Site icon Vistara News

Congress Politics : ರಾಷ್ಟ್ರ ರಾಜಕಾರಣದತ್ತ ಬಿ.ಕೆ. ಹರಿಪ್ರಸಾದ್! ಮುನಿಸು ಮರೆತು ಡಿಕೆಶಿ ಭೇಟಿ ಮಾಡಿದ್ದರ ಕಾರಣವೇನು?

BK hariprasad vist DK Shivakumar house

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಇದ್ದ ಕಾರಣ ಮುನಿಸಿಕೊಂಡಿದ್ದ ಕಾಂಗ್ರೆಸ್‌ ಹಿರಿಯ ರಾಜಕಾರಣಿ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ (Senior Congress politician and MLC BK Hariprasad) ಅವರು ಈಗ ರಾಷ್ಟ್ರ ರಾಜಕಾರಣದತ್ತ (National Politics) ದೃಷ್ಟಿ ನೆಟ್ಟಿದ್ದಾರೆಯೇ? ಅವರನ್ನು ಪಂಚ ರಾಜ್ಯಗಳ ಚುನಾವಣೆ (Elections in five states) ಹಿನ್ನೆಲೆಯಲ್ಲಿ ಪಕ್ಷ ಬಳಸಿಕೊಳ್ಳುತ್ತಿದೆಯೇ? ಎಂಬ ಗುಸು ಗುಸು ಹುಟ್ಟಿಕೊಂಡಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಆದಿಯಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಮೇಲೆಯೂ ಮುನಿಸಿಕೊಂಡಿದ್ದ ಬಿಕೆಎಸ್‌ ಈಗ ಮುನಿಸು ಮರೆತು ಡಿಕೆಶಿಯನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಬಗ್ಗೆ ಕೆಲವು ಹೊತ್ತು ಮಾತುಕತೆಯನ್ನೂ ನಡೆಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ನಲ್ಲಿ ಆಂತರಿಕ (Congress Politics) ಚಟುವಟಿಕೆ ಬಿರುಸು ಪಡೆದುಕೊಂಡಿದೆ.

ತಮಗೆ ಸಚಿವ ಸ್ಥಾನ ಸಿಗದಿರುವುದರ ಹಿಂದೆ ಸಿದ್ದರಾಮಯ್ಯ ಮಾತ್ರವಲ್ಲದೆ, ಡಿ.ಕೆ. ಶಿವಕುಮಾರ್‌ ಮತ್ತಿತರ ನಾಯಕರ ಕೈವಾಡವೂ ಇದೆ ಎಂದು ಬಿ.ಕೆ. ಹರಿಪ್ರಸಾದ್‌ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದರು. ಕೆಲವು ತಿಂಗಳ ಹಿಂದೆ ಬಹಿರಂಗ ಕಾರ್ಯಕ್ರಮದಲ್ಲಿ ತಮಗೆ ಮುಖ್ಯಮಂತ್ರಿಯನ್ನು ಮಾಡುವುದೂ ಗೊತ್ತಿದೆ. ಅವರನ್ನು ಅಧಿಕಾರದಿಂದ ಇಳಿಸುವುದೂ ಗೊತ್ತಿದೆ ಎಂಬ ಹೇಳಿಕೆ ನೀಡಿ ಕಾಂಗ್ರೆಸ್‌ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದರು. ಬಳಿಕ ಸಿದ್ದರಾಮಯ್ಯ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿ ಹಿಂದುಳಿದ ವರ್ಗದವರಿಗೆ ಅವರು ನಾಯಕರೇ ಅಲ್ಲ, ಕೇವಲ ಕುರುಬ ಸಮುದಾಯದವರನ್ನು ಮಾತ್ರವೇ ಅವರು ಓಲೈಸುತ್ತಿದ್ದಾರೆ ಎಂಬ ಹೇಳಿಕೆಯನ್ನೂ ಬಿ.ಕೆ. ಹರಿಪ್ರಸಾದ್‌ ನೀಡಿದ್ದರು.

ಅಹಿಂದ ಕಟ್ಟಲು ಮುಂದಾಗಿದ್ದ ಹರಿಪ್ರಸಾದ್‌

ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ದೊಡ್ಡ ಹೊಡೆತ ಕೊಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದ ಬಿ.ಕೆ. ಹರಿಪ್ರಸಾದ್‌, ಸಿದ್ದು ಟ್ರಂಪ್‌ ಕಾರ್ಡ್‌ ಅಹಿಂದವನ್ನೇ ಹೈಜಾಕ್‌ ಮಾಡಲು ಮುಂದಾಗಿದ್ದರು. ಹಿಂದುಳಿದ ವರ್ಗದವರನ್ನು (ಈಡಿಗ, ಬಿಲ್ಲವ, ನಾಮಧಾರಿ, ದೀವರ ಸೇರಿದಂತೆ ಅತಿ ಹಿಂದುಳಿದ 70ಕ್ಕೂ ಹೆಚ್ಚು ಸಮುದಾಯದವರನ್ನು ಒಗ್ಗೂಡಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಈ ಮಧ್ಯೆ ತಮ್ಮ ಮೇಲೆ ಮುಗಿ ಬಿದ್ದಿದ್ದ ಬಿ.ಕೆ. ಹರಿಪ್ರಸಾದ್ ಕುರಿತು ಸಿದ್ದರಾಮಯ್ಯ ಕೆಂಡವಾಗಿದ್ದರು. ಅವರ ಬೆಂಬಲಿಗರು ಹೈಕಮಾಂಡ್‌ಗೆ ದೂರು ಕೊಟ್ಟಿದರು. ಬಳಿಕ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಅಸಮಾಧಾನವನ್ನು ಶಮನ ಮಾಡುವ ಕೆಲಸವನ್ನು ಮಾಡಿದ್ದರು. ಈ ವೇಳೆ ತಾಳ್ಮೆ ವಹಿಸುವಂತೆ ಸಲಹೆ – ಸೂಚನೆಯನ್ನೂ ಕೊಟ್ಟಿದ್ದರು.

ಇದನ್ನೂ ಓದಿ: Operation Hasta : ಲಮಾಣಿ, ಎಂ.ಪಿ. ಕುಮಾರಸ್ವಾಮಿ ಶೆಟ್ಟರ್ ಕೈ ಸೆರೆ, ಮುಂದಿನ ವಾರ ಆಪರೇಷನ್!

ರಾಷ್ಟ್ರ ರಾಜಕಾರಣದತ್ತ ಬಿ.ಕೆ. ಹರಿಪ್ರಸಾದ್?

‌ಬಿ.ಕೆ. ಹರಿಪ್ರಸಾದ್‌ ಅನುಭವದಲ್ಲಿಯೂ ಹಿರಿಯರಾಗಿದ್ದು, ಅವರು ಎಐಸಿಸಿ ಮಟ್ಟದಲ್ಲಿ ಕಾರ್ಯನಿರ್ವಹಿಸಿದವರಾಗಿದ್ದಾರೆ. ದೇಶದಲ್ಲಿ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಹರಿಪ್ರಸಾದ್‌ ಅವರ ಹಿರಿತನದ ಆಧಾರದಲ್ಲಿ ಅವರಿಗೆ ಕೇಂದ್ರದ ಮಟ್ಟದಲ್ಲಿ ಉನ್ನತ ಹುದ್ದೆಯನ್ನು ಕಲ್ಪಿಸಿಕೊಡುವ ಚಿಂತನೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಈಗಾಗಲೇ ಚರ್ಚೆಯನ್ನೂ ನಡೆಸಲಾಗಿದ್ದು, ಬಿ.ಕೆ. ಹರಿಪ್ರಸಾದ್‌ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಸ್ಥಾನವನ್ನು ಕಲ್ಪಿಸಿಕೊಡಲಾಗುತ್ತಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಕೆ.ಎಚ್. ಮುನಿಯಪ್ಪ ಉಪಸ್ಥಿತಿ

ಡಿಸಿಎಂ ಡಿ.ಕೆ‌. ಶಿವಕುಮಾರ್ ನಿವಾಸಕ್ಕೆ ಬಿ.ಕೆ. ಹರಿಪ್ರಸಾದ್‌ ಭೇಟಿ ನೀಡಿದ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ಸಹ ಉಪಸ್ಥಿತರಿದ್ದರು. ಈ ವೇಳೆ ಮುಂದಿನ ಲೋಕಸಭಾ ಚುನಾವಣೆಯ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ: Karnataka Bandh : ನಾಳೆ ಪ್ರತಿಭಟನೆಗೆ ಅಡ್ಡಿಯಿಲ್ಲ, ಬಂದ್‌ಗೆ ಮಾಡೋ ಹಾಗಿಲ್ಲ; ಡಿ.ಕೆ. ಶಿವಕುಮಾರ್ ವಾರ್ನಿಂಗ್

ಬೋರ್ಡ್ ‌ಮತ್ತು ಕಾರ್ಪೊರೇಷನ್‌ಗೆ ಶೀಘ್ರ ಆಯ್ಕೆಗೆ ಮನವಿ

ಈ ಬಗ್ಗೆ ಸಚಿವ ಕೆ.ಎಚ್. ಮುನಿಯಪ್ಪ ಪ್ರತಿಕ್ರಿಯೆ ನೀಡಿ, ಹರಿಪ್ರಸಾದ್ ನನಗಿಂತ ಮುಂಚೆ ಬಂದು ಡಿ‌.ಕೆ‌. ಶಿವಕುಮಾರ ಅವರನ್ನು ಭೇಟಿ ಮಾಡಿದ್ದಾರೆ. ಅವರ ಸ್ಥಾನಮಾನ ವಿಚಾರ ಹೈಕಮಾಂಡ್ ನಿರ್ಧಾರವನ್ನು ಮಾಡುತ್ತದೆ. ನಿಗಮ – ಮಂಡಳಿಗಳ ಆಯ್ಕೆ ಶೀಘ್ರ ನಡೆಯಬೇಕು. ಇದಕ್ಕೆ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂಬುದಾಗಿ ಮನವಿ ಮಾಡಿದ್ದೇನೆ. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎಂದು ಹೇಳಿದರು.

Exit mobile version