Site icon Vistara News

Congress Politics : ಮತ್ತೆ ಸಿಡಿದೆದ್ದ ರಾಯರೆಡ್ಡಿ; ಸಚಿವರು ಮಾತ್ರವಲ್ಲ ಈಗ ಅಧಿಕಾರಿಗಳೂ ಮಾತು ಕೇಳ್ತಿಲ್ಲ!

Basavaraja Rayareddy

ಕೊಪ್ಪಳ: ಈ ಹಿಂದೆ ಸಚಿವರು ಶಾಸಕರ ಮಾತು ಕೇಳುತ್ತಿಲ್ಲ ಎಂದು ಆರೋಪಿಸಿ ಸಂಚಲನ ಸೃಷ್ಟಿಸಿದ್ದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ‌ (Basavaraja Rayareddy) ಮತ್ತೊಮ್ಮೆ ಸಿಟ್ಟಿಗೆದ್ದಿದ್ದಾರೆ. ಈ ಬಾರಿ ಸಚಿವರು ಮಾತ್ರವಲ್ಲ, ಹಿರಿಯ, ಕಿರಿಯ ಅಧಿಕಾರಿಗಳು ಕೂಡಾ ಮಾತು ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೇರವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ ಬಾರಿ ಶಾಸಕ ಬಿ.ಆರ್‌. ಪಾಟೀಲ್‌ ಅವರು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಅವರ ವಿರುದ್ಧ ಪರೋಕ್ಷವಾಗಿ ಆರೋಪ ಹೊರಿಸಿ ನೇರವಾಗಿ ಸಿಎಂ ಅವರಿಗೆ ಬರೆದಿದ್ದ ಪತ್ರಕ್ಕೆ ರಾಯರೆಡ್ಡಿ ಸಹಿ ಹಾಕಿದ್ದರು. ಒಂದು ಹಂತದಲ್ಲಿ ಬಿ.ಆರ್‌. ಪಾಟೀಲ್‌ ಅವರೇ ಅದು ನನ್ನ ಪತ್ರವಲ್ಲ ಎಂದು ಹೇಳಿ ಜಾರಿಕೊಂಡರೂ ರಾಯರೆಡ್ಡಿ ಅವರು ಮಾತ್ರ ಸಮಸ್ಯೆ ಇರುವುದು ನಿಜ, ಸಹಿ ಹಾಕಿದ್ದೂ ನಿಜ ಎಂದು ಗಟ್ಟಿಯಾಗಿ ಧ್ವನಿ ಎತ್ತಿದ್ದರು.

ಶಾಸಕರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದ ಅವರು ಮುಂದೆ ನಡೆದ ಸಭೆಯಲ್ಲೂ ಅದರ ಬಗ್ಗೆ ಉಲ್ಲೇಖ ಮಾಡಿದ್ದರು. ಆಗ ಸಿದ್ದರಾಮಯ್ಯ ಅವರು ರಾಯರೆಡ್ಡಿ ಅವರನ್ನು ಸಮಾಧಾನ ಮಾಡಿ ಕಳುಹಿಸಿದ್ದರು.

ಅಧಿಕಾರಿಗಳ ಸಭೆ ಕರೆಯಲು ಸಿದ್ದರಾಮಯ್ಯರಿಗೆ ಪತ್ರ

ಈ ನಡುವೆ, ಬೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳೇ ನಮ್ಮ ಮಾತು ಕೇಳುತ್ತಿಲ್ಲ. ಹೀಗಾಗಿ ಇಂಧನ ಖಾತೆ ಸಚಿವರು ಹಿರಿಯ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಸಿಎಂ ಅವರಿಗೆ ಬರೆದ ಪತ್ರದಲ್ಲಿ ರಾಯರೆಡ್ಡಿ ಒತ್ತಾಯಿಸಿದ್ದಾರೆ.

ಜೆಸ್ಕಾಂ ವ್ಯಾಪ್ತಿಯಲ್ಲಿ (GESCOM officials) ಟ್ರಾನ್ಸ್​ಫಾರ್ಮರ್ ಅವಳಡಿಕೆಯಾಗುತ್ತಿಲ್ಲ. ಯಲಬುರ್ಗಾ ಕ್ಷೇತ್ರವೊಂದಕ್ಕೆ 200 ಟ್ರಾನ್ಸ್​ಫಾರ್ಮರ್​ಗಳ ಅಗತ್ಯವಿದೆ. ಅಧಿಕಾರಿಗಳು ನಮ್ಮ ಮಾತು ಕೇಳ್ತಿಲ್ಲ, ಅವರಿಂದ ಕೆಲಸ ಸಾಧ್ಯವಾಗುತ್ತಿಲ್ಲ. ಇದರಿಂದ ರೈತರ ಜಮೀನಿಗೆ ವಿದ್ಯುತ್ ನೀಡೋದಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆದು ಚರ್ಚಿಸಬೇಕು ಎನ್ನುವುದು ರಾಯರೆಡ್ಡಿ ದೂರು.

ಹಿರಿಯ ಅಧಿಕಾರಿಗಳು ನಮ್ಮ ಮಾತು ಕೇಳ್ತಿಲ್ಲ. ತಮ್ಮ ಅಧೀನ ಕಿರಿಯ ಅಧಿಕಾರಿಗಳ ಮಾತನ್ನೂ ಕೇಳುತ್ತಿಲ್ಲ. ನನ್ನ ಸೂಚನೆಗೂ ಹಿರಿಯ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ ಎನ್ನುವುದು ರಾಯರೆಡ್ಡಿ ಪತ್ರದ ಸಾರಾಂಶ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಹಿಂದೆ ಸಚಿವರು ಮಾತು ಕೇಳುತ್ತಿಲ್ಲ ಎಂದಿದ್ದ ರಾಯರೆಡ್ಡಿ ಅವರು ಈಗ ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎಂದು ಸರ್ಕಾರದ ಮೇಲೆ ಮುಗಿಬಿದ್ದಿರುವುದು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : Power Point with HPK : ಜಾತಿ ವ್ಯವಸ್ಥೆಯಿಂದ ನನಗೆ ಸಚಿವ ಸ್ಥಾನ ಕೈತಪ್ಪಿದೆ: ಬಸವರಾಜ ರಾಯರೆಡ್ಡಿ ಬೇಸರ

ಸಿಎಂ ಮಾತಾಡಿಲ್ಲ, ಯತ್ನಾಳ್‌ ಮಾತನಾಡಿದ್ದಾರೆ!

ಈ ನಡುವೆ, ಬಸವರಾಜ ರಾಯರೆಡ್ಡಿ ಅವರ ಆರೋಪ ಮತ್ತು ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಇದರ ಬದಲಾಗಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರತಿಕ್ರಿಯೆ ನೀಡಿದ್ದಾರೆ.

ʻʻರಾಯರಡ್ಡಿ ಅವರು ಹಿರಿಯ ನಾಯಕರು ಅವರಿಗೆ ಗೌರವ ನೀಡುತ್ತಿಲ್ಲ ಎಂದು ಮೊದಲು ಹೇಳಿದ್ದರು. ಸೀನಿಯರ್ ನಾಯಕರೇ ಅಧಿಕಾರಿಗಳ ಮಾತು ಕೇಳೋದಿಲ್ಲ ಎನ್ನುತ್ತಾರೆ. ರಾಜ್ಯ ಸರಕಾರದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಗೌರವ ಸಿಗುತ್ತಿಲ್ಲʼʼ ಎಂದಿದ್ದಾರೆ ಯತ್ನಾಳ್‌.

Exit mobile version