ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ನಾಯಕರಾದರೂ ಅವರ ನಡೆ ಕಾಂಗ್ರೆಸ್ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗುತ್ತಿದೆ. ಒಟ್ಟಾರೆಯಾಗಿ ಹಿಂದು ಮತದಾರರಲ್ಲಿ ಹಾಗೂ ನಿರ್ದಿಷ್ಟವಾಗಿ ವೀರಶೈವ ಲಿಂಗಾಯತ ಮತದಾರರಲ್ಲಿ ಕಾಂಗ್ರೆಸ್ ಪಕ್ಷದ ಕುರಿತು ಮೂಡುತ್ತಿರುವ ನಕಾರಾತ್ಮಕತೆಗೆ ಅನ್ಯ ಮಾರ್ಗದಿಂದ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಆರ್‌ಎಸ್‌ಎಸ್ ಹಾಗೂ ಪ್ರಧಾನಿ ಮೋದಿಯವರನ್ನು ತೆಗಳುತ್ತಲೇ ಇರುವ ಸಿದ್ದರಾಮಯ್ಯ ಅವರ ಮಾತಿನಿಂದಲೇ ಸಿದ್ದರಾಮಯ್ಯ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಕುರಿತು ಅವರು ಹೇಳಿದ ಮಾತು ವಿವಾದಕ್ಕೀಡಾಗಿದೆ.
ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎನ್ನುವ ಮಾತು ಒಂದೆಡೆಯಾದರೆ, ಶಿವಮೊಗ್ಗದಲ್ಲಿ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫ್ಲೆಕ್ಸ್ ಏಕೆ ಹಾಕಬೇಕಿತ್ತು ಎನ್ನುವುದು ವಿವಾದದ ಬೆಂಕಿಗೆ ತುಪ್ಪ ಸುರಿದಿದೆ. ಇದರ ಮುಂದವರಿದ ಭಾಗವಾಗಿ, ಕೊಡಗಿನಲ್ಲಿ ಪ್ರವಾಸದಲ್ಲಿದ್ದಾಗ ಕಪ್ಪು ಬಾವುಟ ಹಿಡಿದು ಪ್ರತಿಭಟನೆ, ಮೊಟ್ಟೆಯಿಂದ ಹೊಡೆದ ಘಟನೆ ನಡೆದಿತ್ತು.
ಈ ಪ್ರತಿಭಟನೆಯ ಬಿಸಿ ಚಿಕ್ಕಮಗಳೂರಿನಲ್ಲೂ ತಟ್ಟಿತ್ತು. ಇದೆಲ್ಲದರ ನಂತರ ಸಿಎಂ ಸೇರಿ ಅನೇಕರು ಘಟನೆಯನ್ನು ಖಂಡಿಸಿದ್ದಷ್ಟೆ ಅಲ್ಲದೆ ಪ್ರರಕಣವನ್ನೂ ದಾಖಲಿಸಿದ್ದಾರೆ. ಆದರೆ ಇದೆಲ್ಲದರ ನಡುವೆ ಕೊಡಗಿನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಮಾಂಸಾಹಾರ ಸೇವಿಸಿದ್ದಾರೆ ಎಂಬ ಇನ್ನೊಂದು ವಿವಾದವೂ ತಲೆಯೆತ್ತಿತು. ಭೋಜನ ವ್ಯವಸ್ಥೆ ಮಾಡಿದ್ದ ಕಾಂಗ್ರೆಸ್‌ನ ವೀಣಾ ಅಚ್ಚಯ್ಯ ಅವರು ಪ್ರತಿಕ್ರಿಯಿಸಿ, ಅಂದು ತಾವು ಮಾಂಸಾಹಾರ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಅಷ್ಟರ ವೇಳೆಗಾಗಲೆ ಸಿದ್ದರಾಮಯ್ಯ ಈ ವಿವಾದವನ್ನು ಮತ್ತೊಂದು ದಿಕ್ಕಿಗೆ ತಿರುಗಿಸಿದ್ದಾರೆ. ತಾವು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂದು ಹೇಳಲು ನೀನ್ಯಾರು? ಎಂದಿದ್ದಾರೆ. ಈ ಮಾತಿನಿಂದ ವಿವಾದ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಮೂಕಪ್ರೇಕ್ಷಕ ಕಾಂಗ್ರೆಸ್
ಇದೇ ವೇಳೆ ವೀರಶೈವ ಲಿಂಗಾಯತ ವಿಚಾರದಲ್ಲೂ ಸಿದ್ದರಾಮಯ್ಯ ಅವರ ನಡೆಯನ್ನು ಕಾಂಗ್ರೆಸ್ ಮೂಕಪ್ರೇಕ್ಷಕನಾಗಿ ನೋಡುತ್ತಿದೆ. ತಮ್ಮ ಜೀವಮಾನದಲ್ಲಿ ಎಂದಿಗೂ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ತೆರಳದ ಸಿದ್ದರಾಮಯ್ಯ ಎರಡು ದಿನದ ಹಿಂದೆ ತೆರಳಿ ಸ್ವಾಮೀಜಿಯವರ ಆಶೀರ್ವಾದ ಪಡೆದರು. ನಂತರ ಸ್ವಾಮೀಜಿಯವರು ಮಾತನಾಡಿ, ಕಳೆದ ಚುನಾವಣೆಗೂ ಮುನ್ನ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯಲು ಮುಂದಾಗಿದ್ದರ ಕುರಿತು ಪಶ್ಚಾತ್ತಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂಬುದು ಬಿಜೆಪಿ ಕೈಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ತಾವು ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ಷೇಪಿಸಿದ್ದಾರೆ. ಸಿದ್ದರಾಮಯ್ಯ ಅವರಿಂದ ಪಶ್ಚಾತ್ತಾಪವನ್ನು ನಿರೀಕ್ಷಿಸಿರಲಿಲ್ಲ. ಆದರೆ ಧರ್ಮಗುರುಗಳ ಬಳಿ ತೆರಳಿಯೂ ಅವರ ಮಾತಿಗೆ ವಿತಂಡ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಪಶ್ಚಾತ್ತಾಪ ಅಲ್ಲ, ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದಿದ್ದಾರೆ. ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಬುದ್ಧಿ ಬಂದಿದೆ. ಅವರು ಪಶ್ಚಾತ್ತಾಪ ವ್ಯಕ್ತಪಡಿಸಿರುವುದು ಒಳ್ಳೆಯದು ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಪಶ್ಚಾತ್ತಾಪದ ಕುರಿತು ಕಾಂಗ್ರೆಸ್ ನಾಯಕರ ನಡುವೆಯೇ ಭಿನ್ನಾಭಿಪ್ರಾಯಗಳು ಆರಂಭವಾಗಿವೆ. ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿ, ಈ ವಿಚಾರಕ್ಕೆ ಕೈಹಾಕುವುದು ಬೇಡ ಎಂದು ತಿಳಿಸಿದ್ದೆ. ಆದರೆ ಕೆಲವರ ಪ್ರತ್ಯೇಕ ಧರ್ಮದ ವಿಚಾರದಿಂದ ಗೊಂದಲ ಆಗಿತ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೆಲ್ಲ ವಿಚಾರಗಳು ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಗೊಂದಲಗಳನ್ನು ಉಂಟುಮಾಡಿದೆ.
ಎಸ್.ಆರ್. ಪಾಟೀಲ್‌ಗೆ ಬುಲಾವ್
ವೀರಶೈವ ಲಿಂಗಾಯತ ವಿಚಾರದಲ್ಲಿ ಕಳೆದ ಬಾರಿಯಂತೆ ತಪ್ಪು ಸಂಭವಿಸಬಾರದು ಎಂದು ತೀರ್ಮಾನಿಸಿರುವ ಕಾಂಗ್ರೆಸ್ ಹೈಕಮಾಂಡ್, ಸಮುದಾಯದ ಪ್ರತಿ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಈಗಾಗಲೆ ಎಂ.ಬಿ. ಪಾಟೀಲ್ ಅವರಿಗೆ ಚುನಾವಣಾ ಪ್ರಚಾರ ಸಮಿತಿ ನೇತೃತ್ವ ವಹಿಸಲಾಗಿದೆ. ಇದೀಗ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದಷ್ಟೆ ಅಲ್ಲದೆ, ಇತ್ತೀಚೆಗಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಪಡೆಯಲೂ ವಿಫಲರಾಗಿದ್ದರು. ತಮಗೆ ಟಿಕೆಟ್ ಕೈತಪ್ಪಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಅಸಮಾಧಾನಗೊಂಡಿದ್ದ ಪಾಟೀಲ್, ಕಳೆದ ಆರೇಳು ತಿಂಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರವಿದ್ದಾರೆ. ತಮಗೆ ವಯಸ್ಸಾಗಿದೆ ಎಂದು ಯಾರೂ ನಿರ್ಲಕ್ಷಿಸುವ ಅಗತ್ಯವಿಲ್ಲ ಎಂದು ನಿರೂಪಿಸಲು, ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಒತ್ತಾಯಿಸಿ ಮೇ ತಿಂಗಳಲ್ಲಿ ಟ್ರ್ಯಾಕ್ಟರ್ ಚಳವಳಿ ನಡೆಸಿದರು. ಏಳೆಂಟು ಜಿಲ್ಲೆಗಳಲ್ಲಿ ಪ್ರಭಾವ ಹೊಂದಿರುವ ಪಾಟೀಲರನ್ನು ನವದೆಹಲಿಗೆ ಕರೆಸಿಕೊಳ್ಳಲಾಗಿದೆ.
ಸಿದ್ದರಾಮಯ್ಯ ಅವರ ಪ್ರಭಾವದಿಂದ ಅಲ್ಪಸಂಖ್ಯಾತ, ಹಿಂದುಗಳಿದ ಹಾಗೂ ದಲಿತ ಮತಗಳು ಲಭಿಸುತ್ತವೆ. ಅವುಗಳಿಂದ ಪಕ್ಷಕ್ಕೆ ಲಾಭವೇ ಆಗುತ್ತದೆ. ಅದರ ಜತೆಗೇ ಪ್ರಭಾವಿ ಲಿಂಗಾಯತ ಸಮುದಾಯವನ್ನು ಕಳೆದುಕೊಂಡರೆ ಚುನಾವಣೆಯಲ್ಲಿ ಹಿನ್ನಡೆ ಆಗುತ್ತದೆ. ಈ ಕಾರಣಕ್ಕೆ ಹೈಕಮಾಂಡ್‌ಗೆ ಸಿದ್ದರಾಮಯ್ಯ ಅವರು ನುಂಗಲಾರದ ತುಪ್ಪವಾಗಿದ್ದಾರೆ. ಸಿದ್ದರಾಮಯ್ಯ ಅವರಿಂದ ಬೇಸರಿಸಿಕೊಂಡ ನಾಯಕರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೂಲಕ ಮನವೊಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ.
ಡ್ಯಾಮೇಜ್ ಕಂಟ್ರೋಲ್‌ಗೆ ಶಿವಕುಮಾರ್
ಒಂದೆಡೆ ಸಿದ್ದರಾಮಯ್ಯ ಅವರಿಂದ ಆಗುವ ಅನುಕೂಲವನ್ನು ಬಯಸಿರುವ ಕಾಂಗ್ರೆಸ್, ಮತ್ತೊಂದೆಡೆ ಡ್ಯಾಮೇಜ್ ಕಂಟ್ರೋಲ್‌ಗೆ ಶಿವಕುಮಾರ್ ಅವರಿಗೆ ಹೊಣೆ ನೀಡಿದೆ. ಒಟ್ಟಾರೆ ಹಿಂದು ಮತದಾರರಲ್ಲಿ ಕಾಂಗ್ರೆಸ್ ಕುರಿತು ನಕಾರಾತ್ಮಕ ಭಾವನೆ ಮೂಡಬಾರದು ಎಂಬ ಕಾರಣಕ್ಕೆ, ಡಿ.ಕೆ. ಶಿವಕುಮಾರ್ ಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿಯವರು ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಚಿತ್ರದುರ್ಗದ ಮುರುಘಾ ಮಠಕ್ಕೆ ಕರೆದೊಯ್ದಿದ್ದರು. ಈ ಮೂಲಕ, ಕಾಂಗ್ರೆಸ್ ಪಕ್ಷ ವೀರಶೈವ ಲಿಂಗಾಯತ ವಿರೋಧಿಯಲ್ಲ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ಸ್ವತಃ ಶಿವಕುಮಾರ್ ಅವರು ಶೃಂಗೇರಿ ಕಿರಿಯ ಶ್ರೀಗಳು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದಾಗ ತೆರಳಿ ಆಶೀರ್ವಾದ ಪಡೆದಿದ್ದರು, ತಮ್ಮ ಮನೆಗೂ ಶ್ರೀಗಳನ್ನು ಆಹ್ವಾನಿಸಿ ಸತ್ಕರಿಸಿದ್ದರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಕಾರಣಕ್ಕೆ ಮುನಿಸಿಕೊಂಡಿರುವ ಹಿರಿಯ ನಾಯಕರ ಮನವೊಲಿಸುವಲ್ಲೂ ಶಿವಕುಮಾರ್ ನಿರತರಾಗಿದ್ದಾರೆ. ಈಗಾಗಲೆ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರೊಂದಿಗೂ ಇದೇ ಕಾರಣಕ್ಕೆ ಶಿವಕುಮಾರ್ ಮಾತುಕತೆ ನಡೆಸಿ ಬಂದಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ | ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು?: ಸಮರ್ಥಿಸಿಕೊಂಡ ಸಿದ್ದರಾಮಯ್ಯ