Site icon Vistara News

Congress Karnataka: ಈ ನಿಗಮ – ಮಂಡಳಿ ಅವಧಿ ಕೇವಲ 2 ವರ್ಷ; ಸಿಎಂ, ಡಿಸಿಎಂ ಮಾಸ್ಟರ್‌ ಪ್ಲ್ಯಾನ್!

CM Siddaramaiah and DK Shivakumar

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ (Congress Karnataka) ಸರ್ಕಾರ ಬಂದು 9 ತಿಂಗಳ ಬಳಿಕ ಕೊನೆಗೂ ನಿಗಮ – ಮಂಡಳಿಗಳ ಪಟ್ಟಿಯನ್ನು (corporation board list) ಬಿಡುಗಡೆ ಮಾಡಲಾಗಿದೆ. ಮೊದಲ ಪಟ್ಟಿಯಲ್ಲಿ 36 ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಬಂಪರ್‌ ಗಿಫ್ಟ್‌ ನೀಡಲಾಗಿದೆ. ಆದರೆ, ಇವರಿಗೆ ಅಧಿಕಾರದ ಅವಕಾಶ ಇರುವುದು ಕೇವಲ 2 ವರ್ಷ ಮಾತ್ರ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

ಹೌದು. ಈಗಾಗಲೇ ನಿಗಮ – ಮಂಡಳಿ ಗಾದಿಗಾಗಿ ಕಾಂಗ್ರೆಸ್‌ನಲ್ಲಿ ಸಾಕಷ್ಟು ಪೈಪೋಟಿ ಇತ್ತು. ಸಚಿವ ಸ್ಥಾನದಿಂದ ವಂಚಿತರಾದವರಿಗೆ ಇಲ್ಲಿ ಸ್ಥಾನ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಹಿರಿಯರಾದ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಅನೇಕರು ಗರಂ ಆಗಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರನ್ನೂ ಸಮಾಧಾನ ಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಿಗಮ-ಮಂಡಳಿ ಅಸ್ತ್ರವನ್ನು ಬಿಟ್ಟಿತ್ತು. ಆದರೆ, ಇಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವಿನ ಭಿನ್ನಾಭಿಪ್ರಾಯದಿಂದ ಪಟ್ಟಿ ಬಿಡುಗಡೆ ವಿಳಂಬವಾಗಿತ್ತು. ಈ ಸಂಬಂಧ ಕಾಂಗ್ರೆಸ್‌ ಹೈಕಮಾಂಡ್‌ ನಾಲ್ಕೈದು ಬಾರಿ ಸಭೆ ನಡೆಸಿ ಒಮ್ಮತ ಮೂಡಿಸಲು ಪ್ರಯತ್ನ ಮಾಡಿತ್ತು. ಕೊನೆಗೂ ಗಣರಾಜ್ಯೋತ್ಸವ ದಿನವಾದ ಶುಕ್ರವಾರ (ಜ.26) ನಿಗಮ ಮಂಡಳಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

2 ವರ್ಷದ ಅವಧಿ ಏಕೆ?

ಈಗ ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ಅಧಿಕಾರದ ಅವಧಿ 2 ವರ್ಷ ಎಂದು ಉಲ್ಲೇಖ ಮಾಡಲಾಗಿದೆ. ಏಕೆಂದರೆ ಕಾಂಗ್ರೆಸ್‌ನಲ್ಲಿ ಇನ್ನೂ ಅನೇಕ ಆಕಾಂಕ್ಷಿಗಳು ಇದ್ದಾರೆ. ಅವರೆಲ್ಲರಿಗೂ ಈಗ 2 ವರ್ಷದ ಬಳಿಕ ಅವಕಾಶವನ್ನು ನೀಡಲಾಗುವುದು ಎಂದು ಭರವಸೆಯನ್ನು ನೀಡಲಾಗಿದೆ. ಅದಕ್ಕಾಗಿಯೇ ಈಗ ಹೊರಡಿಸಿರುವ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ಆಕಾಂಕ್ಷಿತರೆಲ್ಲರೂ ಈಗ 2 ವರ್ಷದ ನಂತರ ತಮಗೆ ಸಿಗಬಹುದು ಎಂದು ಆಸೆಗಣ್ಣಿನಿಂದ ಕಾಯುವಂತೆ ಮಾಡಲಾಗಿದೆ.

ಬಿಡಿಎ ಅಧ್ಯಕ್ಷರಾಗಿ ಹ್ಯಾರಿಸ್‌ ನೇಮಕ

ಪ್ರಮುಖ ಮಂಡಳಿಯಾದ ಬಿಡಿಎ ಈಗ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಅತ್ಯಾಪ್ತ ಶಾಸಕನ ಪಾಲಾಗಿದೆ. ಬಿಡಿಎ ಅಧ್ಯಕ್ಷ (BDA President) ಸ್ಥಾನ ಪಡೆಯುವಲ್ಲಿ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ (Shantinagar MLA NA Harris) ಕೊನೆಗೂ ಸಫಲರಾಗಿದ್ದಾರೆ. ಅಲ್ಲದೆ, ಉಪ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ (DCM Political Secretary) ಎಂದು ಹೊಸ ಹುದ್ದೆಯೊಂದನ್ನು ಸೃಷ್ಟಿ ಮಾಡಲಾಗಿದೆ.

ಉಪ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ ಹಾನಗಲ್‌ ಶಾಸಕ ಶ್ರೀನಿವಾಸ್‌ ಮಾನೆ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಪ್ರಮುಖಗಳಾದ ಗೃಹ ಮಂಡಳಿಗೆ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಗುಬ್ಬಿ ಶಾಸಕ ಎಸ್‌.ಆರ್.‌ ಶ್ರೀನಿವಾಸ್‌ ಅವರನ್ನು ನೇಮಕ ಮಾಡಲಾಗಿದೆ.

ನಿಗಮ ಮಂಡಳಿಗೆ ಆಯ್ಕೆಯಾದ 32 ಶಾಸಕರ ಪಟ್ಟಿ ಇಲ್ಲಿದೆ

ಡಿ.ಕೆ. ಶಿವಕುಮಾರ್‌ ಆಪ್ತನಿಗೆ ಸಿಕ್ಕಿತು ಬಿಡಿಎ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ ನಡೆದಿತ್ತು. ಸಚಿವ ಸ್ಥಾನದಿಂದ ವಂಚಿತನಾಗಿದ್ದ ಪ್ರಿಯಾಕೃಷ್ಣ ಅವರು ತಮಗೇ ಈ ಹುದ್ದೆಯನ್ನು ಕೊಡಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಅತ್ಯಾಪ್ತ ಎನ್.ಎ. ಹ್ಯಾರಿಸ್ ಅವರಿಗೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಡಿಕೆಶಿ ಮೇಲುಗೈ ಸಾಧಿಸಿದ್ದಾರೆ.

ಇದನ್ನೂ ಓದಿ: Self employment: ಸ್ವಯಂ ಉದ್ಯೋಗಿ ಬ್ರಾಹ್ಮಣರಿಗೆ 5 ಲಕ್ಷ ರೂ.ವರೆಗೆ ಸಹಾಯಧನ: ಕೃಷ್ಣ ಬೈರೇಗೌಡ

ಜೆಡಿಎಸ್‌ನಿಂದ ಬಂದವರಿಗೂ ಮಣೆ

ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡವರನ್ನೂ ಕಾಂಗ್ರೆಸ್‌ ಕೈಹಿಡಿದಿದೆ. ಅಲ್ಲಿಂದ ಬಂದು ಶಾಸಕರಾಗಿ ಆಯ್ಕೆಯಾದವರಿಗೂ ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಗುಬ್ಬಿ ಶಾಸಕ ಎಸ್‌.ಆರ್.‌ ಶ್ರೀನಿವಾಸ್‌ ಅವರನ್ನು ನೇಮಕ ಮಾಡಲಾಗಿದ್ದರೆ, ಶಿವಲಿಂಗೇಗೌಡರಿಗೆ ಗೃಹ ಮಂಡಳಿ ಜವಾಬ್ದಾರಿಯನ್ನು ನೀಡಲಾಗಿದೆ.

ಮೊದಲೇ ಅಸಮಾಧಾನಿತರ ಭೇಟಿ ಮಾಡಿದ್ದ ಡಿಕೆಶಿ

ಪಟ್ಟಿ ಬಿಡುಗಡೆಗೂ ಮುನ್ನ ಅಸಮಾಧಾನಿತ ಶಾಸಕರನ್ನು ಭೇಟಿ ಮಾಡಿರುವ ಡಿ.ಕೆ. ಶಿವಕುಮಾರ್‌ ಅವರನ್ನು ಸಮಾಧಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೊದಲ ಅವಧಿ ಕೇವಲ ಎರಡು ವರ್ಷ ಎಂದು ಆದೇಶ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಈಗ ಸಿಗದ ಶಾಸಕರಿಗೆ ಎರಡು ವರ್ಷದ ಬಳಿಕ ಪರಿಗಣಿಸುವ ಭರವಸೆಯನ್ನು ನೀಡಿದ್ದಾರೆ.

ಎರಡು ಮೂರು ಬಾರಿ ಗೆದ್ದ ಶಾಸಕರಿಗೆ ಮಾತ್ರ ಮಣೆ

ಮೊದಲೇ ಹೇಳಿದಂತೆ ಮೊದಲ ಬಾರಿ ಗೆದ್ದ ಶಾಸಕರಿಗೆ ಈ ಬಾರಿ ಅವಕಾಶ ನೀಡಲಾಗಿಲ್ಲ. ಎರಡು, ಮೂರು ಬಾರಿ ಗೆದ್ದ ಶಾಸಕರಿಗೆ ಮಾತ್ರ ಮಣೆ ಹಾಕಲಾಗಿದೆ. ಮೊದಲ ಬಾರಿ ಗೆದ್ದ ಶಾಸಕರು ಒತ್ತಡ ಹಾಕಿದರೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಸೊಪ್ಪು ಹಾಕಿಲ್ಲ.

ಇದನ್ನೂ ಓದಿ: Jagadish Shettar: ಕಾಂಗ್ರೆಸ್ ಸಮುದ್ರವಿದ್ದಂತೆ, ಯಾರೇ ಹೋದರೂ ನಷ್ಟವಾಗದು: ಶೆಟ್ಟರ್‌ಗೆ ಡಿಕೆಶಿ ತಿರುಗೇಟು

ಅಪ್ಪ ಮಂತ್ರಿ, ಮಗಳಿಗೆ ನಿಗಮ ಮಂಡಳಿ ಭಾಗ್ಯ!

ಒಂದೇ ಸರ್ಕಾರದಲ್ಲಿ ಅಪ್ಪ ಮಂತ್ರಿಯಾಗಿದ್ದರೆ, ಮಗಳಿಗೆ ನಿಗಮ ಮಂಡಳಿ ಭಾಗ್ಯ ದೊರೆತಿದೆ. ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಮಗಳು ರೂಪಕಲಾಗೆ ಅವರಿಗೆ ಸ್ಥಾನ ಕೊಡಲಾಗಿದೆ. ಕರ್ನಾಟಕ ಕರಕುಶಲ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ರೂಪಕಲಾ ಅವರನ್ನು ಆಯ್ಕೆ ಮಾಡಲಾಗಿದೆ.

Exit mobile version