Site icon Vistara News

Congress Protest: ‘ಅಮ್ಮಾ, ತಾಯಿ ನಿರ್ಮಲಾ ನಮ್ಮ ದುಡ್ಡು ಕೊಡಮ್ಮಾ’ ಎಂದ ಸಿಎಂ ಸಿದ್ದರಾಮಯ್ಯ

Cm Siddaramaiah in New Delhi

ನವ ದೆಹಲಿ: ಕೇಂದ್ರ ಸರ್ಕಾರದಿಂದ (Central Government) ಕರ್ನಾಟಕಕ್ಕೆ ಭಾರಿ ಅನ್ಯಾಯವಾಗಿದೆ. ಕನ್ನಡಿಗರಿಗೆ ಮೋಸವಾಗಿದ್ದಕ್ಕೆ ನಾವೀಗ ಧ್ವನಿ ಎತ್ತುತ್ತಿದ್ದೇವೆ. ಕಳೆದ 8-9 ವರ್ಷಗಳಲ್ಲಿ ಕರ್ನಾಟಕಕ್ಕೆ ತಾರತಮ್ಯವಾಗಿದೆ. ಸುಮಾರು 1,87,000 ಕೋಟಿ ರೂಪಾಯಿಯಷ್ಟು ದುಡ್ಡು ಕೊಡದೆ ನಷ್ಟ ಮಾಡಲಾಗಿದೆ. ನಮಗೆ ಈ ಬಾರಿ 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ 11495 ಕೋಟಿ ರೂಪಾಯಿ ನೀಡಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Union Finance Minister Nirmala Sitharaman) ಅವರ ಬಳಿ ಕೇಳಿದೆ. ಅಮ್ಮಾ, ತಾಯಿ ನಿರ್ಮಲಾ ದುಡ್ಡು ಕೊಡಮ್ಮಾ ಎಂದು ಕೇಳಿಕೊಂಡೆ. ಆದರೆ, ಅವರು ಹೇಳಿದ್ದೇನು? ಫೈನಾನ್ಸ್ ಕಮಿಷನ್ ವಿಚಾರದಲ್ಲಿ ನಾನು ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದ್ದಾರೆ. ಹಾಗಾದ್ರೆ ಈ ಹಣಕಾಸು ಆಯೋಗ ನೀಡಿದ ಶಿಫಾರಸನ್ನು ತಿರಸ್ಕಾರ ಮಾಡಿದ್ದು ತಾವೇ ಅಲ್ಲವೇ? ಹೀಗಾಗಿ ನಾವು ಪ್ರತಿಭಟನೆಯನ್ನು (Congress Protest) ಮಾಡಬೇಕಾ? ಬೇಡವಾ? ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರವು ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಗಳಿಗೆ ಜಿಎಸ್‌ಟಿ ವಿಚಾರವಾಗಿ ಅನ್ಯಾಯ ಆಗಿದೆ. ಅನ್ಯಾಯ ಆದ ಮೇಲೆ ಪ್ರತಿಭಟನೆ ಮಾಡಬೇಕಾ ಬೇಡವೇ? 11495 ಕೋಟಿ ರೂಪಾಯಿ ಹಣ ಬರಬೇಕು. ಹೀಗಾಗಿ ನಿರ್ಮಲಾ ಸೀತಾರಾಮನ್‌ ಅವರ ಬಳಿ ದುಡ್ಡು ಕೊಡಬೇಕು ಎಂದು ಕೇಳಿಕೊಂಡೆ. ಅದಕ್ಕೆ ಅವರು “ತಾವು ಫೈನಾನ್ಸ್ ಕಮಿಷನ್ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಲ್ಲ” ಎಂದಿದ್ದಾರೆ. ಯು ಓನ್ಲಿ ರೆಪ್ರಸೆಂಟಿಂಗ್‌ (You only representing Karnataka). ಯಾಕೆ ಸುಳ್ಳು ಹೇಳ್ತೀರಾ? ಎಂದು ಆಕ್ರೋಶವನ್ನು ಹೊರಹಾಕಿದರು. ಆಗ ಅಲ್ಲಿ ಸೇರಿದ್ದ ಕಾಂಗ್ರೆಸ್‌ ಸಚಿವರು, ಶಾಸಕರು, ಪರಿಷತ್‌ ಸದಸ್ಯರು, “ಶೇಮ್‌ … ಶೇಮ್‌..” ಎಂದು ಕೂಗಿದರು.

ಇದನ್ನೂ ಓದಿ: Congress Protest: ಕಿವಿ ಇಲ್ಲದ ಕೇಂದ್ರಕ್ಕೆ ಧ್ವನಿ ಕೇಳಿಸಲು ದೆಹಲಿಗೆ ಬಂದು ಕೂಗುತ್ತಿದ್ದೇವೆ: ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯದ ವಿರುದ್ಧ ಇಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿರುವ ಹೋರಾಟ ಕರ್ನಾಟಕದ , ಕನ್ನಡಿಗರ ಹಿತ ಕಾಪಾಡುವ ಚಳವಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇದು ರಾಜಕೀಯ ಚಳವಳಿ ಅಲ್ಲ

ಕಳೆದ ಐದಾರು ವರ್ಷಗಳಲ್ಲಿ 1,87,000 ಕೋಟಿ ರೂ.ಗಳಷ್ಟು ನ್ಯಾಯಯುತವಾಗಿ ಬರಬೇಕಾಗಿದ್ದ ಅನುದಾನವನ್ನು ರಾಜ್ಯಕ್ಕೆ ನೀಡಲಾಗಿಲ್ಲ. ಈ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗುತ್ತಿದೆ.ಜಂತರ್ ಮಂತರ್ ಐತಿಹಾಸಿಕ ಸ್ಥಳವಾಗಿದ್ದು, ಅನೇಕ ಚಳವಳಿಗೆ ಸಾಕ್ಷಿಯಾದ ಸ್ಥಳ. ಇಂತಹ ಜಾಗದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಇದು ರಾಜಕೀಯ ಚಳವಳಿ ಅಲ್ಲ. ಕೇಂದ್ರ ಸರ್ಕಾರದ ವಿರುದ್ಧದ ಈ ಹೋರಾಟವನ್ನು ಪಕ್ಷಾತೀತವಾಗಿ ಮಾಡಬೇಕೆಂಬ ಮನವಿಯನ್ನು ರಾಜ್ಯ ಬಿಜೆಪಿಯ ನಾಯಕರಿಗೂ ಮಾಡಲಾಗಿದೆ ಎಂದರು.

100 ರೂ. ಗಳಲ್ಲಿ ರಾಜ್ಯಕ್ಕೆ ಕೇವಲ 12 ರಿಂದ 13 ರೂ.

ಇದು ಐತಿಹಾಸಿಕವಾದ ಪ್ರತಿಭಟನೆ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 4.71 % ಬಂದಿತ್ತು. 15 ನೇ ಹಣಕಾಸು ಆಯೋಗದಲ್ಲಿ 3.64 % ಕ್ಕೆ ಇಳಿಯಿತು. ಇದರಿಂದ ರಾಜ್ಯಕ್ಕೆ ಬರುವ ತೆರಿಗೆಯಲ್ಲಿ ಶೇ. 40 ರಿಂದ 45 ರವರೆಗೆ ಕಡಿತವಾಗಿದೆ. ಒಟ್ಟಾರೆಯಾಗಿ 14 ನೇ ಹಣಕಾಸು ಆಯೋಗದ ಶಿಫಾರಸನ್ನೇ 15ನೇ ಹಣಕಾಸು ಆಯೋಗದಲ್ಲಿ ಅನುಸರಿಸಿದ್ದರೆ, ರಾಜ್ಯಕ್ಕೆ 62,098 ಕೋಟಿ ರೂ. ರಾಜ್ಯಕ್ಕೆ ಬರುತ್ತಿತ್ತು. ರಾಜ್ಯದಿಂದ ಒಟ್ಟು 4,30,000 ಕೋಟಿ ತೆರಿಗೆ ಮೊತ್ತವನ್ನು ಕೇಂದ್ರಕ್ಕೆ ನೀಡಲಾಗುತ್ತದೆ. ಅಂದರೆ 100 ರೂ. ತೆರಿಗೆಯಲ್ಲಿ ರಾಜ್ಯಕ್ಕೆ ಕೇವಲ 12 ರಿಂದ 13 ರೂ. ದೊರೆಯುತ್ತಿದೆ. ಇದು ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ. ಕರ್ನಾಟಕದಿಂದ 25 ಸಂಸದರು ಆಯ್ಕೆಯಾಗಿದ್ದು, ಒಬ್ಬರೂ ಈ ಬಗ್ಗೆ ಕೇಂದ್ರ ಮುಂದೆ ಮಾತನಾಡಿಲ್ಲ. ಅಲ್ಲದೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿಯವರು ಈ ಅನ್ಯಾಯವನ್ನು ಸರಿಪಡಿಸುವ ಮನವಿ ಮಾಡಿರುವುದಿಲ್ಲ. ಈ ಎಲ್ಲ ಕಾರಣಗಳಿಗಾಗಿ ಇಂದು ನವದೆಹಲಿಯಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.

ಇದನ್ನೂ ಓದಿ: Kidwai Hospital : ಕಿದ್ವಾಯಿ ಆಸ್ಪತ್ರೆ ಅವ್ಯವಹಾರ; ನಿರ್ದೇಶಕ ಸ್ಥಾನದಿಂದ ಡಾ. ಲೋಕೇಶ್‌ ವಜಾ

ಜನಸಂಖ್ಯೆಯನ್ನು ನಿಯಂತ್ರಣ ಮಾಡಿ ತಪ್ಪು ಮಾಡಿದೆವಾ?

ಉತ್ತರ ಪ್ರದೇಶ ರಾಜ್ಯಕ್ಕೆ 2,80,000 ಕೋಟಿ ರೂ. ಕೇಂದ್ರ ನೀಡುತ್ತಿದೆ. ಅಂತೆಯೇ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನಗಳಿಗೂ ನೀಡಲಾಗುತ್ತಿದೆ. ಈ ಯಾವ ರಾಜ್ಯಗಳೂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಕ್ರಮ ಕೈಗೊಂಡಿಲ್ಲ. ಜನಸಂಖ್ಯೆ, ತಲಾ ಆದಾಯ, ಸಮುದಾಯಗಳ ಅಭಿವೃದ್ಧಿ ಸೇರಿದಂತೆ ಹಲವು ಮಾನದಂಡಗಳಿಂದ ಅನುದಾನ ಹಂಚಿಕೆಯನ್ನು ನಿರ್ಧರಿಸಲಾಗುತ್ತದೆ. 15ನೇ ಹಣಕಾಸು ಆಯೋಗದಲ್ಲಿ 2011ರ ಜನಗಣತಿಯನ್ನು ಪರಿಗಣಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಯಾವುದೇ ರೀತಿಯ ಜನಸಂಖ್ಯೆ ನಿಯಂತ್ರಣ ಮಾಡಲಿಲ್ಲ. ಆದರೆ, ದಕ್ಷಿಣ ಭಾರತದವರು ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದೆವು. ಹೀಗಾಗಿ ಉತ್ತರ ಭಾರತದವರಿಗಿಂದ ದಕ್ಷಿಣ ಭಾರತದವರ ಸಂಖ್ಯೆ ಕಡಿಮೆಯಾಯಿತು. ಆದರೆ, ಈ ಅನುದಾನ ಹಂಚಿಕೆಯನ್ನು ನೋಡಿದರೆ ಜನಸಂಖ್ಯೆಯನ್ನು ನಿಯಂತ್ರಣ ಮಾಡಿ ನಾವು ತಪ್ಪು ಮಾಡಿದೆವಾ ಎಂಬುದಾಗಿ ಅನ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Exit mobile version