Site icon Vistara News

Power Point with HPK : ಭ್ರಷ್ಟ, ಕೀಳುಮಟ್ಟದ, ಅಸಮರ್ಥ ಸರ್ಕಾರ ಅಧಿಕಾರಕ್ಕೆ ಬಂದಿದೆ: ಅಶ್ವತ್ಥನಾರಾಯಣ

Ashwath Narayana in Power point with HPK

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು (Congress Government) ಭ್ರಷ್ಟಾಚಾರದಲ್ಲಿ ತೊಡಗಿದೆ. ವರ್ಗಾವಣೆ, ಅಭಿವೃದ್ಧಿ ವಿಚಾರದಲ್ಲಿ ಪೇಮೆಂಟ್‌ ಕೇಳುತ್ತಿದ್ದಾರೆ. ಇದನ್ನು ಅವರ ಪಕ್ಷದ ಶಾಸಕರೇ ಹೇಳಿದ್ದಾರೆ. ಜತೆಗೆ ಗುತ್ತಿಗೆದಾರರ ಸಹಿತ ಇನ್ನೂ ಹಲವರು ಈ ಬಗ್ಗೆ ಆರೋಪ ಮಾಡಿದ್ದಾರೆ. ಇಂತಹ ಭ್ರಷ್ಟ, ಕೀಳುಮಟ್ಟದ, ಅಸಮರ್ಥ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ನಾವು ಕನಸು, ಮನಸ್ಸಿನಲ್ಲೂ ಅಂದುಕೊಂಡಿಲ್ಲ ಎಂದು ಬೆಂಗಳೂರಿನ ಮಲ್ಲೇಶ್ವರ ಶಾಸಕ, ಮಾಜಿ ಡಿಸಿಎಂ ಡಾ. ಸಿ.ಎನ್.‌ ಅಶ್ವತ್ಥನಾರಾಯಣ (Dr CN Ashwathnarayan) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಡಾ. ಸಿ.ಎನ್.‌ ಅಶ್ವತ್ಥನಾರಾಯಣ, ಕಾಂಗ್ರೆಸ್‌ ಬಹುಮತ ಬಂದ ಮೇಲೆ ಸಂಪೂರ್ಣ ಮೈಮರೆತಿದೆ. ಈಗ ಈ ಸರ್ಕಾರ ಪೂರ್ಣ ಅಮಲಿನಲ್ಲಿದೆ. ಈ ಸರ್ಕಾರಕ್ಕೆ ಗುರಿಯೇ ಇಲ್ಲ. ಗ್ಯಾರಂಟಿ ಯೋಜನೆ ಮೂಲಕ ಜನರ ಮೂಗಿಗೆ ತುಪ್ಪ ಸವರಿದ್ದಾರೆ. ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಿಲ್ಲ ಎಂದು ಹೇಳಿದರು.

ಆಡಳಿತ ಎಂದರೆ ಏನೆಂದುಕೊಂಡಿದ್ದಾರೆ?

ಶಕ್ತಿ ಯೋಜನೆಯು ಮೂಲ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾಗಿ ಶಾಲೆಗೆ ಹೋಗಲು ಆಗುತ್ತಿಲ್ಲ. ಬಸ್‌ ಸಂಖ್ಯೆ ಕಡಿಮೆ ಇದೆ. ಪ್ರಯಾಣಿಕರು ಹೆಚ್ಚಾಗಿದ್ದಾರೆ. ಇನ್ನು ಅನ್ನಭಾಗ್ಯ ಯೋಜನೆಯಡಿ ಮೊದಲ ತಿಂಗಳು ಮಾತ್ರ ಖಾತೆಗೆ ಹಣ ಹಾಕಿದರು. ಬಳಿಕ ಇಲ್ಲ. ಬೆಂಗಳೂರಿನಲ್ಲಿ ನೈಜ ಫಲಾನುಭವಿಗಳಾಗಿರುವ ಶೇಕಡಾ 20ರಷ್ಟು ಮಂದಿಗೆ ಸಹ ನೋಟಿಸ್‌ ಕೊಟ್ಟಿದ್ದಾರೆ. ಆಡಳಿತ ಎಂದರೆ ಇವರು ಏನೆಂದುಕೊಂಡಿದ್ದಾರೆ? ಎಂದು ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Power Point with HPK : 2.5 ವರ್ಷ ಅಲ್ಲ, ಈಗಲೇ ಅಧಿಕಾರ ಬಿಟ್ಟುಕೊಡುವೆ;‌ ಲಂಚ ಕೊಡೋದನ್ನು ಜನರೇ ಬಿಡಲೆಂದ ಜಾರ್ಜ್!

ಗೃಹ ಲಕ್ಷ್ಮಿ ಅಡಿ ಇನ್ನೂ ಸಾಂಕೇತಿಕವಾಗಿ ಕೊಟ್ಟಿದ್ದಾರೆ. ಎಲ್ಲಿ ಎಲ್ಲರಿಗೂ ಹಣ ವರ್ಗಾವಣೆ ಆಗಿದೆ? ಗೃಹ ಜ್ಯೋತಿ ಅಡಿ 200 ಯುನಿಟ್‌ ಕೊಡುತ್ತೇವೆ ಎಂದು ಹೇಳಿದ್ದರು. ಈಗ ಏನು ಮಾಡಿದ್ದಾರೆ? ಇವರು ಸುಮ್ಮನೇ ಸದ್ದು ಮಾಡಿದ್ದಾರೆ. ಇವರು ಅಧಿಕಾರಕ್ಕೆ ಬಂದ ನಂತರ ಕರೆಂಟ್‌ ಬಿಲ್‌ ಡಬಲ್‌ ಆಗಿದೆ. ಅವ್ಯವಸ್ಥಿತವಾಗಿ, ಅವೈಜ್ಞಾನಿಕವಾಗಿ, ಜನವಿರೋಧಿಯಾಗಿ, ರೈತ ವಿರೋಧಿಯಾಗಿ ಕಾರ್ಯ ಮಾಡುವ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ಅವರ ನೇತೃತ್ವದ ಈ ಕಾಂಗ್ರೆಸ್‌ ಸರ್ಕಾರ ಎಂದು ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

Exit mobile version