ಬೆಂಗಳೂರು: ರಾಜ್ಯದಲ್ಲಿ ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ (Parliament Elections 2024) 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 20ನ್ನು ಗೆಲ್ಲುವ ತಂತ್ರಗಾರಿಕೆಯೊಂದಿಗೆ ಮುನ್ನಡೆಯುತ್ತಿರುವ ಕಾಂಗ್ರೆಸ್‌ಗೆ ಬಿಗ್ ಶಾಕ್ ಎದುರಾಗಿದೆ. ಅಲ್ಪಸಂಖ್ಯಾತರ ಒಲವನ್ನು ಹೊಂದಿರುವ ಪಕ್ಷಕ್ಕೆ ಈ ಬಾರಿ ಅಲ್ಪಸಂಖ್ಯಾತರೇ ಮುಳುವಾಗಲಿದ್ದಾರೆ (Ticket to Muslims is dangerous move) ಎಂಬ ಆತಂಕಕಾರಿ ಮಾಹಿತಿಯನ್ನು ಕಾಂಗ್ರೆಸ್‌ನ ತಂತ್ರಗಾರರ ಟೀಮ್ (Congress Strategy team) ನೀಡಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಸುನಿಲ್ ಕನುಗೋಲು ನೇತೃತ್ವದ ತಂತ್ರಗಾರರ ಟೀಮ್ ಮಾಡಿದ ತಂತ್ರಗಳು ಫಲ ನೀಡಿದ್ದವರು. ಹಲವಾರು ಕ್ಯಾಂಪೇನ್‌ಗಳು, ಪಂಚ ಗ್ಯಾರಂಟಿಗಳು, ಅಭ್ಯರ್ಥಿಗಳ ಆಯ್ಕೆ ಹೀಗೆ ಹಲವು ಸಂಗತಿಗಳಲ್ಲಿ ತಂತ್ರಗಾರರ ಪಾತ್ರ ಮಹತ್ವದ್ದಾಗಿತ್ತು. ಇದೇ ಟೀಮ್ ಇದೀಗ ರಾಜ್ಯ ಕಾಂಗ್ರೆಸ್‌ಗೆ ಆತಂಕ ತರುವ ಸಂಗತಿಯನ್ನು ಹೇಳಿದೆ.
ಸಾಮಾನ್ಯವಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮಣೆಯನ್ನು ನೀಡುತ್ತದೆ. ಲೋಕಸಭಾ ಚುನಾವಣೆಯನ್ನೇ ತೆಗೆದುಕೊಂಡರೂ ಕನಿಷ್ಠ ಮೂರ್ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡುತ್ತದೆ. ಆದರೆ, ಈ ಬಾರಿ ಹಾಗೆ ಮಾಡಿದರೆ ಆ ಸ್ಥಾನಗಳಲ್ಲಿ ಗೆಲುವು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವನ್ನು ತಂತ್ರಗಾರರ ತಂಡ ಸ್ಪಷ್ಟವಾಗಿ ಹೇಳಿದೆ.
ಲೋಕಸಭೆ ಸಮರದ ಹಿನ್ನೆಲೆಯಲ್ಲಿ ಮತದಾರರ ನಾಡಿಮಿಡಿತ ಅರಿಯುವುದಕ್ಕಾಗಿ, ಪ್ರಸ್ತುತ ಬೆಳವಣಿಗೆಗಳ ಆಧಾರದಲ್ಲಿ ಸುನೀಲ್ ಕನುಗೋಲು ಟೀಮ್ ಒಂದು ಸಮೀಕ್ಷೆಯನ್ನು ನಡೆಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಒಂದಷ್ಟು ಸಲಹೆಗಳನ್ನು ನೀಡಿದೆ..
ಇದರಲ್ಲಿ ಮುಖ್ಯವಾಗಿರುವುದು ಲೋಕಸಭೆ ಟಿಕೆಟ್ ಹಂಚಿಕೆ ಸಮಯದಲ್ಲಿ ಎಚ್ಚರಿಕೆ ನಡೆ ಅನುಸರಿಸಬೇಕು ಎನ್ನುವುದು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವುದು ಉತ್ತಮವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಟಿಕೆಟ್ ನೀಡಿದರೆ ಗೆಲುವಿನ ವಾತಾವರಣವಿಲ್ಲ ಎಂದು ಅದು ಹೇಳಿದೆ.
ಅಂದರೆ, ಈಗ ರಾಮ ಮಂದಿರದ ಹವಾ ಜೋರಾಗಿರುವುದರಿಂದ ಹಿಂದೂ ಹವಾ ಜಾಸ್ತಿ ಇದೆ. ಈ ಸಂದರ್ಭದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿದರೆ ಕಾಂಗ್ರೆಸ್‌ಗೆ ಮತ ಹಾಕುವವರೂ ಹಿಂದೇಟು ಹಾಕಬಹುದು. ಹೀಗಾಗಿ ಲೋಕಸಭೆಯಲ್ಲಿ ಟಿಕೆಟ್ ನೀಡುವುದು ಉತ್ತಮವಲ್ಲ ಎಂದು ತಂತ್ರಗಾರರ ಟೀಮ್ ಹೇಳಿದೆ.
ಹಾಗಂತ ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವನ್ನು ಮಾಡಬಾರದು ಎಂಬ ಸಲಹೆಯನ್ನೂ ನೀಡಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಒದಗಿಸಲು ಬೇರೆ ದಾರಿಯಿವೆ.. ಈ ಬಾರಿ ಪಕ್ಷದ ಪರವಾಗಿ ನಿಂತ ಸಮುದಾಯಕ್ಕೆ ಅಧಿಕಾರ ಕೊಡಲೇ ಬೇಕು. ಆದರೆ ಸ್ಪರ್ಧೆಗೆ ಅವಕಾಶ ನೀಡದೆ ಬೇರೆ ರೀತಿಯಲ್ಲಿ ಅವಕಾಶ ನೀಡಬಹುದು. ನಾಮನಿರ್ದೇಶನ ಮಾಡುವ ಮೂಲಕ ಅಲ್ಪಸಂಖ್ಯಾತರಿಗೆ ಅಧಿಕಾರ ನೀಡೋಣ ಎಂಬ ಸಲಹೆ ತಂತ್ರಗಾರರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : Congress Politics : ಲೋಕಸಭೆ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ; ಯತೀಂದ್ರ ಸ್ಫೋಟಕ ಹೇಳಿಕೆ
ಅಲ್ಪಸಂಖ್ಯಾತ ನಾಯಕರಿಂದ ಖಂಡನೆ
ಸುನಿಲ್ ಕನುಗೋಲು ನೇತೃತ್ವದ ತಂತ್ರಗಾರರ ಟೀಮ್ ನೀಡಿರುವ ಈ ಸಲಹೆಯ ಬಗ್ಗೆ ರಾಜ್ಯ ಕಾಂಗ್ರೆಸ್ ಪಡಸಾಲೆಯಲ್ಲಿ ಪರ- ವಿರೋಧದ ಚರ್ಚೆ ನಡೆದಿದೆ. ಈ ರೀತಿಯ ಸಲಹೆಯನ್ನು ಖಂಡಿಸಿರುವ ಅಲ್ಪಸಂಖ್ಯಾತ ಮುಖಂಡರು, ನಮ್ಮ ಸಮುದಾಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಗಟ್ಟಿಯಾಗಿ ನಿಂತಿದೆ. ಹೀಗಾಗಿ ಲೋಕಸಭೆಯಲ್ಲಿ ಸ್ಪರ್ಧೆಗೆ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ನಡೆಸುವಾಗ ಸುನೀಲ್ ಕನುಗೋಲು ಟೀಮ್ ನೀಡಿದ್ದ ಸಮೀಕ್ಷೆ ವರದಿಯನ್ನು ಆಧರಿಸಿದ್ದು ಅಭ್ಯರ್ಥಿ ಆಯ್ಕೆಗೆ ಸಹಾಯಕವಾಗಿತ್ತು ಎಂಬ ಚರ್ಚೆಯಿದೆ. ಹೀಗಾಗಿ ಈ ಬಾರಿ ಮುಸ್ಲಿಂರಿಗೆ ಟಿಕೆಟ್ ಬೇಡ ಎಂಬ ಸಲಹೆಯನ್ನು ಕೆಪಿಸಿಸಿ ಹಾಗೂ ಎಐಸಿಸಿ ಯಾವ ರೀತಿ ಸ್ವೀಕಾರ ಮಾಡಲಿದೆ ಎಂಬ ಕುತೂಹಲವಿದೆ.