ಬೆಂಗಳೂರು: ಕೇಂದ್ರ ಸರ್ಕಾರವು (Central Government) ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನದಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್ನಲ್ಲಿ (Jantar Mantar protest) ಫೆಬ್ರವರಿ 7ರಂದು (ಬುಧವಾರ) ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಪ್ರತಿಭಟನೆಗೆ (Congress Protest) ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಮಾಡುತ್ತಿರುವುದೇನು? ಯೋಜನೆಗಳ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿರುವುದೇನು? ಕೇರಳದಲ್ಲಿ ಅಸಹಕಾರ! ಕರ್ನಾಟಕದಲ್ಲಿ ಸಹಕಾರ!! ಇದೆಂಥಾ ನೀತಿ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: BJP Karnataka: ಜಾಹೀರಾತಿಗೆ ತೆರಿಗೆ ದುಡ್ಡು! ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು
ಎಚ್.ಡಿ. ಕುಮಾರಸ್ವಾಮಿ ಪೋಸ್ಟ್ನಲ್ಲೇನಿದೆ?
ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯವಾಗಿದೆ ಎಂದು ದಿಲ್ಲಿಗೆ ಯಾತ್ರೆ ಹೊರಟಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ. ಅದರ ವರಸೆ ಹೇಗಿದೆ ಎಂದರೆ, ಕರ್ನಾಟಕಕ್ಕೆ ಒಂದು ನೀತಿ. ಕೇರಳಕ್ಕೆ ಮತ್ತೊಂದು ನೀತಿ! ಉದ್ದೇಶ: ಲೋಕಸಭೆ ಚುನಾವಣೆ!!
ರಾವಣ ತಲೆಗಳ ಕಾಂಗ್ರೆಸ್ ರಾಜಕಾರಣ
ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರು, “ನಮ್ಮ ರಾಜ್ಯಕ್ಕೆ ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯ ಆಗಿದೆ. ಅದಕ್ಕೆ ಕೇಂದ್ರದ ವಿರುದ್ಧ ದನಿ ಎತ್ತೋಣ ಬನ್ನಿ, ಸಹಕಾರ ನೀಡಿ” ಎಂದು ಕರೆದರೆ, ಅದಕ್ಕೆ ಕೇರಳ ಕಾಂಗ್ರೆಸ್ಸಿಗರು ಕೊಟ್ಟ ಉತ್ತರ ಹೀಗಿತ್ತು; “ಜನರ ಹಣವನ್ನು ನೀವು ಅನಗತ್ಯ ವೆಚ್ಚಗಳಿಗೆ ಪೋಲು ಮಾಡುತ್ತಿದ್ದೀರಿ, ನಾವು ಬರಲ್ಲ” ಎಂದಿದ್ದಾರೆ!!
ವಿಜಯನ್ ಅವರು ಕರೆದಿದ್ದ ಸರ್ವಪಕ್ಷ ಸಭೆಗೂ ಅಸಹಕಾರ ತೋರಿರುವ ಕಾಂಗ್ರೆಸ್ಸಿಗರು, ಕೇಂದ್ರ ಸರ್ಕಾರದ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಾಗಲೂ ಗೈರುಹಾಜರಾಗಿದ್ದಾರೆ. ಜತೆಗೆ ಕಲಾಪವನ್ನೇ ಬಹಿಷ್ಕರಿಸಿದ್ದಾರೆ. ಅಷ್ಟೇ ಅಲ್ಲ; ಫೆಬ್ರುವರಿ 8ನೇ ತಾರೀಖು ದಿಲ್ಲಿಯಲ್ಲಿ ವಿಜಯನ್ ಅವರು ಹಮ್ಮಿಕೊಂಡಿರುವ ಪ್ರತಿಭಟನೆಯನ್ನೂ ಕೇರಳ ಕಾಂಗ್ರೆಸ್ಸಿಗರು ಬಹಿಷ್ಕರಿಸಿದ್ದಾರೆ!!
ಇದೆಂಥಾ ವೈರುಧ್ಯ? ಇದೆಂಥಾ ಚೋದ್ಯ?
ಕರ್ನಾಟಕದ ಕಾಂಗ್ರೆಸ್, ಕೇರಳಕ್ಕೆ ತದ್ವಿರುದ್ಧ ದಿಕ್ಕಿನಲ್ಲಿದೆ. ಒಂದೆಡೆ ಕರ್ನಾಟಕದ ಬಿಜೆಪಿ ಸಂಸದರು ಶೋ ಪೀಸುಗಳು, ಗಂಡಸ್ತನ ಇಲ್ಲದವರು ಎಂದು ಕಾಂಗ್ರೆಸ್ ನಾಯಕರು ನಾಲಿಗೆ ಜಾರಿ ಬಿಡುತ್ತಿದ್ದಾರೆ. ಈಗ ನೋಡಿದರೆ, “ಪ್ರತಿಭಟನೆಗೆ ಬನ್ನಿ. ನಿಮ್ಮ ಸಹಕಾರವೂ ಇರಲಿ…” ಎಂದು ಆ ಪಕ್ಷದ ಸಂಸದರನ್ನು ಅದೇ ನಾಲಿಗೆಯಿಂದಲೇ ಕರೆಯುತ್ತಿದ್ದಾರೆ. ಜೆಡಿಎಸ್ ಸಂಸದರಿಗೂ ಪತ್ರ ಬರೆದಿದ್ದಾರೆ. ಇದೆಂಥಾ ವೈರುಧ್ಯ? ಇದೆಂಥಾ ಚೋದ್ಯ?
ಇದನ್ನೂ ಓದಿ: Monkey Pox: ಮಂಗನ ಕಾಯಿಲೆಗೆ ಇಬ್ಬರು ಬಲಿ: ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಅಶೋಕ್ ಆಕ್ರೋಶ
ರಾವಣ ತಲೆಗಳ ಕಾಂಗ್ರೆಸ್ ಪಕ್ಷಕ್ಕೆ ಮೈಯೆಲ್ಲ ರಾಜಕೀಯವೇ
ಕೇರಳದ ಎಲ್ಡಿಎಫ್ ಸರ್ಕಾರ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ ಎಂದಾದರೆ, ಕರ್ನಾಟಕದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಮಾಡುತ್ತಿರುವುದೇನು? ಯೋಜನೆಗಳ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿರುವುದೇನು?
ಕೇರಳದಲ್ಲಿ ಅಸಹಕಾರ! ಕರ್ನಾಟಕದಲ್ಲಿ ಸಹಕಾರ!! ಇದೆಂಥಾ ನೀತಿ? ಎರಡು ತಲೆಗಳು ಮಾತ್ರವಲ್ಲ, ರಾವಣ ತಲೆಗಳ ಕಾಂಗ್ರೆಸ್ ಪಕ್ಷಕ್ಕೆ ಮೈಯೆಲ್ಲ ರಾಜಕೀಯವೇ ತುಂಬಿದೆ. ಅದೂ ಸ್ವಾರ್ಥ ರಾಜಕೀಯ” ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.