Site icon Vistara News

Congress Politics : ನಿಗಮ, ಮಂಡಳಿಗೆ ಗ್ರೀನ್‌ ಸಿಗ್ನಲ್‌; ಶಾಸಕರ ಜತೆ ಕಾರ್ಯಕರ್ತರ ಲಾಬಿ ಜೋರು

Prasad abbayya and team at DK Shivakumar home

ಬೆಂಗಳೂರು: ರಾಜ್ಯದಲ್ಲಿ ಬಹುಸಮಯದಿಂದ ನನೆಗುದಿಗೆ ಬಿದ್ದಿದ್ದ ನಿಗಮ-ಮಂಡಳಿ (Boards and Corporations) ನೇಮಕಾತಿಗೆ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ (High command Green Signal) ನೀಡಿದೆ. ಇದೀಗ ಶಾಸಕರು, ಮೇಲ್ಮನೆ ಸದಸ್ಯರು ಮತ್ತು ಕಾರ್ಯಕರ್ತರನ್ನು ಒಳಗೊಂಡ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಸದ್ಯವೇ 45ರಿಂದ 50 ಮಂದಿಯನ್ನು ನಿಗಮ ಮಂಡಳಿಗೆ ನೇಮಕ (Congress Politics) ನಡೆಯಲಿದೆ.

ಈ ನಡುವೆ, ನಿಗಮ, ಮಂಡಳಿ ನೇಮಕಾತಿ ನಡೆಯಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಆಕಾಂಕ್ಷಿಗಳು ಹುದ್ದೆಗಾಗಿ ಮುಗಿಬಿದ್ದಿದ್ದಾರೆ. ಒಬ್ಬ ಶಾಸಕರಂತೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಮನೆ ಮುಂದೆಯೇ ಪ್ರದರ್ಶನಕ್ಕೆ ಮುಂದಾದರು.

ಪಕ್ಷ ನಿಷ್ಠರು, ಮಾಜಿ ಶಾಸಕರಿಗೂ ಆದ್ಯತೆ ನೀಡಲು ಖರ್ಗೆ ಸೂಚನೆ

ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡುವಾಗ ಪಕ್ಷ ನಿಷ್ಠರಿಗೆ, ಪ್ರಾಮಾಣಿಕ ಕಾರ್ಯಕರ್ತರಿಗೆ ಆದ್ಯತೆ ನೀಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಸಿಗದೇ ಇದ್ದರೂ ಪಕ್ಷದಲ್ಲಿದ್ದು ಕೆಲಸ ಮಾಡಿದವರಿಗೆ ಆದ್ಯತೆ ನೀಡಲು ಅವರು ಹೇಳಿದ್ದಾರೆ ಎನ್ನಲಾಗಿದೆ.

ಇದುವರೆಗೆ ಶಾಸಕರು ಹಾಗೂ ಕಾರ್ಯಕರ್ತರಲ್ಲಿ ಯಾರನ್ನು ನಿಗಮ ಮಂಡಳಿಗೆ ನೇಮಕ ಮಾಡಬೇಕು ಎಂಬ ಗೊಂದಲ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವೆ ಈ ಬಗ್ಗೆ ಚರ್ಚೆಗಳು ಅಂತಿಮಗೊಂಡಿರಲಿಲ್ಲ. ಹೀಗಾಗಿ ಈಗ ಹೈಕಮಾಂಡ್‌ ಮಾತು ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.

ಶಾಸಕರಿಗೋ ಕಾರ್ಯಕರ್ತರಿಗೋ?

ನಿಗಮ-ಮಂಡಳಿ ನೇಮಕ ವಿಚಾರದಲ್ಲಿ ಯಾರಿಗೆ ಅವಕಾಶ ನೀಡಬೇಕು ಎನ್ನುವ ಬಗ್ಗೆ ಗೊಂದಲವಿತ್ತು. ಮಂತ್ರಿ ಸ್ಥಾನ ಸಿಗದೆ ಇದ್ದ ಶಾಸಕರಿಗೆ ಇದನ್ನು ನೀಡುವ ಬಗ್ಗೆ ಹೆಚ್ಚು ಒಲವು ಇತ್ತು. ಆದರೆ, ಕಾರ್ಯಕರ್ತರಿಗೆ ನೀಡಬೇಕು ಎಂಬ ಬಗ್ಗೆ ಭಾರಿ ಬೇಡಿಕೆಗಳಿವೆ. ಅದರಲ್ಲೂ ಮುಖ್ಯವಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತವರು ಮುಂದಿನ ಚುನಾವಣೆಯ ಸಿದ್ಧತೆಗಾಗಿ ಸ್ಥಾನಮಾನವನ್ನು ಬಯಸುತ್ತಿದ್ದಾರೆ. ಇನ್ನು ಕೆಲವರು ಕಳೆದ ಚುನಾವಣೆಯಲ್ಲಿ ಟಿಕೆಟ್‌ ಸಿಗದೆ ಅನ್ಯಾಯವಾಗಿದೆ, ಇಲ್ಲಿ ನ್ಯಾಯ ಕೊಡಿಸಿ ಎಂದು ಕೇಳುತ್ತಿದ್ದಾರೆ. ಆದರೆ, ಯಾರಿಗೆ ನೀಡಬೇಕು ಎಂಬ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇದೀಗ ಹೈಕಮಾಂಡ್‌ ಒಂದಿಷ್ಟು ಶಾಸಕರು ಮತ್ತು ಹೆಚ್ಚಿನ ಕಾರ್ಯಕರ್ತರಿಗೆ ಸ್ಥಾನಮಾನ ನೀಡುವ ಫಾರ್ಮುಲಾ ರೂಪಿಸಿರುವುದರಿಂದ ಬೇಡಿಕೆ ಜೋರಾಗಿದೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಶಕ್ತಿ ಪ್ರದರ್ಶನ ಆರಂಭವಾಗಿದೆ.

ಡಿ.ಕೆ ಶಿವಕುಮಾರ್‌ ಮನೆ ಮುಂದೆ ಪ್ರದರ್ಶನ

ಈ ನಡುವೆ, ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಬೆಂಬಲಿಗರು ಡಿ.ಕೆ. ಶಿವಕುಮಾರ್‌ ಮನೆ ಮುಂದೆ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ಪ್ರಸಾದ್‌ ಅಬ್ಬಯ್ಯ ಅವರಿಗೆ ಕೆ.ಆರ್. ಐ.ಡಿ.ಸಿ.ಎಲ್‌ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಶಾಸಕ ಪ್ರಸಾದ್ ಅಬ್ಬಯ್ಯ ಅವರು ಕೂಡಾ ಶಕ್ತಿ ಪ್ರದರ್ಶನಕ್ಕೆ ಆಗಮಿಸಿದಾಗ ಡಿಸಿಎಂ ಡಿಕೆ ಶಿವಕುಮಾರ್ ಮನೆಯಿಂದ ಹೊರಗೆ ಬಂದು ಮಾತುಕತೆ ನಡೆಸಿದರು. ಇಲ್ಲಿ ಪ್ರದರ್ಶನ ಬೇಡ, ಕೆಕೆ ಗೆಸ್ಟ್ ಹೌಸ್ ಕಡೆ ಬನ್ನಿ ಎಂದು ಸೂಚಿಸಿದರು. ಅದರ ಬೆನ್ನಿಗೇ ಪ್ರದರ್ಶನ ಕೆ.ಕೆ. ಗೆಸ್ಟ್‌ ಹೌಸ್‌ನಲ್ಲಿ ಮುಂದುವರಿಯಿತು.

ಸ್ಥಾನ ಗ್ಯಾರಂಟಿ, ಪ್ರಬಲ ನಿಗಮ ಕೊಡಿ ಎನ್ನುವುದು ಬೇಡಿಕೆ ಎಂದ ಪ್ರಸಾದ್‌

ಈ ನಡುವೆ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ ಅವರು, ʻʻನಾವು ಧರಣಿ‌ ಮಾಡುತ್ತಿಲ್ಲ, ನನ್ನ ಬೆಂಬಲಿಗರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮನವಿ ಮಾಡಲು ಬಂದಿದ್ದಾರೆ.ʼʼ ಎಂದು ಹೇಳಿದರು.

ಇದನ್ನೂ ಓದಿ: BY Vijayendra : ರಾಜ್ಯದಲ್ಲಿ SBI ಸ್ಥಾಪಿಸಿದ ಕಾಂಗ್ರೆಸ್‌; ಶಿವಕುಮಾರ್‌ ಬ್ಯಾಂಕ್‌ ಆಫ್‌ ಇಂಡಿಯಾ!

ʻʻಸಿಎಂ, ಡಿಸಿಎಂ ಇಬ್ಬರೂ ನಿಗಮಮಂಡಳಿ ಅಧ್ಯಕ್ಷ ಸ್ಥಾನ ಕೊಡ್ತೇನೆ ಎಂದು ಹೇಳಿದ್ದಾರೆ. ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ವಿಚಾರದಲ್ಲಿ ಗೊಂದಲ ಇಲ್ಲ. ಆದರೆ ಪ್ರಬಲ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಬೇಕು. ಸಚಿವ ಸ್ಥಾನ ಸಿಕ್ಕಿಲ್ಲದೆ ಇರುವುದರಿಂದ ಸಚಿವ ಸ್ಥಾನಕ್ಕೆ ಸರಿಸಮಾನವಾದ ನಿಗಮ ಮಂಡಳಿ ನೀಡಬೇಕು ಎಂದು ಮನವಿ ಮಾಡಿದ್ದಾರೆʼʼ ಎಂದು ಪ್ರಸಾದ್‌ ಅಬ್ಬಯ್ಯ ಹೇಳಿದರು.

Exit mobile version