ಬೆಂಗಳೂರು: ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಒಂದಲ್ಲ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇದೆ. ಒಂದನ್ನು ಬಗೆಹರಿಸುವ ಹೊತ್ತಿಗೆ ಮತ್ತೊಂದು ಶುರು ಎಂಬಂತೆ ಆಗುತ್ತಿದೆ. ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರ ನಡೆಗೆ ಹಿರಿಯ ಸಚಿವರು ಅಸಮಾಧಾನಗೊಂಡಿದ್ದಾರೆ. ಜತೆಗೆ ಹೈಕಮಾಂಡ್ (Congress High Command) ಬಗ್ಗೆಯೂ ತಮ್ಮ ಬೇಸರವನ್ನು ಹೊರಹಾಕುತ್ತಿದ್ದಾರೆ. ಯಾವುದೇ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಬೇಕಿದ್ದರೂ ಸಲಹೆಗಳನ್ನು ಸಹ ಕೇಳುತ್ತಿಲ್ಲ. ಅವರಿಬ್ಬರೇ ಫೈನಲ್ ಮಾಡುತ್ತಿದ್ದಾರೆ. ಅವರ ಮಾತುಗಳಿಗೆ ಹೈಕಮಾಂಡ್ ಕೂಡಾ ಮಣೆ ಹಾಕುತ್ತಿದೆ ಎಂಬ ಅಸಮಾಧಾನವನ್ನು ಹೊರಹಾಕಲಾಗುತ್ತಿದೆ. ಈಗ ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಸ್ವತಃ ಆಕ್ರೋಶ ಹೊರಹಾಕಿದ್ದಾರೆ.
ಹೈಕಮಾಂಡ್ ನಾಯಕರು ಸಿಎಂ, ಡಿಸಿಎಂ ಅಭಿಪ್ರಾಯ ಪರಿಗಣಿಸುತ್ತಿದ್ದಾರೆ. ಹಿರಿಯ ಸಚಿವರ ಅಭಿಪ್ರಾಯವೂ ಕೇಳುತ್ತಿಲ್ಲ. ನಿಗಮ – ಮಂಡಳಿ ಆಯ್ಕೆ ಸೇರಿದಂತೆ ಯಾವುದೇ ನಿರ್ಧಾರಗಳಲ್ಲಿ ಅಭಿಪ್ರಾಯ ಪಡೆಯುತ್ತಿಲ್ಲ. ಕಾನೂನಾತ್ಮಕ ವಿಚಾರಗಳಲ್ಲಿಯೂ ಅಭಿಪ್ರಾಯವನ್ನು ಪಡೆಯುತ್ತಿಲ್ಲ ಎಂಬ ಬೇಸರವನ್ನು ಹೊರಹಾಕುತ್ತಿದ್ದಾರೆ. ಈಗ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಅಸಮಾಧಾನದ ಸುಳಿವನ್ನು ನೀಡಿದ್ದಾರೆ.
ಇದನ್ನೂ ಓದಿ: CM Siddaramaiah : ಮೋದಿಗೆ ಸೋಲಿನ ಭಯ; ಅದಕ್ಕೇ ನಮ್ಮ ಸಾಧನೆಯ ಪ್ರಚಾರ ತಡೆದರು: ಸಿದ್ದರಾಮಯ್ಯ
ಹೈಕಮಾಂಡ್, ಸಿಎಂ, ಡಿಸಿಎಂ ಮೇಲೆ ಡಾ.ಜಿ. ಪರಮೇಶ್ವರ್ ಅಸಮಾಧಾನ
ನಿಗಮ – ಮಂಡಳಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಅವರ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ನೇರವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದಾರೆ.
ನನ್ನ ಅಭಿಪ್ರಾಯ ಕೇಳಿಲ್ಲ, ಕೇಳಿದ್ದರೆ ಒಳ್ಳೆಯದಾಗಿತ್ತು: ಪರಮೇಶ್ವರ್
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಾ. ಜಿ. ಪರಮೇಶ್ವರ್, ಕಳೆದ ವಾರ ನಮ್ಮ ಜನರಲ್ ಸೆಕ್ರೆಟರಿ ಬಂದಾಗ ಸಿಎಂ, ಅಧ್ಯಕ್ಷರನ್ನು ಕರೆದು ಮಾತನಾಡಿದ್ದಾರೆ. ಇಂದು ನಿಗಮ – ಮಂಡಳಿಗಳ ಪಟ್ಟಿಯನ್ನು ಅಂತಿಮಗೊಳಿಸಬಹುದು. ಅದರ ಬಗ್ಗೆ ಗೊತ್ತಿಲ್ಲ ನನಗೆ, ನಮ್ಮ ಜತೆಗೆ ಈ ಸಂಬಂಧ ಯಾವುದೇ ಚರ್ಚೆ ಮಾಡಿಲ್ಲ. ನನ್ನ ಅಭಿಪ್ರಾಯ ಕೇಳಿಲ್ಲ. ಕೇಳಿದ್ದರೆ ಒಳ್ಳೆಯದಾಗಿತ್ತು. ಯಾಕೆಂದರೆ ನಾನು ಸಹ ಎಂಟು ವರ್ಷಗಳ ಅಧ್ಯಕ್ಷನಾಗಿದ್ದೆ. ರಾಜಕೀಯವಾಗಿ ಈ ಸಂದರ್ಭದಲ್ಲಿ ಯಾರನ್ನು ಮಾಡಿದರೆ ಪಕ್ಷಕ್ಕೆ ಅನುಕೂಲ ಆಗುತ್ತಿತ್ತು. ಯಾವ ಹಿರಿಯರಿಗೆ ಸ್ಥಾನ ಕಲ್ಪಿಸಬೇಕು ಎಂಬುದನ್ನು ಹೇಳಬಹುದಿತ್ತು ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: Congress Karnataka : ಇಂದೇ ನಿಗಮ-ಮಂಡಳಿ ಪಟ್ಟಿ ಫೈನಲ್ ಮಾಡಲಿರುವ ಸುರ್ಜೇವಾಲ; ಯಾರಿಗೆ ಲಕ್?
ಕಾರ್ಯಕರ್ತರಿಗೂ ಅಧಿಕಾರ ಹಂಚಿಕೆಯಾದರೆ ಒಳ್ಳೆಯದು
ನಮ್ಮನ್ನೆಲ್ಲ ಕೇಳಿ ಮಾಡಿದರೆ ಚನ್ನಾಗಿ ಇರುತ್ತಿತ್ತು. ಹೈಕಮಾಂಡ್ ಅನುಮತಿಯಿಂದ ಅವರು ಮಾಡುತ್ತಿದ್ದಾರೆ. ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆಯಾದರೆ ಒಳ್ಳೆಯದು ಎಂದು ಡಾ. ಜಿ. ಪರಮೇಶ್ವರ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನವನ್ನು ನೇರವಾಗಿಯೇ ಹೊರ ಹಾಕಿದ್ದಾರೆ.