Site icon Vistara News

Congress Karnataka: ಕಾಂಗ್ರೆಸ್‌ನಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಮತ್ತೊಂದು ಸರ್ವೆ!

Congress Karnataka Another survey to select candidate for Lok Sabha elections

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು (Lok Sabha Election 2024) ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ (Congress Karnataka), ಈಗಾಗಲೇ ಅ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು? ಕೆಲವು ಕಡೆ ಸಚಿವರನ್ನೇ ಕಣಕ್ಕಿಳಿಸಿದರೆ ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಅಲ್ಲದೆ, ಈಗಿರುವ ಆಕಾಂಕ್ಷಿಗಳನ್ನು ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬ ಬಗ್ಗೆ ಈಗಾಗಲೇ ಒಂದು ಸುತ್ತಿನ ಸರ್ವೆ ಸಹ ನಡೆದಿದೆ. ಆದರೆ, ಈಗ ಮತ್ತೊಂದು ಸುತ್ತಿನ ಸರ್ವೆಗೆ ಕರ್ನಾಟಕ ಕಾಂಗ್ರೆಸ್‌ ಮುಂದಾಗಿದೆ. ಈ ಬಗ್ಗೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಪ್ರಸ್ತಾಪ ಮಾಡಿದ್ದು, “ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಿ, ದೆಹಲಿಯಲ್ಲಿ ಸಭೆ ಮಾಡಲಿದ್ದೇವೆ” ಎಂದು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಚುನಾವಣೆ ಸಮಿತಿ ಸಭೆ ನಂತರ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಇಂದಿನ ಸಭೆಯಲ್ಲಿ ಪಕ್ಷದ ವೀಕ್ಷಕರು, ಜಿಲ್ಲಾ ಮಂತ್ರಿಗಳು, ಕೆಲವು ಕಾರ್ಯಕರ್ತರು ಸಲ್ಲಿಸಿದ್ದ ವರದಿ ಹಾಗೂ ನಮ್ಮ ಸಮೀಕ್ಷೆ ವರದಿಗಳನ್ನು ಪರಾಮರ್ಶೆ ಮಾಡಿದ್ದೇವೆ. ಮತ್ತೊಂದು ಸುತ್ತಿನ ಸಮೀಕ್ಷೆ ಮೂಲಕ ಅಭಿಪ್ರಾಯ ಸಂಗ್ರಹಕ್ಕೆ ಸೂಚಿಸಿದ್ದೇವೆ. ಪಕ್ಷದ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ, ಮುಂದಿನ ಸುತ್ತಿನ ಸಭೆಯನ್ನು ದೆಹಲಿಯಲ್ಲಿ ನಡೆಸಲಾಗುವುದು. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನಲ್ಲೇ ಸಭೆ ಮಾಡಲಾಗಿದೆ ಎಂದು ತಿಳಿಸಿದರು.

ಶೇ.50 ಪಟ್ಟಿ ಅಂತಿಮಕ್ಕೆ ಯತ್ನ

ಈ ತಿಂಗಳೊಳಗಾಗಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಆದಷ್ಟು ಬೇಗ ಅಂತಿಮಗೊಳಿಸಬೇಕು. ಏಕೆಂದರೆ ಶೇ. 50ರಷ್ಟು ಅಭ್ಯರ್ಥಿಗಳಿಗಾದರೂ ಕೆಲಸ ಆರಂಭಿಸಲು ನಾವು ಸೂಚನೆ ನೀಡಬೇಕಿದೆ” ಎಂದು ಹೇಳಿದರು.

ಎಷ್ಟು ಕ್ಷೇತ್ರಗಳಲ್ಲಿ ಓರ್ವ ಆಕಾಂಕ್ಷಿಗಳಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ನಾವು ಇನ್ನು ಆ ವಿಚಾರವಾಗಿ ಚರ್ಚೆ ಮಾಡಿಲ್ಲ. ನಾವು ಕೇವಲ ನಮಗೆ ಬಂದಿರುವ ವರದಿಗಳು, ಅಭಿಪ್ರಾಯದ ಬಗ್ಗೆ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.

ನಮ್ಮ ಪಟ್ಟಿ ಗೌಪ್ಯವಾಗಿರಲಿದೆ

ಎಐಸಿಸಿಗೆ ಕಳಿಸಲಾಗಿರುವ ಪಟ್ಟಿ ಬಗ್ಗೆ ಗೊಂದಲವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಇದೆಲ್ಲವೂ ಸುಳ್ಳು, ನಾವು ಎಐಸಿಸಿಗೆ ಯಾವುದೇ ಪಟ್ಟಿ ನೀಡಿಲ್ಲ. ಮುಖ್ಯಮಂತ್ರಿಗಳಿಗೆ ವಿವಿಧ ವರದಿಗಳು, ಅಭಿಪ್ರಾಯಗಳ ಕುರಿತ ಅಧಿಕೃತ ಪಟ್ಟಿಯನ್ನು ಇವತ್ತಷ್ಟೇ ನೀಡಿದ್ದೇನೆ. ನಾವು ನಮ್ಮ ಪಟ್ಟಿಯನ್ನು ಗೌಪ್ಯವಾಗಿಡಬೇಕು, ಆ ಕೆಲಸ ಮಾಡುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: Karnataka Budget Session 2024: ಗೋಪಾಲಯ್ಯಗೆ ʼಕೊಲೆ ಬೆದರಿಕೆʼ ಮೇಲ್ಮನೆ ವ್ಯಾಪ್ತಿಗೆ ಬರಲ್ಲ!

ಪಕ್ಷ ಗೆಲ್ಲುವುದು ಮುಖ್ಯ ಎಂದ ಡಿಕೆಶಿ

ಸಚಿವರು ಸ್ಪರ್ಧೆ ಮಾಡುತ್ತಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ರಾಜಕೀಯದಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಎಲ್ಲರಿಗೂ ಅವಕಾಶವಿರುತ್ತದೆ. ಪಕ್ಷ ಗೆಲ್ಲುವುದು ಮುಖ್ಯ ಎಂದು ಉತ್ತರಿಸಿದರು.

Exit mobile version