Site icon Vistara News

Congress Karnataka: ಅಪಪ್ರಚಾರ ಬಿಡಿ, ಸರ್ಕಾರದಲ್ಲಿ ದುಡ್ಡಿಲ್ಲ ಎನ್ನಬೇಡಿ: ಸ್ವಪಕ್ಷ ನಾಯಕರ ಮೇಲೆ ಸಿದ್ದರಾಮಯ್ಯ ಕಿಡಿ

Congress Karnataka strategy meeting

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಎಲ್ಲವೂ ಸರಿ ಇಲ್ಲದೇ ಇರುವುದು ಪಕ್ಷದ ಹೈಕಮಾಂಡ್‌ ಸೇರಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ತಲೆನೋವು ತಂದಿಟ್ಟಿದೆ. ಇನ್ನೇನು ಲೋಕಸಭಾ ಚುನಾವಣೆ (Lok Sabha Election 2024) ಬಂದೇ ಬಿಟ್ಟಿದೆ. ಈ ನಡುವೆ ಪಕ್ಷದ ಹಿರಿಯ ಶಾಸಕರು, ಸಚಿವರ ಹೇಳಿಕೆಗಳು, ಕಿತ್ತಾಟಗಳನ್ನು ಸರಿಪಡಿಸುವುದರಲ್ಲೇ ಕಾಲಹರಣವಾಗುತ್ತದೆ ಎಂಬ ಆತಂಕ ಕಾಡಿದೆ. ಇದರ ಜತೆಗೆ ಪಕ್ಷದ ಕಾರ್ಯಕರ್ತರು ಸೇರಿದಂತೆ ನಾಯಕರಿಗೆ ಚುರುಕು ಮುಟ್ಟಿಸಲು ಸಭೆಗಳನ್ನು ಆಯೋಜಿಸುತ್ತಾ ಬರಲಾಗುತ್ತಿದ್ದು, ಕೆಪಿಸಿಸಿ ಕಚೇರಿಯಲ್ಲಿ ಬುಧವಾರ (ಜ. 10) ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯನ್ನು ನಡೆಸಲಾಗಿದೆ. ಇಲ್ಲಿ ಪಕ್ಷದ ಅತೃಪ್ತ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ. ನಮ್ಮವರೇ ಅಪಪ್ರಚಾರ ಮಾಡುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಮ್ಮವರೇ ಅಪಪ್ರಚಾರ ಮಾಡುವುದನ್ನು ಬಿಡಬೇಕು. ಸರ್ಕಾರದಲ್ಲಿ ಹಣವಿಲ್ಲ ಎನ್ನುವ ಅಪಪ್ರಚಾರವನ್ನು ಕೂಡಲೇ ನಿಲ್ಲಿಸಿ. ಇಷ್ಟು ದೊಡ್ಡ ದೊಡ್ಡ ಕಾರ್ಯಕ್ರಮಗಳು ಹಣವಿಲ್ಲದೆ ನಡೆಯುತ್ತಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Congress Guarantee: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಮಾಸಿಕ 50 ಸಾವಿರ ರೂ.; ರಾಜ್ಯಾದ್ಯಂತ ಎಷ್ಟು ಅಧ್ಯಕ್ಷರು, ಉಪಾಧ್ಯಕ್ಷರು?

ಈ ಹಿಂದೆ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣ ಇಲ್ಲ ಎಂದು ಹಲವು ಸಚಿವರು, ಶಾಸಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಗೆ ಹಾಕಿದ್ದರು. ಇದು ಕಾಂಗ್ರೆಸ್‌ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಜತೆಗೆ ಪ್ರತಿಪಕ್ಷಗಳು ಸಹ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಗೆ ಇದು ಪೆಟ್ಟು ನೀಡಲಿದೆ ಎಂಬ ಆತಂಕ ಕಾಂಗ್ರೆಸ್‌ ನಾಯಕರಲ್ಲಿ ಇತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂತಹ ಹೇಳಿಕೆಗಳಿಗೆ ಬ್ರೇಕ್‌ ಹಾಕಲು ಮುಂದಾಗಿದ್ದಾರೆ. ನಮ್ಮವರೇ ಅಪಪ್ರಚಾರವನ್ನು ಮಾಡಬೇಡಿ ಎಂದು ಕರೆ ನೀಡಿದ್ದಾರೆ. ಅದರ ಬದಲಿಗೆ ಬಿಜೆಪಿಯವರು ಮಾಡುವ ಅಪ ಪ್ರಚಾರವನ್ನು ಮೆಟ್ಟಿ ನಿಲ್ಲಿ ಎಂದು ಕರೆ ನೀಡಿದ್ದಾರೆ.

ಮಾರ್ಚ್ ಒಳಗೆ ಎಲ್ಲಾ ಶಾಸಕರಿಗೆ 25 ಕೋಟಿ ರೂ.ಗಳ ಕೆಲಸ

ಮಾರ್ಚ್ ಒಳಗೆ ಎಲ್ಲ ಶಾಸಕರಿಗೆ 25 ಕೋಟಿ ರೂ.ಗಳ ಕೆಲಸ ನೀಡಲು ಸೂಚಿಸಿದ್ದೇನೆ. ನಾವು ಸತ್ಯ ಹೇಳಿ ರಾಜಕೀಯ ಲಾಭವನ್ನು ಪಡೆಯುವ ಪ್ರಯತ್ನ ಮಾಡಬೇಕು. ಗ್ಯಾರಂಟಿಗಳನ್ನು ಅಪಹಾಸ್ಯ, ಅವಹೇಳನ ಮಾಡಿದವರೇ ಈಗ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಎಂದು ಶುರು ಮಾಡಿದ್ದಾರೆ. ನಾವು ಜನರಿಗೆ ಸತ್ಯವನ್ನು ಹೇಳಬೇಕು. ಭಾರತದ ಇತಿಹಾಸದಲ್ಲಿ ಯಾವ ಸರ್ಕಾರವೂ ಈ ರೀತಿಯ ಗ್ಯಾರಂಟಿಗಳನ್ನು ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ. ಇದರಿಂದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಲು ಸಾಧ್ಯವಾಗುತ್ತದೆ. ದಲಿತರು , ಹಿಂದುಳಿದವರು , ಮಹಿಳೆಯರಿಗೆ ಅನುಕೂಲವಾಗಲಿದೆ. ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಮೇವಿಗೆ, ಕುಡಿವ ನೀರಿಗೆ ತೊಂದರೆ ಆಗಿಲ್ಲ

ಬರಗಾಲ ಪೀಡಿತವಾಗಿದ್ದರೂ ಮೇವಿಗೆ, ಕುಡಿಯುವ ನೀರಿಗೆ ತೊಂದರೆಯಾಗಿಲ್ಲ. ಗ್ಯಾರಂಟಿ ಯೋಜನೆ ಜಾರಿಯಾಗಿರದಿದ್ದರೆ ಬರಗಾಲದ ಹಾಹಾಕಾರ ಎದ್ದಿರುತಿತ್ತು. ರಾಜ್ಯದ 223 ತಾಲೂಕುಗಳು ಬರಗಾಲ ಪೀಡಿತವಾಗಿದ್ದರೂ ಮೇವಿಗೆ, ಕುಡಿಯುವ ನೀರಿಗೆ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತೊಂದರೆಯಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರೈತರಿಗೆ ಇನ್ ಪುಟ್ ಸಬ್ಸಿಡಿ ಪರಿಹಾರ

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ, ಈವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ಕರೆದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ಅಮಿತ್ ಷಾ ಅವರನ್ನು ಭೇಟಿ ಮಾಡಿದಾಗ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರ ಕೊಡುವವರೆಗೆ ಕಾಯಬಾರದು ಎಂದು 2000 ರೂ ವರೆಗೆ ರೈತರಿಗೆ ಇನ್ ಪುಟ್ ಸಬ್ಸಿಡಿ ಪರಿಹಾರ ಪ್ರಾರಂಭಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಬಿಜೆಪಿಯವರಿಗೆ ಮರ್ಯಾದೆ ಇದೆಯಾ?

ಬಿಜೆಪಿಯವರು ಬರ ಪರಿಹಾರ ಕೊಟ್ಟಿಲ್ಲ ಎಂದು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಇವರಿಗೆ ಮರ್ಯಾದೆ ಇದೆಯೇ? 25 ಸಂಸದರು ರಾಜ್ಯದಿಂದ ಇದ್ದರೂ ಒಂದು ದಿನವೂ ಈ ಬಗ್ಗೆ ಮಾತನಾಡಿಲ್ಲ. 15ನೇ ಹಣಕಾಸಿನ ಆಯೋಗವು 14-15 ನೇ ಸಾಲಿಗೆ 1.07 % ಹಣ ಕಡಿಮೆ ಮಾಡಿದರು. 1 ಲಕ್ಷ 66 ಸಾವಿರ ಕೋಟಿ ರೂ.ಗಳು ನಮಗೆ ಬರಬೇಕಿತ್ತು. 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5495 ಕೋಟಿ ರೂ.ಗಳನ್ನು ಕೊಡುವುದಾಗಿ ಹೇಳಿ ಕೊಟ್ಟಿಲ್ಲ. ಕರ್ನಾಟಕದ ಬಗ್ಗೆ ಇವರಿಗೆ ಕಾಳಜಿ ಇದೆಯೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

2018-19 ರಲ್ಲಿ ಕೇಂದ್ರದ ಬಜೆಟ್ ಗಾತ್ರ 23 ಲಕ್ಷ ಕೋಟಿ ರೂ.ಗಳಿತ್ತು. 35 ಸಾವಿರ ಕೋಟಿ ರೂಪಾಯಿ ನಮ್ಮ ಪಾಲು ಇತ್ತು. ಈಗ 45 ಲಕ್ಷ ಕೋಟಿ ರೂ.ಗಳಿದ್ದರೂ ನಮಗೆ ಬರುವುದು ಕೇವಲ 37 ಸಾವಿರ ಕೋಟಿ ರೂಪಾಯಿ ಆಗಿದೆ. ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ. ಅವರು ಕೊಡುವುದು ನಮ್ಮ ತೆರಿಗೆಯ ಹಣವನ್ನೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಗ್ಯಾರಂಟಿಯಿಂದ ಆರ್ಥಿಕ ಬಲ

ಸೆಸ್, ಸರ್ಚಾರ್ಜ್‌ನಲ್ಲಿ ನಮಗೆ ಪಾಲಿಲ್ಲ. 4 ಲಕ್ಷ ಕೋಟಿ ರೂ.ಗಳನ್ನು ನಮ್ಮ ರಾಜ್ಯದಿಂದ ಸಂಗ್ರಹ ಮಾಡುತ್ತಾರೆ. 52 ಸಾವಿರ ಕೋಟಿ ರೂ.ಗಳನ್ನು ಮಾತ್ರ ಕೊಡುತ್ತಾರೆ. ಎಲ್ಲ ಶಾಸಕರು, ಸಂಸದರು ಇದನ್ನು ಹೇಳಬೇಕು. ಈ 10 ವರ್ಷಗಳಲ್ಲಿ ನಮಗೆ ದೊಡ್ಡ ಅನ್ಯಾಯವಾಗಿದೆ. ಜಿಎಸ್‌ಟಿಯಿಂದಾಗುವ ನಷ್ಟವನ್ನು ಭರಿಸುವುದಾಗಿ ಹೇಳಿದ್ದರೂ, ನಮಗೆ ಹಣವನ್ನು ಕೊಟ್ಟಿಲ್ಲ. ರಾಜ್ಯದ ಸಂಸದರೂ ಸುಮ್ಮನಿದ್ದಾರೆ. ಆರ್ಥಿಕವಾಗಿ ಸ್ವಲ್ಪ ಭಾರವಾದರೂ ಗ್ಯಾರಂಟಿಗಳು ಜನರಿಗೆ ಮುಂದಿನ ದಿನಗಳಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: Congress Karnataka: ಲೋಕಸಭೆಗೆ ಕಾಂಗ್ರೆಸ್‌ ರಣತಂತ್ರ; ಜಿಲ್ಲಾಧ್ಯಕ್ಷರಿಗೆ ಸಿಎಂ, ಡಿಸಿಎಂ, ಸುರ್ಜೇವಾಲ ಪಾಠ

ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯಗಳ ಬಗ್ಗೆ ಶಾಸಕರಿಗೆ ಪಟ್ಟಿ ಕಳಿಸಿಕೊಟ್ಟು ಇದನ್ನು ಜನರಿಗೆ ತಲುಪಿಸಬೇಕು. ಜನರಿಗೆ ನಮ್ಮ ಗ್ಯಾರಂಟಿಗಳನ್ನು ತಲುಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Exit mobile version