ಬೆಂಗಳೂರು: ರಾಜ್ಯ ಕಾಂಗ್ರೆಸ್ ಅಧಿಕಾರ ಹಂಚಿಕೆ (power Sharing) ರಾಜಕೀಯ ಜೋರಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಪರಸ್ಪರ ಚೆನ್ನಾಗಿಯೇ ಇದ್ದರೂ ಒಳಗೊಳಗೆ ತಂತ್ರಗಳನ್ನು ಹೆಣೆಯುತ್ತಲೇ ಇದ್ದಾರೆ. ಡಿ.ಕೆ. ಶಿವಕುಮಾರ್ ಅವರು ಎರಡೂವರೆ ವರ್ಷದ ನಂತರ ಸಿಎಂ ಆಗೋದು ಹೇಗೆ ಎಂದು ಪ್ಲ್ಯಾನ್ ಮಾಡುತ್ತಿದ್ದರೆ ಸಿದ್ದರಾಮಯ್ಯ ಅವರು ಐದು ವರ್ಷವೂ ಅಧಿಕಾರ ಉಳಿಸಿಕೊಳ್ಳೋದು ಹೇಗೆ ಎಂದು ತಂತ್ರ ಹೆಣೆಯುತ್ತಿದ್ದಾರೆ. ಶುಕ್ರವಾರ ರಾತ್ರಿ ಗೃಹ ಸಚಿವ ಜಿ. ಪರಮೇಶ್ವರ್ ಅವರ ಮನೆಯಲ್ಲಿ ಭೋಜನ ಕೂಟವೊಂದು ನಡೆದಿದ್ದು, ಈ ಮೂಲಕ ಪರಮ್ ಅವರನ್ನು ಸಿಎಂ ಗಾದಿ (Chief Minister post) ಚದುರಂಗದಾಟದಲ್ಲಿ ಚೆಕ್‌ಮೇಟ್ ಆಗಿ ಬಳಸುವ ಆಟ ಶುರುವಾದಂತೆ (Congress Politics) ಕಾಣುತ್ತಿದೆ.
ಸಿದ್ದರಾಮಯ್ಯ ಅವರು ಮುಂದಿನ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಅವರ ಆಪ್ತ ಬಳಗದಲ್ಲಿರುವ ಡಾ.ಎಚ್.ಸಿ ಮಹದೇವಪ್ಪ, ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ ಮೊದಲಾದ ಪ್ರಭಾವಿಗಳು ಆಗಾಗ ಹೇಳುತ್ತಲೇ ಇರುತ್ತಾರೆ. ಕೆಲವು ಶಾಸಕರೂ ಧ್ವನಿ ಸೇರಿಸುತ್ತಾರೆ. ಇದರ ನಡುವೆ ಡಿ.ಕೆ ಶಿವಕುಮಾರ್ ಅವರ ಆಪ್ತ ಬಳಗಕ್ಕೆ ಸೇರಿದ ಕೆಲವು ಶಾಸಕರು ಎರಡೂವರೆ ವರ್ಷದ ಬಳಿಕ ಅಧಿಕಾರ ಹಂಚಿಕೆ ಸೂತ್ರ ಜಾರಿಗೆ ಬರಲಿದೆ ಎಂಬುದನ್ನು ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಆಕ್ಟಿವ್ ಆದಂತೆ ಕಾಣುತ್ತಿದೆ. ಡಿ.ಕೆ. ಶಿವಕುಮಾರ್ ಅವರ ಪರವಾಗಿ ಧ್ವನಿ ಇನ್ನಷ್ಟು ಗಟ್ಟಿಯಾಗುವುದಕ್ಕೆ ಮೊದಲೇ ಅದನ್ನು ತಡೆಯಬೇಕು ಎನ್ನುವ ಉದ್ದೇಶ ಅವರಿಗೆ ಇರುವಂತೆ ಕಾಣುತ್ತಿದೆ. ಪರಮೇಶ್ವರ್ ಅವರ ಮನೆಯಲ್ಲಿ ನಡೆದ ಭೋಜನ ಕೂಟ ಈ ನಿಟ್ಟಿನಲ್ಲಿ ಪ್ರಾಮುಖ್ಯತೆ ಪಡೆದಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಿದ್ದರು. ಇದರಲ್ಲಿ ಸಿದ್ದರಾಮಯ್ಯ, ಡಾ. ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಮತ್ತು ಇತರ ಕೆಲವು ಸಿದ್ದರಾಮಯ್ಯ ಆಪ್ತರು ಭಾಗಿಯಾಗಿದ್ದರು.
ನಿಜವೆಂದರೆ ಸಿದ್ದರಾಮಯ್ಯ ಮತ್ತು ಡಾ. ಜಿ. ಪರಮೇಶ್ವರ್ ಅವರ ನಡುವೆ ಕಳೆದ 10 ವರ್ಷಗಳಿಂದ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. 2013ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಅವರೇ ಸೋಲಿಸಿದರು ಎಂಬ ಆರೋಪವಿದೆ. ಗೆದ್ದರೆ ಸಿಎಂ ಹುದ್ದೆಗೆ ಪ್ರತಿಸ್ಪರ್ಧಿಯಾಗುತ್ತಾರೆ ಎಂಬ ಕಾರಣಕ್ಕಾಗಿ ಈ ತಂತ್ರ ಮಾಡಿದರು ಎಂದು ಹೇಳಲಾಗುತ್ತಿತ್ತು.
ಈ ಬಾರಿಯೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಜಟಾಪಟಿ ಜೋರಾದರೆ ತಮಗೆ ಅವಕಾಶ ಸಿಗಬಹುದು ಎಂದು ಕಾಯುತ್ತಿದ್ದ ನಾಯಕರಲ್ಲಿ ಜಿ ಪರಮೇಶ್ವರ್ ಕೂಡಾ ಒಬ್ಬರಾಗಿದ್ದರು. ಸಿಎಂ ಹುದ್ದೆ ಸಿಗದಿದ್ದರೆ ಡಿಸಿಎಂ ಆದರೂ ಬೇಕು ಎಂದು ಹಕ್ಕು ಕೂಡಾ ಮಂಡಿಸಿದ್ದರು.
ಭೋಜನ ಕೂಟ ಏರ್ಪಡಿಸಿದ ಜಿ ಪರಮೇಶ್ವರ್
ಹೀಗೆ ಎರಡೂ ಬಣಗಳಿಂದ ದೂರವಿದ್ದು ತಾನೇ ಸಿಎಂ ಆಗಬೇಕು ಎಂದು ಕನಸು ಕಾಣುತ್ತಿದ್ದ ಜಿ. ಪರಮೇಶ್ವರ್ ಅವರು ಶುಕ್ರವಾರ ಏಕಾಏಕಿಯಾಗಿ ಭೋಜನ ಕೂಟ ಏರ್ಪಡಿಸಿದ್ದು, ಅದಕ್ಕೆ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸದೆ ಕೇವಲ ಸಿದ್ದರಾಮಯ್ಯ ಟೀಮನ್ನು ಆಹ್ವಾನ ಮಾಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಡಿ.ಕೆ. ಶಿವಕುಮಾರ್ ಅವರ ಬಣ ಎರಡೂವರೆ ವರ್ಷದ ಬಳಿ ಸಿಎಂ ಹುದ್ದೆಗೆ ಬೇಡಿಕೆ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಚೆಕ್ ಮೇಟ್ ಇಡುವುದಕ್ಕಾಗಿ ಜಿ. ಪರಮೇಶ್ವರ್ ಅವರನ್ನು ಬಳಸಿಕೊಂಡರೇ ಎನ್ನುವ ಪ್ರಶ್ನೆ ಕೇಳಿಬಂದಿದೆ.
ಈ ಭೋಜನ ಕೂಟದ ಸಂದರ್ಭದಲ್ಲಿ ಅಧಿಕಾರ ಹಂಚಿಕೆಯ ವಿಚಾರವೂ ಚರ್ಚೆಗೆ ಬಂದಿದೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಅವರು ಇದನ್ನು ಒಪ್ಪಿಕೊಂಡಿದ್ದಾರೆ.
ಈ ನಡುವೆ ಜಿ. ಪರಮೇಶ್ವರ್ ಅವರು ಒಂದೊಮ್ಮೆ 50:50 ಅಧಿಕಾರ ಹಂಚಿಕೆಯ ಸೂತ್ರ ಇದೆ ಎಂದಾದರೆ ತಮ್ಮ ಹೆಸರನ್ನೂ ಪರಿಗಣಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅಂದರೆ, ಸಿದ್ದರಾಮಯ್ಯ ಅವರು ಸೀಟು ಬಿಟ್ಟುಕೊಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡರೆ ತಾನು ಕೂಡಾ ಸಿಎಂ ಕುರ್ಚಿಯ ಆಕಾಂಕ್ಷಿ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.
ತಾನು ಆಕಾಂಕ್ಷಿ ಎಂಬ ಮಾತನ್ನು ಜಿ. ಪರಮೇಶ್ವರ್ ಅವರು ಹೇಳಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅದರ ಹಿಂದೆ ವರ್ಕ್ ಆಗಿರುವುದು ಸಿದ್ದರಾಮಯ್ಯ ಮೈಂಡ್ ಎನ್ನಲಾಗುತ್ತಿದೆ.
ಏನಿದು ಪರಮೇಶ್ವರ್ ಎಂಟ್ರಿ ಪ್ರಸಂಗ?
ಒಂದು ವೇಳೆ, ಎರಡೂವರೆ ವರ್ಷದ ಬಳಿಕ ಅಧಿಕಾರ ಹಂಚಿಕೆಗೆ ಡಿ.ಕೆ. ಶಿವಕುಮಾರ್ ಬಣ ಪಟ್ಟು ಹಿಡಿದರೆ ಆಗ ನೀವು ಮಾತ್ರವಲ್ಲ, ಇನ್ನೂ ಹಲವರು ಆಕಾಂಕ್ಷಿಗಳಿದ್ದಾರೆ ಎಂಬ ಸಂದೇಶವನ್ನು ರವಾನಿಸಲಾಗಿದೆ. ಆಗ ದಲಿತ ಮುಖ್ಯಮಂತ್ರಿ ಮೊದಲಾದ ವಿಚಾರಗಳನ್ನು ಎತ್ತಿ ಡಿ.ಕೆ. ಬಾಯಿ ಮುಚ್ಚಿಸಬಹುದು ಎನ್ನುವುದು ಸಿದ್ದರಾಮಯ್ಯ ಲೆಕ್ಕಾಚಾರ ಎನ್ನಲಾಗಿದೆ. ನನ್ನನ್ನು ಮುಟ್ಟಲು ಬಂದರೆ ನಾನು ಬೇರೆ ರೀತಿಯಲ್ಲಿ ಕೆಡವಬಲ್ಲೆ ಎಂಬ ಚೆಕ್‌ಮೇಟ್ ತಂತ್ರವನ್ನು ಸಿದ್ದರಾಮಯ್ಯ ಬಳಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: DK Shivakumar : ಅಧಿಕಾರ ಹಂಚಿಕೆ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಡಿಕೆಶಿ ವಾರ್ನಿಂಗ್
ಸಿಎಂ ಕುರ್ಚಿ ಖಾಲಿ ಇಲ್ಲ ಎಂದ ಎಚ್.ಸಿ. ಮಹದೇವಪ್ಪ
ಭೋಜನ ಕೂಟದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಆಪ್ತ ಡಾ.ಎಚ್.ಸಿ, ಮಹದೇವಪ್ಪ ಅವರು, ʻʻಐದು ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿ ಇರ್ತಾರೆ. ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಊಟಕ್ಕೆ ಕರೆದಿದ್ದರು.. ಹೋಗಿದ್ದೆವು. ಮಾತನಾಡಿಕೊಂಡು ಊಟ ಮಾಡಿದೆವು ಅಷ್ಟೆ ಎಂದು ಹಾರಿಕೆಯ ಮಾತು ಆಡಿರುವ ಅವರು, ಪಕ್ಕದಲ್ಲೇ ಇರೋ ಡಿಕೆಶಿ ಅವರನ್ನು ಯಾಕೆ ಕರೆದಿಲ್ಲ ಎಂದು ಪರಮೇಶ್ವರ್ ಅವರನ್ನೇ ಕೇಳಬೇಕು ಎಂದರು.