ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ (Congress Karnataka) ಭಾರಿ ಕಸರತ್ತು ನಡೆಸುತ್ತಿದೆ. ಅಳೆದೂ ತೂಗಿ ಹೆಜ್ಜೆಯನ್ನು ಇಡುತ್ತಿದೆ. ಈಗಾಗಲೇ ನಿಗಮ – ಮಂಡಳಿಗಳಿಗೆ ನೇಮಕ (Appointment of Corporation Board) ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅವಕಾಶ ಕೊಡುವುದಾಗಿ ಹೇಳಿದೆ. ಆದರೆ, ಇನ್ನೂ ನಿಗಮ ಮಂಡಳಿ ಸ್ಥಾನದ ಲಾಬಿ ಪಾಲಿಟಿಕ್ಸ್ ಮಾತ್ರ ನಿಂತಿಲ್ಲ. ತಮ್ಮ ಬೆಂಬಲಿಗರಿಗೆ ಸ್ಥಾನಮಾನ ಸಿಗುತ್ತಿಲ್ಲ ಎಂಬ ಅಸಮಾಧಾನಗಳು ಕೇಳಿ ಬರುತ್ತಲೇ ಇದ್ದು, ಇದು ಎಲೆಕ್ಷನ್‌ಗೆ ಹೊಡೆತ ಕೊಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಚಿವರು ಬಹಿರಂಗವಾಗಿ ತಮ್ಮ ಅಸಮಾಧಾನಗಳನ್ನು ಹೊರಗೆ ಹಾಕುತ್ತಲಿದ್ದು, ಬಣ ರಾಜಕೀಯವು ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಲೋಕಸಭಾ ಚುನಾವಣೆ ಮುಗಿಯುವವರೆಗೂ ನಿಗಮ ಮಂಡಳಿಗಳ ಪಟ್ಟಿ ಬಿಡುಗಡೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅಂತಿಮ ಮಾಡಿರುವ ನಿಗಮ – ಮಂಡಳಿ ಪಟ್ಟಿಗೆ ಹಿರಿಯ ಸಚಿವರು ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪಟ್ಟಿಯಷ್ಟೇ ಅಲ್ಲ, ನಮ್ಮ ಪಟ್ಟಿಯನ್ನು ಸಹ ಪರಿಗಣಿಸಿ ಎಂಬುದಾಗಿ ಒತ್ತಡ ಹಾಕಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ಗುರುವಾರ ಸಚಿವ ಕೆ.ಎಚ್. ಮುನಿಯಪ್ಪ ನಿವಾಸದಲ್ಲಿ ಸಭೆ ನಡೆಸಲಾಗಿದ್ದು, ಭಾರಿ ಚರ್ಚೆ ನಡೆದಿದೆ ಎನ್ನಲಾಗಿದೆ. ಇಲ್ಲಿ ಹಲವು ವಿಚಾರಗಳು ಪ್ರಸ್ತಾಪ ಆಗಿದೆಯಾದರೂ ಲೋಕಸಭಾ ಚುನಾವಣೆ ಸಂಬಂಧ ಸಚಿವರಿಗೆ ನೀಡುತ್ತಿರುವ ಹೊಣೆಗಾರಿಕೆ, ಮತ್ತೆ ಡಿಸಿಎಂ ಹುದ್ದೆ ಸೃಷ್ಟಿಗೆ ಬೇಡಿಕೆ ಹಾಗೂ ಹೈಕಮಾಂಡ್ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಸಚಿವರ ಸ್ಪರ್ಧೆಗೆ ಡಿಕೆಶಿ ಒಲವು
ಈ ಹಿಂದೆ ಸಚಿವರಾದ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಹಿರಿಯ ಸಚಿವರು ಸಭೆ ನಡೆಸಿದ್ದರು. ಇತ್ತ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಸೀಟ್ ಗೆಲ್ಲಲು ಹೈಕಮಾಂಡ್ ಟಾಸ್ಕ್ ಕೊಟ್ಟಿದೆ. ಹೈಕಮಾಂಡ್ ಕೊಟ್ಟಿರುವ ಈ ಟಾಸ್ಕ್ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಲೆಕೆಡಿಸಿಕೊಂಡಿದ್ದಾರೆ. ಹೀಗಾಗಿ ಕೆಲ ಸಚಿವರನ್ನು ಕಣಕ್ಕೆ ಇಳಿಸುವ ಬಗ್ಗೆ ಗಂಭೀರ ಚಿಂತನೆಯನ್ನು ಡಿ.ಕೆ. ಶಿವಕುಮಾರ್ ನಡೆಸಿದ್ದಾರೆ ಎನ್ನಲಾಗಿದೆ.
ಕಾರಣ – 1: ಚುನಾವಣೆಯಿಂದ ತಪ್ಪಿಸಿಕೊಳ್ಳಲು ಸಭೆ?
ಕೋಲಾರ, ಚಾಮರಾಜನಗರ, ಬೆಳಗಾವಿ, ಬೆಂಗಳೂರು ಉತ್ತರ, ತುಮಕೂರು ಜಿಲ್ಲೆಯಲ್ಲಿ ಸಚಿವರನ್ನು ಕಣಕ್ಕೆ ಇಳಿಸುವ ಬಗ್ಗೆ ಡಿಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ. ಆದರೆ, ಹಿರಿಯ ಸಚಿವರಿಂದ ಚುನಾವಣಾ ಸ್ಪರ್ಧೆಗೆ ನಿರಾಸಕ್ತಿ ವ್ಯಕ್ತವಾಗಿದೆ. ಹೀಗಾಗಿ ಚುನಾವಣೆಯಿಂದ ತಪ್ಪಿಸಿಕೊಳ್ಳಲು ಪದೇ ಪದೆ ಸಭೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ನಿಗಮ ಮಂಡಳಿಯಲ್ಲಿ ತಮ್ಮ ಬೆಂಬಲಿಗರಿಗೆ ಮಣೆ ಹಾಕುತ್ತಿಲ್ಲ ಎಂಬ ಬೇಸರ ಹಲವು ಸಚಿವರಿಗೆ ಇದೆ. ಈ ಸಂಬಂಧ ಈಗಾಗಲೇ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಎಚ್. ಮುನಿಯಪ್ಪ ಅವರು ರಣದೀಪ್ ಸುರ್ಜೇವಾಲಾ ಅವರಿಗೆ ಪತ್ರ ಬರೆದಿದ್ದಾರೆ.
ಕಾರಣ – 2: ತಮ್ಮ ಬೆಂಬಲಿಗರಿಗೆ ಮಣೆ ಹಾಕುವಂತೆ ಪತ್ರ
ಸದ್ಯದ ಪರಿಸ್ಥಿತಿ ಬೇರೆಯೇ ಇದೆ. ಈಗ ಸುರ್ಜೇವಾಲಾ ಬಳಿ ಇರುವ ಪಟ್ಟಿಯಲ್ಲಿ ಕೇವಲ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ಹೆಸರು ಮಾತ್ರ ಇದೆ. ಅದರಲ್ಲೂ ಡಿಕೆಶಿ ಪಟ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಸಮಾಧಾನವನ್ನು ಸರಿಪಡಿಸಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸಲು ಅತೃಪ್ತ ಸಚಿವರು ಈಗ ಸಭೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕಾರಣ – 3: ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯತೆ ಎನ್ನುವ ಸಚಿವರು
ನಮಗೆ ಲೋಕಸಭಾ ಚುನಾವಣೆಗೂ ಮುನ್ನ ಮತ್ತೆ ಡಿಸಿಎಂ ಹುದ್ದೆ ಸೃಷ್ಟಿ ಮುನ್ನಲೆಗೆ ತರಲು ಈ ಸಚಿವರು ತೀರ್ಮಾನ ಮಾಡಿದ್ದಾರೆ. ಸಮುದಾಯಗಳನ್ನು ಓಲೈಸಿಕೊಳ್ಳಲು ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯ ಎಂಬ ಸಂದೇಶವನ್ನು ರವಾನೆ ಮಾಡಲು ಚಿಂತನೆ ನಡೆಸಿದ್ದಾರೆ. ಲಿಂಗಾಯತ, ದಲಿತ ಸಮುದಾಯಗಳಿಗೆ ಮಣೆ ಹಾಕಿದರೆ ಈ ಬಾರಿಯ ಚುನಾವಣೆಯಲ್ಲಿ ನಮಗೆ ಲಾಭ ಆಗುತ್ತೆ ಎಂದು ಹೇಳುತ್ತಿದ್ದಾರೆ. ಜತೆಗೆ ನಾವೆಲ್ಲ ಒಟ್ಟಾಗಿ ಇದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಲು ಸಚಿವರು ಪ್ಲ್ಯಾನ್ ಮಾಡಿದ್ದಾರೆ.
ಇದನ್ನೂ ಓದಿ: Bangalore Suburban Train: 2027ರ ಡಿಸೆಂಬರ್‌ಗೆ ಬೆಂಗಳೂರು ಉಪನಗರ ರೈಲು ಯೋಜನೆ ಪೂರ್ಣ
ಸರ್ಕಾರದಲ್ಲಿ ಕೇವಲ ಸಿಎಂ, ಡಿಸಿಎಂ ಅಷ್ಟೇ ಅಲ್ಲ ನಮ್ಮ ಪಾಲೂ ಇದೆ ಎಂ ಸಂದೇಶವನ್ನು ಈ ಸಭೆಗಳ ಮೂಲಕ ಕೆಲವು ಹಿರಿಯ ಸಚಿವರು ಹೈಕಮಾಂಡ್‌ಗೆ ರವಾನೆ ಮಾಡಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಮುಗಿಯುವವರೆಗೂ ನಿಗಮ ಮಂಡಳಿಗಳ ಪಟ್ಟಿ ಬಿಡುಗಡೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆಯ ಕ್ಷೇತ್ರದಲ್ಲಿ ಅಭ್ಯರ್ಥಿ ಪರ ಕೆಲಸ ಮಾಡಿದವರಿಗೆ ಮಣೆ ಹಾಕಲಾಗುವುದು ಎಂದು ಈಗ ಮೂಗಿಗೆ ತುಪ್ಪ ಸವರು ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಲು ಹೊರಟಿದೆ ಎಂದು ತಿಳಿದುಬಂದಿದೆ. ಈ ಮೂಲಕ ಕಾರ್ಯಕರ್ತರಿಗೆ ಲೋಕಸಭಾ ಚುನಾವಣೆ ಟಾರ್ಗೆಟ್ ಅನ್ನು ಕೊಡಲಾಗಿದೆ ಎಂದು ಹೇಳಲಾಗಿದೆ.