Site icon Vistara News

Congress Karnataka : ನಿಗಮ-ಮಂಡಳಿ ಲಿಸ್ಟ್‌ ಡೆಲ್ಲಿಗೆ ರವಾನೆ;‌ ಶಾಸಕರಿಗೆ ಮಾತ್ರ ಅವಕಾಶವೆಂದ ಸಿದ್ದರಾಮಯ್ಯ

DK Shivakumar and CM Siddaramaiah

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ (Congress Karnataka) ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದ ಬಳಿಕ ನಿಗಮ – ಮಂಡಳಿಗಳ ಅಧ್ಯಕ್ಷರ ಆಯ್ಕೆ ಫೈನಲ್‌ ಆಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ನಡುವಿನ ಮುಸುಕಿನ ಗುದ್ದಾಟದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೇಲುಗೈ ಸಾಧಿಸಿದ್ದಾರೆ. ಕಾರ್ಯಕರ್ತರಿಗೂ ಈ ಬಾರಿ ಅವಕಾಶ ನೀಡಬೇಕು ಎಂಬ ಡಿಕೆಶಿ ಬೇಡಿಕೆಗೆ ಈ ಬಾರಿ ಬೆಲೆ ಸಿಕ್ಕಿಲ್ಲ. ಹೀಗಾಗಿ ಮೊದಲ ಹಂತದ ಲಿಸ್ಟ್‌ನಲ್ಲಿ ಶಾಸಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲ ಜತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡೆಸಿದ್ದ ಸಭೆ ಮುಕ್ತಾಯಗೊಂಡಿದೆ. ಈ ವೇಳೆ ಸಿದ್ದರಾಮಯ್ಯ ಅವರ ವಾದಕ್ಕೆ ಹೈಕಮಾಂಡ್‌ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.

ಶಾಸಕರಿಗೆ ಮಾತ್ರ ಈಗ ಅವಕಾಶ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ, ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲಾಗುತ್ತಿದೆ. ಎರಡು ಹಾಗೂ ಮೂರನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುತ್ತೇವೆ. ಈಗ ಫೈನಲ್‌ ಆಗಿರುವ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿಕೊಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್‌ಗೆ ಹಿನ್ನಡೆ

ನಿಗಮ – ಮಂಡಳಿ ಅಧ್ಯಕ್ಷ ಸ್ಥಾನ ನೀಡುವಾಗ ಶಾಸಕರ ಜತೆಗೆ ಕಾರ್ಯಕರ್ತರಿಗೂ ಕೊಡಬೇಕು ಎಂಬ ವಾದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಅವರದ್ದಾಗಿತ್ತು. ಕಾಂಗ್ರೆಸ್‌ಗೆ ಈ ಬಾರಿ ಕಾರ್ಯಕರ್ತರಿಗೆ ಸ್ಥಾನಮಾನ ನೀಡಲು ಉತ್ತಮ ಅವಕಾಶ ಸಿಕ್ಕಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಜತೆಗೆ ಕಾರ್ಯಕರ್ತರಿಗೂ ಸ್ಥಾನವನ್ನು ಕಲ್ಪಿಸಬೇಕು ಎಂದು ಡಿಕೆಶಿ ಹೇಳುತ್ತಾ ಬಂದಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರವೇ ಅವಕಾಶ ಕಲ್ಪಿಸೋಣ. ಈ ವೇಳೆ ನಾವು ಕಾರ್ಯಕರ್ತರಿಗೆ ಮಣೆ ಹಾಕಿದಲ್ಲಿ ಅವರು ಬೆಂಗಳೂರಿಗೆ ಬಂದು ಕುಳಿತುಕೊಳ್ಳುತ್ತಾರೆ. ಆಗ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುವವರು ಯಾರು ಎಂಬ ವಾದವನ್ನು ಮುಂದಿಟ್ಟಿದ್ದರು. ಇದನ್ನು ಒಪ್ಪದ ಡಿ.ಕೆ. ಶಿವಕುಮಾರ್‌, ಕಾರ್ಯಕರ್ತರಿಗೆ ಸ್ಥಾನ ಕಲ್ಪಿಸಿದರೆ ಹೊರಗೆ ಒಳ್ಳೇ ಸಂದೇಶ ರವಾನೆ ಆಗುತ್ತದೆ. ಕಾರ್ಯಕರ್ತರ ಬೆಳವಣಿಗೆಗೆ ಅವಕಾಶವನ್ನು ಕೊಡಲಾಗಿದೆ. ಕೆಲಸ ಮಾಡಿದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬ ಸಂದೇಶವನ್ನು ಕೊಟ್ಟಂತೆ ಆಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿಯೇ ಕಳೆದ ಎರಡು ಸಭೆಯಲ್ಲಿ ಒಮ್ಮತ ಮೂಡಿರಲಿಲ್ಲ.

ಮೂರನೇ ಬಾರಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪಟ್ಟನ್ನು ಬಿಗಿ ಹಿಡಿದು ಕುಳಿತಿದ್ದರಿಂದ ಮೊದಲ ಹಂತದ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಕೇವಲ ಶಾಸಕರಿಗೆ ಮಾತ್ರ ನಿಗಮ ಮಂಡಳಿಗಳಿಗೆ ಸ್ಥಾನವನ್ನು ಕಲ್ಪಿಸಲಾಗಿದೆ. ಮುಂದಿನ ಹಂತಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವ ನಿರ್ಧಾರಕ್ಕೆ ಈ ಸಭೆಯಲ್ಲಿ ನಿರ್ಣಯ ಪಡೆಯಲಾಗಿದೆ.

ಇದನ್ನೂ ಓದಿ: Congress Karnataka : ಸಿಎಂ, ಡಿಸಿಎಂ ನಡೆಗೆ ಹಿರಿಯ ಸಚಿವರ ಮುನಿಸು; ಅಭಿಪ್ರಾಯ ಕೇಳುತ್ತಿಲ್ಲವೆಂದ ಪರಮೇಶ್ವರ್!

ಸಭೆ ಬಳಿಕ ಸುರ್ಜೇವಾಲ ಜತೆ ಡಿಕೆಶಿ ಪ್ರತ್ಯೇಕ ಮಾತುಕತೆ

ನಿಗಮ – ಮಂಡಳಿ ಆಯ್ಕೆ ವಿಚಾರವಾಗಿ ನಡೆದ ಸಭೆ ಅಂತ್ಯವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಅಲ್ಲಿಂದ ನಿರ್ಗಮಿಸಿದರು. ಆದರೆ, ಈ ಆಯ್ಕೆಯಿಂದ ಅಸಮಾಧಾನಗೊಂಡಿರುವ ಡಿ.ಕೆ. ಶಿವಕುಮಾರ್‌, ಸಿಎಂ ತೆರಳಿದ ಬಳಿಕ ರಣದೀಪ್‌ ಸಿಂಗ್ ಸುರ್ಜೇವಾಲ ಜತೆಗೆ ಪ್ರತ್ಯೇಕ ಮಾತುಕತೆಯನ್ನು ನಡೆಸಿದ್ದಾರೆ.

Exit mobile version