Site icon Vistara News

Congress Politics : ಮೂರು ಡಿಸಿಎಂ ಕೇಳೋದ್ರಲ್ಲಿ ತಪ್ಪೇನಿಲ್ಲ; ಪರಮೇಶ್ವರ್‌ ಬಹಿರಂಗ ಬೆಂಬಲ, ಹಲವರ ವಿರೋಧ

G Parameshwar on three DCM

ಬೆಂಗಳೂರು: ಸಹಕಾರ ಸಚಿವ ಕೆ.ಎನ್‌. ರಾಜಣ್ಣ (KN Rajanna) ಅವರು ಎಸೆದುಬಿಟ್ಟ ಮೂರು ಉಪಮುಖ್ಯಮಂತ್ರಿಗಳೆಂಬ (Three DCM) ಹಾವು ಎಲ್ಲೆಡೆ ಸುತ್ತಾಡುತ್ತಾ ಬುಸುಗುಟ್ಟಲು ಆರಂಭಿಸಿದೆ. ಕಾಂಗ್ರೆಸ್‌ ಪಕ್ಷದೊಳಗೆ ಇದು ಪರ ಮತ್ತು ವಿರೋಧದ ಅಭಿಪ್ರಾಯಗಳಿಗೆ ಕಾರಣವಾಗಿದ್ದು, ಭಾರಿ ಚರ್ಚೆಯನ್ನು (Congress Politics) ಹುಟ್ಟುಹಾಕಿದೆ. ಅದರೊಂದಿಗೆ ಹಿರಿಯ ನಾಯಕ, ಸಚಿವ ಜಿ. ಪರಮೇಶ್ವರ್‌ (G Parameshwar) ಅವರು ರಾಜಣ್ಣ ಬೆಂಬಲಕ್ಕೆ ನಿಂತಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ತನ್ನ ಮೇಲುಗೈಯನ್ನು ಉಳಿಸಿಕೊಳ್ಳಬೇಕಾದರೆ ದಲಿತ, ಅಲ್ಪಸಂಖ್ಯಾತ ಮತ್ತು ವೀರಶೈವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತದೆ ಎಂಬ ವಾದವನ್ನು ಕೆ.ಎನ್‌. ರಾಜಣ್ಣ ಮಂಡಿಸಿದ್ದರು. ಇದು ವೈಯಕ್ತಿಕ ಅಭಿಪ್ರಾಯವಾಗಿದ್ದರೂ ಇದನ್ನು ಹೈಕಮಾಂಡ್‌ ಮಟ್ಟಕ್ಕೆ ತಲುಪಿಸಿ ಚರ್ಚೆ ಮಾಡಿಸಿ ಒಂದು ತೀರ್ಮಾನಕ್ಕೆ ಬರುವಂತೆ ಮಾಡುತ್ತೇನೆ ಎನ್ನುವ ದೃಢತೆಯನ್ನು ಅವರು ಪ್ರದರ್ಶಿಸಿದ್ದರು. ಕೆ.ಎನ್‌. ರಾಜಣ್ಣ ಅವರು ಇಷ್ಟು ದೃಢವಾಗಿ ಮಾತನಾಡುವುದಕ್ಕೆ ಕಾರಣ ಈ ಐಡಿಯಾವನ್ನು ಸ್ವತಃ ಸಿದ್ದರಾಮಯ್ಯ (CM Siddaramaiah) ಅವರೇ ಕೊಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಏಕೈಕ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್‌ (DK Shivakumar) ಅವರನ್ನು ನಿಯಂತ್ರಿಸುವುದಕ್ಕೆ ಇದೊಂದು ಪ್ಲ್ಯಾನ್‌ ಎಂಬ ಚರ್ಚೆ ಇದೆ.

ಬೆಂಬಲ ಘೋಷಿಸಿದ ಪರಮೇಶ್ವರ್‌

ಮೂರು ಡಿಸಿಎಂ ಸ್ಥಾನ ರಚನೆ ವಿಚಾರದಲ್ಲಿ ಕೆ.ಎನ್. ರಾಜಣ್ಣ ಅವರ ಮಾತುಗಳನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಸಮರ್ಥಿಸಿದ್ದಾರೆ. ʻʻರಾಜಣ್ಣ ಕೇಳೋದ್ರಲ್ಲಿ ತಪ್ಪೇನಿಲ್ಲ. ಸಿಎಂಗೂ ಹೈಕಮಾಂಡ್ ಗೂ ಅವರೇ ತಿಳಿಸಬೇಕು. ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದರೂ ಅವರ ಅನಿಸಿಕೆ ಅವರೇ ಹೇಳಬೇಕುʼʼ ಎಂದು ಹೇಳಿದ್ದಾರೆ.

ʻʻಡಿಸಿಎಂ ಮಾಡಬೇಕು ಎಂಬ ಅವರ ಉದ್ದೇಶ ಒಳ್ಳೆಯದೇ. ಲೋಕಸಭೆ ಚುನಾವಣೆ ಮುಂಚೆ ಸಮುದಾಯಗಳಿಗೆ ಡಿಸಿಎಂ ಮಾಡಬೇಕು ಅಂತ ರಾಜಣ್ಣ ಹೇಳಿದ್ದಾರೆ. ತೀರ್ಮಾನ ಮಾಡುವವರು ಬಿಡುವವರು ಎಐಸಿಸಿ ನಾಯಕರು. ಡಿಸಿಎಂ ಸ್ಥಾನ ಮಾಡುವ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದುʼʼ ಎಂದು ಸ್ವತಃ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಜಿ. ಪರಮೇಶ್ವರ್‌ ಹೇಳಿದ್ದಾರೆ. ಅವರ ಈ ಮಾತು ಚರ್ಚೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.

ಆದರೆ, ಹಲವಾರು ಕಾಂಗ್ರೆಸ್‌ ನಾಯಕರು ಈ ಐಡಿಯಾವವನ್ನು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: Congress Politics: ಕಾಂಗ್ರೆಸ್‌ನಲ್ಲೀಗ 3 ಡಿಸಿಎಂ ಚರ್ಚೆ; ಇದು ಡಿ.ಕೆ ಶಿವಕುಮಾರ್ ಹಣಿಯುವ ಸಿದ್ದರಾಮಯ್ಯ ಪ್ಲ್ಯಾನಾ?

ಅಂಥ ಚರ್ಚೆ ಇಲ್ಲ ಎಂದ ಪ್ರಿಯಾಂಕ್‌, ಯಾಕೆ ಬೇಕು ಎಂದ ಹ್ಯಾರಿಸ್‌

ಸಚಿವ ಪ್ರಿಯಾಂಕಾ ಖರ್ಗೆ: ಕೆ.ಎನ್‌. ರಾಜಣ್ಣ ಅವರು ಮಂಡಿಸಿದ ಮೂರು ಡಿಸಿಎಂ ವಿಚಾರದ ಬಗ್ಗೆ ಹೇಳಬೇಕು ಎಂದರೆ, ಮೂರು ಆದ್ರು ಹೇಳಲಿ ಐದಾದ್ರು ಹೇಳಲಿ ಹೈಕಮಾಂಡ್ ಗೆ ಹೇಳೋದಕ್ಕೆ ಮುಕ್ತ ಅವಕಾಶ ಇದೆ. ಆದರೆ ಹೈ ಕಮಾಂಡ್ ಮುಂದೆ ಇಂತಹ ಯಾವುದೇ ಚರ್ಚೆ ಆಗಿಲ್ಲ.

ಸಚಿವ ದಿನೇಶ್‌ ಗುಂಡೂರಾವ್‌ : ನಾವು ಸಾಮಾಜಿಕ ನ್ಯಾಯಕ್ಕಾಗಿ ದುಡಿಯುತ್ತಿರುವುದು. ಹುದ್ದೆ ಕೊಟ್ಟು ನಾಯಕರನ್ನು ಸಮಾಧಾನ ಪಡಿಸುವ ಅವಶ್ಯಕತೆ ನಮಗಿಲ್ಲ. ಇದು ರಾಜಕೀಯ ವಿಚಾರವಾಗಿದ್ದು. ಬಹಿರಂಗ ಚರ್ಚೆ‌ ಬೇಡ. ನಾವು ಜನರಿಗೆ ಸಹಾಯ ಮಾಡೋ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಸರ್ಕಾರಕ್ಕೆ ಕಾರ್ಯಕ್ರಮ ಮುಖ್ಯ ಹೊರತು ಹುದ್ದೆ ಮುಖ್ಯ ಅಲ್ಲ.

ಸಚಿವ ಎಂ.ಬಿ ಪಾಟೀಲ್‌: ಸಚಿವ ರಾಜಣ್ಣ ಮೂರು ಡಿಸಿಎಂ ಸ್ಥಾನಕ್ಕಾಗಿ ಬೇಡಿಕೆ ಇಟ್ಟ ವಿಚಾರ ನನಗೆ ಗೊತ್ತಿಲ್ಲ. ಸಚಿವ ರಾಜಣ್ಣ ಬೇಡಿಕೆ ಕುರಿತಂತೆ ನಾನು ಮಾತನಾಡಲ್ಲ. ಅದು ಅವರ ವಯಕ್ತಿಕ ವಿಚಾರ, ನೀವು ಅವರನ್ನೇ ಕೇಳಿ. ಏನೇ ಇದ್ದರು ಅದನ್ನ ಹೈಕಮಾಂಡ್ ತೀರ್ಮಾನ ಮಾಡ್ತಾರೆ. ಅವರ ವಯಕ್ತಿಕ ಅಭಿಪ್ರಾಯ, ಪರ ವಿರೋಧ ಹೇಳಿಕೆ ನೀಡಲು ಹೋಗಲ್ಲ. ಹೈಕಮಾಂಡ್ ಅಭಿಪ್ರಾಯ ಕೇಳಿದ್ರೆ ನನ್ನ ಅಭಿಪ್ರಾಯ ಹೇಳುವೆ.

ಶಾಸಕ ಎನ್‌.ಎ ಹ್ಯಾರಿಸ್‌: ಕೆ.ಎನ್‌. ರಾಜಣ್ಣ ಅವರು ಹೇಳಿದ್ದಾರೋ, ಇಲ್ಲವೋ ಗೊತ್ತಿಲ್ಲ. ಆ ರೀತಿ ಹೇಳುವ ಹಾಗಿಲ್ಲ. ಪಕ್ಷದಲ್ಲಿ ಎಲ್ಲರೂ ಶಿಸ್ತಿನಿಂದ ಇರಬೇಕು. ಪಕ್ಷ ತೀರ್ಮಾನ ಮಾಡುವುದನ್ನು ನಾವು ಪಾಲಿಸಿಕೊಂಡು ಹೋಗಬೇಕು. ಇರುವ ವ್ಯವಸ್ಥೆ ಸರಿಯಾಗಿದೆ, ಅದೇ ಸಾಕು ಈಗ. ಅದು ಅವರ ವೈಯಕ್ತಿಕ ಅಭಿಪ್ರಾಯ. ಹಾಗಂತ ಸುಮ್ಮನೆ ಇಲ್ಲದೆ ಇರೋದನ್ನು ಮಾತಾಡಿಕೊಂಡು ಇರೋದು ಬೇಕಾಗಿಲ್ಲ.

Exit mobile version