Site icon Vistara News

Congress Karnataka: ಹೆಚ್ಚಾಯ್ತು ಸಿದ್ದರಾಮಯ್ಯ, ಡಿಕೆಶಿ ಫೈಟ್‌; ನಿಗಮ-ಮಂಡಳಿ ಆಯ್ಕೆ ಮತ್ತಷ್ಟು ವಿಳಂಬ

44 Congress workers to get power in corporations and boards

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಎಲ್ಲವೂ ಸರಿ ಇಲ್ಲ. ಅಧಿಕಾರಕ್ಕೆ ಬಂದ 6 ತಿಂಗಳಾದರೂ ಸಹ ನಿಗಮ-ಮಂಡಳಿಗಳ ನೇಮಕಕ್ಕೆ ಸರ್ಕಸ್ ಮುಂದುವರಿದಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಒಮ್ಮತಕ್ಕೆ ಬಾರದೇ ಇರುವುದರಿಂದ ನೇಮಕಕ್ಕೆ ಬ್ರೇಕ್ ಬಿದ್ದಿದೆ. ತಮ್ಮ ತಮ್ಮ ಆಪ್ತರಿಗೆ ಅಧಿಕಾರ ಕೊಡಿಸುವ ಗುರಿಯಲ್ಲಿ ಸಿದ್ದರಾಮಯ್ಯ-ಡಿಕೆಶಿಯಿಂದ ನಾನಾ – ನೀನಾ ಫೈಟ್‌ ಶುರುವಾಗಿರುವುದೇ ಈ ಎಲ್ಲ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ನಿಗಮ – ಮಂಡಳಿ ಅಧ್ಯಕ್ಷರ ಆಯ್ಕೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎಲ್ಲರಲ್ಲೂ ಒಮ್ಮತ ಮೂಡದೇ ಇರುವುದರಿಂದ ಹೀಗಾಗಿದೆ. ಇನ್ನು ಸ್ವಲ್ಪ ಕಾಲ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಕೇವಲ ಶಾಸಕರ ಹೆಸರನ್ನು ಮಾತ್ರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಫೈನಲ್‌ ಮಾಡಿದ್ದರು. ಆ ಪಟ್ಟಿಯನ್ನು ರಾಜ್ಯ ನಾಯಕರಿಗೆ ಕಳುಹಿಸಲಾಗಿದೆ. ಆದರೆ, ಈಗ ಹೈಕಮಾಂಡ್‌ ನೀಡಿರುವ ಕಟ್ಟಾಜ್ಞೆಯು ಮತ್ತೆ ರಾಜ್ಯ ನಾಯಕರನ್ನು ಇಕ್ಕಟ್ಟಿಗೆ ದೂಡಿದೆ.

ಹೈಕಮಾಂಡ್‌ ಸೂಚನೆ ಏನು?

ಈಗ ಫೈನಲ್‌ ಮಾಡಿರುವ ಪಟ್ಟಿ ಬಗ್ಗೆ ಹೈಕಮಾಂಡ್‌ ಅಸಮಾಧಾನಗೊಂಡಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಕೇವಲ ಶಾಸಕರಿಗೆ ಮಾತ್ರ ನೀವು ನಿಗಮ – ಮಂಡಳಿಯಲ್ಲಿ ಸ್ಥಾನ ಕಲ್ಪಿಸಿದರೆ ಯಾವ ಸಂದೇಶವನ್ನು ರವಾನೆ ಮಾಡಿದಂತೆ ಆಗುತ್ತದೆ? ಹೀಗಾಗಿ ಕಾರ್ಯಕರ್ತರಿಗೂ ಆದ್ಯತೆ ನೀಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಈಗ ಫೈನಲ್‌ ಆಗಿರುವ ಪಟ್ಟಿಯಲ್ಲಿ ಯಾವ ಶಾಸಕರ ಹೆಸರನ್ನು ಕೈಬಿಡಬೇಕು. ಯಾವ ಕಾರ್ಯಕರ್ತರನ್ನು ಸೇರಿಸಬೇಕು ಎಂಬ ಗೊಂದಲ ಉಭಯ ನಾಯಕರದ್ದಾಗಿದೆ. ಹೀಗಾಗಿ ಕಾರ್ಯಕರ್ತರ ಆಯ್ಕೆ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಮಧ್ಯೆ ಒಮ್ಮತ ಮೂಡಲಿಲ್ಲ.

ಮೊದಲ ಪಟ್ಟಿಯಲ್ಲಿ ಕೆಲ ಕಾರ್ಯಕರ್ತರಿಗೂ ಅವಕಾಶ ನೀಡಲು ಹೈಕಮಾಂಡ್ ಸಲಹೆ ನೀಡಿದೆ. ಅಲ್ಲದೆ, ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಗೂ ಚರ್ಚೆ ನಡೆಸಿದೆ. ಅಲ್ಲದೆ, ಕಾರ್ಯಕರ್ತರನ್ನೊಳಗೊಂಡ ಪಟ್ಟಿಯನ್ನು ರವಾನಿಸಲು ಸೂಚನೆ ನೀಡಿದೆ. ಹಾಗಾಗಿ ಸದ್ಯಕ್ಕೆ ಆಯ್ಕೆ ಕಸರತ್ತು ಕಗ್ಗಂಟಾಗಿಯೇ ಉಳಿದಿದೆ.

ನಮ್ಮ ಪಟ್ಟಿಯನ್ನೇ ನೋಡಿಲ್ಲ ಎಂದ ಸಿದ್ದರಾಮಯ್ಯ

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಾವು ಕಳುಹಿಸಿದ ಪಟ್ಟಿಯನ್ನು ಇನ್ನೂ ಹೈಕಮಾಂಡ್‌ ನಾಯಕರು ನೋಡಿಲ್ಲ. ನೋಡಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ. ಎರಡು – ಮೂರು ದಿನದಲ್ಲಿ ಹೈಕಮಾಂಡ್ ನಾಯಕರು ಪ್ರತಿಕ್ರಿಯೆ ನೀಡಬಹುದು. ಆ ಬಳಿಕ ಪಟ್ಟಿ ಬಿಡುಗಡೆ ಬಗ್ಗೆ ತಿರ್ಮಾನವನ್ನು ಕೈಗೊಳ್ಳಲಾಗುವುದು. ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವಷ್ಟೇ ಎಂದು ಹೇಳಿದರು.

ಕಾರ್ಯಕರ್ತರಿಗೂ ಅವಕಾಶ ನೀಡಲಾಗುವುದು: ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲೂ ನಾವು ಹಲವು ಸಭೆ ನಡೆಸಿ ಪಟ್ಟಿ ತಯಾರಿ ಮಾಡಿದ್ದೆವು. ನಮ್ಮ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದೇವೆ. ಇಲ್ಲೀಗ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿ ವರಿಷ್ಠರು ತೀರ್ಮಾನ ತೆಗೆದುಕೊಳ್ಳಬಹುದು. ಕಾರ್ಯಕರ್ತರಿಗೂ ಅವಕಾಶ ನೀಡಲಾಗುವುದು. ಮೊದಲಿನಿಂದಲೂ ಈ ಪ್ರಸ್ತಾಪ ಇದೆ. ಕಾರ್ಯಕರ್ತರಿಗೆ ಅವಕಾಶ ನೀಡಲು ನಮ್ಮ ವಿರೋಧ ಏನಿಲ್ಲ. ಪಟ್ಟಿ ಬಿಡುಗಡೆ ಬಗ್ಗೆ ಹೈಕಮಾಂಡ್ ನಾಯಕರು ನಿರ್ಧರಿಸಲಿದ್ದಾರೆ. ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆಯಾಗಿದೆ. ಡಿ. 22ರೊಳಗೆ ಅಭ್ಯರ್ಥಿಗಳ ಆಯ್ಕೆ ಕುರಿತು ವರದಿ ಸಲ್ಲಿಸಲು ಸೂಚಿಸಿದ್ದಾರೆ. ನಾಳೆ ಕ್ಯಾಬಿನೆಟ್ ಸಭೆಯಲ್ಲೂ ಸಿಎಂ ಸಿದ್ದರಾಮಯ್ಯ ಈ ಸೂಚನೆ ನೀಡಲಿದ್ದಾರೆ. ಉಸ್ತುವಾರಿವಾರಿಗಳು ಮೂರು ಅಭ್ಯರ್ಥಿಗಳ ಹೆಸರನ್ನು ಸೂಚಿಸಬೇಕು. ಅಂತಿಮವಾಗಿ ಯಾರಿಗೆ ಟಿಕೆಟ್ ಎನ್ನುವುದು ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: Congress Politics : ಕೊನೆಗೂ ನಿಗಮ-ಮಂಡಳಿ ಫೈನಲ್‌; 32 ಶಾಸಕರಿಗೆ ಸ್ಥಾನ, ಯಾರಿದ್ದಾರೆ?

ಸಂಕ್ರಾಂತಿಯೊಳಗೆ ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಫೈನಲ್‌ ಮಾಡುವ ವಿಚಾರ ಇದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಆ ರೀತಿಯ ಮುಹೂರ್ತ ಏನಿಲ್ಲ, ಎಲ್ಲವನ್ನು ವರಿಷ್ಠರು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.

Exit mobile version