Site icon Vistara News

ಬಿಜೆಪಿಯ ಹಲವು ನಾಯಕರು ಕುಡಿದು ಮಾತನಾಡ್ತಾರೆ: ಪ್ರತ್ಯೇಕ ರಾಜ್ಯ ಹೇಳಿಕೆಗೆ ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಕಿಡಿ

ರಮೇಶ ಬಾಬು

ಬೆಂಗಳೂರು: ನಾವು ಸಿ.ಟಿ.ರವಿ ಅವರೇ ಕುಡಿದು ಮಾತನಾಡುತ್ತಾರೆ ಎಂದುಕೊಂಡಿದ್ದೆವು. ಆದರೆ ಬಿಜೆಪಿಯ ಹಲವು ನಾಯಕರಿಗೂ ಕುಡಿತದ ಚಟ ಇದೆ ಎಂಬುದು ಗೊತ್ತಾಗಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಗೇಲಿ ಮಾಡಿದ್ದಾರೆ. ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್‌ ಕತ್ತಿ ಅವರ ಪತ್ಯೇಕ ರಾಜ್ಯ ಹೇಳಿಕೆ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “”ಭಾರತೀಯ ಜನತಾ ಪಕ್ಷದ ನಾಯಕರು ಯಾವಾಗ ಏನು ಮಾತನಾಡುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಉಮೇಶ್ ಕತ್ತಿ ಅವರು 2024ರ ಲೋಕಸಭೆ ಚುನಾವಣೆ ಬಳಿಕ ಕರ್ನಾಟಕ ಎರಡು ಭಾಗವಾಗಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಯಾಗಲಿದೆ ಎಂದು ಹೇಳಿರುವುದಕ್ಕೆ ನಮ್ಮ ವಿರೋಧವಿದೆ. ಬಿಜೆಪಿ ನಾಯಕರು ಕೇವಲ ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಅಸ್ತಿತ್ವಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ಬಿಜೆಪಿ ಅಥವಾ ಇನ್ಯಾವುದೇ ಪಕ್ಷದ ನಾಯಕರಾಗಲಿ ಇಂತಹ ಹೇಳಿಕೆಗಳನ್ನು ನೀಡಿದರೆ ಕಾಂಗ್ರೆಸ್‌ ಉಗ್ರವಾಗಿ ಖಂಡಿಸುತ್ತದೆ ಎಂದರು.

ಕತ್ತಿ ಅವರು ದಯಮಾಡಿ ಇಂತಹ ಹೇಳಿಕೆಗಳನ್ನು ನೀಡುವುದನ್ನು ಬಿಡಬೇಕು. ನಿಮಗೆ ಕುಡಿಯುವ ಚಟ ಇದ್ದರೆ ಮನೆಯಲ್ಲೇ ಕುಡಿಯಿರಿ. ಅದನ್ನು ಬಿಟ್ಟು ಹೊರಗೆ ಈ ರೀತಿಯಾದ ಹೇಳಿಕೆ ನೀಡಬಾರದು. ಕರ್ನಾಟಕ ರಾಜ್ಯ ರಚನೆಯಾದ ನಂತರ ಎಲ್ಲ ಕನ್ನಡಿಗರು ಒಟ್ಟಾಗಿದ್ದಾರೆ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಬದ್ಧರಾಗಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ಉಮೇಶ್‌ ಕತ್ತಿ ಹಾಗೂ ಬಿಜೆಪಿ ನೀಡುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | 2024ರ ಲೋಕಸಭೆ ಚುನಾವಣೆ ನಂತರ ಉತ್ತರ ಕರ್ನಾಟಕ ಉದಯಿಸಲಿದೆ: ಕತ್ತಿಯಿಂದ ಮತ್ತೆ ವಿಭಜನೆ ಮಾತು

Exit mobile version