ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ (Karnataka Politics) ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಇದೇ ವೇಳೆ ಗ್ಯಾರಂಟಿ (Congress Guarantee Scheme) ಜಾರಿ ಮೂಲಕ ಆತ್ಮವಿಶ್ವಾಸದಲ್ಲಿರುವ ಕರ್ನಾಟಕ ಕಾಂಗ್ರೆಸ್ (Congress Politics) ಈಗ ಲೋಕಸಭೆಯಲ್ಲಿ ಅತಿ ಹೆಚ್ಚು ಸೀಟುಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ತನ್ನ ಕಾರ್ಯತಂತ್ರವನ್ನು ಹೆಣೆಯುತ್ತಿದೆ. ಅದರ ಭಾಗವಾಗಿ ಈಗ ನಿಗಮ ಮಂಡಳಿ ಹಾಗೂ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ (corporation board and new working president) ನೇಮಕಕ್ಕೂ ಚಾಲನೆ ನೀಡಲು ಮುಂದಾಗಿದ್ದು, ಅದಕ್ಕೂ ದಿನಾಂಕ ಹತ್ತಿರ ಬಂದಿದೆ. ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (KPCC president and Deputy CM DK Shivakumar) ಪ್ರತಿಕ್ರಿಯೆ ನೀಡಿದ್ದು, ಅ. 25ರ ನಂತರ ಸಭೆ ನಡೆಸಿ ನಿಗಮ ಮಂಡಳಿ ಹಾಗೂ ನೂತನ ಕಾರ್ಯಾಧ್ಯಕ್ಷರ ನೇಮಕಾತಿ ಕುರಿತು ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎನ್ನುವ ಹಂಬಲ ತೀವ್ರವಾಗಿ ನಮಗೂ ಇದೆ. ನಾನೂ ಒಬ್ಬ ಕಾರ್ಯಕರ್ತನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Karnataka Politics : ಕುಣಿಯಲಾರದವರು ನೆಲ ಡೊಂಕು ಅಂದರಂತೆ; ಕುಮಾರಸ್ವಾಮಿಯನ್ನು ಕುಟುಕಿದ ಸಿಎಂ ಸಿದ್ದರಾಮಯ್ಯ
ನಿಗಮ ಮಂಡಳಿ ಹಾಗೂ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧಪಟ್ಟಂತೆ ಅ. 20ರಂದು ಸಿಎಂ ಸಿದ್ದರಾಮಯ್ಯ ಅವರ ಜತೆ ಮೊದಲ ಸುತ್ತಿನ ಸಭೆ ನಿಗದಿಯಾಗಿತ್ತು. ಆದರೆ, ಆ ದಿನ ಬೇರೆ ಕೆಲಸಗಳ ನಿಮಿತ್ತ ಚರ್ಚೆ ನಡೆಯಲಿಲ್ಲ. ಹಬ್ಬ ಮುಗಿದ ನಂತರ ನಾವಿಬ್ಬರು ಕುಳಿತು ಚರ್ಚೆ ನಡೆಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ದೆಹಲಿಯಿಂದ ಹೈಕಮಾಂಡ್‌ನವರು ಬರುತ್ತಾರೆ. ನಮ್ಮ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳ ಟಿಕೆಟ್ ಹಂಚಿಕೆಯಲ್ಲಿ ಇದ್ದಾರೆ. ಮಂಗಳವಾರ ಟಿಕೆಟ್ ಘೋಷಣೆ ಆಗುವ ಸಾಧ್ಯತೆಯಿದ್ದು, ಅಷ್ಟರಲ್ಲಿ ನಾವು ಸಭೆ ನಡೆಸಿ ಮಾತುಕತೆ ನಡೆಸಿರುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಉತ್ತಮ ಆಡಳಿತ ನೀಡುತ್ತೇವೆ
ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಜನರ ಸೇವೆ ಮಾಡುವಂತಹ ಭಾಗ್ಯವನ್ನು ಕೊಟ್ಟು, ನಮ್ಮ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ. ಅಧಿಕಾರವನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸಿ, ನುಡಿದಂತೆ ನಡೆದು, ಉತ್ತಮವಾದ ಆಡಳಿತ ನೀಡುತ್ತಿದ್ದೇವೆ. ರಾಜ್ಯದ ಮುಖ್ಯಮಂತ್ರಿಗಳ, ಶಾಸಕರ, ಸಂಪುಟ ಸಹೋದ್ಯೋಗಿಗಳ ಪರವಾಗಿ ನಾನು ವಿಜಯದಶಮಿಯ ದಿನ ರಾಜ್ಯದ ಜನರಿಗೆ ಉತ್ತಮ ಆಡಳಿತದ ಆಶ್ವಾಸನೆ ನೀಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮಾತು ಕೊಟ್ಟಂತೆ ವಿದ್ಯುತ್ ನೀಡುತ್ತೇವೆ
ವಿದ್ಯುತ್ ಖರೀದಿ ಮಾಡಲು, ಈ ಬರಗಾಲದಲ್ಲಿ ವಿದ್ಯುತ್ ಅಭಾವವನ್ನು ಸೃಷ್ಟಿ ಮಾಡಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಯಾರು ಅಂತಹ ಜ್ಞಾನ ಭಂಡಾರದಿಂದ, ಅನುಭವದ ಮಾತುಗಳನ್ನು ಆಡಿಸಿದರೊ ಗೊತ್ತಿಲ್ಲ. ನಮಗೆ ಚಿಂತೆಯಿಲ್ಲ ನಮ್ಮ ಜನರನ್ನು ಕಾಪಾಡುತ್ತೇವೆ, ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಉತ್ಪಾದನೆ ನಿಲ್ಲಬಾರದು ಎಂದು ಸೂಚನೆ ನೀಡಿದ್ದು, ಮಾತು ಕೊಟ್ಟಂತೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ರೈತರಿಗೆ 5 ಗಂಟೆ ವಿದ್ಯುತ್
ಈ ವರ್ಷ ಬರಗಾಲ ಬಂದು 200ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮಳೆ ಜಾಸ್ತಿಯಾದರೆ ವಿದ್ಯುತ್ ಶಕ್ತಿ ಉತ್ಪಾದನೆ ಹೆಚ್ಚಿರುತ್ತದೆ. ಮಳೆ ಕಡಿಮೆ ಇರುವ ಕಾರಣ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಈ ಮೊದಲು 6 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು, 2013ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 7 ಗಂಟೆ ನೀಡಲು ತೀರ್ಮಾನ ಮಾಡಿತು. ಆದರೆ, ನಂತರ ಸರ್ಕಾರಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಲಿಲ್ಲ. ನಾವು ಏನೇ ತೊಂದರೆಯಾದರೂ ರೈತರಿಗೆ 5 ಗಂಟೆಗಳ ಕಾಲ ವಿದ್ಯುತ್ ನೀಡಲೇಬೇಕು ಎಂದು ಸೂಚನೆ ನೀಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿರೋಧ ಪಕ್ಷದವರು ಇರುವುದೇ ನಮ್ಮನ್ನು ಟೀಕೆ ಮಾಡಲು
ವಿರೋಧ ಪಕ್ಷದವರು ಏನೇ ಮಾತನಾಡಲಿ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾವು ಅಧಿಕಾರಕ್ಕೆ ಬಂದ ತಕ್ಷಣ “ಇವರ ಕೈಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಆಗವುದಿಲ್ಲ” ಎನ್ನುತ್ತಿದ್ದರು. ಗೃಹಲಕ್ಷ್ಮಿ ಯೋಜನೆಯಿಂದ ಮನೆಗಳಲ್ಲಿ ಗಲಾಟೆ, ಅತ್ತೆ- ಸೊಸೆ ಗಲಾಟೆ ಎಂದು ಪುಕಾರು ಹಬ್ಬಿಸಿದ್ದರು. ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಹೀಗೆ ಪ್ರತಿಯೊಂದು ಕಾರ್ಯಕ್ರಮಕ್ಕೂ ಟೀಕೆ ಮಾಡುತ್ತಲೇ ಇದ್ದರು. ಆದರೂ ನಾವು ನಮ್ಮ ಕೆಲಸ ಮಾಡಿಕೊಂಡು ಬರುತ್ತಲೇ ಇದ್ದೇವೆ. ಅವರು ಇರುವುದೇ ನಮ್ಮನ್ನು ಟೀಕೆ ಮಾಡಲು, ಎಚ್ಚರಿಸಲು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇಡೀ ದೇಶ ಕರ್ನಾಟಕದ ಕಡೆ ತಿರುಗಿ ನೋಡುತ್ತಿದೆ. ನಮ್ಮ ಸರ್ಕಾರ ಉದ್ಯೋಗ ಹೆಚ್ಚಳ ಮಾಡಲು ಅನೇಕ ಕಾರ್ಯಗಳನ್ನು ರೂಪಿಸುತ್ತಿದೆ. ಅದಕ್ಕೆ ಎಲ್ಲರೂ ಒಟ್ಟಿಗೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಬೇರೆ ಸರ್ಕಾರ ಮಾಧ್ಯಮದವರನ್ನು ನಿಯಂತ್ರಣ ಮಾಡಿದಂತೆ ನಾವು ಮಾಡುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗ. ನಮ್ಮ ಮೇಲೆ ನೀವು ಟೀಕೆ- ಟಿಪ್ಪಣಿ ಏನೇ ಮಾಡಿದರೂ, ನೀವು ಕೂಡ ಸಮಾಜ ತಿದ್ದುವಂತಹ ಕೆಲಸ ಮಾಡುತ್ತಿದ್ದೀರಿ. ನಿಮಗೆ ಸಹಕಾರ ನೀಡುತ್ತೇವೆ, ನಿಮ್ಮ ಮಾರ್ಗದರ್ಶನವನ್ನು ತೆಗೆದುಕೊಳ್ಳುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಿಜೆಪಿಯಲ್ಲಿ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಬೇರೆ ಪಕ್ಷದವರು ನಮ್ಮ ಪಕ್ಷದ ಬಗ್ಗೆ ಮಾತನಾಡಬಹುದು, ನಾನು ಮಾತನಾಡಲು ಹೋಗುವುದಿಲ್ಲ. ಅವರು ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಬಹಳ ಸಂತೋಷ. ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷದ ಅಧ್ಯಕ್ಷರ ಆಯ್ಕೆ ಪಕ್ಕಕ್ಕಿರಲಿ, ಆದರೆ ಐದು ತಿಂಗಳಾದರೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿದೆ ದೌರ್ಬಲ್ಯ
ನಳಿನ್ ಕುಮಾರ್ ಕಟೀಲ್ ಅವರು ಇನ್ನೂ ಅಧ್ಯಕ್ಷ ಸ್ಥಾನದಲ್ಲಿ ಇದ್ದಾರೆ. ವಿಧಾನಸಭಾ ಟಿಕೆಟ್ ಹಂಚಿಕೆ ವೇಳೆ ವ್ಯಾಪಾರ ನಡೆಯಿತು ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರೇ ದೂರು ನೀಡಿ, ಎಫ್‌ಐಆರ್ ಆಗಿ, ತನಿಖೆ ಪ್ರಗತಿ ಹಂತದಲ್ಲಿದೆ. ಅಧ್ಯಕ್ಷ ಸ್ಥಾನ ಖಾಲಿಯಾಗಿಲ್ಲ, ಖಾಲಿಯಾದಾಗ ಮಾಡಬಹುದು. ಆದರೆ, 65 ಸ್ಥಾನಗಳನ್ನು ಗೆದ್ದಂತಹ ಪಕ್ಷವೊಂದು ಚುನಾವಣೆ ಮುಗಿದು ಐದು ತಿಂಗಳಾದರೂ, ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಿಲ್ಲ ಎಂದರೆ ಪಕ್ಷದ ಒಳಗೆ ದೌರ್ಬಲ್ಯ ಏನಿದೆ ಎಂದು ನಾನು ಮಾತನಾಡಲು ಹೋಗುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
ಯಾರನ್ನೇ ಅಧ್ಯಕ್ಷರನ್ನಾಗಿ, ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಿ ಅವರಿಗೆ ಶುಭವಾಗಲಿ. ಅವರು ನಮ್ಮ ತಪ್ಪುಗಳನ್ನು ಕಂಡುಹಿಡಿಯಲಿ, ಜಾಗೃತಗೊಳಿಸಲಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿಹಿಡಿಯಲಿ ಎಂದು ಶುಭ ಹಾರೈಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅಣ್ಣ ಮತ್ತು ಅಕ್ಕ ಒಂದಾದರೆ ಕಾಂಗ್ರೆಸ್ ಪಕ್ಷಕ್ಕೆ ಸವಾಲಲ್ಲವೇ ಎಂದು ಮಾಧ್ಯಮದವರು ಮಾಡಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಇರಬೇಕು, ಕುಸ್ತಿಯಲ್ಲಿ ಎದುರಾಳಿ ಸರಿಯಾಗಿ ಇದ್ದಾಗ ಮಾತ್ರ ಕುಸ್ತಿ ಅಖಾಡಕ್ಕೂ ಗೌರವ. ಪಟ್ಟುಗಳು ಸ್ವಲ್ಪ ಬಿಗಿಯಾಗಿರಬೇಕು ಎಂದು ತಿಳಿಸಿದರು.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯಲು ಶೋಭಾ ಕರಂದ್ಲಾಜೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ನಾವು ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ಉತ್ತರಿಸಿದರು.
ಇದನ್ನೂ ಓದಿ: CM Siddaramaiah : ಹಿಂದಿನ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿಲ್ಲ; ಅವರ ಮನೆ ಹಾಳಾಗ ಎಂದ ಸಿದ್ದರಾಮಯ್ಯ
ಅಕ್ಕ ಅಧ್ಯಕ್ಷರಾದರೆ ಸಂತೋಷ
ಬಿಜೆಪಿ ಮಹಿಳಾ ಅಧ್ಯಕ್ಷರನ್ನು ಮಾಡುವುದು ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಹುನ್ನಾರವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ತಪ್ಪೇನಿದೆ, ಮಾಡಲಿ ಬಿಡಿ, ನಮ್ಮ ಅಕ್ಕ ಅಧ್ಯಕ್ಷರಾದರೆ ಒಳ್ಳೆಯದಲ್ಲವೇ? ಹಿರಿಯ ನಾಯಕರು, ಕೆಜೆಪಿ ಕಟ್ಟಿದ್ದಾರೆ, ಬಿಜೆಪಿ ಬೆಳೆಸಿದ್ದಾರೆ, ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ, ಅವರದೇ ಅನುಭವವಿದೆ, ಅವರು ಅಧ್ಯಕ್ಷರಾದರೆ ಸಂತೋಷ ಎಂದು ಹೇಳಿದರು.