ಬೆಂಗಳೂರು: ಪಕ್ಷ ಅಧಿಕಾರಕ್ಕೆ ಬರುವ ಮೊದಲೇ ಸಿಎಂ ಗಾದಿಗಾಗಿ ಸೆಣೆಸಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಕಿವಿಮಾತು ಹೇಳಿರುವ ಹಿರಿಯ ಕಾಂಗ್ರೆಸಿಗ (Congress Politics) ಡಾ. ಜಿ. ಪರಮೇಶ್ವರ್, ಮೊದಲು ಪಕ್ಷ ಅಧಿಕಾರಕ್ಕೆ ಬರಲಿ ಎಂದಿದ್ದಾರೆ.
ಈ ಕುರಿತು ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಕ್ಷೇತ್ರಕ್ಕೆ ಬರ್ತಾ ಇದ್ದಾರೆ. ಕಾಕತಾಳೀಯ ರೀತಿಯಲ್ಲಿ ಚುನಾವಣಾ ಪ್ರಚಾರ ಶುರುವಾಗಿದೆ. ಚುನಾವಣಾ ಇರುವದರಿಂದ ಏನೆ ಕಾರ್ಯಕ್ರಮ ಮಾಡಿದ್ರು, ಅದರ ನೆರಳು ಎಲೆಕ್ಷನ್ ಮೇಲೆ ಬೀಳುತ್ತದೆ.
ಪ್ರಾರಂಭದಲ್ಲಿ ನಾನು ರಾಜ್ಯ ಪ್ರವಾಸ ಮಾಡಿದ್ದೇನೆ. ಮುಂದೆ ಎಲ್ಲೆಲ್ಲಿ ಸಾಧ್ಯತೆ ಆಗುತ್ತೆ ಅಲ್ಲಿ ಪ್ರವಾಸ ಮಾಡ್ತೇನೆ. ಎರಡು ಬಾರಿ ರಾಜ್ಯ ಸುತ್ತಿದ್ದೇನೆ, ಅದರ ಅನುಭವವಿದೆ ಎಂದರು.
ಮುಂದೆ ಸ್ಥಾನಮಾನದ ವಿಚಾರದಲ್ಲಿ ಪ್ರತಿಕ್ರಿಯಿಸಿ, ಅಧಿಕಾರಕ್ಕೆ ಬಂದ ಮೇಲೆ ಸಿಎಲ್ಪಿ ಸಭೆ, ವರಿಷ್ಠರು ತೀರ್ಮಾನ ಮಾಡ್ತಾರೆ. ಸಭೆ ತೀರ್ಮಾನ ಮಾಡುತ್ತದೆ ಯಾರಿಗೆ ಏನು ಅಂತ. ನಮ್ಮಲ್ಲಿ ಸ್ವಾರ್ಥವಿಲ್ಲ. ಮೊದಲೆ ಸ್ವಾರ್ಥ ಮಾಡಿಕೊಂಡ್ರೆ ಪಕ್ಷ ಎಲ್ಲಿ ಅಧಿಕಾರಕ್ಕೆ ಬರುತ್ತದೆ?
ಸ್ವಾರ್ಥ ಆನಂತರ ಆಗಲಿ, ಮೊದಲು ಪಕ್ಷ ಅಧಿಕಾರಕ್ಕೆ ಬರಲಿ. ಸಿಎಂ ಯಾರಾಗಬೇಕು ಅಂತ ವರಿಷ್ಠರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Karnataka Election : ಕಾಂಗ್ರೆಸ್‌ನಲ್ಲಿ 10 ಜನ ಸಿಎಂ ಆಸೆ ಇಟ್ಕೊಂಡಿದ್ದಾರೆ, ಅವರಲ್ಲಿ ನಾನೂ ಒಬ್ಬ ಎಂದ ಪರಮೇಶ್ವರ್
ಡಾ. ಜಿ. ಪರಮೇಶ್ವರ್ ಅವರನ್ನು ಪ್ರಣಾಳಿಕೆ ಸಮಿತಿಗೆ ಅಧ್ಯಕ್ಷರಾಗಿ ನೇಮಿಸಲಾಗಿದೆ. ಆದರೆ ಜನಪ್ರಿಯ ಘೋಷಣೆಗಳ ಕುರಿತು ತಮ್ಮನ್ನು ಸಂಪರ್ಕಿಸುತ್ತಿಲ್ಲ ಎಂದು ಇತ್ತೀಚೆಗೆ ಸ್ವತಃ ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದರು. 2013ರಲ್ಲಿ ಇನ್ನೇನು ಸಿಎಂ ಆಗುತ್ತಾರೆ ಎನ್ನುವ ಹೊಸ್ತಿಲಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ಸೋತಿದ್ದರು. ಇದರಿಂದಾಗಿ ಸಿಎಂ ಗದ್ದುಗೆ ಅವಕಾಶ ಸುಲಭವಾಗಿ ಸಿದ್ದರಾಮಯ್ಯ ಕೈಸೇರಿತ್ತು. ಸ್ವತಃ ಸಿದ್ದರಾಮಯ್ಯ ಅವರೇ ಪರಮೇಶ್ವರ್ ಅವರನ್ನು ಸೋಲಿಸಿದ್ದರು ಎಂಬ ಮಾತು ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿದೆ.