Site icon Vistara News

Operation Hasta : ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಎಸ್‌.ಟಿ. ಸೋಮಶೇಖರ್‌ಗೆ ಕಾಂಗ್ರೆಸ್‌ ಆಫರ್!

ST Somashekhar

ಬೆಂಗಳೂರು: ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ (Yeshwanthpur MLA ST Somashekar) ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವಂತೆ ಆಫರ್‌ ಬಂದಿದೆ. ಆದರೆ, ಅವರು ಅದನ್ನು ತಿರಸ್ಕಾರ ಮಾಡಿದ್ದಾರೆ ಎಂದು ಮಾಜಿ ಸಚಿವ ಆರ್.‌ ಅಶೋಕ್‌ ( Former minister R. Ashok) ಅವರು ಆಪರೇಷನ್‌ ಹಸ್ತದ (Operation Hasta) ಬಗ್ಗೆ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಮಾಜಿ ಸಚಿವ, ಶಾಸಕ ಎಸ್.ಟಿ. ಸೋಮಶೇಖರ್ ಅವರು ಮಾಜಿ ಸಚಿವ ಆರ್. ಅಶೋಕ್ ಅವರನ್ನು ಗುರುವಾರ ಜಯನಗರದ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.‌ ಅಶೋಕ್‌, ಎಸ್.ಟಿ. ಸೋಮಶೇಖರ್ ಹಾಗೂ ನಾನು ಒಂದು ಗಂಟೆ ಚರ್ಚೆ ಮಾಡಿದ್ದೇವೆ. ಯಶವಂತಪುರ ಕ್ಷೇತ್ರದಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ಅವರಿಗೆ ತೊಂದರೆ ಕೊಡುತ್ತಿದ್ದಾರೆ. ಅವರೇ ಕಾರ್ಪೊರೇಷನ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ. ಕಾರ್ಪೊರೇಷನ್ ಟಿಕೆಟ್ ಸಿಗುತ್ತದೆ ಎಂದು ಬೆಂಬಲಿಗರು ಹೋಗಿದ್ದಾರೆ. ನಾನು ಹೋಗುವುದಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ. ತೊಂದರೆ ಕೊಡುತ್ತಿರುವ ಒಂದಷ್ಟು ಜನರ ಹೆಸರು ಹೇಳಿದ್ದಾರೆ. ಅವರು ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಎಸ್‌.ಟಿ. ಸೋಮಶೇಖರ್‌ ಅವರೊಂದಿಗೆ ಸವಿಸ್ತಾರವಾಗಿ ಮಾತನಾಡಿದ್ದೇನೆ. ಮತದಾರರ ಮೇಲೆ ಏನು ಪರಿಣಾಮ ಎಂದು ತಿಳಿಸಿದ್ದೇನೆ. ಅವರು ಪಕ್ಷ ಬಿಡುವುದಿಲ್ಲ ಎಂದರೂ, ಸ್ಥಳೀಯ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಒಂದು ರೀತಿ ಸುಂಟರಗಾಳಿ ಎದ್ದಿದೆ, ಇದು ನಮಗೆ ಎಚ್ಚರಿಕೆ ಗಂಟೆ. ಇದೆಲ್ಲವನ್ನೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಜಿ.ವಿ. ರಾಜೇಶ್ ಅವರ ಗಮನಕ್ಕೆ ತರುತ್ತೇನೆ ಎಂದು ಆರ್. ಅಶೋಕ್‌ ಹೇಳಿದರು.‌

ಎಂಪಿ ಅಭ್ಯರ್ಥಿಯಾಗಲು ಆಹ್ವಾನ ನೀಡಿದ್ದಾರೆ

ಕಾಂಗ್ರೆಸ್‌ನವರು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಲು ಎಸ್‌.ಟಿ. ಸೋಮಶೇಖರ್‌ ಅವರನ್ನು ಆಹ್ವಾನಿಸಿರುವುದು ನಿಜ. ಆದರೆ, ಯಾವುದೇ ಕಾರಣಕ್ಕೆ ಅವರು ಎಂಪಿ ಅಭ್ಯರ್ಥಿ ಆಗಲ್ಲ ಎಂದಿದ್ದಾರೆ. ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುವ ಕುರಿತು ತಂತ್ರಗಾರಿಕೆ ನಡೆಯುತ್ತಿದೆ. ಕಾಂಗ್ರೆಸ್ ಏನೇ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ಎದುರು ಗೆಲ್ಲಲು ಆಗಲ್ಲ. ಆಮಿಷದ ಜತೆಗೆ ಭಯವನ್ನೂ ಹುಟ್ಟಿಸಿ ಪಕ್ಷಾಂತರಕ್ಕೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅಧಿಕಾರ ಸಿಕ್ಕಿದೆ ಅಂತ ಈ ರೀತಿ ದೌರ್ಜನ್ಯ ಮಾಡುವುದು ಒಳ್ಳೆಯದಲ್ಲ. ದೇವರು ಅಧಿಕಾರ ಕೊಟ್ಟಾಗ ಈ ರೀತಿ ಮಾಡುವುದು ಒಳ್ಳೆಯದಲ್ಲ. ನಮಗೆ ಮೆಜಾರಿಟಿ ಇರಲಿಲ್ಲ, ಮಾಡಿದೆವು. ಆದರೆ, ಮೆಜಾರಿಟಿ ಇದ್ದರೂ ಮಾಡುತ್ತೀರಿ ಎಂದರೆ ದುರಹಂಕಾರ ಎನ್ನಬೇಕು ಎಂದು ಆರ್.‌ ಅಶೋಕ್‌ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಎದುರಾಳಿಗಳನ್ನು ಸೆಳೆಯಲು ಅಧಿಕಾರಿಗಳನ್ನು ಈ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರ್. ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ. ಕೆಲಸ ಸರಿ ಇದೆಯೋ ಇಲ್ಲವೋ ಗೊತ್ತಿಲ್ಲ. ರಸ್ತೆ ರೋಡ್ ಕೆಲಸ, ಮೋರಿ ಕೆಲಸ ಸರಿಯಿದೆಯೋ ಗೊತ್ತಿಲ್ಲ. ನನಗೆ ನೆಗೆಟಿವ್ ರಿಪೋರ್ಟ್ ಬೇಕು.‌ ಸರಿ ಇದ್ದರೂ ನೆಗೆಟಿವ್ ರಿಪೋರ್ಟ್ ಬೇಕು. ಸರಿಯಿಲ್ಲವೆಂದರೂ ನೆಗೆಟಿವ್ ರಿಪೋರ್ಟ್ ಬೇಕು ಎಂದು ಹೇಳಿದ್ದಾಗಿ ನನಗೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಎಲ್ಲೆಲ್ಲಿ ಬೆದರಿಕೆ ಹಾಕಬಹುದೋ ಅಲ್ಲಿ ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಬಹಳ ಜನ ನಮ್ಮ ಪಕ್ಷ ಬಿಟ್ಟು ಹೋಗುತ್ತಾರೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಬೈರತಿ ಬಸವರಾಜ್ ಸಹ ಹೋಗುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅವರು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಆರ್.‌ ಅಶೋಕ್‌ ಸ್ಪಷ್ಟಪಡಿಸಿದರು.

ಇದನ್ನೂ ಓದಿ: Cauvery water dispute : ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ನಿಂದಲೇ ಕಾವೇರಿ ವಿವಾದದ ಹುಟ್ಟು: ಅಣ್ಣಾಮಲೈ

ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ: ಶಾಸಕ ಬೈರತಿ ಬಸವರಾಜು

ನಾನು ಪಕ್ಷ ಬಿಟ್ಟು ಹೋಗಲ್ಲ. ಯಾರೋ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾನು ಪಕ್ಷ ಬಿಡಲ್ಲ, ಪಕ್ಷ ಬಿಡುವ ಸಂದರ್ಭ ಬಂದರೆ ನಿವೃತ್ತಿ ಆಗಿ ಮನೆಯಲ್ಲಿ‌ ಇರುತ್ತೇನೆ. ನನಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿಲ್ಲ. ನನಗೆ ಯಾರೂ ಸಂಪರ್ಕಿಸಿಲ್ಲ. ನಾನೂ ಸಂಪರ್ಕಿಸಿಲ್ಲ. ಬಿಜೆಪಿಯಲ್ಲಿ ನನಗೆ ಅಧಿಕಾರ, ಸ್ಥಾನ-ಮಾನ, ಗೌರವ ಎಲ್ಲವೂ ಸಿಕ್ಕಿದೆ ಎಂದು ಶಾಸಕ ಬೈರತಿ ಬಸವರಾಜು ಸ್ಪಷ್ಟನೆ ನೀಡಿದ್ದಾರೆ.

Exit mobile version