Site icon Vistara News

Congress Protest: ಕಿವಿ ಇಲ್ಲದ ಕೇಂದ್ರಕ್ಕೆ ಧ್ವನಿ ಕೇಳಿಸಲು ದೆಹಲಿಗೆ ಬಂದು ಕೂಗುತ್ತಿದ್ದೇವೆ: ಡಿ.ಕೆ. ಶಿವಕುಮಾರ್

DK Shivakumar

ನವ ದೆಹಲಿ: “ನಮ್ಮ ಕೂಗು ಕೇಂದ್ರ ಸರ್ಕಾರದ ಕಿವಿಗೆ ಬೀಳಲಿ ಎಂದು ದೆಹಲಿಗೆ ಬಂದು ನಾವು ಧ್ವನಿ ಎತ್ತಿದ್ದೇವೆ”. ಹೀಗಾಗಿ ದೆಹಲಿಗೆ ಬಂದು ಪ್ರತಿಭಟನೆಯನ್ನು (Congress Protest) ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ಕೇಂದ್ರ ಸರ್ಕಾರವು ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲವಾಗಿದೆ. ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಹೇಳಿದ್ದರೂ ಇವರು ಕಿವಿಗೆ ಹಾಕಿಕೊಂಡಿಲ್ಲ. ಹೀಗಾಗಿ ನಾವು ಇಲ್ಲಿಗೆ ಬಂದು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಹೋರಾಟ ರಾಜಕೀಯ ಸ್ಟಂಟ್ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, “ಬಿಜೆಪಿಯವರು ನಮ್ಮ ಹೋರಾಟದ ಬಗ್ಗೆ ಏನಾದರೂ ಹೇಳಲಿ. ನಮ್ಮಲ್ಲಿ ಯಾರೂ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಇಲ್ಲ. ಅವರ ಪಕ್ಷದಲ್ಲೇ ನಿರ್ದೇಶಕರು, ನಿರ್ಮಾಪಕರು ಇದ್ದಾರೆ. ನಾವು ನೋಡುತ್ತಿದ್ದೇವೆ. ಅವರು ಭಾವನೆ ಮೇಲೆ ದೇಶ ತೆಗೆದುಕೊಂಡು ಹೋದರೆ, ನಾವು ಜನರ ಬದುಕಿನ ಬಗ್ಗೆ ಗಮನ ಹರಿಸುತ್ತಿದ್ದೇವೆ. ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದವರು ಬೇರೆ ರಾಜ್ಯಗಳಲ್ಲಿ ಅವರೇ ಗ್ಯಾರಂಟಿ ಘೋಷಣೆ ಮಾಡಿದ್ದು ಯಾಕೆ?” ಎಂದು ಕೇಳಿದರು.

ಗ್ಯಾರಂಟಿ ಯೋಜನೆಯಿಂದ ಹಣ ಖಾಲಿ ಮಾಡಿಕೊಂಡು ದೆಹಲಿಗೆ ಬಂದಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ನಮ್ಮ ಹಣ ಖಾಲಿಯಾಗಿಲ್ಲ. ಸರ್ಕಾರ ನಡೆಸುವ ಸಾಮರ್ಥ್ಯ ನಮಗಿದೆ. ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಪಾಲಿನ ಹಣ ನೀಡಲಿ ಸಾಕು” ಎಂದು ತಿಳಿಸಿದರು.

ಬೇರೆ ರಾಜ್ಯಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ

ಕೇರಳದ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ನಾನು ಬೇರೆ ರಾಜ್ಯಗಳ ವಿಚಾರವಾಗಿ ಮಾತನಾಡುವುದಿಲ್ಲ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಮ್ಮ ಪಾಲಿನ ಹಣ ನಾವು ಕೇಳುತ್ತಿದ್ದೇವೆ. ಬೇರೆ ರಾಜ್ಯಗಳು ಲಾಭ ಪಡೆಯಲಿ. ನಮಗೆ ಅದರ ಬಗ್ಗೆ ಆಕ್ಷೇಪವಿಲ್ಲ. ಕೇಂದ್ರ ಸರ್ಕಾರ ಗುಜರಾತಿಗೆ ಗಿಫ್ಟ್ ಸಿಟಿ ಯೋಜನೆ ನೀಡಿದೆ. ನಮ್ಮ ರಾಜ್ಯಕ್ಕೂ ಒಂದು ಗಿಫ್ಟ್ ಸಿಟಿ ನೀಡಲಿ. ಎಲ್ಲ ರಾಜ್ಯಗಳಿಗೂ ಇಂತಹ ಯೋಜನೆ ನೀಡಲಿ. ಭಾರತ ಒಕ್ಕೂಟ ರಾಷ್ಟ್ರ. ನಮಗೂ ಯೋಜನೆ ನೀಡಿ ಎಂದು ನಾವು ಆಗ್ರಹಿಸುತ್ತಿದ್ದೇವೆ. ನಮಗೆ ಅವಕಾಶ ನೀಡಿದರೆ ನಾವು ಅವರಿಗಿಂತ ಹೆಚ್ಚು ಉತ್ತಮವಾಗಿ ಕೆಲಸ ಮಾಡಿ ತೋರಿಸುತ್ತೇವೆ. ನಮ್ಮ ರಾಜ್ಯದ ತೆರಿಗೆ, ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಪಾಲಿನ ಅನುದಾನ ನೀಡಲಿ” ಎಂದು ತಿಳಿಸಿದರು.

ಕೇರಳ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಕೇರಳ ಸರ್ಕಾರ ನಮ್ಮ ಮುಖ್ಯಮಂತ್ರಿಗಳಿಗೆ ಈ ವಿಚಾರವಾಗಿ ಪತ್ರ ಬರೆದಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಅವರು ನಮ್ಮ ನೆರೆ ರಾಜ್ಯ. ಅವರನ್ನು ನಾವು ಗೌರವಿಸುತ್ತೇವೆ. ಅವರು ದೇಶದ ಆರ್ಥಿಕತೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಎಲ್ಲರೂ ಒಂದೇ, ಯಾರಿಗೆಲ್ಲ ಅನ್ಯಾಯವಾಗಿದೆ ಅವರು ಧ್ವನಿ ಎತ್ತಲಿ” ಎಂದು ತಿಳಿಸಿದರು.

ಬಿಜೆಪಿಯೇತರ ರಾಜ್ಯಗಳಿಗೆ ಅನ್ಯಾಯ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಜಿಜೆಪಿ ಆಡಳಿತ ಇರುವ ರಾಜ್ಯಗಳು, ಬಿಜೆಪಿಯೇತರ ರಾಜ್ಯಗಳು ಎಂದು ವರ್ಗೀಕರಣ ಮಾಡಿ ನಾವು ರಾಜಕೀಯ ಮಾಡುವುದಿಲ್ಲ. ರಾಜಕೀಯ ಶಾಶ್ವತವಲ್ಲ. 2 ಸಂಸದರಿಂದ ಅವರು 300 ಸಂಸದರಾಗಿದ್ದಾರೆ, 400 ಸಂಸದರಿಂದ ನಾವು 51 ಸಂಸದರಿಗೆ ಇಳಿದಿದ್ದೇವೆ. ನಾಳೆ ನಾವು 300ಕ್ಕೂ ಹೆಚ್ಚು ಸಂಸದರಾಗುತ್ತೇವೆ. ಇದು ರಾಜಕೀಯದ ಭಾಗ” ಎಂದು ತಿಳಿಸಿದರು.

ಪ್ರಧಾನಿ ಬಳಿ ಸಮಯ ಕೇಳಿದ್ದೇವೆ

ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರಿಗೆ ಮನವಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಖಂಡಿತವಾಗಿಯೂ ಮಾಡುತ್ತೇವೆ. ನಮ್ಮ ಇಲಾಖೆ ವಿಚಾರವಾಗಿ ಮಾತನಾಡಲು ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿ ಸಮಯ ಕೇಳಿದ್ದೇವೆ. ಸಮಯ ನೀಡಬಹುದು” ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯ ಅತ್ಯಂತ ಪೆದ್ದ ಸಿಎಂ: ಬಸವರಾಜ ಬೊಮ್ಮಾಯಿ ಕಿಡಿ

ನಾವು ಜನರ ಭಾವನೆಗಳನ್ನು ಬಳಸಿಕೊಳ್ಳುತ್ತಿಲ್ಲ

ಜಂತರ್‌ ಮಂತರ್‌ನಲ್ಲಿ ಕಾಂಗ್ರೆಸ್‌ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಹುಟ್ಟಿದ ಮೇಲೆ ಒಂದು ಸಾಕ್ಷಿಗುಡ್ಡೆ ಬಿಟ್ಟು ಕೊಟ್ಟು ಹೋಗಬೇಕು. ಇವತ್ತಿನ ಪ್ರತಿಭಟನೆ ಆ ರೀತಿಯ ಸಾಕ್ಷಿಗುಡ್ಡೆಯಾಗಿದೆ. ನಾವು ಜನರ ಭಾವನೆಗಳನ್ನ ಬಳಸಿಕೊಳ್ಳುತ್ತಿಲ್ಲ. ಪಿಎಂ ನರೇಂದ್ರ ಮೋದಿ ಬಳಿ ಹೋಗಿ ರಾಜ್ಯದ ಸಮಸ್ಯೆ ಹೇಳಲಿಲ್ಲ. ಸಿಎಂ ನಿಮ್ಮ ನಿಯೋಗವನ್ನು ಕರೆದುಕೊಂಡು ಹೋದರೂ ತುಟಿಬಿಚ್ಚಲಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದಿಂದ ಆಯ್ಕೆಯಾಗಿ ಬಂದವರು. ಆದರೆ ರಾಜ್ಯ ಸರ್ಕಾರದ ಪರವಾಗಿ ನಿಂತು ಕೆಲಸ ಮಾಡುತ್ತಿಲ್ಲ. ನಮ್ಮ ಧ್ವನಿ ಕೇಂದ್ರದ ಕಿವಿಗೆ ಬೀಳಲಿ ಎಂದು ದೆಹಲಿಗೆ ಬಂದು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

Exit mobile version