Site icon Vistara News

Congress Karnataka : ಹೈಕಮಾಂಡ್‌ ಸೂಚನೆ ಮೀರಿ ಮಾತನಾಡಿದವರಿಗೆಲ್ಲ ನೋಟಿಸ್: ಡಿ.ಕೆ. ಶಿವಕುಮಾರ್

DK Shivakumar

ಬೆಂಗಳೂರು: ಈಗಾಗಲೇ ಪಕ್ಷಕ್ಕೆ (Congress Karnataka) ಹಾಗೂ ಅಧಿಕಾರಕ್ಕೆ ಸಂಬಂಧಪಟ್ಟಂತೆ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್‌ (Congress High Command) ನಾಯಕರು ಹೇಳಿದ್ದಾರೆ. ಈಗ ಯಾರು ಯಾರು ಪಕ್ಷದ ಸೂಚನೆ ಮೀರಿ ಮಾತನಾಡಿದ್ದಾರೋ ಅವರೆಲ್ಲರಿಗೂ ನೋಟಿಸ್ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ (KPCC president and Deputy CM DK Shivakumar) ಅವರು ಎಚ್ಚರಿಕೆಯ ಸಂದೇಶ ನೀಡಿದರು.

ಕೆಲವು ಶಾಸಕರು ನಿಮ್ಮ ಪರವಾಗಿ ಲಾಬಿ ಮಾತುಗಳನ್ನಾಡುತ್ತಿದ್ದಾರೆ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಯಾರು ಯಾರು ಮಾತನಾಡಿದ್ದಾರೋ ಅವರೆಲ್ಲರಿಗೂ ನೋಟಿಸ್‌ ನೀಡಲಾಗುವುದು ಎಂದು ಉತ್ತರಿಸಿದರು.

ಇದನ್ನೂ ಓದಿ: Karnataka Drought : 324 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದ ನಂತರ, ಇಬ್ಬರೂ ಸೇರಿ ಪ್ರಮಾಣವಚನ ಸ್ವೀಕರಿಸಿದ್ದೇವೆ. ಆಗ ನಿಮಗೆಲ್ಲ ಹೇಳಿದ್ದೆವಾ ನಾವು? ಸುಮ್ಮನೆ ಯಾಕೆ ಇಲ್ಲದ ವಿಷಯವನ್ನು ನೀವೇ ಸೃಷ್ಟಿ ಮಾಡಿಕೊಳ್ಳುತ್ತೀರಾ? ಇದೆಲ್ಲ ಅವಶ್ಯಕತೆಯಿಲ್ಲ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಅಧಿಕಾರ ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, “ಯಾವುದೇ ಆಸ್ತಿಯಿಲ್ಲ ಹಂಚಿಕೊಳ್ಳೋಕೆ” ಎಂದು ಉತ್ತರಿಸಿದರು.

ಹೈಕಮಾಂಡ್ ವಾರ್ನಿಂಗ್ ಮೀರಿ ನಾಯಕರ ಮಾತು

ಇನ್ನು ಮುಂದೆ ಪಕ್ಷದ ಅಥವಾ ಸರ್ಕಾರದ ಬಗ್ಗೆ ಮಾತನಾಡುವುದಿದ್ದರೆ ಅದು ಸಿಎಂ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್‌ ಮಾತ್ರವೇ ಆಗಿರಬೇಕು. ಉಳಿದ ಯಾರೇ ಮಾತನಾಡಿದರೂ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ಹೈಕಮಾಂಡ್ ವಾರ್ನಿಂಗ್ ನೀಡಿತ್ತು. ಇದರ ನಡುವೆಯೂ ಶುಕ್ರವಾರ ಹಲವಾರು ನಾಯಕರು ಬಹಿರಂಗ ಹೇಳಿಕೆ ನೀಡಿದ್ದಾರೆ.

ನಾನೇ ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅವರೇ ಮೊದಲು ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯು ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಹೈಕಮಾಂಡ್ ನಿರ್ಧಾರ ಮಾಡಿದರೆ ನಾನು ಸಿಎಂ ಎಂದು ಪ್ರಿಯಾಂಕ್ ಖರ್ಗೆ ಇನ್ನೊಂದು ಕಡೆ ಹೇಳಿದ್ದಾರೆ. ನಮ್ಮ ನಾಯಕ ಸಿದ್ದರಾಮಯ್ಯ ಅವರೇ ಸಿಎಂ ಎಂದು ಸಚಿವ ಜಮೀರ್ ಅಹ್ಮದ್‌ ಖಾನ್‌ ಹೇಳಿದ್ದಾರೆ. ಸಿಎಂ ಯಾರು ಎಂದು ನಿರ್ಧಾರ ಮಾಡುವುದು ಮತ್ತು ಬದಲಿಸುವುದು ಹೈಕಮಾಂಡ್ ಎಂದು ಮಧು ಬಂಗಾರಪ್ಪ ಹೇಳಿದರು. ಐದು ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ. ಆದರೆ, ಅವರು ಬಿಟ್ಟರೆ ಡಾ. ಜಿ. ಪರಮೇಶ್ವರ್‌ ಸಿಎಂ ಆಗಬೇಕು ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Cauvery Dispute : ರಾಜ್ಯಕ್ಕೆ ಮತ್ತೆ ಕಾವೇರಿ ಜಲಾಘಾತ; ಇನ್ನು 20 ದಿನ ನಿರಂತರ ನೀರು ಹರಿಸಲು ಪ್ರಾಧಿಕಾರ ಸೂಚನೆ

ಪಕ್ಷದ ಆಂತರಿಕ ವಿಷಯದ ಬಗ್ಗೆ ಯಾರೂ ಮಾತನಾಡಬಾರದು. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರೆ, ನಮ್ಮ ನಾಯಕ ಸಿದ್ದರಾಮಯ್ಯ ಎಂದು ಹೇಳುವ ಮೂಲಕ ಸಂಸದ ಡಿ.ಕೆ. ಸುರೇಶ್ ಈ ಚರ್ಚೆಗೆ ತಿಲಾಂಜಲಿ ಇಡಲು ಮುಂದಾಗಿದ್ದರು. ಇನ್ನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌, ನನ್ನ ಕೆಲಸವನ್ನು ನಾನು ಮಾಡುತ್ತೇನೆ ಎಂದಷ್ಟೇ ಉತ್ತರಿಸಿದ್ದಾರೆ. ಇನ್ನು ಹೈಕಮಾಂಡ್‌ ಹೇಳಿಕೆಯನ್ನು ಮೀರಿ ಮಾತನಾಡಿದವರಿಗೆ ನೋಟಿಸ್ ನೀಡುವುದಾಗಿ ಹೇಳಿದ್ದಾರೆ.

Exit mobile version