ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ಹೊರತುಪಡಿಸಿ ಮತ್ತೆ ಮೂವರು ಉಪಮುಖ್ಯಮಂತ್ರಿಗಳನ್ನು (Three Deputy Chief ministers) ನೇಮಕ ಮಾಡಬೇಕು ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಅವರ ಹೇಳಿಕೆಯಿಂದಾಗಿ ಹುಟ್ಟಿಕೊಂಡ ಚರ್ಚೆ ಇನ್ನಷ್ಟು ಜೋರಾಗಿದೆ. ಒಂದು ಕಡೆ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಅವರು ಹೇಳಿಕೆಯನ್ನು ಸಮರ್ಥಿಸಿದ್ದರೆ (Congress Politics), ಅತ್ತ ಮಾಗಡಿ ಶಾಸಕ ಬಾಲಕೃಷ್ಣ (MLA Magadi Balakrishna) ಚೆನ್ನಾಗಿ ಬೆವರಿಳಿಸಿದ್ದಾರೆ.
ಡಿಸಿಎಂ ಹುದ್ದೆ ಮುಗಿದ ಅಧ್ಯಾಯ, ತೆವಲಿಗೆ ಮಾತಾಡ್ಬೇಡಿ ಎಂದ ಬಾಲಕೃಷ್ಣ
ʻʻರಾಜಣ್ಣ ಅವರಿಗೆ ಹೇಳಲು ಬಯಸುತ್ತೇನೆ. ಡಿಸಿಎಂ ಹುದ್ದೆ ಮುಗಿದ ಅಧ್ಯಾಯ. ವೈಯಕ್ತಿಕ ತೆವಲುಗಳನ್ನು ತೀರಿಸಿಕೊಳ್ಳಲು ಹೇಳಿಕೆ ಕೊಡುವುದನ್ನು ಬಿಡಬೇಕುʼʼ ಎಂದು ಸಚಿವ ಕೆ.ಎನ್ ರಾಜಣ್ಣಗೆ ಮಾಗಡಿ ಶಾಸಕ ಬಾಲಕೃಷ್ಣ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ʻʻನಾವು ಈಗ ಒಗ್ಗಟ್ಟಾಗಿ ಬರ ಎದುರಿಸಬೇಕು. ನಾಯಕರೂ ಕೂಡ ಪಕ್ಷ ಸಂಘಟನೆ ಮುಂದಿನ ಲೋಕಸಭೆ ಬಗ್ಗೆ ಯೋಚನೆ ಮಾಡಬೇಕು. ಅದು ಬಿಟ್ಟು ಈಗ ಅಪ್ರಸ್ತುತ ವಿಚಾರ ಎತ್ತುವುದು ಬೇಡ. 15 ಜನ ಡಿಸಿಎಂ ಮಾಡಿದ್ರೂ ಏನಾದ್ರೂ ಬದಲಾಗತ್ತಾ? ಡಿಸಿಎಂ ಹುದ್ದೆ ಇವತ್ತಿನ ಚರ್ಚೆಯಾಗಬಾರದು. ಈ ಸಂದರ್ಭದಲ್ಲಿ ಅಪ್ರಸ್ತುತʼʼ ಎಂದು ಮಾಗಡಿ ಬಾಲಕೃಷ್ಣ ಹೇಳಿದರು.
ʻʻಇವರು ಡಿಸಿಎಂ ಹುದ್ದೆಗಾಗಿ ಬಡಿದಾಡ್ತಿದ್ದಾರಲ್ಲ, ಕಾರ್ಯಕರ್ತರಿಗೆ ಏನು ಕೊಟ್ಟಿದ್ದಾರೆ? ನಿಗಮ ಮಂಡಳಿಗಳು ಇನ್ನೂ ಹಂಚಿಕೆ ಆಗಿಲ್ಲ. ಅದರ ಬಗ್ಗೆ ಏನು ಹೇಳೋಣ. ನಾನು ಮಂತ್ರಿ ಆಗಬೇಕಿತ್ತು, ಆಗಲಿಲ್ಲ. ನಾನೂ ರಾಜಣ್ಣನಿಗಿಂತ ಸೀನಿಯರ್. ಆದ್ರೂ ಮಂತ್ರಿ ಮಾಡಲಿಲ್ಲ. ನಾನು ಮಂತ್ರಿ ಆಗಲಿಲ್ಲ ಅಂತ ಜಗಳ ಮಾಡ್ಲಾ ಕುಸ್ತಿ ಮಾಡ್ಲಾ?ʼʼ ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ʻʻಸೀನಿಯರ್ ಲೀಡರ್ ಗಳು ಮಂತ್ರಿ ಆಗಲಿಲ್ಲ ಸಿಎಂ ಆಗಲಿಲ್ಲ ಡಿಸಿಎಂ ಆಗಲಿಲ್ಲ ಅಂತ ಹೊರಟ್ರೆ, ಎಲ್ಲ ವರ್ಗಕ್ಕೂ ಡಿಸಿಎಂ ಮಾಡಬೇಕು ಅಂದ್ರೆ 15 ಜನ ಡಿಸಿಎಂ ಮಾಡಬೇಕಾಗುತ್ತದೆ. ಮೂರು ಜನ ಸಿಎಂ ಮಾಡಬೇಕಾಗುತ್ತದೆʼʼ ಎಂದು ಹೇಳಿದ ಮಾಗಡಿ ಬಾಲಕೃಷ್ಣ, ಏನೇ ಬೇಡಿಕೆ ಇದ್ರೂ ರಾಜಣ್ಣ ಇರಲಿ ಯಾರೇ ಇರಲಿ ನಾಲ್ಕು ಗೋಡೆ ಮಧ್ಯೆ ಹೇಳಲಿ. ಬೀದಿಲಿ ಬಂದು ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿ ಮಾಡೋದು ಬೇಡ ಎಂದರು.
ʻʻಕಾರ್ಯಕರ್ತರಿಗಾದರೂ ನಿಗಮ ಮಂಡಳಿ ಮಾಡಲಿ. ಅದರ ಬಗ್ಗೆ ಯಾವ ಮಂತ್ರಿಗಳೂ ಮಾತಾಡ್ತಿಲ್ಲ. ಮಂತ್ರಿಗಳಾದವರು ಮಜಾ ಮಾಡಿಕೊಂಡು ಇದ್ದಾರೆ. ಯಾರನ್ನೋ ಮೆಚ್ಚಿಸುವುದಕ್ಕೆ ಹೇಳಿಕೆ ಕೊಡುವುದು ಬೇಡʼʼ ಎಂದು ನೇರವಾಗಿ ಹೇಳಿದರು.
ರಾಜಣ್ಣ ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಕೇಳಿದ ಪರಮೇಶ್ವರ್
ʻʻಡಿಸಿಎಂ ವಿಚಾರದಲ್ಲಿ ರಾಜಣ್ಣ ಹೇಳೋದರಲ್ಲಿ ತಪ್ಪಿಲ್ಲ. ಅವರು ಲೋಕಸಭಾ ಚುನಾವಣೆ ದೃಷ್ಟಿಯಿಂದ ಹೇಳಿದ್ದಾರೆ. ಪಕ್ಷ ಇನ್ನಷ್ಟು ಸದೃಢವಾಗಬೇಕು. ಆ ನಿರ್ದಿಷ್ಟ ಸಮುದಾಯಗಳನ್ನು ಸೆಳೆಯಬೇಕು ಎಂಬ ದೃಷ್ಟಿಯಿಂದ ಹೇಳಿದ್ದಾರೆ. ಒಂದು ಸಂದೇಶ ಹೋಗಲಿ ಎಂದು ಅವರು ಹೇಳಿದ್ದಾರೆʼʼ ಎಂದು ಜಿ. ಪರಮೇಶ್ವರ್ ಸಮರ್ಥಿಸಿದರು.
ʻʻರಾಜಣ್ಣ ಅವರು ತಪ್ಪು ಮಾಡಿದರು, ತಪ್ಪು ಹೇಳಿದರು ಅನ್ನೋದು ತಪ್ಪು. ರಾಜಣ್ಣ ಅವರು ವೈಯುಕ್ತಿ ಹೇಳಿಕೆ ಕೊಟ್ಟಿದ್ದಾರೆ. ನಾನು ವೈಯುಕ್ತಿಕ ಹೇಳಿಕೆ ಕೊಡುತ್ತೇನೆ. ಆದರೆ ಅವರು ಯಾವ ಅರ್ಥದಲ್ಲಿ ಕೊಟ್ಟಿದ್ದಾರೆ ಅನ್ನೋದು ಮುಖ್ಯ. ಅವರು ಏನು ಹೇಳಿದರೂ ಸಂಪೂರ್ಣವಾಗಿ ಎಲ್ಲವೂ ಹೈಕಮಾಂಡ್‌ಗೆ ಬಿಟ್ಟಿರುವುದು. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆʼʼ ಎಂದು ಪರಮೇಶ್ವರ್ ಹೇಳಿದರು.
ಕಡಿಮೆ ಸೀಟು ಬಂದರೆ ಸರಕಾರಕ್ಕೆ ಡೇಂಜರ್ ಎಂದಿದ್ದ ರಾಜಣ್ಣ
ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸೀಟು ಬಂದರೆ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತದೆ. ಹೀಗಾಗಿ ಅದನ್ನು ವಿಫಲಗೊಳಿಸಲು ನಾವು ಹೆಚ್ಚು ಸ್ಥಾನ ಗಳಿಸಲೇಬೇಕು. ಹೀಗಾಗಿ ಕೆಲವೊಂದು ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೆ.ಎನ್. ರಾಜಣ್ಣ ಹೇಳಿದ್ದರು. ಅದನ್ನು ಪರಮೇಶ್ವರ್ ಭಾಗಶಃ ಒಪ್ಪಿಕೊಂಡರು.
ಲೋಕಸಭೆಯಲ್ಲಿ ಸೋತರೆ ಜನಾದೇಶ ಇಲ್ಲ ಎಂದು ಸರ್ಕಾರ ವಿಸರ್ಜಸಿದ ಘಟನೆ ನಡೆದಿದೆ ಎಂಬ ರಾಜಣ್ಣ ಹೇಳಿಕೆಗೆ, ಇದ್ದರೆ ಇರಬಹುದು. ಹಿಂದೆ ಅಂತಹ ಘಟನೆಗಳು ನಡೆದಿದ್ದಾವಲ್ಲ. ಹಿಂದೆ ರಾಮಕೃಷ್ಣ ಹೆಗ್ಡೆ ಅವರ ಕಾಲದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ನಡೆದಿದೆ. ಆದರೆ ಈ ಬಾರಿ ಹಾಗೆ ಆಗಬಾರದು ಎಂದು ಎಚ್ಚರಿಕೆ ಕೊಟ್ಟಿರಬಹುದು. ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಬಂದರೆ ನಮಗೆ ಅನುಕೂಲ ಅಲ್ವಾ ಅದಕ್ಕೆ ಇದೆಲ್ಲಾ ಸರ್ಕಸ್ ನಡೆಯುತ್ತಿರುವುದು ಎಂದರು ಜಿ. ಪರಮೇಶ್ವರ್.
ಹೊಸ ಡಿಸಿಎಂ ಅಗತ್ಯವಿಲ್ಲ ಎಂದ ಸಚಿವ ನಾಗೇಂದ್ರ
ʻʻರಾಜಣ್ಣ ಅವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಾದೇಶಿಕವಾರು ಅಲ್ಲ, ಜಾತಿವಾರು ಕೇಳಿದ್ದಾರೆ, ತಪ್ಪೇನಿಲ್ಲ. ಇದು ನಮ್ಮ ಆತಂರಿಕ ವಿಚಾರ, ಪಕ್ಚದ ವೇದಿಕೆಯಲ್ಲಿ ಚರ್ಚೆ ಮಾಡಬೇಕಾದ ವಿಚಾರ. ಸಿಎಂ ಹಾಗೂ ಡಿಸಿಎಂ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಅಂತ ಅನಿವಾರ್ಯತೆ ಇದ್ದರೆ ಜಾತಿವಾರು ಡಿಸಿಎಂ ಮಾಡಬಹುದು. ಇಲ್ಲ ಚೆನ್ನಾಗಿ ಆಡಳಿತ ಆಗ್ತಿದೆ ಅಂದ್ರೆ ಏನು ಅವಶ್ಯಕತೆ ಇರೋದಿಲ್ಲʼʼ ಎಂದು ಸಚಿವ ನಾಗೇಂದ್ರ ಹೇಳಿಕೆ ನೀಡಿದ್ದಾರೆ.
ʻʻಡಿಸಿಎಂ ನೇಮಕವೇ ಮುಖ್ಯ ವಿಚಾರ ಆಗುವುದಿಲ್ಲ. ಐದು ಜನ ಡಿಸಿಎಂ ಇದ್ದ ರಾಜ್ಯಗಳೂ ಚುನಾವಣೆಯಲ್ಲಿ ಸೋತಿವೆ. ಅಂತಹ ಸನ್ನಿವೇಶ ಇಲ್ಲಿ ಇಲ್ಲ. ನಮ್ಮ ಮೂಲ ಉದ್ದೇಶ ಉತ್ತಮ ಆಡಳಿತ ಕೊಡೋದು, ರೈತರ ಹಿತ ಕಾಯೋದುʼʼ ಎಂದರು.
ರಾಜಣ್ಣ ಹೇಳಿಕೆ ಕುರಿತು ಹೈಕಮಾಂಡ್ ತೀರ್ಮಾನ ಎಂದ ಎಂ.ಬಿ ಪಾಟೀಲ್
ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಮೂವರು ಡಿಸಿಎಂಗಳು ಇರಬೇಕು ಎಂದು ಹೇಳಿರುವ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಹೈಕಮಾಂಡ್ ಮನಸ್ಸು ಮಾಡಿದರೆ ಮೂವರಷ್ಟೇ ಅಲ್ಲ, ನಾಲ್ವರು ಡಿಸಿಎಂ ಬೇಕಾದರೂ ಮಾಡಬಹುದು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಅನೇಕ ಸಮುದಾಯಗಳಿಗೆ ಇನ್ನೂ ರಾಜಕೀಯ ಅಧಿಕಾರ ನೀಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜಣ್ಣ ಮೂರು ಡಿಸಿಎಂ ಬಗ್ಗೆ ಮಾತನಾಡಿರಬಹುದು. ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಆದರೆ ದುರಾಸೆ ಇರಬಾರದು ಅಷ್ಟೆ. ಬೇಕು-ಬೇಡಗಳ ಬಗ್ಗೆ ಬಹಿರಂಗವಾಗಿ ಏನೂ ಹೇಳಲ್ಲ; ಬದಲಿಗೆ ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡುತ್ತೇನೆ ಎಂದು ಅವರು ಅಭಿಪ್ರಾಯಪಟ್ಟರು.
ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ಸಿಗೆ ಲಾಭವಾಗಲಿದೆ. ಇದರಿಂದ ಜೆಡಿಎಸ್ ಬಣ್ಣ ಬಯಲಾಗಿದೆ. ನಮ್ಮ ಪಕ್ಷವು ಏನಿಲ್ಲವೆಂದರೂ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಪಾಟೀಲ ಹೇಳಿದರು.