ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾದಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕಾಂಗ್ರೆಸ್ ( Congress Politics) ಚುರುಕುಗೊಳಿಸಿದ್ದು, ಮಾರ್ಚ್ ಮೊದಲ ವಾರದಲ್ಲಿ ಎರಡು ದಿನ ಸ್ಕ್ರೀನಿಂಗ್ ಸಮಿತಿ ಸಭೆ ನಡೆಯಲಿದೆ.
ಮಾರ್ಚ್ 7 ಹಾಗೂ 8 ರಂದು ನವದೆಹಲಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಭವಿಷ್ಯ ನಿರ್ಧಾರ ಆಗಲಿದೆ. ಅಂದು ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಆಯೋಜನೆ ಮಾಡಲಾಗಿದೆ.
ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ನಲ್ಲಿ ಅಭ್ಯರ್ಥಿಗಳ ಹಣೆ ಬರಹವನ್ನು ಕೈ ವರಿಷ್ಠರು ಬರೆಯಲಿದ್ದಾರೆ. ಈಗಾಗಲೇ 163 ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪೈನಲ್ ಆಗಿದ್ದು, ಪೈನಲ್ ಆದ ಅಭ್ಯರ್ಥಿಗಳ ಬಗ್ಗೆ ಮತ್ತೊಂದು ಸುತ್ತಿನ ಮೌಲ್ಯಮಾಪನ ನಡೆಯಲಿದೆ. ಕ್ಷೇತ್ರವಾರು ಅಭ್ಯರ್ಥಿಗಳ ವಿಶ್ಲೇಷಣೆ ನಡೆಸಿದ ನಂತರ ಟಿಕೆಟ್ ಘೋಷಣೆ ಆಗಲಿದೆ.
ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ನಿಗದಿ ಆಗುತ್ತಿದ್ದಂತೆ ಕೆಲವರಿಗೆ ಆತಂಕ ಶುರುವಾಗಿದೆ. ಈಗಾಗಲೇ ಕೆಲವರಿಗೆ ನೀವೇ ಅಭ್ಯರ್ಥಿ ಎಂದು ಮೌಖಿಕವಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೂ ಅಂತಿಮವಾಗಿ ಸಭೆಯಲ್ಲಿ ಏನಾಗುತ್ತದೆ ಎಂಬ ಕುರಿತು ಆತಂಕ ಅನೇಕರಲ್ಲಿದೆ.
ಅಧಿಕೃತವಾಗಿ ಪಟ್ಟಿ ಬಿಡುಗಡೆ ಆದ ಮೇಲೆಯೇ ಟಿಕೆಟ್ ಗ್ಯಾರಂಟಿ ಎನ್ನುತ್ತಿರುವ ಆಕಾಂಕ್ಷಿಗಳು, ಇದೀಗ ಸ್ಕ್ರೀನಿಂಗ್ ಸಮಿತಿ ಸಭೆ ಮೇಲೆ ಕಣ್ಣಿಟ್ಟಿದ್ದಾರೆ.