Site icon Vistara News

Congress Politics: ಕಾಂಗ್ರೆಸ್‌ನಲ್ಲೀಗ 3 ಡಿಸಿಎಂ ಚರ್ಚೆ; ಇದು ಡಿ.ಕೆ ಶಿವಕುಮಾರ್ ಹಣಿಯುವ ಸಿದ್ದರಾಮಯ್ಯ ಪ್ಲ್ಯಾನಾ?

KN Rajanna Siddaramaiah DKShivakumar

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಮೂವರು ಉಪಮುಖ್ಯಮಂತ್ರಿಗಳ (Three Deputy Chief Minister) ಚರ್ಚೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪರಮಾಪ್ತ ಸಚಿವರಾಗಿರುವ ಸಹಕಾರ ಸಚಿವ ಕೆ.ಎನ್‌. ರಾಜಣ್ಣ (KN Rajanna) ಅವರು ಈ ಪ್ರಸ್ತಾಪ ಮಂಡನೆ ಮಾಡಿದ್ದರಿಂದ ಇದೊಂದು ಗಾಳಿಯಲ್ಲಿ ಹಾರಿಬಂದ ಸಂಗತಿಯಲ್ಲ ಎನ್ನುವುದು ಸ್ಪಷ್ಟವಾಗಿದೆ. ‌ಇದರ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಪರ ಮತ್ತು ವಿರುದ್ಧವಾದ ಅಭಿಪ್ರಾಯಗಳು ಇವೆ. ಭಾರತೀಯ ಜನತಾಪಕ್ಷವೂ ಈ ಚರ್ಚೆಗೆ ಎಂಟ್ರಿ ಪಡೆದುಕೊಂಡಿದ್ದು, ಇದು ಈಗ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್‌ ಅವರ ಅಧಿಕಾರವನ್ನು ಮೊಟಕುಗೊಳಿಸಲು ಸಿದ್ದರಾಮಯ್ಯ ಅವರು ಹೆಣೆದಿರುವ ಪ್ಲ್ಯಾನ್‌ (Congress Politics) ಎಂದು ವ್ಯಾಖ್ಯಾನಿಸಿದೆ.

ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯನ್ನು ಇಟ್ಟುಕೊಂಡು ಸಮುದಾಯಗಳಿಗೆ ಸ್ಥಾನಮಾನ ನೀಡಿದರೆ ಒಳ್ಳೆಯದು. ಈಗ ಹಿಂದುಳಿದ ವರ್ಗಗಳ ನಾಯಕರಾಗಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಡಿ.ಕೆ. ಶಿವಕುಮಾರ್‌ ಇದ್ದಾರೆ. ಆದರೆ, ಅಲ್ಪಸಂಖ್ಯಾತರು, ದಲಿತರು, ವೀರಶೈವರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷದ ಪರವಾಗಿ ನಿಂತಿದ್ದಾರೆ. ಅವರಿಗೆ ಸರ್ಕಾರದಲ್ಲಿ ಉನ್ನತ ಸ್ಥಾನ ನೀಡಿದರೆ ಲೋಕಸಭಾ ಚುನಾವಣೆಗೂ ಅನುಕೂಲವಾಗುತ್ತದೆ ಎನ್ನುವುದು ಮೇಲ್ನೋಟಕ್ಕೆ ರಾಜಣ್ಣ ಅವರು ಮಂಡಿಸಿರುವ ವಾದ. ಆದರೆ, ಸರ್ಕಾರದಲ್ಲಿ ಏಕೈಕ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್‌ ಅವರ ಪ್ರಭಾವವನ್ನು ತಗ್ಗಿಸುವುದಕ್ಕೆ ನಡೆಸುತ್ತಿರುವ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ಲಾಂಟ್‌ ಮಾಡಿಸಿರುವ ಐಡಿಯಾ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಹಾಗಿದ್ದರೆ ಕೆ.ಎನ್.‌ ರಾಜಣ್ಣ ಅವರು ಹೇಳಿದ್ದೇನು?

ಸಹಕಾರಿ ಸಚಿವರಾಗಿರುವ ಕೆ.ಎನ್‌. ರಾಜಣ್ಣ ಅವರು ತುಮಕೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ವಿಸ್ತಾರ ನ್ಯೂಸ್‌ ಜತೆ ಮಾತನಾಡಿ ತಮ್ಮ ಯೋಚನೆಯನ್ನು ಪ್ರತಿಪಾದಿಸಿದ್ದಾರೆ.

ʻʻರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನಗಳನ್ನ ಪೂರೈಸಿದೆ. ಈ ನೂರು ದಿವಸದಲ್ಲಿ ನಾವು ಚುನಾವಣಾ ಪೂರ್ವದಲ್ಲಿ ಕೊಟ್ಟ ಐದು ಗ್ಯಾರೆಂಟಿಗಳನ್ನ ಅನುಷ್ಠಾನ ಮಾಡಿದ್ದೇವೆ. ಈಗ ಮುಂದೆ ಬರುತ್ತಿರೋ ಲೋಕಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು, ಕಳೆದ ಚುನಾವಣೆಯಲ್ಲಿ ಬಹುಮತ ಬರಲಿಕ್ಕೆ ಕಾರಣವಾದಂತಹ ಸಮುದಾಯಗಳ ಬೆಂಬಲವನ್ನು ಇನ್ನೂ ಹೆಚ್ಚು ಗಟ್ಟಿ ಮಾಡಿಕೊಳ್ಳಲು ಪೂರಕವಾದ ವಾತಾವರಣವನ್ನ ಸೃಷ್ಟಿ ಮಾಡಬೇಕಿದೆ. ಎಸ್ಸಿ-ಎಸ್ಟಿ, ವೀರಶೈವ ಮತ್ತು ಅಲ್ಪ ಸಂಖ್ಯಾತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡೋದು ಸೂಕ್ತ ಅನ್ನೋದು ನನ್ನ ಅಭಿಪ್ರಾಯ. ಇದನ್ನು ಹೈ ಕಮಾಂಡ್ ಗಮನಕ್ಕೆ ತರುವ ಕೆಲಸವನ್ನ ಮಾಡ್ತೀನಿ. ಪತ್ರದ ಮೂಲಕವೂ ಅವರ ಗಮನಕ್ಕೆ ತರ್ತೀನಿ. ಖುದ್ದಾಗಿ ಭೇಟಿಯಾಗಿ ಅವರಿಗೆ ಮನವರಿಕೆ ಮಾಡಿಕೊಡುತ್ತೇನೆʼʼ ಎಂದು ಹೇಳಿದರು.

ಡಿಸಿಎಂ ನೇಮಕ ನನ್ನ ವೈಯಕ್ತಿಕ ಬೇಡಿಕೆಯಲ್ಲ. ನಾನು ಸಹಕಾರಿ ಸಚಿವನಾಗಿಯೇ ಖುಷಿಯಾಗಿದ್ದೇನೆ. ನಾನು ಯಾರ ಪರವಾಗಿಯೂ ಈ ವಿಚಾರ ಪ್ರಸ್ತಾಪ ಮಾಡಿಲ್ಲ (ಸಿದ್ದರಾಮಯ್ಯ ಅವರ ಐಡಿಯಾವನ್ನು ಫ್ಲೋಟ್‌ ಮಾಡಿದ್ದಾರೆ ಎಂಬ ದೂರಿನ ಬಗ್ಗೆ). ಪಕ್ಷದ ಪರವಾಗಿ ಈ ರೀತಿಯ ಕ್ರಮವಾದರೆ ಪಕ್ಷಕ್ಕೆ ಒಂದು ಬಲ ಬರುತ್ತದೆ ಎಂಬ ವಿಚಾರವನ್ನ ಗಮನದಲ್ಲಿಟ್ಟುಕೊಂಡು ಪ್ರಸ್ತಾಪ ಮಾಡಿದ್ದೇನೆ. ನಾನು ಇಂಥವರನ್ನೇ ಡಿಸಿಎಂ ಮಾಡಬೇಕು ಎಂದು ಯಾರ ಹೆಸರನ್ನೂ ಹೇಳಲ್ಲ. ನಾನು ಡಿಸಿಎಂ ಆಕಾಂಕ್ಷಿ ಅನ್ನೋ ಪ್ರಶ್ನೆಯೇ ಇಲ್ಲʼʼ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ನಾಯಕರು ಹೇಳಿದ್ದೇನು? ಹಲವರ ಅಸಮಾಧಾನ

ಸಚಿವ ಪ್ರಿಯಾಂಕಾ ಖರ್ಗೆ: ಕೆ.ಎನ್‌. ರಾಜಣ್ಣ ಅವರು ಮಂಡಿಸಿದ ಮೂರು ಡಿಸಿಎಂ ವಿಚಾರದ ಬಗ್ಗೆ ಹೇಳಬೇಕು ಎಂದರೆ, ಮೂರು ಆದ್ರು ಹೇಳಲಿ ಐದಾದ್ರು ಹೇಳಲಿ ಹೈಕಮಾಂಡ್ ಗೆ ಹೇಳೋದಕ್ಕೆ ಮುಕ್ತ ಅವಕಾಶ ಇದೆ. ಆದರೆ ಹೈ ಕಮಾಂಡ್ ಮುಂದೆ ಇಂತಹ ಯಾವುದೇ ಚರ್ಚೆ ಆಗಿಲ್ಲ.

ಸಚಿವ ದಿನೇಶ್‌ ಗುಂಡೂರಾವ್‌ : ನಾವು ಸಾಮಾಜಿಕ ನ್ಯಾಯಕ್ಕಾಗಿ ದುಡಿಯುತ್ತಿರುವುದು. ಹುದ್ದೆ ಕೊಟ್ಟು ನಾಯಕರನ್ನು ಸಮಾಧಾನ ಪಡಿಸುವ ಅವಶ್ಯಕತೆ ನಮಗಿಲ್ಲ. ಇದು ರಾಜಕೀಯ ವಿಚಾರವಾಗಿದ್ದು. ಬಹಿರಂಗ ಚರ್ಚೆ‌ ಬೇಡ. ನಾವು ಜನರಿಗೆ ಸಹಾಯ ಮಾಡೋ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಸರ್ಕಾರಕ್ಕೆ ಕಾರ್ಯಕ್ರಮ ಮುಖ್ಯ ಹೊರತು ಹುದ್ದೆ ಮುಖ್ಯ ಅಲ್ಲ.

ಸಚಿವ ಎಂ.ಬಿ ಪಾಟೀಲ್‌: ಸಚಿವ ರಾಜಣ್ಣ ಮೂರು ಡಿಸಿಎಂ ಸ್ಥಾನಕ್ಕಾಗಿ ಬೇಡಿಕೆ ಇಟ್ಟ ವಿಚಾರ ನನಗೆ ಗೊತ್ತಿಲ್ಲ. ಸಚಿವ ರಾಜಣ್ಣ ಬೇಡಿಕೆ ಕುರಿತಂತೆ ನಾನು ಮಾತನಾಡಲ್ಲ. ಅದು ಅವರ ವಯಕ್ತಿಕ ವಿಚಾರ, ನೀವು ಅವರನ್ನೇ ಕೇಳಿ. ಏನೇ ಇದ್ದರು ಅದನ್ನ ಹೈಕಮಾಂಡ್ ತೀರ್ಮಾನ ಮಾಡ್ತಾರೆ. ಅವರ ವಯಕ್ತಿಕ ಅಭಿಪ್ರಾಯ, ಪರ ವಿರೋಧ ಹೇಳಿಕೆ ನೀಡಲು ಹೋಗಲ್ಲ. ಹೈಕಮಾಂಡ್ ಅಭಿಪ್ರಾಯ ಕೇಳಿದ್ರೆ ನನ್ನ ಅಭಿಪ್ರಾಯ ಹೇಳುವೆ.

ಶಾಸಕ ಎನ್‌.ಎ ಹ್ಯಾರಿಸ್‌: ಕೆ.ಎನ್‌. ರಾಜಣ್ಣ ಅವರು ಹೇಳಿದ್ದಾರೋ, ಇಲ್ಲವೋ ಗೊತ್ತಿಲ್ಲ. ಆ ರೀತಿ ಹೇಳುವ ಹಾಗಿಲ್ಲ. ಪಕ್ಷದಲ್ಲಿ ಎಲ್ಲರೂ ಶಿಸ್ತಿನಿಂದ ಇರಬೇಕು. ಪಕ್ಷ ತೀರ್ಮಾನ ಮಾಡುವುದನ್ನು ನಾವು ಪಾಲಿಸಿಕೊಂಡು ಹೋಗಬೇಕು. ಇರುವ ವ್ಯವಸ್ಥೆ ಸರಿಯಾಗಿದೆ, ಅದೇ ಸಾಕು ಈಗ. ಅದು ಅವರ ವೈಯಕ್ತಿಕ ಅಭಿಪ್ರಾಯ. ಹಾಗಂತ ಸುಮ್ಮನೆ ಇಲ್ಲದೆ ಇರೋದನ್ನು ಮಾತಾಡಿಕೊಂಡು ಇರೋದು ಬೇಕಾಗಿಲ್ಲ.

ಸಿ.ಟಿ. ರವಿ ಹೇಳಿದ್ದೇನು?

ಇತ್ತೀಚೆಗೆ ನಡೆದ ಅತಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಬಿ.ಕೆ. ಹರಿಪ್ರಸಾದ್‌ ಅವರು ಹೂಬ್ಲೋಟ್ ವಾಚ್, ಪಂಚೆಯೊಳಗಿನ ಖಾಕಿ ಚೆಡ್ಡಿ ಅಂತೆಲ್ಲ ಮಾತನಾಡಿದ್ದಾರೆ. ಇದು ಸಿದ್ದರಾಮಯ್ಯ ಅವರನ್ನೇ ಉಲ್ಲೇಖಿಸಿ ಹೇಳಿದ್ದಾರೆ. ಇದರ ಹಿಂದೆ ಡಿಕೆ ಶಿವಕುಮಾರ್ ಯೋಜನೆ ಇದೆ ಅಂತ ಹೇಳಲಾಗುತ್ತಿದೆ. ಈಗ ಕೆ.ಎನ್‌. ರಾಜಣ್ಣ ಅವರು ಮೂರು ಜನ ಡಿಸಿಎಂ ಬಗ್ಗೆ ಮಾತನಾಡಿದ್ದಾರೆ. ಇವರ ಮಾತಿನ ಹಿಂದೆ ಸಿಎಂ ಸಿದ್ದರಾಮಯ್ಯ ಯೋಜನೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಕಾಂಗ್ರೆಸ್‌ನಲ್ಲಿ ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಿರುವುದು ಕಾಣುತ್ತಿದೆ.

Exit mobile version