Site icon Vistara News

Lok Sabha Election 2024: ಕಾಂಗ್ರೆಸ್‌ ಹೈಕಮಾಂಡ್‌ ಟಾಸ್ಕ್‌; ಲೋಕಸಭೆಯಲ್ಲಿ ಸ್ಪರ್ಧಿಸಿ, ಇಲ್ಲವೇ ಗೆಲ್ಲಿಸಿ; ಸೋತರೆ ತಲೆದಂಡ!

CM Siddaramaiah DK Shivakumar and Mallikarjun Kharge

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಈ ಬಾರಿ ಬಿಜೆಪಿಯನ್ನು ಮಣಿಸಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್‌ (Congress Karnataka) ಹಲವು ತಂತ್ರಗಾರಿಕೆಯಲ್ಲಿ ನಿರತವಾಗಿದೆ. ಅಲ್ಲದೆ, ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರವನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದ್ದು, ಈ ನಿಟ್ಟಿನಲ್ಲಿ ತನ್ನ ಹೆಜ್ಜೆಯನ್ನು ಇಟ್ಟಿದೆ. ಈ ನಡುವೆ ಆಂತರಿಕ ಕಚ್ಚಾಟ ಹೈಕಮಾಂಡ್‌ಗೆ (Congress High Command) ತಲೆನೋವು ತಂದಿತ್ತು. ಆದರೆ, ನವ ದೆಹಲಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಖಡಕ್‌ ಸಂದೇಶವನ್ನು ಕೊಟ್ಟಿದ್ದು, ಹೆಚ್ಚುವರಿ ಡಿಸಿಎಂ ಹುದ್ದೆ (Deputy CM post) ಸೃಷ್ಟಿಗೆ ನೋ ಎಂದು ಹೇಳಲಾಗಿದೆ. ಇನ್ನು ಅಗತ್ಯ ಬಿದ್ದರೆ ಯಾವುದೇ ಸಚಿವರಿಗೂ ಕಣಕ್ಕಿಳಿಯುವಂತೆ ಸೂಚನೆ ನೀಡಲಾಗುವುದು. ಒಂದು ವೇಳೆ ಅದಾಗದಿದ್ದರೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ನಿಮ್ಮ ಹೊಣೆ. ಇದರಲ್ಲಿ ಸೋಲು ಕಂಡರೆ ತಲೆದಂಡ ಗ್ಯಾರಂಟಿ ಎಂಬ ಸಂದೇಶವನ್ನು ನೀಡಲಾಗಿದೆ.

ಈ ಬೆಳವಣಿಗೆ ಈಗ ಕಾಂಗ್ರೆಸ್‌ ಸಚಿವರನ್ನು ದಿಕ್ಕೆಡಿಸಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಟಕ್ಕರ್‌ ಕೊಡಲು ಹೋಗಿ ಈಗ ತಾವೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಮೂಲಕ ಡಿಕೆಶಿಗೆ ಹೈಕಮಾಂಡ್ ಶ್ರೀರಕ್ಷೆ ನೀಡಿದೆ. ಈಗ ಲೋಕಸಭೆ ಚುನಾವಣೆ ತಂತ್ರಗಾರಿಕೆಯಲ್ಲಿ ಡಿಕೆಶಿ ಗೆದ್ದಂತಾಗಿದೆ.

ಯಾರು ಸಹ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಬಹಿರಂಗವಾಗಿ ಮಾತನಾಡಬೇಡಿ ಎಂದಿರುವ ಹೈಕಮಾಂಡ್, ನಾವು ಯಾರಿಗೆ ಬೇಕಾದರೂ ಸ್ಪರ್ಧೆ ಮಾಡುವಂತೆ ಹೇಳಬಹುದು. ನಾವು ಹೇಳಿದ ಸಚಿವರು ಸ್ಪರ್ಧೆ ಮಾಡಬೇಕು ಎಂದು ಹೇಳಿದೆ. ಸಚಿವರಿಗೆ ಜವಾಬ್ದಾರಿ ಹಂಚಬೇಕು ಎಂಬುದು ಡಿ.ಕೆ. ಶಿವಕುಮಾರ್ ಉದ್ದೇಶವಾಗಿತ್ತು. ಈಗ ಅವರ ಅಣತಿಯಂತೆ ಹೈಕಮಾಂಡ್‌ ಸೂಚನೆ ನೀಡಿದ್ದು, ಸ್ಪರ್ಧೆ ಮಾಡಬೇಕು, ಇಲ್ಲವಾದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ತಾಕೀತು ಮಾಡಿದೆ. ಈ ವಿಚಾರದಲ್ಲಿ ಹೈಕಮಾಂಡ್ ಮೂಲಕವೇ ಜವಾಬ್ದಾರಿಯನ್ನು ಡಿಕೆಶಿ ಕೊಡಿಸಿದ್ದಾರೆ.

ಸೋತರೆ ತಲೆ ದಂಡ ನಿಶ್ಚಿತ

ಈಗ ಗಂಭೀರವಾಗಿ ಚುನಾವಣೆಯನ್ನು ಎದುರಿಸುವ ಜವಾಬ್ದಾರಿ ಎಲ್ಲ ಸಚಿವರ ಮೇಲಿದೆ. ಒಂದೋ ತಾವೇ ಸ್ಪರ್ಧೆ ಮಾಡಬೇಕು. ಇಲ್ಲದೆ ಹೋದರೆ ಅಭ್ಯರ್ಥಿಗಳ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊರಬೇಕು. ಇದರ ಜತೆಗೆ ಚುನಾವಣಾ ಖರ್ಚು, ವೆಚ್ಚವನ್ನು ಸಹ ಹೊರಬೇಕಾಗಿದೆ. ಇಷ್ಟೆಲ್ಲ ಮಾಡಿಯೂ ಸೋತರೆ ತಲೆ ದಂಡ ನಿಶ್ಚಿತ ಎಂದು ಹೈಕಮಾಂಡ್‌ ಹೇಳಿರುವುದು ಸಚಿವರನ್ನು ಇಕ್ಕಟ್ಟಿಗೆ ದೂಡಿದೆ.

ತಲೆದಂಡದ ಸೂಚನೆ ಕೊಟ್ಟಿದ್ದಾರೆ: ಪರಮೇಶ್ವರ್

ಸಚಿವರಿಗೆ ‌ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಟಾಸ್ಕ್‌ ಕೊಟ್ಟಿದ್ದಾರೆ. ಲೋಕಸಭೆಯಲ್ಲಿ ಉತ್ತಮ ರಿಸಲ್ಟ್ ಕೊಡದೆ ಇರುವ ಸಚಿವರ ತಲೆ ದಂಡ ಆಗುತ್ತದೆ ಅಂತ ಹೈಕಮಾಂಡ್ ಹೇಳಿದೆ. ಸಚಿವರ ಸ್ಪರ್ಧೆ ಬಗ್ಗೆ ದೆಹಲಿ ಸಭೆಯಲ್ಲಿ ಮಾತನಾಡಿಲ್ಲ. ನಿರೀಕ್ಷೆ ಫಲಿತಾಂಶ ಬಾರದೇ ಹೋದರೆ ಸಚಿವರ ಮೇಲೆ ಕ್ರಮ ಎಂದು ಹೇಳಿದ್ದಾರೆ. ಸಚಿವರು ಚುನಾವಣೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಗೆಲ್ಲುವ ಕಡೆ ಸೋತರೆ ಅದನ್ನು ಸಹಿಸುವುದಿಲ್ಲ. ಅದನ್ನು ನಾವು ಸೀರಿಯಸ್ ಆಗಿ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಹೈಕಮಾಂಡ್‌ನಿಂದ ಕಟ್ಟುನಿಟ್ಟಿನ ಸೂಚನೆ

ಲೋಕಸಭೆ ಚುನಾವಣೆ ದೃಷ್ಟಿಯಿಂದ ಹೈಕಮಾಂಡ್ ನಡೆಸಿದ ಸಭೆಯಲ್ಲಿ ಹಲವು ಸೂಚನೆಗಳನ್ನು ನೀಡಲಾಗಿದೆ. ಪಂಚಾಯಿತಿ ಹಂತದ ಸಮಿತಿಯನ್ನು ರಚಿಸುವುದು, ಕ್ಯಾಂಪೇನ್ ಮಾಡುವುದು, ಅಭ್ಯರ್ಥಿ ಆಯ್ಕೆ ಆದ ಮೇಲೆ ಏನು ಮಾಡಬೇಕು ಅಂತ ಸೂಚನೆ ನೀಡಲಾಗಿದೆ. ವ್ಯವಸ್ಥಿತವಾಗಿ ಚುನಾವಣೆ ನಡೆಸಲು ನಮಗೆ ಸೂಚನೆ ನೀಡಿದ್ದಾರೆ. ಎಲ್ಲ ಜಿಲ್ಲೆಗಳಿಗೂ ನಮ್ಮನ್ನು ಉಸ್ತುವಾರಿಗಳನ್ನಾಗಿ ಮಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸಿಂಗ್ ಸುರ್ಜೇವಾಲ,‌ ನ್ಯಾಷನಲ್ ಕೋ ಆರ್ಡಿನೇಷನ್ ಕಮಿಟಿ ಅಧ್ಯಕ್ಷ ಶಶಿಕಾಂತ್ ಸೆಂಥಿಲ್ ಅವರು ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ ಎಂದು ಪರಮೇಶ್ವರ್‌ ಹೇಳಿದ್ದಾರೆ.

ಕಳೆದ ರಿಸಲ್ಟ್‌ ಮರುಕಳಿಸಬಾರದು

ಒಬ್ಬೊಬ್ಬರೂ ಏನು ಮಾಡಬೇಕು? ಹೈಕಮಾಂಡ್ ಏನು ನಿರೀಕ್ಷೆ ಮಾಡುತ್ತದೆ? ಕಳೆದ ಬಾರಿ ಒಂದು ಸೀಟು ಮಾತ್ರ ಗೆದ್ದಿದ್ದೆವು. ಈ ಬಾರಿ ಅಂತಹ ರಿಸಲ್ಟ್ ಪುನರಾವರ್ತನೆ ಆಗಬಾರದು ಎಂದು ಸೂಚನೆ ನೀಡಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ಈ ಬಾರಿ ಹೆಚ್ಚು ಸೀಟು ಗೆಲ್ಲಿಸಿ ಕೊಡಬೇಕು ಅಂತ ಸೂಚನೆ ಕೊಟ್ಟಿದ್ದಾರೆ. 28 ಕ್ಷೇತ್ರಗಳನ್ನೂ ಗೆಲ್ಲಲು ಸಾಧ್ಯತೆ ಇದೆ. ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಅಂತ ಹೇಳಿರುವುದಾಗಿ ಪರಮೇಶ್ವರ್‌ ತಿಳಿಸಿದರು.

ಇದನ್ನೂ ಓದಿ: Mukesh Ambani: 100 ಶತಕೋಟಿ ಡಾಲರ್‌ ಕ್ಲಬ್‌ ಸೇರಿದ ಅಂಬಾನಿ; ಮತ್ತೆ ಏಷ್ಯಾದ ಶ್ರೀಮಂತ ಗರಿ!

ಶೀಘ್ರ ಅಭ್ಯರ್ಥಿಗಳ ಫೈನಲ್‌ಗೆ ಮನವಿ

ಇನ್ನು ದೆಹಲಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಚುನಾವಣೆ ಪ್ರಚಾರ, ಸಿದ್ಧತೆ ಬಗ್ಗೆ ಮಾತ್ರ ಚರ್ಚೆ ಆಗಿದೆ. ಯಾವುದೇ ಹೆಸರು ಕೂಡಾ ಪ್ರಸ್ತಾಪ ಆಗಿಲ್ಲ. ಆದಷ್ಟು ಬೇಗ ಅಭ್ಯರ್ಥಿಯನ್ನು ಫೈನಲ್‌ ಮಾಡುವಂತೆ ಕೇಳಿದ್ದೇವೆ. ರಣದೀಪ್ ಸುರ್ಜೇವಾಲ ಆದಷ್ಟು ಬೇಗ ಸಭೆ ನಡೆಸಿ ಪಟ್ಟಿ ಫೈನಲ್ ‌ಮಾಡಲಿದ್ದು, ಹೈಕಮಾಂಡ್ ಆ ಪಟ್ಟಿಯನ್ನು ಬಿಡುಗಡೆಗೊಳಿಸಲಿದೆ ಎಂದು ಡಾ. ಜಿ. ಪರಮೇಶ್ವರ್‌ ತಿಳಿಸಿದರು.

Exit mobile version