ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಬದಲಾವಣೆ (CM Change) ಆಗಲಿದೆ ಎಂಬ ಚರ್ಚೆಯ ನಡುವೆಯೇ ಶಾಸಕ ಅಶೋಕ್ ಪಟ್ಟಣ್ (MLA Ashok Pattan) ಹೊಸ ಬಾಂಬ್ ಹಾಕಿದ್ದಾರೆ. ಅವರು ಹೇಳುವ ಪ್ರಕಾರ, ಎರಡೂವರೆ ವರ್ಷದ ಆದ ನಂತರ ಸಚಿವ ಸಂಪುಟ (Cabinet Change) ಬದಲಾಗಲಿದೆ, ಎಲ್ಲ ಮಂತ್ರಿಗಳು ಬದಲಾಗುತ್ತಾರೆ (Congress Politics).
ಸಿಎಂ ಸಿದ್ದರಾಮಯ್ಯ ಅವರಿಗೆ ಅಪ್ತರಾಗಿರುವ, ಸರ್ಕಾರದ ಮುಖ್ಯ ಸಚೇತಕರೂ ಆಗಿರುವ ಅಶೋಕ್ ಪಟ್ಟಣ್ ಅವರು ಎರಡೂವರೆ ವರ್ಷ ಆದಮೇಲೆ ಸಚಿವ ಸಂಪುಟ ಬದಲಾವಣೆ ಮಾಡೋದಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ ಎಂದಿದ್ದಾರೆ.
ಯಾರಿಗೆ ಸಚಿವ ಖಾತೆ ನೀಡುವುದು ಎಂಬ ವಿಷಯ ಚರ್ಚೆಗೆ ಬಂದಾಗ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಹಿರಿಯ ನಾಯಕರು ಎರಡೂವರೆ ವರ್ಷ ಆದಮೇಲೆ ಇಡೀ ಸಂಪುಟವನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಎಲ್ಲರನ್ನೂ ಏಕಕಾಲದಲ್ಲಿ ಮಂತ್ರಿ ಮಾಡಲು ಆಗುವುದಿಲ್ಲ. ಹೀಗಾಗಿ ಎರಡೂವರೆ ವರ್ಷದ ನಂತರ ಇನ್ನೊಂದು ತಂಡಕ್ಕೆ ಮಂತ್ರಿಗಿರಿ ಕೊಡಲಾಗುವುದು ಎಂದು ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಜಾತಿ ನೋಡಿ ಮಂತ್ರಿ ಮಾಡಬೇಡಿ, ಅನುಭವ ನೋಡಿ ಮಂತ್ರಿ ಮಾಡಿ
ʻʻನಾನು ಸೀನಿಯರ್ ಇದ್ದೀನಿ. ನಾನು ಮಂತ್ರಿ ಆಗಬೇಕಾಗಿತ್ತು. ಆದರೆ ಆಗಿಲ್ಲ. ಜಾತಿ ನೋಡಿ ಮಂತ್ರಿ ಮಾಡಲಾಗಿದೆ. ಹೀಗಾಗಿ ನನಗೆ ಸಿಕ್ಕಿಲ್ಲ. ನಾನು ನಮ್ಮ ನಾಯಕರಿಗೆ ಹೇಳಿದ್ದೇನೆ. ಜಾತಿ ನೋಡಿ ಮಂತ್ರಿ ಸ್ಥಾನ ಕೊಡಬೇಡಿ. ಸೀನಿಯಾರಿಟಿ, ಅನುಭವ ನೋಡಿ ಮಂತ್ರಿ ಮಾಡಿ ಅಂತ ಮನವಿ ಮಾಡಿದ್ದೇನೆ. ಎರಡೂವರೆ ವರ್ಷ ಆದ ಮೇಲೆ ಸಚಿವ ಸ್ಥಾನ ಕೊಡ್ತಾರೆ ಅನ್ನೋ ನಂಬಿಕೆ ಭರವಸೆ ಇದೆʼʼ ಎಂದು ಅಶೋಕ್ ಪಟ್ಟಣ್ ಹೇಳಿದರು. ಅವರು ಮಂತ್ರಿ ಸ್ಥಾನ ಕೊಟ್ಟರೂ ಪಕ್ಷದಲ್ಲಿ ಇರುತ್ತೇನೆ. ಕೊಡದೇ ಹೋದರೂ ಇರುತ್ತೇನೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ʻʻಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಣದೀಪ್ ಸುರ್ಜೇವಾಲ, ಕೆ.ಸಿ ವೇಣುಗೋಪಾಲ್ ಸೇರಿ ಎಲ್ಲಾ ನಾಯಕರಿಗೂ ನಮ್ಮ ಭಾವನೆ ಹೇಳಿದ್ದೇವೆ. ಎರಡೂವರೆ ವರ್ಷ ಆದಮೇಲೆ ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಆಗ ಸಂಪೂರ್ಣ ಸಂಪುಟ ಪುನರ್ ರಚನೆ ಮಾಡ್ತಾರೋ 4-5 ಸ್ಥಾನ ಬದಲಾವಣೆ ಮಾಡ್ತಾರೋ ಗೊತ್ತಿಲ್ಲʼʼ ಎಂದರು.
ಏನೇ ಆದರೂ ಗಾಡ್ ಫಾದರ್ ಬೇಕು ಅಂದ ಪಟ್ಟಣ್
ʻʻಕಾಂಗ್ರೆಸ್ ಪಕ್ಷದಲ್ಲಿ ಜ್ಯೂನಿಯರ್, ಸೀನಿಯರ್ ಅಂತ ಇಲ್ಲ. ಪಕ್ಷಕ್ಕೆ ಸೇರಿದ ಮೇಲೆ ಎಲ್ಲರೂ ಒಂದೆ. ಅದೃಷ್ಟ ಇದ್ದವರು ಮಂತ್ರಿಗಳು ಆಗ್ತಾರೆ. ದುರಾದೃಷ್ಟ ಇದ್ದ ನಮ್ಮಂತಹರು ಹೀಗೆ ಮಾತಾಡ್ತೀವಿʼʼ ಎಂದು ಹೇಳಿದರು ಅಶೋಕ್ ಪಟ್ಟಣ್.
ಯಾವುದೇ ಫೀಲ್ಡ್ ಆದ್ರು ಗಾಡ್ ಫಾದರ್ ಇರಬೇಕು. ಗಾಡ್ ಫಾದರ್ ಇಲ್ಲದೆ ಏನು ಮಾಡೋಕೆ ಆಗೊಲ್ಲ. ನನ್ನ ತಂದೆ, ತಾಯಿ ಎಂಎಲ್ಎ. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು. ಅಂತಹ ಫ್ಯಾಮಿಲಿಯಿಂದ ಬಂದ ನನಗೇ ಇನ್ನೂ ಚಾನ್ಸ್ ಸಿಕ್ಕಿಲ್ಲ. ಎಲ್ಲ ಇದ್ದರೂ ನನ್ನ ನಕ್ಷತ್ರ ಸರಿಯಿಲ್ಲ ಅಂತ ಕಾಣ್ತಿದೆ. ಹೀಗಾಗಿ ನಾನು ಇನ್ನು ಮೇಲೆ ಪೂಜೆ ಮಾಡಬೇಕುʼʼ ಎಂದು ಅಶೋಕ್ ಪಟ್ಟಣ್ ನಕ್ಕರು!
ಹಾಗಿದ್ದರೆ ಮುಖ್ಯಮಂತ್ರಿ ಬದಲಾವಣೆ ಆಗುತ್ತಾ?
ಸಚಿವರ ಬದಲಾವಣೆ ಆದಂತೆ ಸಿಎಂ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಅವರದ್ದು ಏನೇ ಇದ್ದರು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದೆಲ್ಲ ದೊಡ್ಡ ಕೆಲಸ. ಸಿಎಂ ಸ್ಥಾನದ ಬಗ್ಗೆ ನಾವು ಮಾತಾಡೋಕೆ ಆಗೊಲ್ಲ. ಅದಕ್ಕೂ ನಮಗೂ ಸಂಬಂಧ ಇಲ್ಲ. ಅದನ್ನೆಲ್ಲ ಹೈಕಮಾಂಡ್ ನಿರ್ಧಾರ ಮಾಡುತ್ತದೆʼʼ ಎಂದರು ಅಶೋಕ್ ಪಟ್ಟಣ್.
ಇದನ್ನೂ ಓದಿ: Satish Jarakiholi : ಡಿಕೆಶಿ ಹಸ್ತಕ್ಷೇಪ ನಿಜ, ಆದರೂ ಕಾಂಪ್ರೊಮೈಸ್ ಆಗಿದ್ದೇನೆ ಎಂದ ಸತೀಶ್ ಜಾರಕಿಹೊಳಿ
ಅಶೋಕ್ ಪಟ್ಟಣ್ ಮಾತಿನ ಮರ್ಮ ಏನು?
ಈ ನಡುವೆ, ಅಶೋಕ್ ಪಟ್ಟಣ್ ಮಾತಿನ ಮರ್ಮದ ಬಗ್ಗೆ ಸಾಕಷ್ಟು ಚರ್ಚೆ ಆರಂಭವಾಗಿದೆ. ರಾಜ್ಯ ಕಾಂಗ್ರೆಸ್‌ನ ಕೆಲವು ನಾಯಕರ ನೇತೃತ್ವದಲ್ಲಿ ಬಂಡಾಯದ ಬಾವುಟ ಹಾರಲು ಆರಂಭವಾಗಿದೆ. ಹೆಚ್ಚಿನ ಶಾಸಕರು ತಮಗೆ ಅನುದಾನ ಸಿಗುತ್ತಿಲ್ಲ, ಮಂತ್ರಿಗಳು ಸ್ಪಂದಿಸುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ ಅವರಿಗೆಲ್ಲ ಮಂತ್ರಿ ಭಾಗ್ಯ ಸಿಗುವ ಸಾಧ್ಯತೆಯೂ ಇದೆ ಎಂಬ ಭರವಸೆ ಮೂಡಿಸುವ ಪ್ರಯತ್ನದ ಭಾಗವಾಗಿ ಅಶೋಕ್ ಪಟ್ಟಣ್ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅಶೋಕ್ ಪಟ್ಟಣ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಅತ್ಯಾಪ್ತರಾಗಿ ಇರುವುದರಿಂದ ಈ ಅಭಿಪ್ರಾಯಕ್ಕೆ ಬಲ ಬಂದಿದೆ.