ಬೆಂಗಳೂರು: ವವಿಧ ಪಕ್ಷಗಳಿಂದ ಸಾಗಿಬಂದು ಇದೀಗ ಬಿಜೆಪಿಯಲ್ಲಿರುವ ಸಚಿವ ವಿ. ಸೋಮಣ್ಣ(V. Somanna) ಕಾಂಗ್ರೆಸ್ ಸೇರುತ್ತಾರೆಯೋ ಇಲ್ಲವೊ ಎಂಬ ಚರ್ಚೆ ನಡೆದಿರುವಾಗಲೆ, ಅವರು ಕಾಂಗ್ರೆಸ್ ಸೇರ್ಪಡೆಯಾಗಲು ಕಾಂಗ್ರೆಸ್‌ನ ವೀರಶೈವ ಲಿಂಗಾಯತ ಮುಖಂಡರು ವಿರೋಧಿಸಿದ್ದಾರೆ.
ಯಾವುದೇ ಕಾರಣಕ್ಕೂ ಸೋಮಣ್ಣರನ್ನ ಸೇರಿಸಿಕೊಳ್ಳಬಾರದೆಂದು ಒತ್ತಾಯ ಮಾಡಿದ್ದಾರೆ. ಎಐಸಿಸಿ ನಾಯಕರ ಮುಂದೆಯೂ ವಿರೋಧ ವ್ಯಕ್ತಪಡಿಸಲಾಗಿದ್ದು, ಎಂತಹ ಸಂದರ್ಭದಲ್ಲೂ ನಾವು ಕಾಂಗ್ರೆಸ್ ತೊರೆದಿಲ್ಲ. ಅಧಿಕಾರದ ದಾಹದಿಂದ ಕಾಂಗ್ರೆಸ್ ತೊರೆದಿಲ್ಲ. ಈಗ ತಮ್ಮ ಸ್ವಾರ್ಥಕ್ಕಾಗಿ ಪಕ್ಷಕ್ಕೆ ಸೇರಲು ಸೋಮಣ್ಣ ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಶಾಮನೂರು ಶಿವಶಂಕರಪ್ಪ, ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಹಲ ನಾಯಕರು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕಾಂಗ್ರೆಸ್ ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯುತ್ತಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಒಂದು ವಾರದ ಒಳಗೆ 75% ಅಭ್ಯರ್ಥಿಗಳ ಆಯ್ಕೆ ಆಗುತ್ತೆ. ಎಲ್ಲ ಜಾತಿ, ನಿಷ್ಠಾವಂತರಿಗೆ ಟಿಕೆಟ್ ಸಿಗುತ್ತೆ. ಪಾರದರ್ಶಕವಾಗಿ ಟಿಕೆಟ್ ಹಂಚಿಕೆ ನಡೆಯುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಿನ ಟಿಕೆಟ್ ಸಿಗಬೇಕು ಎಂದು ಸಮುದಾಯದ ಬೇಡಿಕೆ ಇದೆ.
ಬೆಂಗಳೂರು, ಹಾಸನ ಸೇರಿದಂತೆ ಹಲವು ಕಡೆ ಬೇಡಿಕೆ ಇದೆ. ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆನ್ನಲುಬಾಗಿ ನಿಂತಿದೆ. ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುತ್ತೆ ಎಂದರು.
ಸಚಿವ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಸೋಮಣ್ಣ ಮನೆ ಕಟ್ಟಿಸುತ್ತೇನೆ ಅಂತ ಹೇಳಿದ್ರು. ಮನೆ ಕಟ್ಟಲು ಹೋದ ಜನರಿಗೆ ಸೋಮಣ್ಣ ತೊಂದ್ರೆ, ಅನ್ಯಾಯ ಕಿರುಕುಳ ಕೊಟ್ಟಿದ್ದಾರೆ. ಇಂತವರು ಪಕ್ಷ ಹೇಗೆ ಬರ್ತಾರೆ? ನಮಗೆ ಅವರ ಸೇರ್ಪಡೆ ಸಮಾಧಾನ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಸಚಿವರಾಗಿ ಸೋಮಣ್ಣ ವಿಫಲರಾಗಿದ್ದಾರೆ. ಅವರು ಕಾಂಗ್ರೆಸ್ಸಿಗೆ ಬಂದ್ರೆ ಏನೂ ಲಾಭ ಇಲ್ಲ. ರಾಜ್ಯ ನಾಯಕರು ಯಾಕೆ ತೀರ್ಮಾನ ಮಾಡಿದ್ರು ಅಂತ ಗೊತ್ತಿಲ್ಲ. ಸೋಮಣ್ಣನಿಂದ ಪಕ್ಷಕ್ಕೆ ಉಪಯೋಗ ಇಲ್ಲ. ಇವರಿಂದ ನಮಗೆ ಯಾವ ರೀತಿ ಪ್ರಯೋಜನವೂ ಇಲ್ಲ ಎಂದರು. ನಮ್ಮ ಯಾರ ಅಭಿಪ್ರಾಯವನ್ನೂ ಕೇಳಿಲ್ಲ ಎಂದ ಖಂಡ್ರೆ, ಆದರೂ ನಮ್ಮ ಅಸಮಾಧಾನವನ್ನ ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ಅಖಲಿ ಭಾರತ ವೀರಶೈವ ಲಿಂಗಾಯತ ಸಭಾ ಕಾರ್ಯದರ್ಶಿ ರೇಣುಕಾಪ್ರಸನ್ನ ಪ್ರತಿಕ್ರಿಯಿಸಿ, ಈಶ್ವರ ಖಂಡ್ರೆ ಅವರಿಗೆ ಸ್ಪೀಕರ್ ಅಗೌರವ ತೋರಿದ್ದರು. ಇದನ್ನು ಖಂಡಿಸಿ, ಖಂಡನ ಪತ್ರ ಬರೆಯಲಾಗಿತ್ತು. ಹೋರಾಟ ಸಹ ಮಾಡಲಾಗಿತ್ತು. ಇದಾದ ಮೇಲೆ ಸ್ಪೀಕರ್ ಕಾಗೇರಿ ವಿಷಾದ ವ್ಯಕ್ತಪಡಿಸಿದರು. ಅಷ್ಟರಲ್ಲಿ ನಮ್ಮ ಕೈ ಮೀರಿ ಹೋಗಿತ್ತು.
ಆದ್ದರಿಂದ ತಾಲೂಕ, ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಈ ವಿಚಾರಕ್ಕೆ ವಿ. ಸೋಮಣ್ಣ ಕರೆ ಮಾಡಿ, ಏಕಾಏಕಿ ಬಾಯಿಗೆ ಬಂದಂತೆ ಬೈದರು. ನೀನು ಯಾರು ಹೋರಾಟ ಮಾಡಲು ಎಂದು ಪ್ರಶ್ನೆ ಮಾಡಿದ್ರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು, ಇದನ್ನು ಅಧ್ಯಕ್ಷರು, ಖಂಡ್ರೆ ಗಮನಕ್ಕೆ ತರಲಾಗಿತ್ತು. ಇದನ್ನ ಬೆಳೆಸೋದು ಬೇಡ ಎಂದು ಸೂಚನೆ ಕೊಟ್ಟ ಬಳಿಕ ಸುಮ್ಮನೆ ಆಗಿದ್ದೆ. ಅವರು ಮಹಾಸಭಾ ಬಗ್ಗೆ ಮಾತಾಡಿದ್ದಾರೆ. ಅದರ ದಾಖಲೆ ನಮ್ಮ ಬಳಿಯಿದೆ.
ಸೋಮಣ್ಣ ಸಹ ನಮ್ಮ ಸಮಾಜದವರೇ ಎಂದು ದಾಖಲೆ ಬಿಟ್ಟಿಲ್ಲ ಅಷ್ಟೆ. ನಮಗೆ ಸೂಚನೆ ಬರಲಿಲ್ಲ ಎಂದ್ರೆ, ಅವತ್ತೆ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡುತ್ತಿದ್ದೆವು. ಈ ಎಲ್ಲಾ ವಿಚಾರಗಳು ಅಧ್ಯಕ್ಷರ ಗಮನಕ್ಕೆ ಇದೆ. ಅವರು ಮುಂದುವರೆದ್ರೆ ಎನು ಆಗಬೇಕು, ಆಗುತ್ತದೆ ಎಂದರು.
ಇದನ್ನೂ ಓದಿ: V. Somanna: ಪಕ್ಷ ಬಿಡಲು ಮುಂದಾಗಿರುವ ಸಚಿವ ವಿ. ಸೋಮಣ್ಣ ಜತೆ ಮಾತುಕತೆ: ಬಿ.ಎಸ್. ಯಡಿಯೂರಪ್ಪ ಹೇಳಿಕೆ
ಯಾವುದೇ ಕಾರಣಕ್ಕೂ ಸೋಮಣ್ಣರನ್ನ ಸೇರಿಸಿಕೊಳ್ಳಬಾರದೆಂದು ವೀರಶೈವ ಲಿಂಗಾಯತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸುತ್ತಿದ್ದಾರೆ. ಸೋಮಣ್ಣ ಬಂದ್ರೆ ಗೆಲ್ತಾರೆ, ನಮಗ ಗೆಲ್ಲುವೊಂದೆ ಮುಖ್ಯ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ ಅವರನ್ನು ಕಾಂಗ್ರೆಸ್‌ಗೆ ಕರೆತುವುದಕ್ಕೆ ಮಹಾಸಭಾ ಸಹ ವಿರೋಧ ವ್ಯಕ್ತಪಡಿಸಿದ್ದು, ಅವರಿಂದ ಪಕ್ಷಕ್ಕಾಗಲಿ, ಸಮುದಾಯಕ್ಕಾಗಲಿ ಯಾವುದೇ ಲಾಭ ಇಲ್ಲ. ಈಗ ಪುತ್ರನ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಅಲ್ಲಿ ಇದ್ದಾಗಲೂ ಅಧಿಕಾರ ಅನುಭವಿಸಿದ್ರು. ಅಲ್ಲಿ ಹೋಗಿ ಅಧಿಕಾರ ಅನುಭವಿಸುತ್ತಾರೆ. ಹಾಗಾಗಿ ಸೇರಿಸಿಕೊಳ್ಳುವುದು ಬೇಡ, ರಾಜಾಜಿನಗರದಿಂದ ಪುಟ್ಟರಾಜು ಅವರಿಗೆ ಟಿಕೆಟ್ ಕೊಡೋಣ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ.