ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ಅವರಲ್ಲದೆ ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಿ ಬೇರೆ ಬೇರೆ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಅವರ ಬೇಡಿಕೆಯ ಚರ್ಚೆಯೇ (Congress Politics) ಜೋರಾಗಿದೆ. ಅದರ ನಡುವೆ ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಇದನ್ನೂ ಮೀರಿಸಿ ಹೊಸದಾಗಿ ಐದು ಉಪಮುಖ್ಯಮಂತ್ರಿಗಳು ಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಒಟ್ಟು ಆರು ಡಿಸಿಎಂಗಳ ಪೈಕಿ ಡಿ.ಕೆ. ಶಿವಕುಮಾರ್ ಅವರು ಪ್ರಿನ್ಸಿಪಾಲ್ ಡಿಸಿಎಂ (Principal DCM) ಆಗಲಿ ಎಂಬ ಸಲಹೆಯನ್ನೂ ಅವರೇ ನೀಡಿ ಸಂಧಾನ ಸೂತ್ರ ಹೊಸೆದಿದ್ದಾರೆ.
ಅಚ್ಚರಿ ಎಂದರೆ ಈ ಎಲ್ಲಾ ಹೆಚ್ಚುವರಿ ಡಿಸಿಎಂಗಳ ಬೇಡಿಕೆ ಬರುತ್ತಿರುವುದು ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಿಂದಲೇ ಎನ್ನುವುದು ವಿಶೇಷ. ಈ ಹಿಂದೆ ಮೂವರು ಬೇಕೆಂದ ಕೆ.ಎನ್. ರಾಜಣ್ಣ ಅವರು ಮತ್ತು ಈಗ ಬೇಡಿಕೆ ಮಂಡಿಸಿರುವ ಬಸವರಾಜ ರಾಯರೆಡ್ಡಿ ಇಬ್ಬರೂ ಸಿದ್ದರಾಮಯ್ಯ ಆಸ್ಥಾನಿಕರೇ. ಇವರೆಲ್ಲರೂ ಸಿದ್ದರಾಮಯ್ಯ ಅವರ ಮನದಿಂಗಿತವನ್ನೆ ಮಾತನಾಡುತ್ತಿದ್ದಾರೆ ಎಂಬ ಮಾತು ಜೋರಾಗಿ ಕೇಳಿಬಂದಾಗ ಕೆ.ಎನ್ ರಾಜಣ್ಣ ಅವರು ನಿರಾಕರಿಸಿದ್ದರು. ಇದು ಯಾರದೋಗ ಮನಸಿನ ಮಾತಲ್ಲ, ನನ್ನದೇ ಅಭಿಪ್ರಾಯ ಎಂದಿದ್ದರು.
ಹಾಗಿದ್ದರೆ ಬಸವರಾಜ ರಾಯರೆಡ್ಡಿ ವಾದವೇನು? ಯಾಕಂತೆ ಐದು ಡಿಸಿಎಂ?
- ನನ್ನ ಪ್ರಕಾರ ರಾಜ್ಯದಲ್ಲಿ ಮೂರಲ್ಲ, ಇನ್ನೂ ಐದು ಹೆಚ್ಚು ಡಿಸಿಎಂ ಹುದ್ದೆಗಳು ಸೃಷ್ಟಿ ಆಗಬೇಕು.
- ಈಗ ಡಿಕೆಶಿ ಡಿಸಿಎಂ ಆಗಿ ಇದ್ದಾರೆ. ಅವರ ಜತೆ ಪ್ರಾದೇಶಿಕವಾರು ಮತ್ತು ಜಿಲ್ಲಾವಾರು ಅವಕಾಶ ಕೊಡಬೇಕು.
- ಲಿಂಗಾಯತ, ಮುಸ್ಲಿಂ, ದಲಿತ, ಒಂದು ಮಹಿಳೆಗೆ ಅವಕಾಶ ಕೊಡಬೇಕು
ಐದು ಡಿಸಿಎಂ ಆದರೆ ಲಾಭವೇನು?
ಬಸವರಾಜ ರಾಯರೆಡ್ಡಿ ಅವರ ಪ್ರಕಾರ, ಐದು ಮಂದಿ ಡಿಸಿಎಂ ಆದರೆ, ಮುಂದೆ ಬರುವ ಲೋಕಸಭಾ ಚುನಾವಣೆಗೆ ಅನುಕೂಲವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸಮುದಾಯಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತವೆ. ಹೀಗಾಗಿ ನಾನು ಡಿಸಿಎಂ ಹುದ್ದೆ ಸೃಷ್ಟಿ ವಿಚಾರದಲ್ಲಿ ರಾಜಣ್ಣ ಅವರನ್ನು ಬೆಂಬಲಿಸುತ್ತೇನೆ, ಎರಡು ಹೆಚ್ಚು ಮಾಡಬೇಕು ಎಂದು ಕೇಳುತ್ತೇನೆ ಎಂದಿದ್ದಾರೆ ರಾಯರೆಡ್ಡಿ.
ಹಾಗಂತ ಲೋಕಸಭೆಯಲ್ಲಿ ಬಿಜೆಪಿ ಗಿಂತಲೂ ಸ್ಥಾನ ಕಡಿಮೆ ಗೆದ್ದರೆ ಸರ್ಕಾರಕ್ಕೆ ಅಭದ್ರತೆ ಕಾಡಬಹುದು ಎಂಬ ರಾಜಣ್ಣ ವಾದವನ್ನು ಅವರು ಒಪ್ಪಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಭದ್ರ ಸರ್ಕಾರ ಎಂದರು.
ಇದು ಡಿಕೆಶಿ ವಿರುದ್ಧ ಅಲ್ಲ, ಅವರು ಪ್ರಿನ್ಸಿಪಾಲ್ ಡಿಸಿಎಂ
ಇದೆಲ್ಲವೂ ಈಗ ಏಕೈಕ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್ ಅವರ ಬಲವನು ಕುಂದಿಸಲು ಮಾಡುತ್ತಿರುವ ಪ್ರಯತ್ನ ಎಂಬ ವಾದವನ್ನು ಅವರು ಅಲ್ಲಗಳೆದರು. ʻʻಇದು ಡಿಕೆಶಿ ವಿರುದ್ಧ ಅಂದ್ರೆ ನಾನು ಒಪ್ಪಲ್ಲ. ಅವರು ಒಬ್ಬ ಒಳ್ಳೆಯ ಸಂಘಟನಾಕಾರ. ಅವರು ಮೊದಲ ಡಿಸಿಎಂ ಇಲ್ಲವೇ ಪ್ರಿನ್ಸಿಪಲ್ ಡಿಸಿಎಂ ಆಗಲಿ. ಉಳಿದವರಿಗೆ ಎರಡು ಮೂರು ಅಂತ ಕೊಡಲಿʼʼ ಎಂದು ವಾದಿಸಿದರು.
ಇದನ್ನೂ ಓದಿ: Congress Politics : ಮುಗಿಯದ 3 ಡಿಸಿಎಂ ಡ್ರಾಮಾ; ತೆವಲಿಗೆ ಮಾತಾಡ್ಬೇಡಿ ರಾಜಣ್ಣ ಎಂದು ಮಾಗಡಿ ಬಾಲಕೃಷ್ಣ ನೇರ ವಾಗ್ದಾಳಿ
ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ: ಸ್ಪಷ್ಟೋಕ್ತಿ
ಇದೇ ಸಂದರ್ಭದಲ್ಲಿ ಅವರು ಸಿದ್ದರಾಮಯ್ಯ ಅವರೇ ಮುಂದಿನ ಐದು ವರ್ಷವೂ ಸಿಎಂ ಆಗಿರಲಿದ್ದಾರೆ ಎಂದು ಹೇಳಿದ್ದಾರೆ.
ʻʻಸಿದ್ದರಾಮಯ್ಯ ಅವರನ್ನು ಪೂರ್ಣಾವಧಿ ಸಿಎಂ ಅಂತಲೇ ಮಾಡಿರುವುದು. ಒಮ್ಮೆ ಸಿಎಂ ಆದ ಮೇಲೆ ಅವರು ಸ್ವ ಇಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಇಲ್ಲವೇ ಬೇರೆಯವರಿಗೆ ಅವಕಾಶ ಕೊಡಬೇಕು ಎಂದು ಹೈಕಮಾಂಡ್ ರಾಜೀನಾಮೆ ಕೊಡುವಂತೆ ಹೇಳಬಹುದು. ಆದರೆ, ಈಗ ಹೈಕಮಾಂಡ್ ಸಿಎಂ ಮಾಡುವಾಗ ಅವರನ್ನ ಪೂರ್ಣಾವಧಿ ಸಿಎಂ ಎಂದೇ ಹೇಳಿದೆʼʼ ಎಂದು ಸ್ಪಷ್ಟಪಡಿಸಿದರು ಬಸವರಾಜ ರಾಯರೆಡ್ಡಿ.
ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ಅವರಲ್ಲದೆ ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಿ ಬೇರೆ ಬೇರೆ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಅವರ ಬೇಡಿಕೆಯ ಚರ್ಚೆಯೇ ಜೋರಾಗಿದೆ. ಅದರ ನಡುವೆ ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಇದನ್ನೂ ಮೀರಿಸಿ ಹೊಸದಾಗಿ ಐದು ಉಪಮುಖ್ಯಮಂತ್ರಿಗಳು ಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಒಟ್ಟು ಆರು ಡಿಸಿಎಂಗಳ ಪೈಕಿ ಡಿ.ಕೆ. ಶಿವಕುಮಾರ್ ಅವರು ಪ್ರಿನ್ಸಿಪಾಲ್ ಡಿಸಿಎಂ (Principal DCM) ಆಗಲಿ ಎಂಬ ಸಲಹೆಯನ್ನೂ ಅವರೇ ನೀಡಿ ಸಂಧಾನ ಸೂತ್ರ ಹೊಸೆದಿದ್ದಾರೆ.
ಹೆಚ್ಚುವರಿ ಡಿಸಿಎಂ ಬೇಡಿಕೆಗೆ ಭಾರಿ ಪರ-ವಿರೋಧ
ಡಿ.ಕೆ.ಶಿವಕುಮಾರ್ ಅವರ ಜತೆ ಹೆಚ್ಚುವರಿಯಾಗಿ ಡಿಸಿಎಂಗಳನ್ನು ಮಾಡುವ ವಿಚಾರ ಪಕ್ಷದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜಿ. ಪರಮೇಶ್ವರ್ ಸೇರಿದಂತೆ ಕೆಲವೇ ಕೆಲವು ಮಂದಿ ಇದನ್ನು ಬೆಂಬಲಿಸಿದ್ದಾರೆ. ಈಗ ಬಸವರಾಜ ರಾಯರೆಡ್ಡಿ ಬೆಂಲ ನೀಡಿದ್ದಾರೆ. ಉಳಿದವರಲ್ಲಿ ಹೆಚ್ಚಿನವರು ಇದು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಪ್ರಯತ್ನ ಎಂದಿದ್ದಾರೆ.