Site icon Vistara News

Congress Karnataka : ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಸಿಡಿದ ಶಾಸಕ ಬಿ.ಆರ್.‌ ಪಾಟೀಲ್; ಸರ್ಕಾರಕ್ಕೆ ಪತ್ರ ಸಂಕಟ

BR Patil and CM Siddaramaiah

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ (Congress Karnataka) ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದರೂ ಆಂತರಿಕ ಭಿನ್ನಮತ ಶಮನವಾಗಿಲ್ಲ. ಸರ್ಕಾರದ ಆರಂಭದಿಂದಲೂ ಒಂದಲ್ಲ ಒಂದು ಸಂಕಷ್ಟ, ಗೊಂದಲಗಳು ಆಗುತ್ತಲೇ ಇವೆ. ಈ ಮೊದಲು ಸರ್ಕಾರದಲ್ಲಿ ವರ್ಗಾವಣೆ ದಂಧೆ (Transfer racket) ನಡೆಯುತ್ತಿದೆ. ಉಸ್ತುವಾರಿ ಸಚಿವರು ತಮ್ಮನ್ನು ಪರಿಗಣಿಸುತ್ತಲೇ ಇಲ್ಲ ಎಂದು ಪತ್ರ ಬರೆದು ಸರ್ಕಾರಕ್ಕೆ ತಲೆ ನೋವು ತಂದಿಟ್ಟಿದ್ದ ಆಳಂದ ಶಾಸಕ ಬಿ.ಆರ್.‌ ಪಾಟೀಲ್‌ (MLA BR Patil), ಈಗ ಮತ್ತೊಂದು ಪತ್ರ ಬರೆದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ. ಈ ಬಾರಿ ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna ByreGowda) ಅವರ ವಿರುದ್ಧ ತಮ್ಮ ಮುನಿಸನ್ನು ಹೊರಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ನೇರ ಪತ್ರ!

ಈ ಬಾರಿ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ನೇರವಾಗಿ ಪತ್ರ ಬರೆದಿದ್ದಾರೆ. ಕಳೆದ ವಿಧಾನಸಭೆಯ ವಿಷಯ ಪ್ರಸ್ತಾಪಿಸಿ ಪತ್ರ ಬರೆದಿರುವ ಅವರು, 2013ರಲ್ಲಿ ಕಾಮಗಾರಿಗಳನ್ನು ನಾನು ಕೆಆರ್‌ಐಡಿಎಲ್‌ಗೆ ನೀಡಿದ್ದೆ. ಆದರೆ, ಕಾರಣಾಂತರಗಳಿಂದ 2013ರಲ್ಲಿ ನೀಡಿದ್ದ ಕಾಮಗಾರಿಗಳು ಪೂರ್ಣವಾಗಿಲ್ಲ. ಈ ಬಗ್ಗೆ ನಾನು ಕಳೆದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದಾಗ ನನ್ನನ್ನೇ ಅನುಮಾನದಿಂದ ನೋಡಲಾಯಿತು. ಸಚಿವ ಪ್ರಿಯಾಂಕ್‌ ಖರ್ಗೆ ಅನುಪಸ್ಥಿತಿಯಲ್ಲಿ ಸಚಿವ ಕೃಷ್ಣ ಬೈರೇಗೌಡ ನನ್ನ ಮೇಲೆ ಅನುಮಾನ ಬರುವಂತೆ ಮಾತನಾಡಿದ್ದರು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: Actress Leelavathi: ಲೀಲಾವತಿ ಕನಸಿನ ಪಶು ಆಸ್ಪತ್ರೆ ಉದ್ಘಾಟಿಸಿದ ಡಿಕೆಶಿ, ಆದರೆ ನಟಿ ಪ್ರಜ್ಞಾಶೂನ್ಯ

BR Patil and CM Siddaramaiah

ಕೆಆರ್‌ಐಡಿಎಲ್ ಕಡೆಯಿಂದ ನಾನು ಹಣ ಪಡೆದು ಭೂಸೇನೆಗೆ ಕಾಮಗಾರಿ ಕೊಟ್ಟಿದ್ದೇನೆ ಎಂದು ಅನುಮಾನ ಬರುವಂತೆ ಮಾತನಾಡಿದ್ದರು. ಅದಾದ ಮೇಲೂ ಕೂಡ ಪ್ರಿಯಾಂಕ್‌ ಖರ್ಗೆ ಕಾಮಗಾರಿಗಳ ಕುರಿತು ಸಭೆಯನ್ನು ನಡೆಸಲಿಲ್ಲ. ಇಂಥ ಆರೋಪಗಳನ್ನು ಹೊತ್ತುಕೊಂಡು ನಾನು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ನಾನು ಆರೋಪ ಒಪ್ಪಿಕೊಂಡಂತಾಗುತ್ತದೆ. ಹೀಗಾಗಿ ನನ್ನ ಮೇಲೆ ಬಂದ ಆರೋಪಗಳಿಗೆ‌ ತನಿಖೆಯನ್ನು ನಡೆಸಿ. ಸತ್ಯಾಸತ್ಯತೆ ಹೊರ ಬರಲು ತನಿಖೆಗೆ ಆದೇಶ ನೀಡಿ. ಆರೋಪ ಸಾಬೀತಾದರೆ ನಾನು ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಬಿ.ಆರ್.‌ ಪಾಟೀಲ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈಗ ಏಕೆ ಪತ್ರ?

ಈ ಘಟನೆ ನಡೆದು ಕೆಲವು ತಿಂಗಳುಗಳೇ ಕಳೆದಿವೆ. ಇಷ್ಟು ದಿನ ಸುಮ್ಮನಿದ್ದು ಈಗ ಏಕೆ ಪತ್ರ ಬರೆಯಲಾಗಿದೆ ಎಂಬ ಅನುಮಾನ ಮೂಡುವುದು ಸಹಜ. ಆದರೆ, ಇದಕ್ಕೂ ಸಹ ಬಿ.ಆರ್.‌ ಪಾಟೀಲ್‌ ಅವರು ತಮ್ಮ ಪತ್ರದಲ್ಲಿ ಸ್ಪಷ್ಟನೆ ನೀಡಿದ್ದು, ಪಂಚ ರಾಜ್ಯ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದೆಂದು ಈಗ ಪತ್ರ ಬರೆಯುತ್ತಿದ್ದೇನೆ. ತಕ್ಷಣವೇ ತನಿಖಾ ಆಯೋಗ ರಚನೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.

ಪತ್ರದ ಬಗ್ಗೆ ಗೊತ್ತೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಬಿ.ಆರ್. ಪಾಟೀಲ್ ಪತ್ರ ಬರೆದಿರುವುದು ನನಗೆ ಗೊತ್ತಿಲ್ಲ. ನಾನು ಯಾವ ಪತ್ರವನ್ನೂ ನೋಡಿಲ್ಲ. ಏನು ಪತ್ರ ಬರೆದಿದ್ದಾರೆ ಅಂತ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ : Congress Karnataka : ನಿಗಮ-ಮಂಡಳಿ ಲಿಸ್ಟ್‌ ಡೆಲ್ಲಿಗೆ ರವಾನೆ;‌ ಶಾಸಕರಿಗೆ ಮಾತ್ರ ಅವಕಾಶವೆಂದ ಸಿದ್ದರಾಮಯ್ಯ

ಹೌದು ಪತ್ರ ಬರೆದಿದ್ದು ನಾನೇ ಎಂದ ಬಿ.ಆರ್.‌ ಪಾಟೀಲ್‌

ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಬಿ.ಆರ್. ಪಾಟೀಲ್, ಈಗ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ತಾವೇ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅದು ನನ್ನದೇ ಪತ್ರವಾಗಿದೆ. ಸಚಿವ ಕೃಷ್ಣಬೈರೇಗೌಡ ಅವರ ವಿರುದ್ಧ ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದೇನೆ. ಈ ವಿಷಯವಾಗಿ ಸಿಎಂ ಗಮನಕ್ಕೆ ತರಲು ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

Exit mobile version