅದು ನಮ್ಮ ಹಳೇ ಮನೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವರ ಜತೆ ಕುಳಿತಿದ್ದೆ. ನಮ್ಮ ಮನೆ ಅಲ್ಲಿ. ಇಲ್ಲಿ ಸುಮ್ಮನೆ ಎಂದು ಅವರಿಗೆ ಹೇಳಿದ್ದೇನೆ ಎಂಬುದಾಗಿ ತಿಳಿಸಿದರು. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಶಿವರಾಂ ಹೆಬ್ಬಾರ್ ನಿರಾಕರಿಸಿದ್ದಾರೆ.

Exit mobile version