ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarakiholi) ಅವರು ಬೆಳಗಾವಿಯ ಸುಮಾರು 20 ಶಾಸಕರನ್ನು ಕರೆದುಕೊಂಡು ಮೈಸೂರು ದಸರಾಕ್ಕೆ (Mysore Dasara Trip) ಹೊರಟಿದ್ದರು. ನಡೆಯ ಬಗ್ಗೆ ಭಾರಿ ಚರ್ಚೆಗಳು ಆರಂಭವಾದ ಹಿನ್ನೆಲೆಯಲ್ಲಿ ಹೈಕಮಾಂಡ್ (Congress High command) ಮಧ್ಯ ಪ್ರವೇಶ ಮಾಡಿ ಅದಕ್ಕೆ (Congress Politics) ತಡೆಯೊಡ್ಡಿದೆ.
ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ಈ ನಿಟ್ಟಿನಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಮೈಸೂರಿಗೆ ಹೋಗಲು ಬಸ್ ಬುಕ್ ಮಾಡಿದ್ದರು. ಆದರೆ, ಹೈ ಕಮಾಂಡ್ ತಕ್ಷಣ ಮಧ್ಯಪ್ರವೇಶ ಮಾಡಿ, ಈ ಸಮಯದಲ್ಲಿ ಬಸ್ ನಲ್ಲಿ ಶಾಸಕರ ನ್ನು ಒಗ್ಗೂಡಿಸಿಕೊಂಡು ಹೋಗುವುದು ಬೇಡ. ವಿಪಕ್ಷಗಳಿಗೆ ನಾವೇ ಆಹಾರ ಕೊಟ್ಟಂತೆ ಆಗಲಿದೆ ಎಂದು ಸತೀಶ್ ಜಾರಕಿಹೊಳಿ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ ಎನ್ನಲಾಗಿದೆ. ಹೀಗಾಗಿ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವ ವಿಚಾರ ಕೈ ಬಿಟ್ಟಿದ್ದಾರೆ ಸತೀಶ್ ಜಾರಕಿಹೊಳಿ.
ಮುಂದೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದೇ ಹೋಗ್ತೇವೆ
ಈ ಬೆಳವಣಿಗೆ ಬಗ್ಗೆ ಸ್ವತಃ ಸತೀಶ್ ಜಾರಕಿ ಹೊಳಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಶಾಸಕರೆಲ್ಲ ಸೇರಿ ಮೈಸೂರಿಗೆ ಹೋಗಬೇಕು ಅಂತ ಮಾತನಾಡಿದ್ದೆವು. ದಸರಾ ನೋಡೋಕೆ ಬನ್ನಿ ಅಂತ ಅಲ್ಲಿನ ಶಾಸಕರೂ ಹೇಳ್ತಿದ್ದರು. ಕೆಲವು ನಮ್ಮ ಲೈಕ್ ಮೈಂಡೆಡ್ ಶಾಸಕರು ಹೋಗಬೇಕು ಅಂತ ಇತ್ತು. ನಮ್ಮನ್ನು ಎಲ್ಲಾದ್ರೂ ಟ್ರಿಪ್ ಕರೆದುಕೊಂಡು ಹೋಗಿ ಅಂತ ಕೆಲವರು ಹೇಳ್ತಿದ್ರು. ಹಾಗೆ ಸಮಾನ ಮನಸ್ಕರು ಹೋಗಬೇಕು ಅಂತ ಇತ್ತು. ಈಗ ದಸರಾ ಹಬ್ಬ ಬೇಡ ಅಂತ ಇದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ʻʻಮುಂದೆ ಹೋಗಬೇಕು ಅಂತಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗ್ತೇವೆ. ಇದು ವಿದಿನ್ ದಿ ಪಾರ್ಟಿ, ಯಾವುದೇ ಬಣ ಗಿಣ ಅಂತೇನಲ್ಲʼʼ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.
ಜಾರಕಿಹೊಳಿ ಭೇಟಿ ಮಾಡಿದ ಅಶೋಕ್ ಪಟ್ಟಣ್
ಈ ನಡುವೆ ಸಿದ್ದರಾಮಯ್ಯ ಅವರಿಗೆ ತೀರಾ ಆಪ್ತರಾಗಿರುವ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಅವರು ಕೂಡಾ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಹೋಗಿದ್ದರು. ಅದರ ಬಗ್ಗೆ ಅವರು ಕೂಡಾ ಪ್ರತಿಕ್ರಿಯಿಸಿ ತಾನು ಹೋಗಿದ್ದು ನಿಜ ಎಂದಿದ್ದಾರೆ.
ʻʻನಾನು ಸತೀಶ್ ಜಾರಕಿಹೊಳಿ ಮನೆಗೆ ಹೋಗಿದ್ದು ನಿಜ. ಅವರ ಮನೆಯಲ್ಲಿ ತಿಂಡಿ ತಿಂದೆ. ನನ್ನ ಕ್ಷೇತ್ರದ ಕೆಲಸ ಮಾಡಿಸಿಕೊಂಡು ಬಂದೆ. ನಾನು ಹೋದಾಗ ಎಂಟು ಜನ ಶಾಸಕರು ಇದ್ರು. ಎಲ್ಲರೂ ತಿಂಡಿ ಮಾಡಿದ್ವಿʼʼ ಎಂದರು ಅಶೋಕ್ ಪಟ್ಟಣ್.
ʻʻಅವರೆಲ್ಲರೂ ಅನುದಾನ ಕೇಳಕ್ಕೆ ಬಂದಿದ್ರು. ಎರಡು ತಿಂಗಳಲ್ಲಿ ಅನುದಾನದ ಸಮಸ್ಯೆ ಬಗೆಹರಿಯುತ್ತದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮೈಸೂರಿಗೆ ಹೋಗುವುದಕ್ಕೆ ನಮ್ಮನ್ನ ಕರೆದಿರಲಿಲ್ಲ.. ಇದು ಸಭೆಯೂ ಅಲ್ಲ. ಬಂದವರಿಗೆ ಮೊದಲಿಂದಲೂ ಅವರು ಮನೆಯಲ್ಲಿ ತಿಂಡಿ ಹಾಕ್ತಾರೆʼʼ ಎಂದು ಹೇಳಿದ ಪಟ್ಟಣ್, ಬೆಳಗಾವಿ ರಾಜಕಾರಣದ ಬಗ್ಗೆ ಚರ್ಚೆ ಆಗಿಲ್ಲ ಎಂದರು. ಜತೆಗೆ ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಲೋಕಸಭಾ ಕ್ಷೇತ್ರ ಗೆಲ್ತೀವಿ ಎಂದರು.
ಇದನ್ನೂ ಓದಿ : Commission politics: ಕಾಂಗ್ರೆಸ್‌ಗೆ ಕಮಿಷನ್ ತಿರುಗುಬಾಣ; ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್ ಎಂದ ಬಿಜೆಪಿ
ಅನುದಾನ ಅಸಮಾಧಾನ ನಿಜ ಎಂದ ಅಶೋಕ್ ಪಟ್ಟಣ್
ʻʻಬಿಜೆಪಿ ನಾಯಕರು ಶಾಸ್ತ್ರ ಹೇಳೋದು ಕಲಿತುಕೊಂಡು ಬಂದಿದ್ದಾರೆ. ಹಿಮಾಲಯಕ್ಕೆ ಹೋಗಿ ಜ್ಯೋತಿಷ್ಯ ಹೇಳೋದು ಕಲಿತುಕೊಂಡು ಬಂದಿದ್ದಾರೆ. ನಮ್ಮ ಶಾಸಕರನ್ನ ಆಪರೇಷನ್ ಮಾಡಲು ಪ್ರಯತ್ನ ಮಾಡ್ತಿದ್ದಾರೆ. ಆದರೆ ನಮ್ಮದು ಸರ್ಕಾರ ಸುಭದ್ರ ಸರ್ಕಾರ. ಸಮ್ಮಿಶ್ರ ಸರ್ಕಾರ ಬೀಳಿಸಲು ಇವರು ಏನೆಲ್ಲಾ ಮಾಡಿದ್ರು ಅನ್ನೋದು ಗೊತ್ತಿದೆ. ನಮ್ಮ ಸರ್ಕಾರ ಬೀಳಿಸಲು ಸಾಧ್ಯವಿಲ್ಲʼʼ ಎಂದು ಹೇಳಿದ ಅಶೋಕ್ ಪಟ್ಟಣ್ ಅನುದಾನ ವಿಚಾರದಲ್ಲಿ ಕೆಲವು ಶಾಸಕರಿಗೆ ಅಸಮಾಧಾನ ಇರೋದು ನಿಜ, ಅದನ್ನ ಸಿದ್ದರಾಮಯ್ಯ, ಡಿಕೆಶಿ ಸರಿಪಡಿಸುತ್ತಾರೆ ಎಂದರು.