Site icon Vistara News

DK Shivakumar: ಇಂದು ಸಂಜೆಯೇ ನಿಗಮ-ಮಂಡಳಿ ಪಟ್ಟಿ ಘೋಷಣೆ? ಡಿ.ಕೆ. ಶಿವಕುಮಾರ್‌ ಹೇಳಿದ್ದೇನು?

DCM DK Shivakumar

ಬೆಂಗಳೂರು: ಕಾಂಗ್ರೆಸ್‌ (Congress Karnataka) ಶಾಸಕರಿಗೆ ಹಾಗೂ ಕಾರ್ಯಕರ್ತರಿಗೆ ಸಂಕ್ರಾಂತಿಯ ಈ ದಿನವೇ ಶುಭ ಸುದ್ದಿ ಸಿಗಲಿದೆಯೇ? ಹೌದು ಎಂದು ಹೇಳುತ್ತಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar).‌ ನಿಗಮ-ಮಂಡಳಿ (Appointment of Corporation and Board) ಪಟ್ಟಿಯನ್ನು ಇಂದು (ಜ. 15) ಸಂಜೆಯೊಳಗೆ ಪ್ರಕಟಿಸುವುದಾಗಿ ಘೋಷಿಸಿದ್ದಾರೆ. ಹಾಗಾಗಿ ಪಟ್ಟಿ ಫೈನಲ್‌ ಆಗಿದ್ದು, ಘೋಷಣೆಯೊಂದೇ ಬಾಕಿ ಇದೆ ಎಂಬ ಸುಳಿವನ್ನು ಕೊಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ನಿಗಮ ಮಂಡಳಿ ಪಟ್ಟಿ ಬಿಡುಗಡೆಯು ಸಂಕ್ರಾಂತಿಗಿಂತ ಮುಂದಕ್ಕೆ ಹೋಗುವುದಿಲ್ಲ. ಅದರ ಒಳಗಡೆಯೇ ಆಗಲಿದೆ. ಸಾಯಂಕಾಲದ ಒಳಗಡೆ ಇದರ ಸಲುವಾಗಿ ಮಾಧ್ಯಮದವರೊಂದಿಗೆ ಮಾತನಾಡುತ್ತೇನೆ. ಇನ್ನು ಚುನಾವಣೆ ಸಂದರ್ಭದಲ್ಲಿ ನಾವು ಕೊಟ್ಟಿದ್ದ ಮಾತನ್ನು ನಡೆಸಿಕೊಡುತ್ತೇವೆ ಎಂದು ಹೇಳಿದರು.

ಜನವರಿ 19ರಂದು ಚುನಾವಣಾ ಸಮಿತಿ ಸಭೆ

ಇದೇ ಜನವರಿ 19ರಂದು ಸಂಜೆ 4 ಗಂಟೆಗೆ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಎಲೆಕ್ಷನ್ ಕಮಿಟಿ ಸಭೆ ಕರೆಯುತ್ತಿದ್ದೇನೆ. ಇದಕ್ಕೆ ನಮ್ಮ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರುತ್ತಿದ್ದಾರೆ. ನಮ್ಮ ಪಕ್ಷದಿಂದ ಲೋಕಸಭೆ ಅಭ್ಯರ್ಥಿಗಳನ್ನು ಫೈನಲ್ ಮಾಡುವ ಸಂಬಂಧ ಈ ಸಭೆಯನ್ನು ನಡೆಸಲಾಗುತ್ತಿದೆ. ಹಾಗೆಯೇ ಜ. 21ರಂದು ದಕ್ಷಿಣ ಕನ್ನಡದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು.

ರೈತರ ಬದುಕು ಹಸನಾಗಲಿ: ಡಿ.ಕೆ. ಶಿವಕುಮಾರ್‌

ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ರಾಜ್ಯದ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ವರ್ಷವಾದರೂ ಸಮರ್ಪಕ ಮಳೆ ಬಂದು, ಮುಂದಿನ ವರ್ಷ ಒಳ್ಳೆಯ ಬೆಳೆ ಆಗುತ್ತದೆ ಎಂದು ಭಾವಿಸಿಕೊಂಡಿದ್ದೇನೆ. ಸುಮಾರು 200ಕ್ಕೂ ಹೆಚ್ಚು ತಾಲೂಕುಗಳು ಬರಗಾಲ ಎಂದು ಘೋಷಿಸಲ್ಪಟ್ಟಿವೆ. ಭವಿಷ್ಯದಲ್ಲಿ ಇಂಥದ್ದೊಂದು ಸ್ಥಿತಿ ಮತ್ತೆ ಬರುವುದಿಲ್ಲ ಮತ್ತು ಬರಬಾರದು. ರೈತರ ಬದುಕು ಹಸನಾಗಲಿ ಎಂದು ನಾವೆಲ್ಲರೂ ಭಗವಂತನಲ್ಲಿ ಪ್ರಾರ್ಥನೆ ಮಾಡೋಣ ಎಂದು ಹೇಳಿದರು.

ಇದನ್ನೂ ಓದಿ: BJP Karnataka: ಬೆಂಗಳೂರಿನ ನೂತನ ಜಿಲ್ಲಾಧ್ಯಕ್ಷರಿಂದ ಬಿ.ವೈ. ವಿಜಯೇಂದ್ರಗೆ ಅಭಿನಂದನೆ

ಪಿಂಚಣಿಗಾಗಿ ತೆವಳಿ ಸಾಗಿದ ವೃದ್ಧೆ; ಪ್ರತಿಕ್ರಿಯೆ ನೀಡದ ಡಿಕೆಶಿ

ಪಿಂಚಣಿಗಾಗಿ ವಿಕಲಚೇತನ ವೃದ್ಧೆಯೊಬ್ಬರು ದಾವಣಗೆರೆಯಲ್ಲಿ 5 ಕಿ.ಮೀ. ತೆವಳಿಕೊಂಡೇ ಸಾಗಿರುವ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿರುವ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗಮ ಯಾವುದೇ ಪ್ರತಿಕ್ರಿಯೆ ನೀಡದೆ ಸ್ವಲ್ಪ ಹೊತ್ತು ನಿಂತು ಬಳಿಕ ಅಲ್ಲಿಂದ ಡಿ.ಕೆ ಶಿವಕುಮಾರ್ ಹೊರಟುಹೋದರು.

Exit mobile version