ಬೆಂಗಳೂರು: ದಲಿತರ ಮೇಲಿನ ದೌರ್ಜನ್ಯ (Atrocities on Dalits) ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣದಲ್ಲಿ ರಾಜ್ಯದ ಸಾಧನೆ ತೃಪ್ತಿಕರವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶೋಷಣೆಗೆ ಒಳಗಾದವರಿಗೆ ವ್ಯವಸ್ಥೆ ಮೇಲೆ ನಂಬಿಕೆ ಬರಬೇಕಾದರೆ ದೌರ್ಜನ್ಯ ಪ್ರಕರಣಗಳ ತನಿಖೆಯ ಗುಣಮಟ್ಟ ಹೆಚ್ಚಾಗಬೇಕು. ವೈಜ್ಞಾನಿಕವಾಗಿ ಸಮರ್ಥ ಆರೋಪ ಪಟ್ಟಿ ಸಲ್ಲಿಕೆಯಾಗಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಿ. ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು. ಇಲ್ಲದಿದ್ದರೆ ಡಿಸಿಪಿಗಳನ್ನೇ ಈ ವೈಫಲ್ಯಕ್ಕೆ ಹೊಣೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
ಪೊಲೀಸರಿಗೆ ನಮ್ಮ ಸರ್ಕಾರ ಸಂಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದೆ. ಪೊಲೀಸರ ಕೆಲಸದಲ್ಲಿ ಮೂಗು ತೂರಿಸಬಾರದು ಎನ್ನುವುದು ನನ್ನ ಬದ್ಧತೆ. ಆದರೆ, ನಾವು ಫ್ರೀ ಹ್ಯಾಂಡ್ ಕೊಟ್ಟಿದ್ದು ದುರುಪಯೋಗ ಆಗಬಾರದು. ಅದು ಜನರಿಗೆ ಅನುಕೂಲ ಆಗುವಂತಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ವರ್ಗಾವಣೆಗಾಗಿ ಹಾತೊರೆಯಬೇಡಿ
ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು, ಜಾತಿ ಬಳಸುವುದು ಅತ್ಯಂತ ಕೆಟ್ಟದ್ದು. ಹಾಗೆ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ತಿಳಿ ಹೇಳಿದರು.
ತಂತ್ರಜ್ಞಾನದ ಬಳಕೆಯಿಂದ ಅಪರಾಧ ತಡೆ ಸಾಧ್ಯ
ನಮ್ಮದು ಜಾತ್ಯತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮನಸ್ಸು ಮಾಡಬೇಕು ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಸಾಧ್ಯವಿದೆ ಎಂದು ತಿಳಿಸಿದರು.
ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ
ರಾಜ್ಯಕ್ಕೆ “ಕರ್ನಾಟಕ” ಎಂದು ನಾಮಕರಣಗೊಂಡು, ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ನೀಡಲಾಗುವುದು. ಖಾಲಿ ಇರುವ ಪೊಲೀಸ್ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಇದನ್ನೂ ಓದಿ: CM Siddaramaiah: ಕಳ್ಳತನ ಪ್ರಕರಣ ಹೆಚ್ಚಾದರೆ ಡಿಸಿಪಿಗಳೇ ನೇರ ಹೊಣೆ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯರಿಂದ ಮಹತ್ವದ ಘೋಷಣೆ
ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಕೆಲವೊಂದಿಷ್ಟು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
- ರಾಜ್ಯದಲ್ಲಿ ಭವ್ಯವಾದ ಸುಸಜ್ಜಿತ ಸುವರ್ಣ ಪೊಲೀಸ್ ಭವನ ನಿರ್ಮಾಣ. ಇದಕ್ಕಾಗಿ ಬಜೆಟ್ ನಲ್ಲಿ ಹಣ ನಿಗದಿ
- ರಾಜ್ಯದ ಎಲ್ಲ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ
- ರಾಜ್ಯದ ಎಲ್ಲ ಪೊಲೀಸರ ವೈದ್ಯಕೀಯ ವೆಚ್ಚವನ್ನು 1000 ರೂಪಾಯಿಯಿಂದ 1500ಕ್ಕೆ ಹೆಚ್ಚಿಸಲಾಗುವುದು
- ಸಿಇಎನ್ ಠಾಣಾಧಿಕಾರಿಗಳ ಹುದ್ದೆಯನ್ನು ಎಸಿಪಿ ಮತ್ತು ಡಿಸಿಪಿ ಮಟ್ಟಕ್ಕೆ ಉನ್ನತೀಕರಣ
- ಬೆಂಗಳೂರು ನಗರದಲ್ಲಿ 8 ಅಡಿಷನಲ್ ಡಿಸಿಪಿ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಜಿಸಲಾಗುವುದು
- ರಾಜ್ಯವನ್ನು ಡ್ರಗ್ ಮುಕ್ತಗೊಳಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಕ್ರಮ
ಗೃಹ ಸಚಿವ ಡಾ. ಜಿ.ಪರಮೇಶ್ವರ್, ಗೃಹ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹಮದ್ ಅವರು ಉಪಸ್ಥಿತರಿದ್ದರು.