Site icon Vistara News

Congress Politics : ಪ್ರಧಾನಿ ಹುದ್ದೆಗೆ ಖರ್ಗೆ ಬದಲು ಬೇರೆ ವ್ಯಕ್ತಿ ಹೆಸರು ಹೇಳಿದ ಸಿದ್ದರಾಮಯ್ಯ!

Mallikarjuna Kharge siddaramaiah

ಬೆಂಗಳೂರು: INDIA ಮೈತ್ರಿಕೂಟದಿಂದ (INDIA Bloc) ಪ್ರಧಾನಿ ಅಭ್ಯರ್ಥಿ (Prime Minister Candidate) ಯಾರಾಗಬೇಕು ಎಂಬ ಚರ್ಚೆ ಬಂದಾಗ ಬಹುತೇಕರು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ಹೆಸರನ್ನೇ ಹೇಳಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಾತ್ರ ಖರ್ಗೆ ಬದಲು ಬೇರೊಬ್ಬ ವ್ಯಕ್ತಿಯ ಹೆಸರನ್ನು ಹೇಳಿರುವುದು ಅಚ್ಚರಿ ಮೂಡಿಸಿದೆ. ಇದರ ನಡುವೆಯೇ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ಟೀಮ್‌ ಕೂಡಾ ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ (Congress Politics) ಪೋಸ್ಟರ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಫೋಟೊವನ್ನೇ ಮರೆತುಬಿಟ್ಟಿದೆ!

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಗುರುವಾರ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ನಡೆಯಿತು. ಇದರಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಅವರು ಈ ದೇಶದ ಪ್ರಧಾನಿಯಾಗಬೇಕು ಎಂದು ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಗ್ಯಾರಂಟಿ ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ. ಕಾಂಗ್ರೆಸ್‌ಗೆ ಈ ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವ ಶಕ್ತಿ ಇದೆ. ಈ ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಕಾಂಗ್ರೆಸ್ ಪಕ್ಷ ಮಾತ್ರ. ಅದಕ್ಕೆ ರಾಹುಲ್ ಗಾಂಧಿ ಅವರು ಈ ದೇಶದ ಪ್ರಧಾನ ಮಂತ್ರಿ ಆಗಬೇಕು ಎಂದು ಹೇಳಿದರು.

ಯಾರೂ ಕೂಡ ಈ ದೇಶದಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿರಲಿಲ್ಲ. ರಾಹುಲ್‌ ಗಾಂಧಿ ಅವರು ಈಗ ಭಾರತ್ ಜೋಡೋ 2 ಪ್ರಾರಂಭ ಮಾಡ್ತಿದ್ದಾರೆ. ಭಾರತ ನ್ಯಾಯ ಯಾತ್ರೆ ಮಾಡ್ತಿದ್ದಾರೆ. ಯಾಕಂದ್ರೆ ಈ ದೇಶದಲ್ಲಿ ಯಾರಿಗೂ ನ್ಯಾಯ ಸಿಕ್ಕಿಲ್ಲ. ಹಿಂದುಳಿದವರಿಗೆ, ದಲಿತರಿಗೆ ನ್ಯಾಯ ಸಿಗಬೇಕು ಅಂತ ಪಾದಯಾತ್ರೆ ಮಾಡ್ತಿದ್ದಾರೆ. ಇಂತವರ ಕೈಗೆ ಅಧಿಕಾರ ಸಿಗಬೇಕೋ ನರೇಂದ್ರ ಮೋದಿಗೆ ಅಧಿಕಾರ ಸಿಗಬೇಕೋ..? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ʻʻಹಾಗಾಗಿ ನಾವು ಎಲ್ಲರೂ ಹೋರಾಟ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗಬೇಕುʼʼ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಖರ್ಗೆ ಹೆಸರು ಪ್ರಸ್ತಾಪ, ಹಲವರಿಗೆ ಪರಿತಾಪ

ಚರ್ಚೆಗೆ ಗ್ರಾಸವಾದ ಸಿಎಂ ಸಿದ್ದರಾಮಯ್ಯ ಹೇಳಿಕೆ

ಇಂಡಿಯಾ ಮೈತ್ರಿಕೂಟದದಲ್ಲಿ ಪ್ರಧಾನಿ ಹುದ್ದೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪವಾಗಿರುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರೇ ಖರ್ಗೆ ಹೆಸರು ಪ್ರಸ್ತಾಪ ಮಾಡಿದ್ದರು. ಆದರೆ, ಸ್ವಪಕ್ಷೀಯ ನಾಯಕ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಂದ ರಾಹುಲ್ ಗಾಂಧಿ ಹೆಸರು ಪ್ರಸ್ತಾಪ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರ ಈ ಹೇಳಿಕೆ ಪಕ್ಷದಲ್ಲಿ ಯಾವ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಾಗಿದೆ.

ಖರ್ಗೆ ಅವರನ್ನು ಮರೆದ ಕಾಂಗ್ರೆಸ್‌: ಅಶೋಕ್‌ ವ್ಯಂಗ್ಯ!

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಗೆ ಸಂಬಂಧಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿರುವ ಪೋಸ್ಟರ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾವ ಚಿತ್ರವೇ ಇಲ್ಲದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನ ಸೋಷಿಯಲ್ ಮಿಡಿಯಾ ಟೀಮ್ ಈ ಪ್ರಮಾದವನ್ನು ಮಾಡಿದೆ. ನಿಜವೆಂದರೆ ಇದನ್ನು ಗಮನಿಸಿದ್ದು ಕಾಂಗ್ರೆಸ್‌ನವರು ಅಲ್ಲ. ಬದಲಾಗಿ ವಿಪಕ್ಷ ನಾಯಕ ಆರ್‌. ಅಶೋಕ್‌ ಅವರು.

ʻʻಇದು ಕಾಂಗ್ರೆಸ್ ಸಂಸ್ಥಾಪನಾ ದಿನದ ಸಂದೇಶ. ಇದರಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರ ಚಿತ್ರವೇ ಮಾಯವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮೇಲೆ ಏಕಿಷ್ಟು ದ್ವೇಷ? ದಲಿತ ವಿರೋಧಿ ಕಾಂಗ್ರೆಸ್ʼʼ ಎಂದು ಕಾಲೆಳೆದಿದ್ದಾರೆ ಆರ್. ಅಶೋಕ್.

Exit mobile version